ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಚಾರ ವಿನಿಮಯಕ್ಕೆ ನಾನು ಸಿದ್ಧ’

ಸಂಗತ
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯಲ್ಲಿ  ಪ್ರಕಟವಾದ ನನ್ನ ಸಂದರ್ಶನದ (ಅ. 23) ಬಗ್ಗೆ ಪತ್ರಿಕೆಯಲ್ಲಿ ಪ್ರಜ್ಞಾವಂತರು ವಿವಿಧ ರೀತಿಯ ವಿಮರ್ಶೆಯನ್ನು ಮಾಡಿದ್ದಾರೆ. ಈ ವಿಷಯದಲ್ಲಿ ನನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಕೃಷ್ಣ ಮಠದಲ್ಲಿನ ವಾಸ್ತವ ಸಂಗತಿಗಳ ಸರಿಯಾದ ಪರಿಚಯವಿಲ್ಲದೆ ಅನೇಕರಿಗೆ ತಪ್ಪು ಕಲ್ಪನೆ ಉಂಟಾಗಿದೆ. ವಾಸ್ತವವಾಗಿ ಉಡುಪಿಯ ಕೃಷ್ಣ ಮಠದಲ್ಲಿ ಸಹಸ್ರಾರು ಜನರಿಗೆ ಸಹಪಂಕ್ತಿ ಭೋಜನವನ್ನು ಪ್ರತಿದಿನವೂ ನೀಡುತ್ತಿದ್ದರೂ ಅನವಶ್ಯಕವಾಗಿ ಪಂಕ್ತಿಭೇದದ ಗದ್ದಲ ಎಬ್ಬಿಸಲಾಗಿದೆ. ದಲಿತರಿಗೆ ಸವರ್ಣ ಹಿಂದೂಗಳೊಂದಿಗೆ ಯಾವ ಭೇದಭಾವವೂ ಇಲ್ಲದೆ ನಿರಾತಂಕವಾಗಿ ಮಹಾ ಪಂಕ್ತಿಯಲ್ಲಿ ಸಹಭೋಜನ ನಡೆಯುತ್ತಿರುವಾಗ ಬೇರೊಂದು ಸ್ಥಳದಲ್ಲಿ ಸಂಪ್ರದಾಯಸ್ಥರಿಗೆ ಪ್ರತ್ಯೇಕ ಭೋಜನ ಏರ್ಪಡಿಸಿದರೆ ಆ ಬಗ್ಗೆ ಅಂಥ ಆಕ್ರೋಶಕ್ಕೆ ಕಾರಣವಿಲ್ಲ. ಪ್ಯಾಂಟ್, ಅಂಗಿ ಧರಿಸಿಕೊಳ್ಳುವವರ ಜೊತೆಗೆ ಊಟ ಮಾಡದಿರುವುದು, ಶಾಕಾಹಾರಿಗಳ ಜೊತೆಯೇ ಊಟ ಮಾಡುವಂಥ ನಿಯಮಗಳನ್ನಿಟ್ಟುಕೊಂಡವರು ಪ್ರತ್ಯೇಕವಾಗಿ ಊಟ ಮಾಡುವುದರಿಂದ ಉಳಿದವರಿಗೆ ಯಾವುದೇ ಅವಮಾನ, ಅಸಮಾಧಾನವಾಗಲು ಸಾಧ್ಯವಿಲ್ಲ.

ಲಿಂಗದೀಕ್ಷೆ ಪಡೆಯದವರ ಜೊತೆಗೆ ಊಟ ಮಾಡುವುದು ಬಸವಣ್ಣನವರಿಗೂ ಸಮ್ಮತವಲ್ಲವೆಂದು ಅವರ ವಾಕ್ಯವನ್ನೇ ನಾನು ಹೇಳಿ ಉದಾಹರಿಸಿದಾಗ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ಅಂತಹ ಸ್ಪಷ್ಟ ವಚನವನ್ನು ನಾನು ತೋರಿಸಬಲ್ಲೆ. ಅವರ ವಚನಗಳಲ್ಲಿ ಭಕ್ತಿಪರವಶತೆ, ನೈತಿಕ ಮೌಲ್ಯಗಳ ಬಗ್ಗೆ ಕಳಕಳಿ ಎದ್ದು ಕಾಣುತ್ತಿದೆ.

ಅವರ ವಚನಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಬಸವಣ್ಣನವರನ್ನು  ಜಾತಿವಾದಿಯೆಂದು ನಾನು ಹೇಳಿಯೇ ಇಲ್ಲ. ಜಾತಿಭೇದವನ್ನು ನಿರಾಕರಿಸಿದ ಮಹಾನ್ ಕ್ರಾಂತಿಪುರುಷರೆಂಬುದರಲ್ಲಿ ಸಂದೇಹವಿಲ್ಲ. ‘ಲಿಂಗದೀಕ್ಷೆ ಪಡೆದ ಮೇಲೆ ಜಾತಿಭೇದವಿಲ್ಲ. ಎಲ್ಲರೂ ಸಮಾನರು’ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆದುದರಿಂದಲೇ ಲಿಂಗದೀಕ್ಷೆ ಪಡೆದ ಮಾದಾರ ಚೆನ್ನಯ್ಯ ಮೊದಲಾದವರ ಮನೆಯಲ್ಲಿ ಅಂಬಲಿಯನ್ನು ಸ್ವೀಕರಿಸಿದ್ದಾರೆ. ಅವರು ಜಾತಿ ಆಧಾರದ ಪಂಕ್ತಿಭೇದವನ್ನು ಒಪ್ಪದಿದ್ದರೂ ಧರ್ಮದ ಆಧಾರದ ಪಂಕ್ತಿಭೇದ ಒಪ್ಪಿದ್ದಾರೆಂಬುದನ್ನು ಅವರ  ವಚನಗಳಿಂದಲೇ ತಿಳಿದುಕೊಳ್ಳಬಹುದು. ಇದನ್ನು ಅನೇಕ ಲಿಂಗಾಯತ ಮಠಾಧೀಶರು ಸ್ವತಃ ನನ್ನಲ್ಲಿ ಹೇಳಿದ್ದಾರೆ. ಅದರಂತೆ ಮಠ, ದೇವಸ್ಥಾನಗಳಲ್ಲಿಯೂ ಸಂಪ್ರದಾಯಸ್ಥರು  ಊಟ ಮಾಡದೇ ಹೋಗಬಾರದೆಂದು ಪ್ರತ್ಯೇಕ ಭೋಜನ ವ್ಯವಸ್ಥೆಯಿದೆ. ಹೀಗಿರುವಾಗ ಉಡುಪಿಯ ಮಠದ ಬಗ್ಗೆ ಮತ್ತು ನನ್ನ ಬಗ್ಗೆಯೇ ಪ್ರತಿಭಟನೆ ಯಾಕೆ?

ನಾನು ರಾಜಕಾರಣದಲ್ಲಿ ಮೂಗು ತೂರಿಸುವುದರಿಂದ ನನ್ನ ಬಗ್ಗೆ ಈ ವಿರೋಧವೆಂದು ಕೆಲವರು ಹೇಳಿದ್ದಾರೆ. ಅಂದರೆ ಇದರ ಹಿಂದೆ ರಾಜಕೀಯವಿದೆಯೆಂದು ಅರ್ಥವಾಗುವುದು. ನಾನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಒಂದೇ ಒಂದು ಉದಾಹರಣೆಯನ್ನು ಕೇಳಿದಾಗ ಅವರಲ್ಲಿ ಉತ್ತರವಿಲ್ಲ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಏಕೈಕ ಪೀಠಾಧಿಪತಿಯಾಗಿದ್ದು ನಿಜ. ಅದು ರಾಜಕೀಯವೇ? ಪಕ್ಷಭೇದವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳ ಧುರೀಣರ ಜೊತೆಗೆ ಒಳ್ಳೆಯ ಸಂಪರ್ಕವನ್ನು ಇಟ್ಟುಕೊಂಡಿದ್ದೇನೆ. ಸಂದರ್ಭ ಬಂದಾಗ ಎಲ್ಲರಿಗೂ ಸೂಕ್ತ ಸಲಹೆಗಳನ್ನು ಕೊಟ್ಟಿದ್ದೇನೆ.

ನಾನು ಅರ್ಧ ಬಾಗಿಲು ತೆಗೆದಿದ್ದೇನೆ,  ಪೂರ್ತಿಯಾಗಿ ತೆರೆಯಬೇಕೆಂಬುದಕ್ಕಾಗಿ ಈ ಪ್ರತಿಭಟನೆ ಎಂದು ಕೆಲವರು ಸಮಾಧಾನ ಹೇಳಿದ್ದಾರೆ. ಹಾಗಿದ್ದರೆ ನಾನು ಮಾಡಿದ ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ಕೆ ಬೆಂಬಲ ನೀಡಿ  ಇನ್ನೂ ಹೆಚ್ಚಿನ ಸುಧಾರಣೆ ಮಾಡಲು ನನ್ನ ಜೊತೆ ಸಂವಾದ– ಚರ್ಚೆಗಳನ್ನು ಮಾಡುವ ಬದಲು ಪ್ರತಿಭಟನೆ ಮಾಡುವುದು ಸರಿಯೇ? ಹಾಗಿದ್ದರೆ ಎಲ್ಲಾ ಪೀಠಾಧಿಪತಿಗಳಿಗಿಂತಲೂ ಮೊದಲು ಅಸ್ಪೃಶ್ಯತಾ ನಿವಾರಣೆ ಕಾರ್ಯ ಆರಂಭಿಸಿದ್ದು ನನ್ನ ತಪ್ಪೇ? ಏನೂ ಮಾಡದೆ ಸುಮ್ಮನೆ ಅಸ್ಪೃಶ್ಯತೆ ಆಚರಿಸುತ್ತಾ   ಮಠದೊಳಗೆ ಸಂಪ್ರದಾಯದಂತೆ ಉಳಿದಿದ್ದರೆ ತಾವು ಪ್ರತಿಭಟಿಸುತ್ತಿರಲಿಲ್ಲ ಎಂದು ಇವರ ಅಭಿಪ್ರಾಯವೇ?

ವಾಸ್ತವವಾಗಿ ನಾನು ಆರಂಭಿಸಿದ ಸಮಾಜ ಸುಧಾರಣೆಯಿಂದ ಹಿಂದೂ ಸಂಘಟನೆಗೆ ಅನುಕೂಲವಾಗುತ್ತದೆ. ಹಿಂದೂ ಸಮಾಜದಲ್ಲಿ ಜಾತಿ ಸಾಮರಸ್ಯ ಬೆಳೆದು ಹಿಂದೂ ಧರ್ಮ ಬಲಗೊಳ್ಳುತ್ತದೆಯೆಂಬುದೇ ಇವರ ವಿರೋಧದ ಮುಖ್ಯ ಉದ್ದೇಶವೆಂಬುದು ಸುಸ್ಪಷ್ಟ.

ನಾನು ಬುದ್ಧಿಜೀವಿಗಳೆಲ್ಲರೂ ಹಿಂದೂ ಧರ್ಮದ ವಿರೋಧಿಗಳೆಂದು ಹೇಳುವುದಿಲ್ಲ. ಹಿಂದೂ ಧರ್ಮದಲ್ಲಿ ಅಭಿಮಾನ, ಸರ್ವ ಧರ್ಮ ಸಹಿಷ್ಣುತೆಯುಳ್ಳ ಬುದ್ಧಿಜೀವಿಗಳು ಬಹಳ ಮಂದಿ ಇದ್ದಾರೆ. ಕೆಲ ಬುದ್ಧಿಜೀವಿಗಳು ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ವಿರೋಧಿಸುತ್ತಾರೆ. ನನ್ನ ಜೊತೆಗೆ ಭಿನ್ನಾಭಿಪ್ರಾಯವಿದ್ದರೂ ನನ್ನಲ್ಲಿ ಅಭಿಮಾನವುಳ್ಳ ಬುದ್ಧಿಜೀವಿಗಳೂ ಇದ್ದಾರೆ. ಕೆಲವರಂತೂ ಉದ್ದೇಶಪೂರ್ವಕವಾಗಿ ಸುಳ್ಳು ಸಂಗತಿಯನ್ನು ಕಲ್ಪಿಸುತ್ತಾ, ನನ್ನನ್ನು ವಿಕೃತವಾಗಿ ಚಿತ್ರಿಸಲು ಮತ್ತು ಜಾತಿ, ಜಾತಿಗಳಲ್ಲಿ ಕಂದರ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಬಗ್ಗೆ ‘ಕನಕ ನಡೆ’ಯ ವಿಷಯವನ್ನೇ ಉದಾಹರಿಸಬಹುದು. ‘ಉಡುಪಿ ಚಲೋ’ ಸಂದರ್ಭದಲ್ಲಿ ಅಪ್ರಸ್ತುತವಾಗಿ ಉಡುಪಿ ಮುತ್ತಿಗೆಯ ಘೋಷಣೆಯಾಯಿತು.  ಅದು ಕೇವಲ ದಲಿತರ ಮೆರವಣಿಗೆಯಲ್ಲ, ದಲಿತರಲ್ಲದವರೂ ಬಹಳ ಮಂದಿ ಇದ್ದರು. ಮುತ್ತಿಗೆಯ ಹಿಂದೆ ಭಕ್ತಿಯ ಬದಲು ಆಕ್ರಮಣದ ಮನೋವೃತ್ತಿಯಿತ್ತು. ಅದಕ್ಕೆ ಪ್ರತಿಯಾಗಿ ಮೂಡಿಬಂದ ಸ್ವಚ್ಛೀಕರಣ ಘೋಷಣೆ ರಚನಾತ್ಮಕವಾಗಿತ್ತು ಎಂಬ ಕಾರಣದಿಂದ ಅದನ್ನು ಸ್ವಾಗತಿಸಿದೆ.  ದಲಿತರ ನಡೆಯಿಂದ ಅಶುಚಿಯಾದ ರಸ್ತೆ ಸ್ವಚ್ಛ ಮಾಡಬೇಕೆಂಬ ಕಲ್ಪನೆಯೇ ಸಂಘಟನಾಕಾರರಿಗೆ ಇರಲಿಲ್ಲ. ಅವರೆಲ್ಲರೂ ಮೊದಲಿನಿಂದಲೂ ಅಸ್ಪೃಶ್ಯತೆಯ ವಿರೋಧಿಗಳು. ದಲಿತರ ವಿರುದ್ಧವಾದ  ಸ್ವಚ್ಛೀಕರಣವಲ್ಲವೆಂಬುದನ್ನು ಸ್ಪಷ್ಟಪಡಿಸಿಕೊಂಡೇ ನನ್ನ ಒಪ್ಪಿಗೆ ನೀಡಿದ್ದೇನೆ. ಉಡುಪಿ ಜಾಥಾ ಚಲಿಸಿದ ರಸ್ತೆಗಳನ್ನು ಬಿಟ್ಟು ಬೇರೆ ರಸ್ತೆಗಳಲ್ಲಿ ಸ್ವಚ್ಛೀಕರಣ  ಮಾಡುವುದಾಗಿಯೂ ಅವರು ಸ್ಪಷ್ಟಪಡಿಸಿದ್ದರು.

ಈ ಸ್ವಚ್ಛೀಕರಣ ಕಾರ್ಯದಲ್ಲಿ ದಲಿತರೇ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಹೀಗಿದ್ದರೂ ದಲಿತರು ನಡೆದ  ರಸ್ತೆಗಳನ್ನು ಸ್ವಚ್ಛಗೊಳಿಸುವಂತಹ ದಲಿತ ವಿರೋಧಿ ಕಾರ್ಯಕ್ರಮವೆಂದು ನಿರೂಪಿಸಲು ‘ಉಡುಪಿ ಚಲೋ’  ಸಂಘಟನೆಯವರು ಪ್ರಯತ್ನಿಸುತ್ತಿರುವುದು ಎಷ್ಟು ಹಾಸ್ಯಾಸ್ಪದ ವರ್ತನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಅಪಪ್ರಚಾರಗಳ ಬಗ್ಗೆ ಇಂತಹ  ಅನೇಕ ಉದಾಹರಣೆಗಳನ್ನು ನೀಡಬಹುದು. ಅಂತೂ ನಾನು ದಲಿತ ಕೇರಿಗೆ ಹೋಗುವುದು ಮಾತ್ರವಲ್ಲ, ಅವರನ್ನು ತೆರೆದ ಹೃದಯದಿಂದ ಮಠದಲ್ಲಿಯೂ ಸ್ವಾಗತಿಸುತ್ತೇನೆ.

ದಲಿತರು ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ನಮ್ಮಲ್ಲಿಗೆ ಯಾವಾಗಲೂ ಬರುತ್ತಾರೆ.  ನಾನು ಅವರಲ್ಲಿ ನಿಜವಾದ ಆಧ್ಯಾತ್ಮಿಕ  ಪ್ರೀತಿಯನ್ನು ತೋರಿಸುತ್ತಲೇ ಇದ್ದೇನೆ. ಪ್ರಸನ್ನರವರ ಸಲಹೆಗೆ (ಪ್ರ.ವಾ., ಅ. 29) ನನ್ನ ಪೂರ್ಣ ಒಪ್ಪಿಗೆಯಿದೆ. ಅದರಂತೆಯೇ ನಡೆಯುತ್ತಿದ್ದೇನೆಂದು ತಿಳಿಸಲು ಸಂತೋಷಪಡುತ್ತೇನೆ. ಕೆಲವು ಪೂರ್ವಗ್ರಹಪೀಡಿತರು  ನನ್ನ ಕಳಕಳಿ ಅರ್ಥಮಾಡಿಕೊಳ್ಳುತ್ತಿಲ್ಲವೆಂದು ವಿಷಾದದಿಂದ ಹೇಳುತ್ತಿದ್ದೇನೆ. 

ಆದರೆ ಒಂದು ಕಡೆ ಸಂಪ್ರದಾಯವಾದಿಗಳ ವಿರೋಧವನ್ನು, ಇನ್ನೊಂದೆಡೆ ಇಂತಹ ಹಿಂದೂ ವಿರೋಧಿಗಳಾದ ಬುದ್ಧಿಜೀವಿಗಳ ವಿರೋಧ ಇವೆರಡನ್ನೂ ಎದುರಿಸಿಕೊಂಡು ನನ್ನದೇ ಆದ ರೀತಿಯಲ್ಲಿ ಸಮಾಜ ಸುಧಾರಣೆ ಕಾರ್ಯ ಮುಂದುವರಿಸುತ್ತೇನೆ. ಸಾಮಾನ್ಯ ಜನರ ಪೂರ್ಣ ಬೆಂಬಲದಿಂದ ಇದು ಯಶಸ್ವಿಯೂ ಆಗುತ್ತದೆಎಂಬ  ಪೂರ್ಣ ನಂಬಿಕೆ ಇದೆ. ಪೃಥ್ವಿ ದತ್ತ ಚಂದ್ರ ಶೋಭಿ ಅವರ ಸಲಹೆಯನ್ನೂ (ಪ್ರ.ವಾ., ಅ. 28) ಸ್ವೀಕರಿಸುತ್ತೇನೆ. ನನ್ನ ಕಾರ್ಯಕ್ರಮದ ಸ್ವರೂಪದ ಬಗ್ಗೆ ಪ್ರಜ್ಞಾವಂತರ ಜೊತೆಗೆ ವಿಚಾರ ವಿನಿಮಯಕ್ಕೆ ಸಿದ್ಧನಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT