ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವೇ?

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜಾಗತಿಕ ಆರ್ಥಿಕ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ತಕ್ಕಡಿಯನ್ನು ಹಿಡಿದುಕೊಂಡು ಮುಂದೆ ಬರುವ ಮುಂದುವರೆದ ರಾಷ್ಟ್ರಗಳು ಭಾರತದ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಯಾವ ಮಟ್ಟದಲ್ಲಿ ಅಳತೆ ಮಾಡುತ್ತವೆ ಎಂಬುದು ಮುಖ್ಯವಾದರೂ ಭಾರತೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಪಾತಾಳ ಕಂಡಿರುವುದಂತೂ ಸತ್ಯ.

ಇದಕ್ಕೆ ಕಾರಣಗಳನ್ನು ಹುಡುಕುವುದಕ್ಕಿಂತ ಮೊದಲು  ಈ ಹಿನ್ನೆಲೆಯಲ್ಲಿ ಭಾರತೀಯ ಪ್ರಭುತ್ವ ವ್ಯವಸ್ಥೆಯ ಬಗ್ಗೆ ಒಂದು ಮಾತನ್ನು ಮೊದಲು ಪ್ರಸ್ತಾಪಿಸುವುದು ಸೂಕ್ತ. ಭಾರತದ ರಾಷ್ಟ್ರಪತಿಗಳಾಗಲಿ, ಪ್ರಧಾನಿಯವರಾಗಲಿ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಾಗಲಿ, ಆಯಾ ರಾಜ್ಯಗಳ ರಾಜ್ಯಪಾಲರುಗಳು ಹಾಗೂ ಸರ್ಕಾರಗಳೇ ಆಗಲಿ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸುವ ಹಾಗೂ ಆ ಬಗ್ಗೆ ಪ್ರಶ್ನಿಸುವುದಕ್ಕೆ ಯಾವುದೇ ನೈತಿಕ ಹಕ್ಕು ಹೊಂದಿಲ್ಲ. ಕಾರಣ, ಇಂದು ವಿಶ್ವವಿದ್ಯಾಲಯಗಳ ಗುಣಮಟ್ಟ ಹಾಳಾಗಲು ಪ್ರಭುತ್ವ ವ್ಯವಸ್ಥೆಯ ಧೋರಣೆ ಹಾಗೂ ವರ್ತನೆಗಳೇ ಪ್ರಮುಖ ಕಾರಣವಾಗಿವೆ.

ಇದರಿಂದಾಗಿ ವಿಶ್ವವಿದ್ಯಾಲಯಗಳನ್ನು ಯಾವ ಮಗ್ಗಲುಗಳಿಂದ ರಿಪೇರಿ ಮಾಡಬೇಕೆಂಬ ವ್ಯವಧಾನವನ್ನೂ ಸಹಿತ ಈ ಪ್ರಭುತ್ವ ವ್ಯವಸ್ಥೆ ಕಳೆದುಕೊಂಡಿದೆ. ವಿಶ್ವವಿದ್ಯಾಲ ಯಗಳು ರಿಪೇರಿ ಮಾಡಲಿಕ್ಕೆ ಸಾಧ್ಯವಾಗದ ಮಟ್ಟಿಗೆ ದುಃಸ್ಥಿತಿಗೆ ತಲುಪಿವೆ. ಹೀಗಿರುವಾಗ ಪ್ರಭುತ್ವ ವ್ಯವಸ್ಥೆ ಆತಂಕ ವ್ಯಕ್ತಪಡಿಸುವುದು ಮೊಸಳೆ ಕಣ್ಣೀರು ಮಾತ್ರ.

ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಅಳೆಯುವ ಮೊದಲನೆಯ ಪರಿಣಾಮಕಾರಿ ಮಾಪನ ಎಂದರೆ ಸಂಶೋಧನೆ. ಕಾಲಕ್ಕನುಗುಣವಾಗಿ ಹೊಸ ಹೊಸ ಸಂಶೋಧನೆಗಳು ವಿಶ್ವದ ಗಮನ ಸೆಳೆಯುತ್ತಿದ್ದರೆ ವಿಶ್ವವಿದ್ಯಾಲಯಗಳು ತಮ್ಮ ಜೀವಂತಿಕೆಯನ್ನು ಸಾಬೀತುಪಡಿಸಿದಂತಾಗುತ್ತದೆ. ಗುಣಮಟ್ಟ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸುವ ಪ್ರಸ್ತುತ ಸಂದರ್ಭದಲ್ಲಿ ಈ ಬಗೆಯ ಸಂಶೋಧನೆಗಳು ಭಾರತೀಯ ವಿಶ್ವವಿದ್ಯಾಲಯಗಳಿಂದ ನಡೆಯುತ್ತಿಲ್ಲವೆ? ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲವಾದರೂ ನಿಗದಿತ ಗುಣಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಹೇಳಬಹುದು.

ಅಪವಾದಕ್ಕೆ ಒಂದಿಷ್ಟು ಪ್ರೊಫೆಸರ್‌ಗಳು ಒಂದಿಷ್ಟು ವಿದ್ಯಾರ್ಥಿಗಳು ಈ ಬಗೆಯ ಸಂಶೋಧನೆಯಲ್ಲಿ ಮಗ್ನವಾಗಿದ್ದ ಮಾತ್ರಕ್ಕೆ ವಿಶ್ವವಿದ್ಯಾಲಯಗಳ ಒಟ್ಟು ಸಂಶೋಧನೆ ಪ್ರಕ್ರಿಯೆ ಒಳ್ಳೆಯ ಗುಣಮಟ್ಟದಿಂದ ಕೂಡಿದೆ ಎಂದು ಸರಳ ತೀರ್ಮಾನಕ್ಕೆ ಬರಲಾಗುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಆಧುನಿಕ ಸುಸಜ್ಜಿತ ಪ್ರಯೋಗ ಶಾಲೆಗಳಿದ್ದು, ಕಾಲ ಕಾಲಕ್ಕೆ ಅಚ್ಚುಕಟ್ಟಾಗಿ ಶಿಬಿರಗಳು, ವಿಚಾರ ಸಂಕಿರಣಗಳು ನಡೆಯುತ್ತಿದ್ದು ಜೊತೆಗೆ ಸಂಶೋಧನಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದ ಮಾತ್ರಕ್ಕೆ ನಿಜವಾಗಲೂ ಸಂಶೋಧನೆ ನಡೆಯುತ್ತಿದೆ ಎಂದು ಭಾವಿಸಿಕೊಳ್ಳುವ ಅವಶ್ಯಕತೆಯಿಲ್ಲ.

ಭಾರತೀಯ ವಿಶ್ವವಿದ್ಯಾಲಯಗಳ ಸಂಶೋಧನೆಯ ಬಹುತೇಕ ಸ್ಥಿತಿ ಇದೇ ಆಗಿದೆ. ಎಲ್ಲವೂ ನಡೆಯುತ್ತಿದೆ ಆದರೆ, ಸಂಶೋಧನೆ ಮೈನಸ್. ಆದರೆ, ಸಂಶೋಧನೆಯ ಹೆಸರಿನಲ್ಲಿ ಏನೆಲ್ಲ ನಡೆಯುತ್ತಿವೆ. ನಿಜವಾದ ಸಂಶೋಧನೆಯ ಮನಸ್ಸುಗಳು ಅಪರೂಪವಾಗಿರುವುದರಿಂದ ಭಾರತೀಯ ವಿಶ್ವವಿದ್ಯಾಲಯಗಳು  ಭ್ರಷ್ಟ ಮನಸ್ಥಿತಿಗಳ ಗೋದಾಮುಗಳಾಗಿ ಮಾರ್ಪಟ್ಟಿರುವುದರಿಂದ ಹಣಗಳಿಕೆ ಅಥವಾ ಹಣ ಸುಲಿಗೆಯ ಕೇಂದ್ರಗಳಾಗಿ ವಿಜೃಂಭಿಸುತ್ತಿವೆ.

ಈ ಕಾರಣದಿಂದಾಗಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವಿಪರೀತ ಜಾತಿಯ ಮದ, ಲಜ್ಜೆಗೆಟ್ಟ ಸ್ವಾರ್ಥ, ನಾಚಿಕೆ ಇಲ್ಲದ ಗುಂಪುಗಾರಿಕೆ, ಕೀಳುಮಟ್ಟದ ದ್ವೇಷ ಸಾಧನೆ, ಅನೈತಿಕತೆಯ ಹಗರಣಗಳು-ಚಟುವಟಿಕೆಗಳು ಸಾಮಾನ್ಯ ಸಂಗತಿಗಳಾಗಿ ಬಿಂಬಿತಗೊಳ್ಳುತ್ತಿವೆ. ವಿಶ್ವವಿದ್ಯಾಲಯಗಳ ಬಗ್ಗೆ ಸಂಶೋಧನಾ ಕಾರ್ಯ ಕೈಗೊಂಡರೆ ಇಂಥ ಪ್ರಕರಣಗಳೇ ಹೆಚ್ಚುಹೆಚ್ಚಾಗಿ ಕಂಡುಬರುತ್ತವೆ.

ಭಾರತೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯ ಪ್ರಕ್ರಿಯೆಯಲ್ಲಿ ಪ್ರತಿಭೆ, ಸಂಶೋಧನಾ ಪ್ರವೃತ್ತಿ, ಕ್ರಿಯಾಶೀಲತೆಯಂಥ ಸೃಜನಶೀಲ ಸಾಧನೆಯ ಪರಿಗಣನೆಗಿಂತ ಹಣ ಮತ್ತು ಜಾತಿಯ ಲೆಕ್ಕಾಚಾರವೇ ಪ್ರಮುಖ ಮಾನದಂಡವಾಗಿರುವ ವಿಷಯ ಗುಟ್ಟಾಗಿ ಉಳಿದುಕೊಂಡಿಲ್ಲ. ನೇಮಕಾತಿಯಲ್ಲಿ ಹಣದ ವ್ಯವಹಾರದ್ದೇ ಒಂದು ಜಾತಿ. ಹಣವೊಂದಿದ್ದರೆ ಜಾತಿಗಳೂ ಪಲ್ಟಿ ಹೊಡೆಯುತ್ತವೆ.

ಆದರೆ, ಭಾರತದಲ್ಲಿ ಜಾತಿ ಮತ್ತು ಹಣ ನೇಮಕಾತಿ ಸಂದರ್ಭದ ಪ್ರಮುಖ ಸಾಧನಗಳಾಗಿವೆ. ಒಂದು ಸಂಸ್ಥೆ ಅಥವಾ ಒಂದು ವ್ಯವಸ್ಥೆಯನ್ನು ಮಣ್ಣುಗೂಡಿಸಬೇಕಾದರೆ ಅದರ ಪ್ರಧಾನ ಸ್ಥಾನದಲ್ಲಿ ಒಬ್ಬ ಭ್ರಷ್ಟನನ್ನು ನೇಮಿಸಿದರೆ ಸಾಕು  ಎಲ್ಲವೂ ತನ್ನಷ್ಟಕ್ಕೆ ತಾನೇ ಆ ಸಂಸ್ಥೆಯ ಅಥವಾ ವ್ಯವಸ್ಥೆಯ ಶವ ಸಂಸ್ಕಾರ ನಡೆದುಹೋಗುತ್ತದೆ. ಇದನ್ನು ನಾವು ಭಾರತದ ಎಲ್ಲ ರಂಗಗಳಲ್ಲಿ ಕಾಣುವಂತೆ ವಿಶ್ವವಿದ್ಯಾಲಯಗಳಲ್ಲಿಯೂ ಕಾಣಬಹುದು. ಭಾರತೀಯ ವಿಶ್ವವಿದ್ಯಾಲಯಗಳ ಗುಣಮಟ್ಟದ ಕುಸಿತಕ್ಕೆ ಭ್ರಷ್ಟ ಕುಲಪತಿಗಳ ನೇಮಕಾತಿ ಆಧಾರ ಸ್ತಂಭ. ಈ ಸ್ತಂಭದ ಮೇಲೆ ಭ್ರಷ್ಟತೆಯ ಮನೆ ನಿರ್ಮಾಣ.

ಯಥಾಪ್ರಕಾರ ಕುಲಸಚಿವರುಗಳು ಅವರ ಸಹಾಯಕರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರುಗಳು ನೇಮಕಾತಿಗೊಳ್ಳುತ್ತ ಹೋಗುತ್ತಾರೆ. ಇಡೀ ವಿಶ್ವವಿದ್ಯಾಲಯ ಅಂಥವರಿಂದ ಭರ್ತಿಯಾಗಿ ತುಂಬಿಕೊಳ್ಳುತ್ತದೆ. ಭಾರತೀಯ ವಿಶ್ವವಿದ್ಯಾಲಯಗಳು ಇಂಥ ವ್ಯವಸ್ಥೆಯಿಂದ ತುಂಬಿ ತುಳುಕುತ್ತಿವೆ. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಸುತ್ತಿವೆ. ಇಷ್ಟಾಗಿ ಕೊಟ್ಟವರು ಕೊಟ್ಟಿದ್ದೇನೆ ಎಂದು, ತೆಗೆದುಕೊಂಡವರು ತೆಗೆದುಕೊಂಡಿದ್ದೇನೆ ಎಂದು ಯಾರೂ ಹೇಳುವುದಿಲ್ಲ.

ಹೀಗಾಗಿ ಇದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಭ್ರಷ್ಟ ಮಾರ್ಗದಿಂದ ಬಂದಾತ ತಾನಿರುವ ಜಾಗದಲ್ಲಿ ಭ್ರಷ್ಟಾಚಾರದ ಮಾರ್ಗವನ್ನೇ ಸೃಷ್ಟಿಸಿಕೊಳ್ಳುತ್ತಾನೆ. ಈತನ ವೇದಿಕೆಯ ಆದರ್ಶದ ಮಾತುಗಳೇ ತನ್ನ ಹೊಲಸುತನ ಮುಚ್ಚಿಕೊಳ್ಳಲು ಬಂಡವಾಳ. ಕೋಟಿಗಟ್ಟಲೆ ಹಣ ಕೊಟ್ಟು ಬರುವ ಕುಲಪತಿ ತಾನು ಕೊಟ್ಟ ಹಣದ ಬಡ್ಡಿ, ಚಕ್ರಬಡ್ಡಿಯೊಂದಿಗೆ ಅದಕ್ಕಿಂತ ಅದೆಷ್ಟೋ ಪಟ್ಟು ಹಣ ಲೂಟಿ ಮಾಡುವುದಕ್ಕೆ  ಪ್ರಯತ್ನಿಸುತ್ತಾನೆಯೇ ಹೊರತು ವಿಶ್ವವಿದ್ಯಾಲಯದ ಗುಣಮಟ್ಟ ಅಥವಾ ಅಭಿವೃದ್ಧಿಯ ನೈತಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗುಣಮಟ್ಟ, ಅಭಿವೃದ್ಧಿಗಳು ಹಣ ಗಳಿಕೆಯ ಅಸ್ತ್ರಗಳಾಗಿ ಪರಿವರ್ತಿತಗೊಳ್ಳುತ್ತವೆ.

ಲಂಚ ಕೊಟ್ಟು ಬಂದ ಪ್ರಾಧ್ಯಾಪಕರು ಭ್ರಷ್ಟ ಕುಲಪತಿಯ ಎಡಗೈ, ಬಲಗೈಗಳಾಗಿ ನಿಂತು  ಸಂಶೋಧನೆಯ ಎಲ್ಲ ಪ್ರಕ್ರಿಯೆಗಳ ಜೊತೆಗೆ ಅಧ್ಯಯನ, ಅಧ್ಯಾಪನ ಹಾಗೂ ಸಾಮಾಜಿಕ ಉಪನ್ಯಾಸಗಳನ್ನು ಶೈಕ್ಷಣಿಕ ಹಾಗೂ ಸಾಮಾಜಿಕ ಹಿತಾಸಕ್ತಿಗಿಂತ  ವೈಯಕ್ತಿಕ ಹಿತಾಸಕ್ತಿಯ ಲೆಕ್ಕಾಚಾರದಲ್ಲಿಯೇ ಶ್ರಮಿಸುತ್ತಾರೆ. ಒಬ್ಬ ಭ್ರಷ್ಟ ಕುಲಪತಿ ಒಂದು ವಿಶ್ವವಿದ್ಯಾಲಯದಲ್ಲಿ ನಾಲ್ಕೈದು ವರ್ಷಗಳವರೆಗೆ ಮಾತ್ರ ಇರಬಹುದು. ಆದರೆ, ಆತನಿಂದ ಸೃಷ್ಟಿಗೊಳ್ಳುವ ಭ್ರಷ್ಟ ವ್ಯವಸ್ಥೆ ಆ ಕಾಲದ ಮಿತಿಯನ್ನು ದಾಟಿ ಮುಂದುವರೆಯುತ್ತಲೇ ಇರುತ್ತದೆ. ಆತನ ಮೂಲಕ ಹೆಬ್ಬಾಗಿಲಿನಿಂದ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ಭ್ರಷ್ಟ ಪ್ರಾಧ್ಯಾಪಕರು ತಾವು ನಿವೃತ್ತಿ ಆಗುವವರೆಗೂ ಅದೇ ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಅನೈತಿಕ ವ್ಯವಹಾರಗಳ ಮೂಲಕ ಅಂಥ ವ್ಯವಸ್ಥೆಯನ್ನು ಕಾಯ್ದುಕೊಂಡು ಬೆಳೆಸುತ್ತಲೇ ಹೋಗುತ್ತಾನೆ. ಭಾರತೀಯ ವಿಶ್ವವಿದ್ಯಾಲಯಗಳ ಹಕೀಕತ್ತು ಇಂದು ಇದೇ ಪರಿಸ್ಥಿತಿಯದೇ ಆಗಿರುವುದರಿಂದ ಗುಣಮಟ್ಟವನ್ನು ಹಗಲು ಹೊತ್ತಿನಲ್ಲಿ ದೀಪದ ಮೂಲಕ ಹುಡುಕಿದರೂ ಸಿಗುವುದಿಲ್ಲ.

ಈ ವ್ಯವಸ್ಥೆ ಇಂದು ಹದ್ದು ಮೀರಿ ಬೆಳೆದಿರುವುದರಿಂದ ಮತ್ತು ಬೆಳೆಯುತ್ತಿರುವುದರಿಂದ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟವನ್ನು ತಕ್ಷಣ ತಂದುಕೊಳ್ಳುವುದು ಅಸಾಧ್ಯದ ಮಾತು. ಕೆಲ ಕುಲಪತಿಗಳ ನೇಮಕಾತಿ ಪ್ರಾಮಾಣಿಕವಾಗಿ ನಡೆದರೂ ಅಂಥವರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡುವುದಿಲ್ಲ. ಭ್ರಷ್ಟತೆ ತುಂಬಾ ಆಳವಾಗಿ ಬೇರುಗಳನ್ನು ಹರಡಿಕೊಂಡು ವಿಶಾಲವಾಗಿ ಹಬ್ಬಿಕೊಂಡಿರುವುದರಿಂದ ವಿಶ್ವವಿದ್ಯಾಲಯಗಳ ಗುಣಮಟ್ಟ ಕಾಯ್ದುಕೊಳ್ಳುವಿಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ ಎಂದು ಹೇಳಬಹುದು. 

ಶರೀರದೊಳಗಿರುವ ಇಡೀ ರಕ್ತವೇ ಅಶುದ್ಧವಾಗಿರುವಾಗ ಅದನ್ನು ಶುದ್ಧೀಕರಿಸಲು ಮಿಲಿ ಲೀಟರ್‌ನ ಅಲ್ಪಪ್ರಮಾಣದ ಶುದ್ಧರಕ್ತ ನೀಡಿದರೂ ಶುದ್ಧವೂ ಅಶುದ್ಧವಾಗಿ ಪರಿವರ್ತಿತಗೊಳ್ಳುತ್ತದೆ. ಸರ್ಕಾರಗಳಿಗೆ ವಿಶ್ವವಿದ್ಯಾಲಯಗಳನ್ನು ಸುಧಾರಿಸಲೇಬೇಕು, ಗುಣಮಟ್ಟ ಕಾಯ್ದುಕೊಳ್ಳಲೇಬೇಕು ಎಂದು ಹಟ ಸಾಧಿಸಿ ಮುಂದೆ ಬಂದು ಪುರುಷತ್ವ ಮೆರೆದದ್ದಾದರೆ,  ತುಂಬಿ ತುಳುಕುತ್ತಿರುವ ಅಶುದ್ಧ ರಕ್ತವನ್ನು ಮೊದಲು ಹೊರಹೋಗಲು ಅವಕಾಶ ಕಲ್ಪಿಸಬೇಕು.

ಹೊರಗಿನಿಂದ ಸೇರಿಸಲ್ಪಡುವ ಶುದ್ಧರಕ್ತವು ಅಶುದ್ಧದೊಂದಿಗೆ ಸೇರದಂತೆ ನೋಡಿಕೊಳ್ಳಬೇಕು. ಈ ಕ್ರಮ ಇಂದೇ ಅನುಸರಿಸಿದ್ದಾದರೆ ಒಂದು ಕಾಲದಲ್ಲಿ ಒಂದು ಹಂತದವರೆಗೆ ವಿಶ್ವವಿದ್ಯಾಲಯಗಳ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಇಚ್ಛಾಶಕ್ತಿ ಪ್ರಭುತ್ವ ವ್ಯವಸ್ಥೆಗೆ ಎಂದು ಬರುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT