ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಕೈಕಟ್ಟುವ ಕರಾಳ ಮಸೂದೆ

ಅಕ್ಷರ ಗಾತ್ರ

ಈಗ ಚರ್ಚೆಯಲ್ಲಿರುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ  (ತಿದ್ದುಪಡಿ)–2017’ ಮಸೂದೆ ಅಂಗೀಕಾರಗೊಂಡು ಜಾರಿಯಾದರೆ ರಾಜ್ಯದ ವೈದ್ಯರು ರೋಗಿಯಲ್ಲಿ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ; ಹಾಗೊಮ್ಮೆ ಕೇಳಿ, ದೂರಿಗೀಡಾದರೆ ₹ 5000 ದಂಡ ತೆರಬೇಕಾದೀತು! ಎಲ್ಲಾ ವೈದ್ಯರನ್ನೂ ಲೂಟಿಕೋರರಂತೆ ಪರಿಗಣಿಸುವ, ಸಾಕ್ಷ್ಯಾಧಾರಗಳ ಅಗತ್ಯವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಅಪ್ಪಟ ಸುಳ್ಳುಗಳ ಕಂತೆ ಈ ಮಸೂದೆ.

ಈ ಮಸೂದೆಯು ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಸಮಿತಿಯ ವರದಿಯ ಆಧಾರದಲ್ಲಿ ರೂಪಿತವಾಗಿದೆ ಎನ್ನುವುದು ಮೊದಲನೇ ಸುಳ್ಳು. ನ್ಯಾಯಮೂರ್ತಿ ಸೇನ್ ಹಾಗೂ ಆರೋಗ್ಯ ಸಚಿವರು ಏಪ್ರಿಲ್ 28ರಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ‘ಸಮಿತಿಯ ವರದಿಯ ಆಧಾರದಲ್ಲಿ ಕಾಯ್ದೆಯನ್ನು ರೂಪಿಸಲಾಗುವುದು’ ಎಂದು ಹೇಳಿಕೆ ನೀಡಿದ್ದರು. ಬಳಿಕ, ಮೇ 12ರಂದು ಅದರ ಆಧಾರದಲ್ಲಿ ಕರಡು ಮಸೂದೆಯನ್ನು ರಚಿಸಿ, ಸಮಿತಿ ಸದಸ್ಯರ ಆಕ್ಷೇಪಗಳನ್ನು ಪಡೆಯಲಾಗಿತ್ತು.

ಅಷ್ಟೆಲ್ಲ ಆದ ಬಳಿಕ, ಸಮಿತಿಯ ವರದಿಯಲ್ಲಿರುವ ಎಲ್ಲಾ ಸಲಹೆಗಳನ್ನೂ ಕಸದ ಬುಟ್ಟಿಗೆ ತಳ್ಳಿ, ಕರಡು ಮಸೂದೆಯ ತಲೆಬರಹವನ್ನೇ ಬದಲಿಸಿ, ಸಮಿತಿಯ ವರದಿಗೆ ತದ್ವಿರುದ್ಧವಾದ ಮಸೂದೆಯನ್ನು ಈಗ ಮಂಡಿಸಲಾಗಿದೆ. ತಮ್ಮ ಹೇಳಿಕೆಯಿಂದ ಹಿಂದೆ ಸರಿದು, ವರದಿಗೆ ತದ್ವಿರುದ್ಧವಾದ ಮಸೂದೆಯನ್ನು ಮಂಡಿಸಿದ್ದಕ್ಕೆ ಕಾರಣಗಳೇನು ಹಾಗೂ ಇದರ ಹಿಂದೆ ಅದಾವ ಕಾಣದ ಶಕ್ತಿಗಳು ಕೆಲಸ ಮಾಡಿವೆ ಎನ್ನುವುದರ ಬಗ್ಗೆ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸೇನ್ ಹಾಗೂ ಇತರ ಸದಸ್ಯರಿಗೆ ಹಾಗೂ ನಾಡಿನ ಜನರಿಗೆ ಸಚಿವರು ಈ ಕೂಡಲೇ ಉತ್ತರಿಸಬೇಕು.

ಈ ಸಮಿತಿಯಲ್ಲಿದ್ದವರಲ್ಲಿ ಹೆಚ್ಚಿನವರು ವೈದ್ಯರ ಒಕ್ಕೂಟಗಳವರು; ಸಾಮಾನ್ಯ ನಾಗರಿಕರನ್ನು ಪ್ರತಿನಿಧಿಸಲು ಕೇವಲ ಒಬ್ಬ ಸದಸ್ಯರಿದ್ದರು  ಎನ್ನುವುದು ಎರಡನೇ ಸುಳ್ಳು. ಮೊದಲು ರಚಿಸಿದ ಸಮಿತಿಯಲ್ಲಿ 24 ಸದಸ್ಯರಿದ್ದರು. ಆ ಪೈಕಿ 12 ಸದಸ್ಯರು ಸರ್ಕಾರಿ ಇಲಾಖೆಗಳವರು. ಕರ್ನಾಟಕ ವೈದ್ಯಕೀಯ ಪರಿಷತ್ತು ಹಾಗೂ ಭಾರತೀಯ ವೈದ್ಯಕೀಯ ಸಂಘದ ತಲಾ ಒಬ್ಬರು, ವೈದ್ಯಕೀಯ ಸಂಘಟನೆಗಳ ಐವರು, ಇಬ್ಬರು ಸ್ವತಂತ್ರ ವೈದ್ಯರು, ಸರ್ಕಾರೇತರ ಸಂಘಟನೆಗಳ ಇಬ್ಬರು ಹಾಗೂ ಒಬ್ಬ ಶಿಕ್ಷಣ ತಜ್ಞರಿದ್ದರು. ಕೊನೆಯ ಸಭೆಯಲ್ಲಿದ್ದ  25 ಮಂದಿಯಲ್ಲಿ 17 ಮಂದಿ ಸರ್ಕಾರಿ ಪ್ರತಿನಿಧಿಗಳು, ಇಬ್ಬರು ವೈದ್ಯಕೀಯ ಸಂಘಟನೆಗಳವರು.

ಸಮಿತಿಯಡಿ ರಚಿಸಿದ್ದ ಉಪಸಮಿತಿಗಳ ಸಭೆಗಳಲ್ಲಿ ವಿವಿಧ ಹಿತಾಸಕ್ತರ ಅಹವಾಲುಗಳನ್ನು ಆಲಿಸಲಾಗಿತ್ತು. ಅಷ್ಟೆಲ್ಲ ವಿಸ್ತಾರವಾಗಿ ಚರ್ಚಿಸಿ, ನ್ಯಾಯಮೂರ್ತಿ ಸೇನ್ ಅವರ ಮುತುವರ್ಜಿಯಿಂದ ಸಲ್ಲಿಸಲಾದ ವರದಿಯು ಸರಿಯಿಲ್ಲ ಎನ್ನುವುದರ ಹಿಂದೆ ಯಾರ ಕೈವಾಡವಿದೆ?
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳನ್ನೂ, ವೈದ್ಯರ ಇರುವಿಕೆಯನ್ನೂ ಖಾತರಿಗೊಳಿಸುವುದಕ್ಕಾಗಿ ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆಯ ವ್ಯಾಪ್ತಿಯೊಳಕ್ಕೆ ತರಬೇಕೆಂದು ಸಮಿತಿಯು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಹಾಗೂ ಕೇರಳ ರಾಜ್ಯಗಳ ಕಾಯ್ದೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನೂ ಸೇರಿಸಲಾಗಿದ್ದು, ನಮ್ಮ ರಾಜ್ಯವೂ ಅದೇ ಮಾದರಿಯನ್ನು ಅನುಸರಿಸುವುದು ಪ್ರಶಸ್ತವೆನ್ನುವುದು ಒಬ್ಬ ಸದಸ್ಯರನ್ನುಳಿದು ಇನ್ನೆಲ್ಲರ ಒಕ್ಕೊರಲ ಅಭಿಪ್ರಾಯವಾಗಿತ್ತು.

ಸರ್ಕಾರಿ ಆಸ್ಪತ್ರೆಗಳನ್ನು ಈಗ ಕಾಯ್ದೆಯಿಂದ ಹೊರಗಿಟ್ಟಿರುವುದರ ಉದ್ದೇಶ ‘ಅವನ್ನು ಇನ್ನಷ್ಟು ಕೆಡಿಸಿ, ಕಾರ್ಪೊರೇಟ್ ಆಸ್ಪತ್ರೆಗಳನ್ನು ಕೊಬ್ಬಿಸುವುದಕ್ಕೆ ಜನಾರೋಗ್ಯದ ರಕ್ಷಕರೆಂಬ ಸೋಗು ಹಾಕಿರುವವರ ಹುನ್ನಾರ’ದಂತೆ ತೋರುತ್ತಿದೆ.

ತನ್ನ ಆಸ್ಪತ್ರೆಗಳನ್ನು ಸರಿಪಡಿಸಿ, ಕೇರಳದಂತೆ ಕಾಯ್ದೆಯೊಳಕ್ಕೆ ತರುವ ಧೈರ್ಯವಾಗಲೀ, ಇಚ್ಛೆಯಾಗಲೀ ಇಲ್ಲದ ಸರ್ಕಾರವು ಖಾಸಗಿ ಆಸ್ಪತ್ರೆಗಳನ್ನೂ, ವೈದ್ಯರನ್ನೂ ನಿಯಂತ್ರಿಸಬಯಸುವುದು ಕಾನೂನುಬಾಹಿರವಷ್ಟೇ ಅಲ್ಲ, ಭ್ರಷ್ಟಾಚಾರದ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವ ಹುನ್ನಾರ ಆಗಿದೆ. ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಉದ್ದೇಶದ  ಈ ಮಸೂದೆಯು  ಸಂಸ್ಥೆಗಳಷ್ಟೇ ಅಲ್ಲದೆ, ಪ್ರತಿಯೊಬ್ಬ ವೈದ್ಯರ ದಿನನಿತ್ಯದ ಕೆಲಸಗಳನ್ನು ನಿಯಂತ್ರಿಸುವುದಕ್ಕೂ ಜಿಲ್ಲಾ ಪಂಚಾಯಿತಿ ಸಿಇಒಗಳ ನೇತೃತ್ವದ ಸಮಿತಿಗಳಿಗೆ ಅಧಿಕಾರ ನೀಡುತ್ತದೆ.

ಈ ಮಸೂದೆಯಲ್ಲಿರುವ ‘ರೋಗಿಗಳ ಸನದು’ ವೈದ್ಯ ಹಾಗೂ ರೋಗಿಗಳ ನಡುವಿನ ಸಂಭಾಷಣೆ-ಪರೀಕ್ಷಾ ಪ್ರಕ್ರಿಯೆಯನ್ನೇ ಶಿಕ್ಷಾರ್ಹಗೊಳಿಸುತ್ತದೆ. ವೈದ್ಯನು ರೋಗಿಯನ್ನು ಮಧ್ಯದಲ್ಲಿ ಪ್ರಶ್ನಿಸಿದರೆ, ತನ್ನ ಮಿತಿಗೆ ಹೊರತಾದ ಚಿಕಿತ್ಸೆಯನ್ನು ನೀಡದಿದ್ದರೆ, ರೋಗಿಯ ಭಾಷೆಯಲ್ಲಿ ಸಂವಹನ ನಡೆಸದಿದ್ದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ!

ಜಗತ್ತಿನಲ್ಲೇ ಎಲ್ಲೂ ಇಲ್ಲದ ಇಂತಹ ಕಾನೂನಿನಡಿಯಲ್ಲಿ ಯಾವ ವೈದ್ಯನೂ ತನ್ನ ವೃತ್ತಿಯನ್ನು ನಿಭಾಯಿಸುವುದಕ್ಕೆ ಸಾಧ್ಯವೇ ಇಲ್ಲ. ವೈದ್ಯರ ಲೋಪಗಳ ಮೇಲೆ ಕ್ರಮ ಕೈಗೊಳ್ಳಲು ಗ್ರಾಹಕ ವ್ಯಾಜ್ಯ ವೇದಿಕೆ, ಸಿವಿಲ್ ಹಾಗೂ ಕ್ರಿಮಿನಲ್ ನ್ಯಾಯಾಲಯ ಇತ್ಯಾದಿಗಳೆಲ್ಲವೂ ಇರುವಾಗ, ಅವು ಯಾವುವೂ ಸರಿಯಿಲ್ಲವೆಂದು ಜರೆದು, ಜಿಲ್ಲಾವಾರು ಆಯೋಗಗಳನ್ನು ರಚಿಸುವುದರ ಹಿಂದೆ ವೈದ್ಯರನ್ನು ಪೀಡಿಸುವ ದುರುದ್ದೇಶವಲ್ಲದೆ ಬೇರೇನೂ ಕಾಣಿಸುತ್ತಿಲ್ಲ. ತನ್ನ ಆಸ್ಪತ್ರೆಗಳನ್ನು ಪಾಳು ಬಿಟ್ಟು, ಕಾರ್ಪೊರೇಟ್ ಆಸ್ಪತ್ರೆಗಳಿಗೆ ಎಕರೆಗಟ್ಟಲೆ ಜಾಗ ಕೊಟ್ಟು, ಯಶಸ್ವಿನಿ ಇತ್ಯಾದಿ ಹೆಸರಲ್ಲಿ ಜನರನ್ನು ಅತ್ತ ದೂಡಿದ ಸರ್ಕಾರಕ್ಕೆ ‘ಖಾಸಗಿ ವೈದ್ಯರೆಲ್ಲರೂ ಧನದಾಹಿಗಳು’ ಎನ್ನಲು  ಅದಾವ ನೈತಿಕತೆಯಿದೆ? 

ರಾಜ್ಯದಲ್ಲಿ ಶೇ 70ರಷ್ಟು ಆರೋಗ್ಯ ಸೇವೆಗಳನ್ನು ಸಣ್ಣ ಆಸ್ಪತ್ರೆಗಳೇ ಒದಗಿಸುತ್ತವೆ. ಸಾಮಾನ್ಯ ರೋಗಗಳ ಚಿಕಿತ್ಸೆಗಳು, ಸಾಮಾನ್ಯ ಶಸ್ತ್ರಚಿಕಿತ್ಸೆಗಳು, ಹೆರಿಗೆ ಹಾಗೂ ಮಕ್ಕಳ ಸೇವೆಗಳು ಈ ಸಣ್ಣ ಆಸ್ಪತ್ರೆಗಳಲ್ಲೂ, ಸರ್ಕಾರಿ ಆಸ್ಪತ್ರೆಗಳಲ್ಲೂ ನಡೆಯುತ್ತವೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಶೇ 5ಕ್ಕೂ ಕಡಿಮೆ ಚಿಕಿತ್ಸೆಗಳಾಗುತ್ತಿದ್ದು, ಅವೆಲ್ಲವೂ ಉನ್ನತ ಮಟ್ಟದ ಚಿಕಿತ್ಸೆಗಳೇ ಆಗಿರುತ್ತವೆ. ಆದ್ದರಿಂದ ಕಾರ್ಪೊರೇಟ್ ಆಸ್ಪತ್ರೆಗಳನ್ನು ಸಣ್ಣ ಆಸ್ಪತ್ರೆಗಳೊಂದಿಗೆ ತಳಕು ಹಾಕುವುದು ಅಸಮಂಜಸವಷ್ಟೇ ಅಲ್ಲ, ಅನ್ಯಾಯವೂ ಆಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುತ್ತಿರುವ ಬಹುತೇಕ ಸಣ್ಣ ಆಸ್ಪತ್ರೆಗಳು ಸಾಕಷ್ಟು ಕಷ್ಟದಲ್ಲೇ ನಡೆಯುತ್ತಿದ್ದು, ಹಲವು ಮುಚ್ಚಿಹೋಗಿವೆ. ಸಣ್ಣ ಆಸ್ಪತ್ರೆಗಳ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಿದರೆ ಅವುಗಳ ಬಾಗಿಲು ಬಂದ್‌ ಆಗುತ್ತದೆ.  ಅದರಿಂದ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಇನ್ನಷ್ಟು ಲಾಭ.

ಆದ್ದರಿಂದ ದೇಶದ ಎಲ್ಲಾ ಕಾನೂನುಗಳಿಗೆ ವಿರುದ್ಧವಾಗಿರುವ, ಲೋಕದಲ್ಲಿ ಎಲ್ಲೂ ಇಲ್ಲದ ನಿರ್ಬಂಧಗಳನ್ನು ವೈದ್ಯರ ಮೇಲೆ ಹೇರಿ ದಿನನಿತ್ಯದ ವೃತ್ತಿಪರ ಕೆಲಸಗಳನ್ನೂ ಸರ್ಕಾರಿ ಅಧಿಕಾರಿಗಳ ಅಧೀನದಲ್ಲಿ ತರುವ, ಎಲ್ಲೋ ಗುರಿಯಿಟ್ಟು ಇನ್ಯಾವುದನ್ನೋ ಹೊಡೆದು ಉರುಳಿಸುವ ಈ ಮಸೂದೆಯನ್ನು ಈ ಕೂಡಲೇ ತಡೆಹಿಡಿದು, ಇನ್ನಷ್ಟು ಆಳವಾಗಿ ಚರ್ಚಿಸಿದ ಬಳಿಕವೇ ಮುಂದಡಿ ಇಡಬೇಕಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕಾದರೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ಅತ್ಯುತ್ತಮಗೊಳಿಸಿ, ಸಣ್ಣ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡಿ, ವೈದ್ಯರಿಗೆ ನಿರ್ಭಿಡೆಯಿಂದ ತಮ್ಮ ಕಾರ್ಯನಿರ್ವಹಿಸಲು ಅಗತ್ಯವಾದ ಸೌಲಭ್ಯಗಳನ್ನೂ, ಸುರಕ್ಷತೆಯನ್ನೂ ಒದಗಿಸಬೇಕಾಗಿದೆ.  ಉದ್ದೇಶ ಒಳ್ಳೆಯದಿದ್ದರಷ್ಟೇ ಸಾಲದು. ಅದನ್ನು ಸಾಧಿಸುವ ವಿಧಾನ ಕಾನೂನುಬದ್ಧವೂ, ವಿವೇಕಯುತವೂ ಆಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT