ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯ, ಅಸಭ್ಯದ ದ್ವಂದ್ವ

ತೊಡಕಿರುವುದು ಸೀರೆಯಲ್ಲಲ್ಲ; ಅದನ್ನು ಉಡುವ ಪರಿಯಲ್ಲಿ
Last Updated 23 ಜುಲೈ 2015, 19:30 IST
ಅಕ್ಷರ ಗಾತ್ರ

ವೇಷಭೂಷಣವಿರಲಿ, ಆಚಾರ ವಿಚಾರವಿರಲಿ ಹೊಸತನ್ನು ನಿರಾಕರಿಸುವುದು ಅನಾದಿ ಕಾಲದಿಂದಲೂ ನಡೆದು ಬಂದ ಪರಂಪರೆ. ಬೇಡ ಎಂದು ದೂಡಿದ್ದು ಕಾಲಕ್ರಮೇಣ ಹಿಂಬಾಗಿಲಿನಿಂದ ಪ್ರವೇಶಿಸುತ್ತದೆ. ಅದು ಮೊದಲು ಪುರುಷನನ್ನು ಸದ್ದಿಲ್ಲದೇ ಆವರಿಸುತ್ತದೆ. ಆದರೆ ಅದು  ಮಹಿಳೆಯನ್ನು ಆವರಿಸತೊಡಗಿದಾಗ ಹಾರಾಟ, ಚೀರಾಟ ಕೇಳಿ ಬರುತ್ತದೆ.

ಶಿಕ್ಷಕಿಯರು ಸೀರೆ ಉಡಲೇಬೇಕು ಎಂದು ಕೆಲ ಸಂಸ್ಥೆಗಳು ಒತ್ತಾಯ ತರುತ್ತಿವೆ. ಅದು ಕೆಲವರಿಗೆ ಒಪ್ಪಿಗೆ ಇಲ್ಲ. ಅಂಥವರ ಮೇಲೆ ಒತ್ತಾಯ ಹೇರಿದಾಗ ‘ಶಿಕ್ಷಕ ವೃತ್ತಿಯನ್ನೇ ತೊರೆಯುವುದರ ಬಗ್ಗೆ  ಯೋಚಿಸುತ್ತಿದ್ದೇನೆ’ ಎಂದು ಒಬ್ಬ ಶಿಕ್ಷಕಿ ಆಕ್ರೋಶ, ನೋವನ್ನು ಪ್ರಕಟಿಸಿದ್ದಾರೆ.  ಇವರಿಗೆ ನನ್ನ ಬೆಂಬಲ ಇದೆ. ವಸ್ತ್ರಸಂಹಿತೆ ಗಂಡಸಿಗೆ ಒಂದು, ಹೆಣ್ಣಿಗೆ ಒಂದು ಎಂಬುದು ಒಪ್ಪತಕ್ಕದ್ದಲ್ಲ.

ಶತಮಾನಗಳಿಂದ ಶುಶ್ರೂಷಕಿಯರು ಸ್ಕರ್ಟ್ ಧರಿಸುತ್ತಲೇ ಬಂದಿದ್ದರು. ಅದಕ್ಕೆ ಯಾರದ್ದೂ ವಿರೋಧ ಬಂದಿರಲಿಲ್ಲ. ಆದರೆ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಕೆಲವು ನರ್ಸಿಂಗ್ ಹೋಮ್‌ಗಳಲ್ಲಿ ನರ್ಸ್‌ಗಳಿಗೆ ಸೀರೆಯನ್ನು ಉಡಲು ಅನುಮತಿ ಕೊಡಲಾಯಿತು. ಅದುವರೆಗೆ ಯಾವುದೇ ತಂಟೆ ತಕರಾರಿಲ್ಲದೆ  ಸ್ಕರ್ಟ್ ಧರಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿಯರು ತಮಗೂ ಸ್ಕರ್ಟ್ ಬದಲು  ಸೀರೆ ಉಡಲು ಅನುಮತಿ ಕೊಡಿ ಎಂದು ಬೇಡಿಕೆ ಇಟ್ಟರು.

ಆಗ ಎಂದಿನಂತೆ ಸರ್ಕಾರ ನಕಾರ ಸೂಚಿಸಿ ಕಡೆಗೆ ಅನುಮತಿ ಕೊಟ್ಟಿತು. ಸೀರೆಯ ಬೇಡಿಕೆಯನ್ನು ಶುಶ್ರೂಷಕಿಯರು ಇಡಲು ಒಂದು ಸಾಮಾಜಿಕ ಕಾರಣವಿತ್ತು. ಊರತುಂಬ ಮಹಿಳೆಯರು ಸೀರೆಯನ್ನೇ ಉಡುತ್ತಿದ್ದುದರಿಂದ ತಾವಷ್ಟೇ ಸ್ಕರ್ಟ್ ಧರಿಸುವುದು ಹೊಸ ತಲೆಮಾರಿನವರಿಗೆ ಮುಜುಗರ ತರಿಸುತ್ತಿತ್ತು. ಚೋದ್ಯ ಎಂದರೆ ಸೀರೆ ಬಹಳ ಕಾಲ ಬಾಳಲಿಲ್ಲ. 

ನಂತರ ಬಂದ ಹೊಸ ತಲೆಮಾರು ಹೊಸ ಬೇಡಿಕೆಯನ್ನು ಇಟ್ಟಿತು. ತಮಗೆ ಸೀರೆ ಬೇಡ, ಚೂಡಿದಾರ್‌ ಹಾಕಲು ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಅಲವತ್ತುಕೊಂಡಿತು (ಏಕೆಂದರೆ ಆಗ ಸಾಮಾಜಿಕ ಸಮವಸ್ತ್ರದಲ್ಲಿ ಸೀರೆಯ ಸ್ಥಾನವನ್ನು ಚೂಡಿದಾರ್‌ ಕಸಿದುಕೊಂಡಿತ್ತು). ಅಂತೂ ಇಂತೂ ಕಷ್ಟಪಟ್ಟು  ಶುಶ್ರೂಷಕಿಯರು ಚೂಡಿದಾರ್‌ ಅನ್ನು ಸಮವಸ್ತ್ರವನ್ನಾಗಿ ಮಾಡಿಕೊಳ್ಳಲು ಸಫಲರಾದರು.

ಸೀರೆ ಸಾಮಾಜಿಕ ಸಮವಸ್ತ್ರವಾಗಿದ್ದಾಗ ಚೂಡಿದಾರ್‌ ಅನ್ನು ಅಸಭ್ಯ ಎನ್ನಲಾಗುತ್ತಿತ್ತು. ಅದೇ ಚೂಡಿದಾರ್‌ ಈಗ ಸಭ್ಯ ಉಡುಗೆ ಎನಿಸಿಕೊಂಡಿದೆ. ಏಕೆಂದರೆ ಜೀನ್ಸ್ ತೂರಿಬಂದಿದೆಯಲ್ಲ, ಮುಂದೊಂದು ದಿನ ಜೀನ್ಸ್ ಸಹ ಸಭ್ಯ ಉಡುಪು ಎನಿಸಿಕೊಳ್ಳಬಹುದು. ಸಭ್ಯ, ಅಸಭ್ಯಗಳು ಅವರವರ ಭಾವನೆಗೆ ಬಿಟ್ಟ ವಿಚಾರ. ಇದು ವಿವಾದದ ವಿಚಾರವಾಗಬಾರದು. 

ಇಂದಿನ ಧಾವಂತದ ಯುಗದಲ್ಲಿ  ಸೀರೆ ತೊಡಕಾಗಿದೆ, ಚೂಡಿದಾರ್‌ ಅಲ್ಲ  ಎಂಬ ವಾದವನ್ನು ವಿವೇಚಿಸಿದಾಗ, ಸೀರೆ ತೊಡಕಲ್ಲ ಎಂದೇ ವಾದಿಸಬೇಕಾಗುತ್ತದೆ.  ಏಕೆಂದರೆ ತೊಡಕಾಗುವ ಗುಣ ಸೀರೆಯಲ್ಲಿ ಇಲ್ಲ. ಇರುವುದು ಸೀರೆಯನ್ನು ಉಟ್ಟುಕೊಳ್ಳುವ ಪರಿಯಲ್ಲಿ.

ದಶಕಗಳ ಹಿಂದೆ ಚಿತ್ರತಾರೆಯರು ದೇಶಕ್ಕೆ ಮಾದರಿಯಾಗದಿದ್ದ ಕಾಲದಲ್ಲಿ, ಸೀರೆಯೇ ಸಾಮಾಜಿಕ ಸಮವಸ್ತ್ರವಾಗಿದ್ದ ದಿನಗಳಲ್ಲಿ ಅದನ್ನು ಈಗಿನಂತೆ ನೆಲ ಗುಡಿಸುವ ರೀತಿಯಲ್ಲಿ ಉಡುತ್ತಿರಲಿಲ್ಲ. ಸೀರೆ ಪಾದದವರೆಗೆ ಇಳಿದಿರುತ್ತಿರಲಿಲ್ಲ.  ಮೊಳಕಾಲಿಗಿಂತ ಒಂದು ಅಥವಾ ಎರಡು ಮುಷ್ಟಿ ಕೆಳಗಿನವರೆಗೆ ಮಾತ್ರ ಇರುತ್ತಿತ್ತು. ಹೀಗಾಗಿ ಆಗಿನ ಮಾತೆಯರಿಗೆ ಮನೆಯಲ್ಲಿ  ಕಾಸಿ ಬೀಸಿ ಮಾಡುವುದಕ್ಕೂ, ಹೊಲದಲ್ಲಿಯ  ಕಾರ್ಯಗಳಿಗೂ ಸೀರೆ ಅಡ್ಡಿ ಎನ್ನಿಸಿರಲಿಲ್ಲ.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ,
ಶಿರಸಿ


***

ಹೆಣ್ಣಿನ ಅಂಗಾಂಗ ಪ್ರದರ್ಶನಕ್ಕೆ, ಸೀರೆ ಧರಿಸಿದಾಗ ಇರುವಷ್ಟು ಅವಕಾಶ ಸಲ್ವಾರ್ ಕಮೀಜ್ ಹಾಕಿಕೊಂಡಾಗ ಇರುವುದಿಲ್ಲ ಎಂಬುದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಇಂಥ ಹೊತ್ತಲ್ಲೂ ಸೀರೆ ಧರಿಸುವುದನ್ನು ಹೆಣ್ಣಿಗೆ ಕಡ್ಡಾಯವಾಗಿಸುವ ಪ್ರಯತ್ನಗಳ ಹಿಂದಿರುವುದು, ಅದು ಬರಿಯ ವಸ್ತ್ರ ಎಂದು ಸ್ವೀಕರಿಸಿರುವ ನೆಲೆಯಲ್ಲಲ್ಲ. ಸೀರೆ ಬರೀ ಒಂದು ವಸ್ತ್ರ ಎಂದು ನಮ್ಮ ಸಮಾಜ ಸ್ವೀಕರಿಸಿದ್ದರೆ, ಸಲ್ವಾರ್ ಕಮೀಜ್ ಕೂಡಾ ಒಂದು ವಸ್ತ್ರವಾಗಿಯಷ್ಟೇ ಕಾಣುತ್ತಿತ್ತು. 

ಆಗ ಎರಡರಲ್ಲೊಂದು ನಮ್ಮದೇ ಆಯ್ಕೆಯಾಗಿ, ಯಾವುದು ನಮಗೆ ಸೂಕ್ತವೆನಿಸುತ್ತದೆಯೋ  ಅದನ್ನು ಆರಾಮಾಗಿ ತೊಡುತ್ತಿದ್ದೆವು. ಆದರೆ ‘ಸೀರೆ ಎನ್ನುವುದು ನಮ್ಮ ಸಂಸ್ಕೃತಿ, ಸಲ್ವಾರ್ ಕಮೀಜ್ ನಮ್ಮ ಸಂಸ್ಕೃತಿಯಲ್ಲ, ಅದು ಹೊರಗಿನಿಂದ ಬಂದಂತಹ ವಸ್ತ್ರ’ ಎಂಬುದು ಹಲವರ ತಲೆಯಲ್ಲಿ ಭದ್ರವಾಗಿ ಕುಳಿತಿದೆ.

ಇದರ ಪರಿಣಾಮವೇ ಸೀರೆಯನ್ನು ಕಡ್ಡಾಯಗೊಳಿಸುವ, ಅದರಲ್ಲೂ ಶಿಕ್ಷಕಿಯರಿಗೆ ಕಡ್ಡಾಯವಾಗಿ ಸೀರೆಯುಟ್ಟೇ ಬರಬೇಕು ಎಂದು ನಿರ್ಬಂಧಿಸುವ ಹಿಂದಿರುವ ರಾಜಕಾರಣ. ‘ನಮ್ಮ ಸಂಸ್ಕೃತಿಯನ್ನು ಶಿಕ್ಷಕಿಯರೇ ಅನುಸರಿಸದಿದ್ದರೆ ಹೇಗೆ?, ಮತ್ತೆ ನಮ್ಮ ಮಕ್ಕಳಿಗೆ ಸಂಸ್ಕೃತಿಯ ಪಾಠ ಹೇಳಿಕೊಡುವವರಾರು’ ಎಂಬ ನಲ್ನುಡಿಯನ್ನು ಮತ್ತೆ ಮತ್ತೆ ಪಠಿಸುವುದು ಈ ಹಿನ್ನೆಲೆಯಲ್ಲಿಯೇ.

ಸೀರೆಯಷ್ಟೇ ಅಲ್ಲ, ಹೆಣ್ಣಿನ ವಿಷಯದಲ್ಲಿ ಹಣೆಬೊಟ್ಟಿನಿಂದ ಹಿಡಿದು ಕಾಲುಂಗುರದ ತನಕ ಅವನ್ನು ಧರಿಸುವುದು ಅಥವಾ ಧರಿಸದೇ ಇರುವುದರ ಹಿಂದೆ ಆಯ್ಕೆ ಅಥವಾ ಸೌಂದರ್ಯದ ಪ್ರಶ್ನೆ ಅಡಗದೇ, ಸಂಸ್ಕೃತಿಯ ಮೊಹರು ಬೀಳುತ್ತದೆ. ಹೀಗಾಗಿ ಕಡ್ಡಾಯವಾಗಿ ಅದನ್ನು ಧರಿಸಲೇಬೇಕು ಅಥವಾ ಕೆಲವು ಸಂದರ್ಭದಲ್ಲಿ ಅದನ್ನು ಧರಿಸಲೇಬಾರದು ಎಂಬ ಕಟ್ಟಳೆ ವಿಧಿಸಲಾಗಿದೆ.

ಒಂದು ಹಣೆಬೊಟ್ಟು ಬೆವರಿನ ಝಳಕ್ಕೆ ಬಿದ್ದು ಹೋಗಿದ್ದರೆ,  ಮರೆತು ಇಡದೇ ಹೋಗಿದ್ದರೆ ‘ಅಯ್ಯೋ ಹಣೆಬೊಟ್ಟು ಇಟ್ಕೊಂಬಂದಿಲ್ಲ. `ಏನ್ರಿ ಬೇರೆ ಧರ್ಮಕ್ಕೆ ಕನ್ವರ್ಟ್‌ ಆದ್ರ?’ ಎಂದು ನಮ್ಮ ಹಣೆ ನೋಡಿ ಇನ್ನೇನು ನಮ್ಮ ಜೀವವೇ ಹೋಗಿಬಿಡುತ್ತದೇನೋ ಎನ್ನುವ ಹಾಗೆ ಆಡುವವರನ್ನು, ಹಣೆಗಿಡದೇ ಇರುವುದರಿಂದ ನಾವೇನೋ ದೊಡ್ಡ ಅವಘಡಕ್ಕೆ ಕಾರಣವಾಗುತ್ತಿದ್ದೇವೇನೋ ಎಂಬಂತೆ ದೂಷಿಸುವವರನ್ನು ನಾವು ಹೆಣ್ಣು ಮಕ್ಕಳು ಮನೆ, ಕಚೇರಿ, ಸಾಂಸ್ಕೃತಿಕ ವೇದಿಕೆ... ಹೀಗೆ ಎಲ್ಲ ಕಡೆಯೂ ಕಾಣುತ್ತಿರುತ್ತೇವೆ.

ಈ ವಿಷಯದಲ್ಲಿ ಸಂಪ್ರದಾಯವಾದಿಗಳಷ್ಟೇ ಅಲ್ಲ ಪ್ರಗತಿಪರರು, ವಿಚಾರವಾದಿಗಳು, ಲೇಖಕರು, ಚಿಂತಕರು ಸೇರಿದಂತೆ ಬಹುತೇಕರು ಸಮಾನ ಸ್ತರದಲ್ಲಿ ಹೀಗೆಯೇ ಯೋಚಿಸುವುದನ್ನು ಕಾಣುತ್ತೇವೆ. ಇಂದಿನ ಅವಸರದ ಬದುಕಿನಲ್ಲಿ ನಮ್ಮ ಬಹಳಷ್ಟು ಸಮಯ ಇಂಥದ್ದಕ್ಕೆಲ್ಲ  ವ್ಯರ್ಥವಾಗುತ್ತಿರುತ್ತದೆ. ಹೆಣ್ಣು ಮಕ್ಕಳ ಬೌದ್ಧಿಕತೆ, ಕ್ರಿಯಾಶೀಲತೆಗೆ ಸೂಕ್ತ ಪರಿಸರ ಮತ್ತು ಸಮಯ ಎರಡೂ ಇರುವುದಿಲ್ಲ. ಅಂಥದ್ದೊಂದು ಪರಿಸರ ನಿರ್ಮಾಣದ ಕನಸು ಸಹ ಇಂಥ ಜಂಜಾಟಗಳ ನಡುವೆ ಇಂಗಿ ಹೋಗುತ್ತಿದೆ.

ಸೀರೆಯನ್ನೇ ತೊಡುತ್ತೇವೆ, ಅದು ಬಿಟ್ಟರೆ ಬೇರೆ ವಸ್ತ್ರ ನಮಗೆ ಬೇಡವೇ ಬೇಡ ಎಂದು  ನಿರ್ಧರಿಸಿರುವ ಹೆಣ್ಣು ಮಕ್ಕಳಿದ್ದರೆ ಅವರಿಗೆ ಚೂಡಿದಾರ್ ತೊಡಿ ಎಂದು ನಿರ್ಬಂಧಿಸುವುದು ಎಷ್ಟು ತಪ್ಪೋ, ಸೀರೆಯೇ ನಮ್ಮ ಸಂಸ್ಕೃತಿ ಎಂಬ ನೆಪವೊಡ್ಡಿ ಅದನ್ನು  ಧರಿಸುವುದನ್ನು ಕಡ್ಡಾಯಗೊಳಿಸುವುದು ಅಷ್ಟೇ ತಪ್ಪು ಎಂಬಂತಹ ಮನಸ್ಥಿತಿಯ ಸಮಾಜ ನಮ್ಮದಾಗಬೇಕಿದೆ. ಅದು ಇಂದಿನ ನಮ್ಮ ಅಗತ್ಯ.
-ಅಕ್ಷತಾ ಹುಂಚದಕಟ್ಟೆ,
ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT