ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಣ್ಯ ವ್ಯಕ್ತಿ’ಗಳಾಗಿ ಬರುತ್ತಿದ್ದವರಾರು?

ಎನ್‌ಜೆಎಸಿ ಸಂವಾದ
Last Updated 27 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಹಿಂದೆ ಬಂದ ಸುಪ್ರೀಂಕೋರ್ಟ್‌ನ ಒಂದು ತೀರ್ಪು ಚರ್ಚೆಗೆ ಗ್ರಾಸವಾಯಿತು. ಇದು ‘ಸೆಕೆಂಡ್‌ ಜಡ್ಜಸ್‌ ಕೇಸ್‌’ ಎಂದೇ ಹೆಸರುವಾಸಿ.

ನ್ಯಾಯಮೂರ್ತಿಗಳ ನೇಮಕಾತಿಯು ಕೊಲಿಜಿಯಂ ವ್ಯವಸ್ಥೆಯ ಮೂಲಕ ಆಗಬೇಕು ಎಂಬುದು ತೀರ್ಪಿನ ತಿರುಳಾಗಿತ್ತು. ಈ ತೀರ್ಪಿನಿಂದಾಗಿ, ನ್ಯಾಯಮೂರ್ತಿಗಳ ನೇಮಕದಲ್ಲಿ ಕಾರ್ಯಾಂಗಕ್ಕೆ ಇದ್ದ ಅಧಿಕಾರ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ದೊರೆಯಿತು. ಈ ವ್ಯವಸ್ಥೆಯ ಮೂಲಕವೇ ಇಲ್ಲಿಯವರೆಗೆ ನೇಮಕಾತಿ ಮತ್ತು ನ್ಯಾಯಮೂರ್ತಿಗಳ ವರ್ಗಾವಣೆಗಳು ನಡೆದಿವೆ.

ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ನ್ಯಾಯಾಂಗಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎನ್ನುವುದನ್ನು ಒಪ್ಪಿಕೊಳ್ಳಬಹುದಾದರೂ ಇಷ್ಟು ವರ್ಷಗಳ ಬೆಳವಣಿಗೆ ನೋಡಿದಾಗ ಹಲವು ಸಂದರ್ಭಗಳಲ್ಲಿ ಸಂದೇಹಗಳು ಮೂಡಿರುವುದು ಸುಳ್ಳಲ್ಲ. ಅರ್ಹತೆ ಇಲ್ಲದವರನ್ನು, ಅಪ್ರಾಮಾಣಿಕರನ್ನು ನ್ಯಾಯಮೂರ್ತಿ ಸ್ಥಾನಕ್ಕೆ ಕೆಲವು ಸಂದರ್ಭಗಳಲ್ಲಿ ನೇಮಕ ಮಾಡಿರುವುದು, ಸ್ವಜನಪಕ್ಷಪಾತ ಆಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿಬಂದಿರುವುದು ಎಲ್ಲರಿಗೂ ತಿಳಿದ ವಿಚಾರ.

ಇವೆಲ್ಲ ಕಾರಣಗಳಿಂದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾನೂನು ರೂಪಿಸಿತು. ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತು.

ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ‘ಕಾಯ್ದೆ ಸಂವಿಧಾನಬಾಹಿರ, ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ತಿದ್ದುಪಡಿಯು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹದ್ದು. ನ್ಯಾಯಾಂಗದ ವ್ಯವಸ್ಥೆಯಲ್ಲಿ ಶಾಸಕಾಂಗ ಹಸ್ತಕ್ಷೇಪ ಮಾಡುವ ಪ್ರಯತ್ನ ಇದು’ ಎಂದು  ಹೇಳಿ ಕಾಯ್ದೆಯನ್ನೇ ರದ್ದು ಮಾಡಿದೆ.

ಕೊಲಿಜಿಯಂ ವ್ಯವಸ್ಥೆಯಡಿಯೇ ನ್ಯಾಯಮೂರ್ತಿಗಳ ನೇಮಕಾತಿ ಮತ್ತು ಅವರ ವರ್ಗಾವಣೆ ನಡೆಯಬೇಕೆಂದು ಹೇಳಿರುವ ಸುಪ್ರೀಂಕೋರ್ಟ್‌, ಈ ವ್ಯವಸ್ಥೆಯಲ್ಲಿನ ದೋಷಗಳನ್ನೂ ಗಮನಿಸಿದೆ. ಈ ದೋಷಗಳನ್ನು ಸರಿಪಡಿಸಲು, ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ನೀಡುವ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು ಎಂದು ಸಂವಿಧಾನ ಪೀಠ ಹೇಳಿರುವುದು ಗಮನಾರ್ಹ.

ರಾಷ್ಟ್ರದ ಜನರನ್ನು ಪ್ರತಿನಿಧಿಸುವ ಸಂಸತ್ತಿನ ಸಾರ್ವಭೌಮತೆಯನ್ನೇ ಸುಪ್ರೀಂಕೋರ್ಟಿನ ಈ ತೀರ್ಪು ಪ್ರಶ್ನಿಸಿದೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ. ಸಂಸತ್ತಿನ (ಶಾಸಕಾಂಗ) ಸ್ವಾತಂತ್ರ್ಯ ಅಥವಾ ಸಾರ್ವಭೌಮತೆಯನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಂಗಕ್ಕೆ ಇಲ್ಲ. ಸಂಸತ್ತಿನ ಸ್ವಾತಂತ್ರ್ಯವನ್ನು ಅಥವಾ ಸಾರ್ವಭೌಮತೆಯನ್ನು ಕಡೆಗಣಿಸಲಾಗಿದೆ ಎಂದು ಹೇಳುವ ಯಾವುದೇ ವ್ಯಾಖ್ಯಾನ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಇಲ್ಲ. ಆದರೆ, ಈ ಕಾಯ್ದೆಯ ಸಿಂಧುತ್ವವನ್ನು ಮಾತ್ರ ಕೋರ್ಟ್‌ ಪ್ರಶ್ನಿಸಿದೆ.

ಯಾವುದೇ ಕಾಯ್ದೆಯು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆಗೆ ಒಳಪಡಿಸಿ, ಆ ಬಗ್ಗೆ ತೀರ್ಪು ನೀಡುವ ಅಂತಿಮ ಹಾಗೂ ಪರಮೋಚ್ಚ ಅಧಿಕಾರವನ್ನು ಸುಪ್ರೀಂಕೋರ್ಟ್‌ಗೆ ಕೊಟ್ಟಿರುವುದು ಇದೇ ಸಂವಿಧಾನ ಎನ್ನುವುದು ಮುಖ್ಯ ಸಂಗತಿ. ಸಂವಿಧಾನ ನೀಡಿರುವ ಈ ಅಧಿಕಾರ ಬಳಸಿಯೇ ಸುಪ್ರೀಂಕೋರ್ಟ್‌, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ರದ್ದುಪಡಿಸಿದೆ.

ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಪ್ರಜಾತಂತ್ರಕ್ಕೆ ವಿರುದ್ಧವಾದುದು ಎಂದು ಕೇಂದ್ರ ಸರ್ಕಾರದ ಕೆಲವು ಸಚಿವರು ನೀಡಿರುವ ಹೇಳಿಕೆಗಳು ಕಾನೂನಿನಡಿ ಸಮರ್ಥನೀಯ ಅಲ್ಲ. ನ್ಯಾಯಾಂಗ ವ್ಯವಸ್ಥೆ ಸುಧಾರಿಸಲು ಮುಂದಡಿ ಇಡುವ ಮೊದಲು ನ್ಯಾಯಾಂಗದ ಬಗ್ಗೆ ಆಳವಾದ ಜ್ಞಾನ ಇರುವವರ ಜೊತೆ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜೊತೆ, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜೊತೆ ಅಥವಾ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯದೇ ಕೇಂದ್ರ ಸರ್ಕಾರ ತರಾತುರಿಯಲ್ಲಿ ಈ ಕಾಯ್ದೆ ಜಾರಿಗೆ ತರಲು ಹೊರಟಂತಿತ್ತು.

ನ್ಯಾಯಾಂಗ ನೇಮಕಾತಿ ಆಯೋಗದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಜೊತೆ ಕೇಂದ್ರ ಕಾನೂನು ಸಚಿವರು ಹಾಗೂ ಸಾರ್ವಜನಿಕ ವಲಯದ ಇಬ್ಬರು ಗಣ್ಯ ವ್ಯಕ್ತಿಗಳನ್ನು (ಎಮಿನೆಂಟ್‌ ಪರ್ಸನ್‌) ನೇಮಿಸುವ ವಿಚಾರವಿದೆ. ಸಮಿತಿಯ ಇಬ್ಬರು ಸದಸ್ಯರು ಸೇರಿ ‘ವಿಟೊ’ ಅಧಿಕಾರ (ಸಮಿತಿಯಲ್ಲಿ ಕೈಗೊಳ್ಳುವ ನಿರ್ಣಯವನ್ನು ತಿರಸ್ಕರಿಸುವ ಪರಮೋಚ್ಚ ಅಧಿಕಾರ) ಚಲಾಯಿಸಬಹುದಾಗಿತ್ತು. ಇದು ಆತಂಕಕ್ಕೀಡು ಮಾಡುವ ವಿಷಯ.

ಸಾರ್ವಜನಿಕ ವಲಯದ ಗಣ್ಯ ವ್ಯಕ್ತಿಗಳು ಎಂದರೆ ಯಾರು ಎನ್ನುವುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಎಲ್ಲರೂ ತರ್ಕಿಸುತ್ತಿರುವಂತೆ ಪ್ರಧಾನಿ ಅವರ ಆಪ್ತರೇ ಇಲ್ಲಿ ‘ಎಮಿನೆಂಟ್‌ ಪರ್ಸನ್‌’ ಅಡಿ ನೇಮಕಗೊಳ್ಳುವ ಆತಂಕವಿತ್ತು. ಮೂವರು ನ್ಯಾಯಮೂರ್ತಿಗಳು ಕೈಗೊಳ್ಳುವ ನಿರ್ಧಾರವನ್ನು ಈ ಇಬ್ಬರು ಹಿರಿಯ ವ್ಯಕ್ತಿಗಳು ತಿರಸ್ಕರಿಸಿದರೆ (ವಿಟೊ ಅಧಿಕಾರ ಬಳಸಿ) ಅದೇ ಅಂತಿಮ ಆಗಿಬಿಡುತ್ತಿತ್ತು. ಇವನ್ನೆಲ್ಲ ಗಮನಿಸಿದಾಗ, ನ್ಯಾಯಾಂಗ ವ್ಯವಸ್ಥೆ ಮೇಲೆ ತಮ್ಮ ಹಿಡಿತವನ್ನು ಇಟ್ಟುಕೊಳ್ಳುವುದಕ್ಕಾಗಿ ತಂದಂತಹ ಕಾಯ್ದೆ ಇದಾಗಿತ್ತು ಎಂದು ಸಾರ್ವಜನಿಕರಲ್ಲಿ ಮೂಡಿದ್ದ ಆತಂಕವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಕೊಲಿಜಿಯಂ ವ್ಯವಸ್ಥೆಯಡಿ ಲೋಪ ಇರುವುದನ್ನು ಗುರುತಿಸಿರುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡುವ ಸಲಹೆಗಳನ್ನು ಅಳವಡಿಸಿಕೊಳ್ಳುವುದಾಗಿ ಸುಪ್ರೀಂಕೋರ್ಟ್‌ ಹೇಳಿರುವುದು ಗಮನಾರ್ಹ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳಿನಿಂದ ಸಲಹೆಗಳನ್ನು ಆಲಿಸಲು ಸಿದ್ಧವಿರುವುದಾಗಿ ಸಂವಿಧಾನ ಪೀಠ ಹೇಳಿದೆ. ಇದನ್ನು ಬಳಸಿಕೊಂಡು ಕೇಂದ್ರ ಸರ್ಕಾರವು, ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು, ಪಾರದರ್ಶಕತೆಯನ್ನು ಕಾಪಾಡಲು ಸಲಹೆಗಳನ್ನು ನೀಡುವಂತಾಗಲಿ. ನ್ಯಾಯದ ಬೆಳಕು ಕಾಣದೆ ನ್ಯಾಯಾಲಯಗಳಲ್ಲಿ ಕೊಳೆಯುತ್ತ ಬಿದ್ದಿರುವ ಮೂರು ಕೋಟಿಗಿಂತಲೂ ಹೆಚ್ಚಿನ ಪ್ರಕರಣಗಳಿಗೆ ಮುಕ್ತಿ
ದೊರೆಯಲಿ. 

ಇಂದಿನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೇಶದ ಜನ ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೆ ವಿಶ್ವಾಸ ಹೊಂದಿಲ್ಲ. ಹಲವು ಸಂದರ್ಭಗಳಲ್ಲಿ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ಮೂಲಕವೇ ತಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯನ್ನು ಅವರು ತಳೆದಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಂಸತ್ತು (ಶಾಸಕಾಂಗ) ಕೈಜೋಡಿಸಲಿ.
-ಲೇಖಕ ಜೆಡಿಎಸ್ ಮುಖಂಡ, ಮಾಜಿ ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT