ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ದತ್ತಪೀಠದಲ್ಲಿ ಧ್ವಜ ಹಾರಿಸಲು ಅವಕಾಶ ಇಲ್ಲ

Published 24 ಮಾರ್ಚ್ 2024, 22:03 IST
Last Updated 24 ಮಾರ್ಚ್ 2024, 22:03 IST
ಅಕ್ಷರ ಗಾತ್ರ

ದತ್ತಪೀಠದಲ್ಲಿ ಧ್ವಜ ಹಾರಿಸಲು ಅವಕಾಶ ಇಲ್ಲ

ಚಿಕ್ಕಮಗಳೂರು, ಮಾರ್ಚ್ 24– ಬಾಬಾ ಬುಡನ್‌ಗಿರಿಯಲ್ಲಿ ಶಾಂತಿ ಧ್ವಜ (ಶ್ವೇತ ಧ್ವಜ) ಹಾರಿಸಲು ಅವಕಾಶ ನೀಡಲಾಗದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ದತ್ತಪೀಠದಲ್ಲಿ ಭಾವೈಕ್ಯ ಯಾತ್ರೆ ಅಥವಾ ಪದ್ಧತಿಯಂತೆ ಪೂಜೆ ನಡೆಸುವುದಕ್ಕೆ ಅಡ್ಡಿ ಇಲ್ಲವಾದರೂ ಧ್ವಜ ಹಾರಿಸಲು ಅನುಮತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎಸ್.ಮಂಜುನಾಥ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್. ಪರಶಿವಮೂರ್ತಿ ತಿಳಿಸಿದ್ದಾರೆ. ಧ್ವಜ ಹಾರಿಸಿ ಮತ್ತೊಂದು ವಿವಾದ ಹುಟ್ಟುಹಾಕಲು ಅವಕಾಶ ಕೊಡಲಾಗದು ಎಂದಿದ್ದಾರೆ.

ತಮಿಳುನಾಡು ಶಾಸಕನ ಬಿಡುಗಡೆ, ಪುನಃ ಬಂಧನ

ಚೆನ್ನೈ, ಮಾರ್ಚ್ 24 (ಪಿಟಿಐ, ಯುಎನ್‌ಐ)– ಅಣ್ಣಾ ಡಿಎಂಕೆಯ ಶಾಸಕ ಆರ್.ತಾಮರೈಕ್ಕಣಿ ಅವರ ವಿಷಯದಲ್ಲಿ ತಮಿಳುನಾಡಿನಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಘರ್ಷಣೆ ಮುಂದುವರಿದಿದೆ.

ಮದರಾಸು ಹೈಕೋರ್ಟ್, ಬಂಧನಕ್ಕೊಳ ಗಾಗಿರುವ ಶಾಸಕನನ್ನು ಬಿಡುಗಡೆ
ಮಾಡುವಂತೆ ಇಂದು ಪುನಃ ಆಜ್ಞೆ ಮಾಡಿತು. ಇದೇ ರೀತಿ ವಿಧಾನಸಭೆಯ ಸ್ಪೀಕರ್ ಪಳನಿವೇಲು ರಾಜನ್ ಅವರು ತಾಮರೈಕ್ಕಣಿ ಅವರನ್ನು ಬಂಧಿಸಲು ಇಂದು ಪುನಃ ಆಜ್ಞೆ ಮಾಡಿದರು. ತಕ್ಷಣ ಶಾಸಕರನ್ನು ಮತ್ತೆ ಬಂಧಿಸಲಾಯಿತು. ಈ ನಡುವೆ, ಶಾಸಕರನ್ನು ಬಿಡುಗಡೆ ಮಾಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ತಾಮರೈಕ್ಕಣಿ ಅವರು ಕೃಷಿ ಸಚಿವ ವೀರಂಪಾಡಿ ಎಸ್. ಆರ್ಮುಗಂ ಅವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಅದೇ ದಿನ ಅವರನ್ನು ಬಂಧಿಸಿ ಒಂದು ವಾರ ಕಾಲ ಸೆರೆಮನೆಯಲ್ಲಿಡಲು ಸ್ಪೀಕರ್ ಅವರು ಆಜ್ಞೆ ಮಾಡಿದ್ದರು. ಅದರಂತೆ ಸೋಮವಾರ ಸಂಜೆ ತಾಮರೈಕ್ಕಣಿ ಅವರನ್ನು ಬಂಧಿಸಿ ಕೇಂದ್ರೀಯ ಕಾರಾಗೃಹದಲ್ಲಿ ಇಡಲಾಯಿತು. ಮಂಗಳವಾರ ವಿಧಾನಸಭೆಯಲ್ಲಿ ತಾಮರೈಕ್ಕಣಿ ಅವರಿಗೆ 15 ದಿನ ಜೈಲು ಶಿಕ್ಷೆ ವಿಧಿಸಲು ಸರ್ವಾನುಮತ ದಿಂದ ನಿರ್ಣಯಿಸಲಾಯಿತು. ಆದರೆ ಮದರಾಸು ಹೈಕೋರ್ಟ್‌ನ ವಿಭಾಗೀಯ ಪೀಠ ತಾಮರೈಕ್ಕಣಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಂಗಳವಾರ ಮಧ್ಯಂತರ ತೀರ್ಪು ನೀಡಿತ್ತು.

ಖಾದ್ಯತೈಲ ಬೀಜಗಳ ವಾಯಿದಾ ವಹಿವಾಟಿಗೆ ಕೇಂದ್ರ ಸಮ್ಮತಿ

ನವದೆಹಲಿ, ಮಾರ್ಚ್ 24 (ಯುಎನ್‌ಐ)– ಖಾದ್ಯತೈಲಗಳ ಬೆಲೆಗಳ ತೀವ್ರ ಏರಿಳಿತಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಎಂಟು ವಿಧದ ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ವಾಯಿದಾ ವಹಿವಾಟಿಗೆ ಕೇಂದ್ರ ಸಚಿವ ಸಂಪುಟವು ಅನುಮತಿ ನೀಡಿದೆ.

ಕಳೆದ ರಾತ್ರಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು ಈ ನಿರ್ಧಾರ ಕೈಗೊಂಡಿತು. ಸಾಸಿವೆ ಬೀಜ, ಶೇಂಗಾ, ಸೂರ್ಯಕಾಂತಿ, ಹತ್ತಿ ಬೀಜ, ತೆಂಗಿನಕಾಯಿ ಮುಂತಾದವುಗಳನ್ನು ವಾಯಿದಾ ವಹಿವಾಟಿಗೆ ಒಳಪಡಿಸಲಾಗಿದೆ.

ಆದರೆ ಸೋಯಾಬೀನ್ ಮತ್ತು ಅದರ ಉತ್ಪನ್ನಗಳನ್ನು ವಾಯಿದಾ ವಹಿವಾಟಿನಿಂದ ಹೊರಗಿಡಲಾಗಿದೆ. ಒಟ್ಟು ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಸೋಯಾಬೀನ್‌ ಪಾಲು ಶೇಕಡ 23ರಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT