ಬೆಂಗಳೂರು, ಆ. 18– ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಂದು ನಾಮಪತ್ರ ಸಲ್ಲಿಸಿರುವುದ ರಿಂದ ಈ ಕ್ಷೇತ್ರ ಈಗ ಅಂತರರಾಷ್ಟ್ರೀಯವಾಗಿ ಗಮನ ಸೆಳೆದಿದೆ.
ಈ ನಡುವೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವುದು ತೀವ್ರ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ.
ಜತೆಗೆ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ಎಂ. ರಾಜಶೇಖರಮೂರ್ತಿ ಅವರು ಸಹ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿಯಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ಹೆಗಡೆ ವಿರುದ್ಧ ಸ್ಫೋಟಿಸಿದ ಆಕ್ರೋಶ
ಬೆಂಗಳೂರು, ಆ. 18– ಲೋಕಶಕ್ತಿ ಮತ್ತು ಜನತಾದಳ (ಯು) ಮೈತ್ರಿಕೂಟದ ಅಭ್ಯರ್ಥಿಗಳಿಗೆ ಚುನಾವಣಾ ಸ್ಪರ್ಧೆಗೆ ಟಿಕೆಟ್ ಹಂಚುವ ಪ್ರಕ್ರಿಯೆ ತೀರಾ ಗೊಂದಲಕ್ಕೆ ಸಿಲುಕಿ ಎರಡೂ ಪಕ್ಷಗಳಲ್ಲಿ ಭಾರಿ ಅಸಮಾಧಾನ, ಆಕ್ರೋಶ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿದೆ.
ಲೋಕಶಕ್ತಿಯ ಮುಖಂಡರನೇಕರು ಇಂದು ಬೆಳಗಿನ ಜಾವದಿಂದಲೇ ರಾಮಕೃಷ್ಣ ಹೆಗಡೆ ಅವರ ನಿವಾಸದ ಮುಂದೆ ಜಮಾಯಿಸಿ ‘ಬಿ ಫಾರಂ’ ಪಡೆಯಲು ಕಾತರರಾಗಿದ್ದರು. ಆದರೆ ಎಲ್ಲ ‘ಬಿ ಫಾರಂ’ಗಳನ್ನೂ ಜನತಾದಳ (ಯು) ಅಧ್ಯಕ್ಷ ಬೈರೇಗೌಡ ತೆಗೆದುಕೊಂಡು ಹೋಗಿದ್ದರಿಂದ ಲೋಕಶಕ್ತಿಯ ಟಿಕೆಟ್ಆ ಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಯಿತು.