25 ವರ್ಷಗಳ ಹಿಂದೆ: ಮಂಗಳವಾರ, 2–1–1996

ತಮಿಳುನಾಡಿಗೆ ತಕ್ಷಣ ನೀರು ಬಿಡಲು ಪ್ರಧಾನಿ ಸೂಚನೆ
ನವದೆಹಲಿ, ಜ. 1– ಈಗ ಉದ್ಭವಿಸಿರುವ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲ ವಿವಾದವನ್ನು ಪರಿಹರಿಸಲು ಕೇಂದ್ರ ಸರ್ಕಾರ ಮೂರು ಸೂತ್ರಗಳನ್ನು ಪ್ರಕಟಿಸಿದೆ. ಇದರಲ್ಲಿ ಪ್ರಮುಖವಾಗಿ, ತಮಿಳುನಾಡಿನಲ್ಲಿ ಒಣಗುತ್ತಿದೆ ಎನ್ನಲಾದ ಬೆಳೆಗಳನ್ನು ರಕ್ಷಿಸಲು ಕರ್ನಾಟಕವು ಕೂಡಲೇ ಮೆಟ್ಟೂರು ಜಲಾಶಯಕ್ಕೆ 6 ಟಿಎಂಸಿ ಅಡಿ ನೀರನ್ನು ಬಿಡುವಂತೆ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕಳೆದ ಮೂರು ದಿನಗಳಿಂದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು, ಆ ರಾಜ್ಯಗಳ ನಿಯೋಗದ ಜತೆ ನಡೆಸಲಾದ ಚರ್ಚೆ ಮತ್ತು ಅವರಿಂದ ಪಡೆಯಲಾದ ಮನವಿ ಪತ್ರಗಳನ್ನು ಪರಿಶೀಲಿಸಿ ಈ ಕ್ರಮ ತೆಗೆದುಕೊಂಡಿರುವುದಾಗಿ ಪ್ರಧಾನಿ ಅವರು ಕರ್ನಾಟಕ ಮತ್ತು ತಮಿಳುನಾಡುಗಳ ಮುಖ್ಯಮಂತ್ರಿಗಳಿಗೆ ತಿಳಿಸಿರುವ ಪತ್ರದ ವಿವರವನ್ನು ಕೇಂದ್ರ ಸರ್ಕಾರದ ಪ್ರಧಾನ ವಾರ್ತಾ ಅಧಿಕಾರಿ ಎಸ್.ನರೇಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಸೂಚನೆ ತಿರಸ್ಕರಿಸಲು ಪ್ರತಿಪಕ್ಷಗಳ ಕರೆ
ಬೆಂಗಳೂರು, ಜ. 1– ತಮಿಳುನಾಡಿಗೆ 6 ಟಿಎಂಸಿ ಅಡಿ ನೀರನ್ನು ಕೂಡಲೇ ಬಿಡುವಂತೆ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ನೀಡಿರುವ ಸೂಚನೆಯ ಬಗ್ಗೆ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ ಆದೇಶವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್.ಬಂಗಾರಪ್ಪ ಅವರನ್ನು ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಮುಂದಿನ ಕ್ರಮಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.