ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿಗಳ ಬದಲಾವಣೆ ಅಸಾಧ್ಯ
ರಾಯಪುರ, ಸೆ. 8– ಭಿನ್ನಮತೀಯರ ಒತ್ತಾಯಕ್ಕೆ ಮಣಿದು ರಾಜ್ಯಗಳ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಾ ಹೋಗಲು ಸಾಧ್ಯವಿಲ್ಲ ಎಂದು ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಚಂದ್ರಜಿತ್ ಯಾದವ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ಸನ್ನು ಬಿಟ್ಟುಹೋಗಿರುವ ವ್ಯಕ್ತಿಗಳನ್ನು ಪ್ರದೇಶ ಕಾಂಗ್ರೆಸ್ ಸಮಿತಿಗಳು ಪರೀಕ್ಷಿಸಿ ಶಿಫಾರಸು ಮಾಡಿದ ನಂತರ ಅಂತಹವರನ್ನು ವೈಯಕ್ತಿಕವಾಗಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸಬಹುದು. ಆದರೆ ಮೂಲಭೂತ ನೀತಿಗಳ ಮೇಲಿನ ಭಿನ್ನಾಭಿಪ್ರಾಯದಿಂದ ಪಕ್ಷ ಬಿಟ್ಟು ಹೋಗಿರುವವರನ್ನು ಸೇರಿಸಿಕೊಳ್ಳಲಾಗದು ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಸರ್ಕಾರಿ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ: ಕೇಂದ್ರದ ಸುತ್ತೋಲೆ
ಬೆಂಗಳೂರು, ಸೆ. 8– ರಾಜ್ಯದಲ್ಲಿರುವ ಸರ್ಕಾರಿ ಕ್ಷೇತ್ರದ ಕೈಗಾರಿಕೆಗಳಲ್ಲಿ ಮಾಸಿಕ 500 ರೂ.ವರೆಗೆ ವೇತನ ಪಡೆಯುವ ಹುದ್ದೆಗಳಿಗೆ ಸ್ಥಳೀಯರನ್ನೇ ನೇಮಕ ಮಾಡಬೇಕೆಂಬ ಸುತ್ತೋಲೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕಳುಹಿಸಿದೆ ಎಂದು ಕೈಗಾರಿಕೆ ಸಚಿವ ಎಸ್.ಎಂ.ಕೃಷ್ಣ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯದಲ್ಲಿರುವ ಖಾಸಗಿ ಅಥವಾ ಸರ್ಕಾರಿ ಕೈಗಾರಿಕೆಗಳಲ್ಲಿ ಕನಿಷ್ಠ ಶೇಕಡ 80ರಷ್ಟು ಹುದ್ದೆಗಳನ್ನು ಮೈಸೂರಿನವರಿಗೆ ಮೀಸಲಿಡುವಂತೆ ಶಾಸನ ರಚಿಸಬೇಕೆಂಬ ಕೆ.ಶ್ರೀರಾಮುಲು ಅವರ ಖಾಸಗಿ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು ‘ಈ ಪ್ರಶ್ನೆಯನ್ನು ಸಂವಿಧಾನಕ್ಕೆ ಅನುಗುಣವಾಗಿ ಪರಿಶೀಲಿಸಬೇಕಾಗಿದೆ’ ಎಂಬುದನ್ನು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.