ಶುಕ್ರವಾರ, ಜುಲೈ 1, 2022
27 °C

25 ವರ್ಷಗಳ ಹಿಂದೆ: ಶುಕ್ರವಾರ, ಮೇ 23, 1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಎಲ್ಲ ಅಣೆಕಟ್ಟುಗಳ ದುರಸ್ತಿ ಪರಿಶೀಲನೆಗೆ ಮುಖ್ಯಮಂತ್ರಿ ಆದೇಶ
ಮೈಸೂರು, ಮೇ 22–
ರಾಜ್ಯದ ಎಲ್ಲಾ ಅಣೆಕಟ್ಟುಗಳನ್ನು ವಿವರವಾಗಿ ಪರಿಶೀಲಿಸಿ ಕಾಲಕ್ರಮದಲ್ಲಿ ಕಾಣಿಸಿಕೊಂಡಿರ ಬಹುದಾದ ಯಾವುದೇ ರೀತಿಯ ಲೋಪದೋಷಗಳನ್ನು ದುರಸ್ತಿ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಜೆ. ಎಚ್‌.ಪಟೇಲ್‌ ನೀರಾವರಿ ವಿಭಾಗದ ಇಂಜಿನಿಯರುಗಳಿಗೆ ಆದೇಶ ನೀಡಿದ್ದಾರೆ. 

ಮಂಡ್ಯ ಜಿಲ್ಲೆಯ ಬಹುಭಾಗಕ್ಕೆ ನೀರು ಸರಬರಾಜು ಮಾಡುವ ಸರ್‌.ಎಂ. ವಿಶ್ವೇಶ್ವರಯ್ಯ ನಾಲೆಯನ್ನು ಆಧುನಿಕರಣಗೊಳಿಸುವ ಉದ್ದೇಶದಿಂದ ಅದನ್ನು ಕಳೆದ ಕೆಲ ತಿಂಗಳ ಹಿಂದೆ ಮುಚ್ಚಲಾಯಿತು. ಆ ರೀತಿ ಮುಚ್ಚಿದ ನಂತರ ನಾಲೆಯಲ್ಲಿ ಕೃಷ್ದರಾಜಸಾಗರ ಜಲಾಶಯದ ತೂಬಿನ ಬಳಿ ಕಾಣಿಸಿಕೊಂಡಿರುವ ದೊಡ್ಡ ಪ್ರಮಾಣದ ಹೊಂಡ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಈ ರೀತಿ ಆದೇಶ ನೀಡಿದರು. 

ವಾಸ್ತವ ಅರಿತಾಗ ಜಾತಿ ರಹಿತ ಸಮಾಜ ಸಾಧ್ಯ–ಕಾರಂತ
ಬೆಂಗಳೂರು, ಮೇ 22–
ಸಮಾಜದ ವಾಸ್ತವಿಕತೆಯನ್ನು ಅರಿತಾಗ ಮಾತ್ರ ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಕೆ. ಶಿವರಾಮ ಕಾರಂತ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು. 

‘ಮಾನವ ಮಂಟಪ’ ಏರ್ಪಡಿಸಿದ್ದ ಅಂತರ ಜಾತಿ ವಿವಾಹಿಯತರ ಪ್ರಥಮ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿದ ಅವರು, ಯಾವ ರಾಷ್ಟ್ರಗಳಲ್ಲೂ ಜಾತಿ ವಿನಾಶ ಮಾಡಲು ಸಾಧ್ಯವಾಗಿಲ್ಲ. ಆದರೆ ಸಮಾಜದ ವಾಸ್ತವಿಕತೆಯನ್ನು ಅರಿಯಬೇಕು. ಅಲ್ಲದೆ ಗಂಡು–ಹೆಣ್ಣುಗಳ ಆತ್ಮಗಳು ಬೆರೆತಾಗಲೇ ಅದಕ್ಕೊಂದು ಅರ್ಥ ಸಿಗುತ್ತದೆ ಎಂದರು. 

ಪ್ರೀತಿಸಿ ಮದುವೆಯಾದ ಯಾರೊಬ್ಬರಿಗೂ ಸಮಾಜದಿಂದ ಯಾವ ಅಡೆತಡೆಗಳೂ ಬರಬಾರದು. ಸರ್ಕಾರದಿಂದಲಂತೂ ಬರಲೇಬಾರದು. ಅವರಿಗೆ ಧೈರ್ಯ ತುಂಬಿ ಸಮಸ್ಯೆಗಳನ್ನು ಎದುರಿಸುವಂತೆ ಮಾಡಬೇಕು ಎಂದ ಕಾರಂತರು. ಜಾತಿಯನ್ನು ತೊಡೆದು ಹಾಕಲು ಯಾವುದೇ ಕಾನೂನು ಹಾಗೂ ಅಂತರ ಜಾತಿ ವಿವಾಹಗಳಿಂದ ಸಾಧ್ಯವಿಲ್ಲ ಎಂದು ಹೇಳಿದರು. 

ಮೊದಲು ಇಂಥ ಅಂತರ ಜಾತಿ ವಿವಾಹಿತರ ಸಮಸ್ಯೆಗಳಿಗೆ ಕಾರಣ ಕಂಡುಹಿಡಿಯಬೇಕು. ನಂತರ ಅವುಗಳ ಪರಿಹಾರಕ್ಕೂ ಉತ್ತರ ಹುಡುಕಿದರೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಕಾರಂತರ ನುಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಜಿ.ಎಸ್‌.ಶಿವರುದ್ರಪ್ಪ ಅವರು, ಸಮಾಜದಲ್ಲಿನ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ. ಆದರೆ, ಪ್ರಸ್ತುತ ಯುವಶಕ್ತಿ ಮೊದಲಿನ ಶಕ್ತಿಯನ್ನು ಕಳೆದುಕೊಂಡಿದೆ. ಜಾತಿಯಂಥ ಸಮಸ್ಯೆಗಳ ವಿರುದ್ಧ ಹೋರಾಡದೆ, ಕೇವಲ ಮಾರುಕಟ್ಟೆ ವಸ್ತುವಾಗಿದ್ದಾರೆ ಎಂದು ಮಾತಿನಲ್ಲೇ ಚುರುಕು ಮುಟ್ಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು