ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 31–10–1967

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪಥದಲ್ಲಿ ಎರಡು ಮಾನವರಹಿತ ಅಂತರಿಕ್ಷ ನೌಕೆಗಳ ಜೋಡಣೆ
ಮಾಸ್ಕೋ, ಅ. 30–
ಗಗನಗಾಮಿಗಳಿಲ್ಲದ ಎರಡು ಅಂತರಿಕ್ಷ ನೌಕೆಗಳು ಪಥದಲ್ಲಿ ಸ್ವತಃ ಜತೆಗೂಡುವ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿರುವುದಾಗಿ ರಷ್ಯ ಇಂದು ಪ್ರಕಟಿಸಿದೆ. ಈ ಸಾಧನೆ ವಿಶ್ವದ ಇತಿಹಾಸದಲ್ಲೇ ಪ್ರಪ್ರಥಮ.

ಇದು, ಸೋಯಿಯತ್ ಅಂತರಿಕ್ಷ ವಿಜ್ಞಾನಿಗಳ ಇನ್ನೊಂದು ವಿಕ್ರಮ. ಕಳೆದ ಶುಕ್ರವಾರ ಪ್ರಯೋಗಿಸಿದ ಕಾಸ್ಮೋಸ್–186 ಮತ್ತು ಇಂದು ಪ್ರಯೋಗಿಸಿದ ಕಾಸ್ಮೋಸ್–188 ಜತೆಗೂಡಿದ ಉಪಗ್ರಹಗಳೆಂದು ಸೋವಿಯತ್ ವಾರ್ತಾಸಂಸ್ಥೆ ತಾಸ್ ತಿಳಿಸಿದೆ.

ಇವೆರಡು ಉಪಗ್ರಹಗಳೂ ಮೂರೂವರೆ ಗಂಟೆ ಹೊತ್ತು ಜಂಟಿಯಾಗಿ ಯಾನ ಮಾಡಿದ ನಂತರ ಬೇರೆ ಪಥಗಳಿಗೆ ಪ್ರತ್ಯೇಕಗೊಂಡವೆಂದು ಮಾಸ್ಕೋ ರೇಡಿಯೋ ಹೇಳಿದೆ.

ಬೃಹತ್ ಅಂತರಿಕ್ಷ ವೇದಿಕೆಗಳ ನಿರ್ಮಾಣ ಎಂದು ಬ್ರಿಟಿಷ್ ವಿಜ್ಞಾನಿ
ಲಂಡನ್, ಅ. 30–
ಪಥದಲ್ಲಿ ಎರಡು ಉಪಗ್ರಹಗಳ ಜೋಡಣೆಯ ಸೋವಿಯತ್ ಸಾಧನೆಯು ಬೃಹತ್ ಪ್ರಮಾಣದ ಅಂತರಿಕ್ಷ ವೇದಿಕೆಗಳನ್ನು ನಿರ್ಮಿಸಲು ರಷ್ಯನರು ಉದ್ದೇಶಿಸಿದ್ದಾರೆಂದು ಸೂಚಿಸುವುದಾಗಿ ಬ್ರಿಟಿಷ್ ಖಗೋಳ ಶಾಸ್ತ್ರಜ್ಞ ಸರ್ ಬರ್ನಾರ್ಡ್‌ ಲೊವೆಲ್ ಇಂದು ರಾತ್ರಿ ಇಲ್ಲಿ ಹೇಳಿದರು.

ಬಿ.ಟಿ.ಎಸ್. ಲಾಕೌಟ್ ಅಂತ್ಯ: ಹೆಚ್ಚು ಸಂಖ್ಯೆಯ ನೌಕರರ ಹಾಜರಿ
ಬೆಂಗಳೂರು, ಅ. 30–
ಕಳೆದ 27ರಂದು ಬಿ.ಟಿ.ಎಸ್. ನೌಕರರು ಹಠಾತ್ತನೆ ಮುಷ್ಕರ ಆರಂಭಿಸಿದ ನಂತರ ಘೋಷಿಸಲಾಗಿದ್ದ ಲಾಕ್‌– ಔಟನ್ನು ಸಾರಿಗೆ ಕಾರ್ಪೊರೇಷನ್ ಆಡಳಿತ, ಇಂದು ‘ಎಂದಿನ ಪರಿಸ್ಥಿತಿ ಉಂಟಾಗುತ್ತಿರುವ ಕಾರಣ’ ತೆಗೆಯಿತು. ಇಂದು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 152 ಬಸ್ಸುಗಳು ಓಡಾಡಿದವು.

ಈ ವರ್ಷವೂ ನೊಬೆಲ್ ಶಾಂತಿ ಪಾರಿತೋಷಕ ನೀಡಿಕೆ ಇಲ್ಲ
ಆಸ್ಲೊ, ಅ. 30–
ನೊಬೆಲ್ ಶಾಂತಿ ಪಾರಿತೋಷಕವನ್ನು ಈ ವರ್ಷವೂ ನೀಡಲಾಗುವುದಿಲ್ಲವೆಂದು ನೊಬೆಲ್ ಸಮಿತಿಯು ಇಂದು ಪ್ರಕಟಿಸಿದೆ.

ಈ ರೀತಿ ಶಾಂತಿಪಾರಿತೋಷಕ ನೀಡದಿರುವುದು ಇದು ಎರಡನೆ ವರ್ಷ. ನಾರ್ವೆ ಪಾರ್ಲಿಮೆಂಟಿನ ಸದಸ್ಯರಿಂದ ಕೂಡಿದ ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆ ಇರುವ ಸಮಿತಿಯು ತನ್ನ ನಿರ್ಧಾರಗಳ ಬಗ್ಗೆ ವಿವರಣೆ ಕೊಟ್ಟಿಲ್ಲ.

1967ನೇ ಸಾಲಿಗೆ ಬಹು ಸಂಖ್ಯೆಯಲ್ಲಿ ನಾಮಪತ್ರಗಳಿದ್ದರೂ, ಸೂಕ್ತ ಯೋಗ್ಯತೆ ಪಡೆದ ವ್ಯಕ್ತಿ ಸಮಿತಿಗೆ ದೊರೆಯದಿರುವುದು ವೇದ್ಯವಾಗಿದೆ.

ನವಂಬರ್ 6 ರಂದು ಮಾಸ್ಕೋಗೆ ಇಂದಿರಾ
ಮುಂಬೈ, ಅ. 30–
ಅಕ್ಟೋಬರ್ ಕ್ರಾಂತಿಯ ಐವತ್ತನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಕೊಸಿಗಿನ್ ಅವರ ಆಹ್ವಾನದ ಮೇಲೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ನವೆಂಬರ್ 6 ರಿಂದ 8ರ ವರೆಗೆ ಮಾಸ್ಕೋಗೆ ಭೇಟಿ ಕೊಡುವರು.

ಅಕ್ಟೋಬರ್ ಕ್ರಾಂತಿಯ ಐವತ್ತನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪ್ರಧಾನಿ ಕೊಸಿಗಿನ್ ಅವರು ನೀಡಿರುವ ಹಾರ್ದಿಕ ಆಹ್ವಾನವನ್ನು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅಂಗೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT