ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ರಂಗದ ಆದ್ಯ ಮಹಿಳೆ ಅನ್ನಾ

Last Updated 22 ಸೆಪ್ಟೆಂಬರ್ 2018, 20:20 IST
ಅಕ್ಷರ ಗಾತ್ರ

ಮಹಿಳೆಯರು ಸಾರ್ವಜನಿಕ ಜೀವನ ಪ್ರವೇಶಿಸುವುದನ್ನು ಊಹಿಸಲೂ ಆಗದ ಕಟ್ಟುಪಾಡಿನ ಕಾಲವದು. ಅಂತಹ ಸಂದರ್ಭದಲ್ಲೇ ಭಾರತೀಯ ನಾಗರಿಕ ಸೇವಾ ಪರೀಕ್ಷೆ ಎದುರಿಸಿ ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್‌ ಅಧಿಕಾರಿಯಾಗಿ ನೇಮಕಗೊಂಡು, ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಅನ್ನಾ ರಾಜಂ ಮಲ್ಹೋತ್ರಾ ಅವರದ್ದು.

ಅನ್ನಾ (91) ಈಚೆಗೆ ಮುಂಬೈನಲ್ಲಿ ನಿಧನರಾದರು. 1951ರಲ್ಲಿ ಮದ್ರಾಸ್‌ ಕೇಡರ್‌ನಲ್ಲಿ ಭಾರತೀಯ ನಾಗರಿಕ ಸೇವೆಗೆ ಸೇರ್ಪಡೆಯಾಗಿದ್ದ ಇವರು ಮುಂದೆ ಅನೇಕ ಮಹಿಳೆಯರು ಈ ಹುದ್ದೆಯ ಸವಾಲನ್ನು ಸ್ವೀಕರಿಸಲು ಸ್ಫೂರ್ತಿಯಾದರು. ಸಾರ್ವಜನಿಕ ಜೀವನ ಪ್ರವೇಶಿಸಲು ಮಹಿಳೆಯರಿಗಿದ್ದ ಅಡ್ಡಿ ಆತಂಕಗಳನ್ನು ನಿವಾರಿಸಿದರು. ಅಲ್ಲದೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಸ್ವತಃ ಮಾದರಿಯೂ ಆದರು. ‘ಅನ್ನಾ ಅವರಂಥ ವ್ಯಕ್ತಿತ್ವದವರು ಬಹಳ ವಿರಳ. ಅವರಂಥ ದಕ್ಷ ಅಧಿಕಾರಿ ಕೂಡ ಅಪರೂಪ. ಅವರ ಕಾಲದ ಬೆರಳೆಣಿಕೆಯಷ್ಟು ಮಹಿಳೆಯರು ಬದುಕಬಹುದಾದ ದಿಟ್ಟ ಜೀವನವನ್ನು ಅವರು ನಡೆಸಿದರು’ ಎಂದು ಅವರ ಸಮಕಾಲೀನರು ಅವರನ್ನು ಸ್ಮರಿಸುತ್ತಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ 1927ರಲ್ಲಿ ಜನಿಸಿದ ಅನ್ನಾ ರಾಜಂ ಜಾರ್ಜ್‌ ಅವರು ಉನ್ನತ ಶಿಕ್ಷಣವನ್ನು ಮದ್ರಾಸ್‌ ವಿಶ್ವವಿದ್ಯಾಲಯದಿಂದ ಪಡೆದರು. ನಾಗರಿಕ ಸೇವೆಗೆ ಸೇರುವ ಮೊದಲು ಅವರು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1950ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯಲು ಅನ್ನಾ ನಿರ್ಧರಿಸಿದರು. ಅಂತೆಯೇ ಸಂದರ್ಶನದ ಸುತ್ತಿಗೆ ಅರ್ಹತೆಯನ್ನೂ ಗಳಿಸಿದರು. 1951ರಲ್ಲಿ ಮುಂದಿನ ಸುತ್ತಿನ ಪರೀಕ್ಷೆ ಎದುರಿಸಲು ಹೋದಾಗ ಅವರಿಗೆ ಪ್ರೋತ್ಸಾಹದಾಯಕ ವಾತಾವರಣವೇನೂ ಇರಲಿಲ್ಲ.

ನಾಗರಿಕ ಸೇವೆಗೆ ಸೇರ್ಪಡೆಯಾಗುವ ಅವರ ಆಸೆ ಬಗ್ಗೆ ಆಯ್ಕೆ ಮಂಡಳಿಯ ಸದಸ್ಯರೇ ಮೂಗು ಮುರಿಯುತ್ತಾರೆ. ‘ಮಹಿಳೆಯರಿಗೆ ಹೆಚ್ಚು ಸೂಕ್ತವಾಗುವ’ ವಿದೇಶಾಂಗ ಸೇವೆ ಅಥವಾ ಕೇಂದ್ರದ ಇತರ ಸೇವೆಗಳಿಗೆ ಸೇರುವಂತೆ ಅವರ ಮನವೊಲಿಸಲು ಯತ್ನಿಸುತ್ತಾರೆ. ಆದರೆ ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದ ಅವರು, ತಮ್ಮ ಅರ್ಹತೆಗೆ ತಕ್ಕುದಾದ ಐಎಎಸ್‌ ಅಧಿಕಾರಿ ಹುದ್ದೆಯನ್ನೇ ಆಯ್ದುಕೊಳ್ಳುತ್ತಾರೆ.

ಅವರ ಈ ಹಾದಿ ಸುಗಮವಾಗೇನೂ ಸಾಗುವುದಿಲ್ಲ. ಆಗಿನ ಮದ್ರಾಸ್‌ ರಾಜ್ಯದಲ್ಲಿ ಅವರು ತಮ್ಮ ಮೊದಲ ಸೇವೆ ಆರಂಭಿಸಿದಾಗ ಮುಖ್ಯಮಂತ್ರಿಯಾಗಿದ್ದ ಸಿ. ರಾಜಗೋಪಾಲಾಚಾರಿ ಅವರೂ ಇವರಿಗೆ ಸಬ್‌ ಕಲೆಕ್ಟರ್‌ ಹುದ್ದೆ ನೀಡಲು ಹಿಂದೇಟು ಹಾಕುತ್ತಾರೆ. ಸಚಿವಾಲಯದಲ್ಲಿ ಕೆಲಸ ನಿರ್ವಹಿಸಲು ಆಹ್ವಾನ ನೀಡುತ್ತಾರೆ.

ಆದರೆ ಕುದುರೆ ಸವಾರಿ, ರೈಫಲ್‌ ಮತ್ತು ರಿವಾಲ್ವರ್‌ ಶೂಟಿಂಗ್‌ ತರಬೇತಿ, ದಂಡಾಧಿಕಾರಿಯ ಅಧಿಕಾರ ಬಳಕೆ ಕುರಿತ ತರಬೇತಿ ಪಡೆದ ಬಳಿಕ ಸಹಜವಾಗಿಯೇ ಅನ್ನಾ ಅವರು ಹೊಸೂರಿನಲ್ಲಿ ಸಬ್‌ ಕಲೆಕ್ಟರ್‌ ಆಗಿ ನೇಮಕಗೊಳ್ಳುತ್ತಾರೆ. ತಮ್ಮ ವೃತ್ತಿಯಲ್ಲಿ ಎದುರಾಗಬಹುದಾದ ಯಾವುದೇ ಸನ್ನಿವೇಶವನ್ನು ನಿಭಾಯಿಸಲು ಪುರುಷ ಸಹೋದ್ಯೋಗಿಗಳಂತೆಯೇ ತಾವು ಶಕ್ತರಿರುವುದಾಗಿ ಸಾಬೀತುಪಡಿಸುತ್ತಾರೆ.

ಅವರ ವೃತ್ತಿ ನೇಮಕಾತಿ ಆದೇಶ ಪತ್ರದಲ್ಲಿ ಕೂಡ‘ಒಂದು ವೇಳೆ ಮದುವೆಯಾದಲ್ಲಿ ನಿಮ್ಮನ್ನು ಸೇವೆಯಲ್ಲಿ ಮುಂದುವರಿಸಲಾಗದು’ ಎಂದು ಬರೆದಿರುತ್ತದೆ. ಅದೃಷ್ಟವಶಾತ್‌ ಈ ನಿಯಮ ನಂತರದ ವರ್ಷಗಳಲ್ಲಿ ಬದಲಾಗುತ್ತದೆ.

ಒಟ್ಟಾರೆ ಹೆಜ್ಜೆ ಹೆಜ್ಜೆಗೂ ಎದುರಾದ ತೊಡಕುಗಳನ್ನು ಮೆಟ್ಟಿ ನಿಂತದ್ದೇ ಅವರ ಸಾಧನೆಯೂ ಆಗುತ್ತದೆ. ಲಿಂಗ ತಾರತಮ್ಯ ವಿಷಯವಂತೂ ಅನೇಕ ವರ್ಷಗಳವರೆಗೆ ಅವರಿಗೆ ಕಾಡುತ್ತದೆ. ಹೊಸೂರಿನಲ್ಲಿ ಸಬ್‌ ಕಲೆಕ್ಟರ್‌ ಆದ ವೇಳೆ ಅವರು ತಾಲ್ಲೂಕಿನ ಗ್ರಾಮವೊಂದಕ್ಕೆ ಕುದುರೆ ಮೇಲೆ ಹೋಗುತ್ತಾರೆ. ಗ್ರಾಮದ ಮಹಿಳೆಯರಿಗೆ ಅನ್ನಾ ಅವರನ್ನು ನೋಡುವ ಕುತೂಹಲ. ಅವರ ಹಿಂದೆ ಮುಂದೆ ಸುತ್ತುವ ಮಹಿಳೆಯರು ಅವರನ್ನು ದಿಟ್ಟಿಸಿ ನೋಡುತ್ತಾರೆ. ವೃದ್ಧೆಯೊಬ್ಬರಂತೂ ‘ಈಕೆ ನಮ್ಮಂತೆಯೇ ಇದ್ದಾರೆ’ ಎಂಬ ಉದ್ಗಾರವೆತ್ತುತ್ತಾರೆ. ಆಗ ಅನ್ನಾ ಅವರಿಗೆ ಜನರ ನಿರಾಸೆ ಅರ್ಥವಾಗುತ್ತದೆ. ಅಧಿಕಾರಿಯಾದ ಮಹಿಳೆಯಿಂದ ಜನರು ವಿಭಿನ್ನವಾದದ್ದನ್ನು ಬಯಸುತ್ತಾರೆ ಎಂಬ ಅರಿವಾಗುತ್ತದೆ.

ತಮ್ಮ ಅನುಭವಗಳ ಬಗ್ಗೆ ಸಂದರ್ಶನವೊಂದರಲ್ಲಿ ವಿವರಣೆ ನೀಡುವ ಅನ್ನಾ, ‘ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಮಹಿಳೆಯ ಸಾಮರ್ಥ್ಯದ ಬಗ್ಗೆ ಅನೇಕ ಪುರುಷರಿಗೆ ಶಂಕೆ ಇತ್ತು. ಲಾಠಿ ಪ್ರಹಾರ ನಡೆಸುವ ಆದೇಶ ಅಥವಾ ಗಾಳಿಯಲ್ಲಿ ಗುಂಡು ಹಾರಿಸುವ ಆದೇಶ ಯಾವಾಗ ನೀಡಬೇಕೆಂಬ ವಿವೇಚನೆ ಮಹಿಳೆಗೆ ಇರುತ್ತದೆಯೇ ಎಂಬ ಅನುಮಾನಗಳೂ ಇರುತ್ತಿದ್ದವು. ಹಾಗಾಗಿ ಲಿಂಗ ತಾರತಮ್ಯದ ವಿರುದ್ಧ ನನ್ನನ್ನು ನಾನು ಸಾಬೀತು ಪಡಿಸಲೇಬೇಕಾದ ಸಂದರ್ಭಗಳು ಆಗಾಗ ಎದುರಾಗುತ್ತಿದ್ದವು’ ಎನ್ನುತ್ತಾರೆ.

ಮಹಿಳೆಯರ ವಿರುದ್ಧದ ಇಂತಹ ಅನುಮಾನಗಳಿಗೆ ಪುರುಷರಷ್ಟೆ ಕಾರಣರಲ್ಲ. ಆ ಕಾಲದಲ್ಲಿದ್ದ ಸಾಂಪ್ರದಾಯಿಕ ಮನಸ್ಥಿತಿಗಳು ಸಹ ಇದಕ್ಕೆ ಕಾರಣ ಎಂಬುದು ಅನ್ನಾ ಅಭಿಪ್ರಾಯ.

ಅನ್ನಾ ಅವರು ತಮ್ಮ ವೃತ್ತಿ ಜೀವನದ ಸುದೀರ್ಘ ಅವಧಿಯಲ್ಲಿ ಏಳು ಮುಖ್ಯಮಂತ್ರಿಗಳ ಜತೆ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದಲ್ಲೂ ಕೆಲಸ ಮಾಡಿದ್ದಾರೆ. 1982ರಲ್ಲಿ ದೆಹಲಿ ಏಷ್ಯನ್‌ ಕ್ರೀಡಾಕೂಟದ ಆಯೋಜನೆಯಲ್ಲಿ ರಾಜೀವ್‌ ಗಾಂಧಿ ಅವರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಕೂಡ ಎಂಟು ರಾಜ್ಯಗಳ ಪ್ರವಾಸದಲ್ಲಿ ಜತೆಯಾಗಿದ್ದಾರೆ.

ಭಾರತದ ಮೊದಲ ಗಣಕೀಕೃತ ಬಂದರಾದ ಮುಂಬೈನ ಜವಾಹರ್‌ಲಾಲ್‌ ನೆಹರೂ ಬಂದರಿನ ನಿರ್ಮಾಣದಲ್ಲೂ ಇವರ ಕೊಡುಗೆ ಇದೆ. ಈ ಬಂದರು ಟ್ರಸ್ಟ್‌ನ ಅಧ್ಯಕ್ಷೆಯಾಗಿ ಅನ್ನಾ ಈ ಯೋಜನೆಯ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದರು. ಕೇಂದ್ರ ಸರ್ಕಾರದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಮೊದಲ ಮಹಿಳೆ ಇವರು.

ತಮ್ಮ ಬ್ಯಾಚ್‌ಮೇಟ್‌, ಗೆಳೆಯ ಆರ್‌.ಎನ್‌. ಮಲ್ಹೋತ್ರಾ ಅವರನ್ನು ಅನ್ನಾ ವರಿಸುತ್ತಾರೆ. ಮಲ್ಹೋತ್ರಾ ಅವರು 1985ರಿಂದ 90ರವರೆಗೆ ಆರ್‌ಬಿಐ ಗವರ್ನರ್‌ ಆಗಿದ್ದರು. ಕೇಂದ್ರದ ಇತರ ಪ್ರಮುಖ ಹುದ್ದೆಗಳಲ್ಲಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಕರ್ತವ್ಯ ನಿರ್ವಹಣೆಯಲ್ಲಿಯೇ ಮುಳುಗಿದ್ದ ಅನ್ನಾ, ಮದುವೆಯನ್ನು ವಿಳಂಬವಾಗಿ ಆಗುತ್ತಾರೆ. ಈ ಬಗ್ಗೆ ಅವರು, ‘ನಾನು ವಿಶೇಷ ಮಾನವೀಯ ಗುಣಗಳಿರುವ ವ್ಯಕ್ತಿಯನ್ನು ವಿವಾಹವಾದೆ. ಇಷ್ಟು ವರ್ಷಗಳು ಕಾದಿದ್ದಕ್ಕೂ ಸಾರ್ಥಕ ಆಯಿತು’ ಎಂದು ಗೆಳತಿಯರ ಜತೆ ಹೇಳಿಕೊಳ್ಳುತ್ತಿದ್ದರಂತೆ.

ಮಹಿಳೆಯರು ಸಾರ್ವಜನಿಕ ಜೀವನ ಪ್ರವೇಶಿಸುವುದಕ್ಕೆ ರಾಜಗೋಪಾಲಾಚಾರಿ ಅವರೂ ಮೊದಲು ವಿರೋಧಿಸಿದ್ದರು. ತಮಗೆ ಸಬ್‌ ಕಲೆಕ್ಟರ್‌ ಹೊಣೆ ವಹಿಸಲೂ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದನ್ನು ಅನ್ನಾ ಅವರು 2012ರಲ್ಲಿ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

‘ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ನಿಭಾಯಿಸಲು ನನಗೆ ಸಾಧ್ಯವಿಲ್ಲ ಎಂದೇ ಅವರು ಭಾವಿಸಿಬಿಟ್ಟಿದ್ದರು. ಆದರೆ ಕೆಲಸ ನಿರ್ವಹಿಸಲು, ನನ್ನ ಸಾಮರ್ಥ್ಯ ಸಾಬೀತುಪಡಿಸಲು ನನಗೆ ಒಂದು ಅವಕಾಶ ನೀಡಬೇಕು ಎಂದು ವಾದಿಸಿದ್ದೆ’ ಎಂದು ಅನ್ನಾ ಹೇಳಿಕೊಂಡಿದ್ದಾರೆ.

ನಂತರದ ದಿನಗಳಲ್ಲಿ ರಾಜಗೋಪಾಲಾಚಾರಿ ಅವರೇ ಅನ್ನಾ ಅವರ ಕೆಲಸದ ಬಗ್ಗೆ ಅಧಿಕೃತ ವರದಿಯಲ್ಲಿ ಮೆಚ್ಚುಗೆ ಸೂಚಿಸಿದ್ದನ್ನು ಮತ್ತು ಸಾರ್ವಜನಿಕ ಸಭೆಯೊಂದರಲ್ಲಿ ಅನ್ನಾ ಹೆಸರು ಪ್ರಸ್ತಾಪಿಸಿ, ‘ಪ್ರಗತಿಪರ ಮಹಿಳೆಗೆ ಆಕೆ ಉದಾಹರಣೆ’ ಎಂದು ಕೊಂಡಾಡಿದ್ದನ್ನು ಅನ್ನಾ ಜ್ಞಾಪಿಸಿಕೊಂಡಿದ್ದಾರೆ.

ಮಹಿಳೆಯರಿಗೆ ಸೀಮಿತ ಎಂಬಂತಿದ್ದ ಶಿಕ್ಷಕಿ, ದಾದಿಯಂತಹ ವೃತ್ತಿಯಾಚೆಗಿನ ನಾಗರಿಕ ಸೇವೆಗಳಂತಹ ಹುದ್ದೆಗಳನ್ನು ನಿರ್ವಹಿಸಲೂ ಮಹಿಳೆ ಸಮರ್ಥಳು ಎಂದು ತೋರಿಸಿದವರು ಅನ್ನಾ. ಮಹಿಳೆಯರಿಗಿದ್ದ ಹಲವು ಸಾಮಾಜಿಕ ಅಡೆ ತಡೆಗಳನ್ನು ಮುರಿದು ಮಾದರಿ ಸೃಷ್ಟಿಸಿದವರು ಅವರು. ಅವರ ಈ ಚೈತನ್ಯ, ಛಲ ಯುವ ಪೀಳಿಗೆಗೆ ಪ್ರೇರಣೆ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT