ಸೋಮವಾರ, ಆಗಸ್ಟ್ 26, 2019
20 °C

ಅಂದು– ಇಂದು... ಮುಂದೆ?

Published:
Updated:

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವ ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬರುವುದು 1948ರ ಸೆಪ್ಟೆಂಬರ್‌ನಲ್ಲಿ ನಡೆದ ‘ಪೊಲೀಸ್ ಆ್ಯಕ್ಷನ್.’ ಹೈದರಾಬಾದ್ ಪ್ರಾಂತ್ಯವನ್ನು ಆಳುತ್ತಿದ್ದ ನವಾಬ, ಸ್ವಾತಂತ್ರ್ಯಾನಂತರ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರವಾಗಿರಲು ಇಚ್ಛಿಸುತ್ತಿದ್ದ. ಆಗಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಪೊಲೀಸ್ ಆ್ಯಕ್ಷನ್’ ಮೂಲಕ ಈ ಪ್ರಾಂತ್ಯವನ್ನು ಒಕ್ಕೂಟದಲ್ಲಿ ಸೇರಿಸಿದ್ದರು. ಆದರೆ, ಆಗ ಆ ರಾಜ್ಯದಲ್ಲಿದ್ದ ಎಲ್ಲಾ ರಾಜಕೀಯ ನಾಯಕರು ಹಾಗೂ ರಜಾಕರ ಹಾವಳಿಯಿಂದ ರೋಸಿ ಹೋಗಿದ್ದ ಜನಸಾಮಾನ್ಯರೂ ಆಳುವ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾ, ಒಟ್ಟಾಗಿ ‘ಹೈದರಾಬಾದ್ ವಿಮೋಚನೆ’ಗೆ ಕೇಂದ್ರಕ್ಕೆ ಮೊರೆ ಹೋಗಿದ್ದರು. ಆ ಕಾರಣದಿಂದ ಪಟೇಲ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ, ಸರ್ವಾಧಿಕಾರಿಯಾಗಿದ್ದ ನವಾಬನ ಆಡಳಿತವನ್ನು ಕೊನೆಗಾಣಿಸಿದ್ದರು. ಆನಂತರ, ಆ ಪ್ರಕ್ರಿಯೆಯಲ್ಲಿ ಸಾಮಾನ್ಯ ಪ್ರಜೆಗಳಿಗೆ ಸೇನೆಯಿಂದ ತೊಂದರೆಯಾಗಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ, ಸತ್ಯವನ್ನು ತಿಳಿಯಲು ಸುಂದರ್‌ಲಾಲ್‌ ಸಮಿತಿಯನ್ನೂ ನೇಮಿಸಿದ್ದರು.

ಆದರೆ, ಮೊನ್ನೆ ಕಾಶ್ಮೀರದಲ್ಲಿ ನಡೆದದ್ದು ಬೇರೆಯೇ. ಅಲ್ಲಿ ಈ ಮೊದಲೇ ವಿಧಾನಸಭೆ ವಿಸರ್ಜಿಸಲ್ಪಟ್ಟಿತ್ತು. ಮೊದಲಿಗೆ ಅಲ್ಲಿಗೆ ಅಪಾರ ಪ್ರಮಾಣದ ಸೇನೆಯನ್ನು ಕಳಿಸಿ, ಅಲ್ಲಿಯ ಪ್ರಮುಖ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಜನರು ಗುಂಪು ಸೇರದಂತೆ ಸೆಕ್ಷನ್ 144 ಜಾರಿಗೊಳಿಸಿ, ರಾಜ್ಯಪಾಲರ ವರದಿಯನ್ನೇ ಕಾಶ್ಮೀರದ ಪ್ರಜೆಗಳ ಸಮ್ಮತಿಯೆಂದು ಪರಿಗಣಿಸಿ, ಆ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನಗಳನ್ನು ರದ್ದು ಮಾಡಿದುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಪ್ಪುವಂತಹುದಲ್ಲ. ಕಾಶ್ಮೀರಕ್ಕಿದ್ದ ಪೂರ್ಣಪ್ರಮಾಣದ ರಾಜ್ಯದ ಸ್ಥಾನವನ್ನೇ ಕಿತ್ತುಕೊಂಡು, ಅದನ್ನು ಒಡೆದು, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಬದಲಾಯಿಸಿದುದು ಅಧಿಕಾರ ದರ್ಪದ
ಕ್ರಮದಂತೆ ಕಾಣುತ್ತದೆ. ನಾಳೆ, ಇದೇ ಬಗೆಯ ವಿಶೇಷ ಸ್ಥಾನಮಾನಗಳನ್ನು ಪಡೆದಿರುವ ಈಶಾನ್ಯ ರಾಜ್ಯಗಳಿಗೆ ಏನಾಗಬಹುದು? ‘ಹೈದರಾಬಾದ್ ಕರ್ನಾಟಕದಲ್ಲಿ ಅಭಿವೃದ್ಧಿಯಾಗುತ್ತಿಲ್ಲ’, ‘ಆಡಳಿತ ವ್ಯವಸ್ಥೆ ಕುಸಿದಿದೆ’ ಇತ್ಯಾದಿ ಕಾರಣಗಳನ್ನು ಕೊಟ್ಟು, ಕರ್ನಾಟಕವನ್ನು ಒಡೆದು ನಾಲ್ಕು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದರೆ ಕನ್ನಡಿಗರ ಅವಸ್ಥೆ ಏನಾಗಬಹುದು? ಯೋಚಿಸುತ್ತಾ ಹೋದಂತೆ, ಹೆದರಿಕೆಯಾಗುತ್ತದೆ, ಖಿನ್ನತೆ ಕವಿಯುತ್ತದೆ.

- ಡಾ. ಸಿ.ಎನ್.ರಾಮಚಂದ್ರನ್, ಬೆಂಗಳೂರು

Post Comments (+)