ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಬವಣೆ ಕಣ್ತೆರೆದು ನೋಡಿ

ಅಕ್ಷರ ಗಾತ್ರ

ಒಬ್ಬ ಪ್ರತಿಭಾವಂತ ರಂಗಭೂಮಿ ಯುವ ಕಲಾವಿದ. ರಂಗಭೂಮಿಯನ್ನು ವೃತ್ತಿಯಾಗಿ ತೆಗೆದುಕೊಂಡಿದ್ದಾತ. ಇಂದು ಈತನ ಇಡೀ ಕುಟುಂಬ ಕೋವಿಡ್‌ಗೆ ತುತ್ತಾಗಿ ಪರಿತಪಿಸುತ್ತಿದೆ. ಐದು ತಿಂಗಳ ಮಗು ಮತ್ತು ನಾಲ್ಕು ವರ್ಷದ ಮಗುವಿನ ತಾಯಿ ಕೋವಿಡ್‌ಗೆ ಬಲಿಯಾದರೆ, ಕಲಾವಿದ ಮತ್ತು ಆತನ ತಂದೆ, ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತೊಬ್ಬ ಬೆಂಗಳೂರು ಹವ್ಯಾಸಿ ರಂಗಭೂಮಿಯ ಕಲಾವಿದ. ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿ, ಮನೆಗೆ ಬಂದರು. ಆದರೆ ಅವರ ಇಬ್ಬರು ಅಕ್ಕಂದಿರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕುಪೀಡಿತರಾಗಿದ್ದ ತಾಯಿ ಐಸಿಯುನಿಂದ ಹೊರಬಂದಿದ್ದು ಶವವಾಗಿ. ಖಿನ್ನತೆಗೆ ಒಳಗಾದ ಕಲಾವಿದ ಆತ್ಮಹತ್ಯೆಗೆ ಪ್ರಯತ್ನಿಸಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ಹವ್ಯಾಸಿ ರಂಗಕಲಾವಿದೆ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೂ ಹೆಚ್ಚುಕಾಲ ಚಿಕಿತ್ಸೆ ಪಡೆದು ಹೊರಬಂದಿದ್ದಾರೆ. ಅವರಿಗೆ ವೈದ್ಯಕೀಯ ವೆಚ್ಚ ಭರಿಸುವ ಶಕ್ತಿ ಎಲ್ಲಿಂದ ಬರಬೇಕು?

ಇವು ಕೆಲವು ಉದಾಹರಣೆಗಳಷ್ಟೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಲಾವಿದರು ಆಸ್ಪತ್ರೆ, ಚಿಕಿತ್ಸೆ ಎಂದು ಎಡತಾಕುತ್ತಿದ್ದಾರೆ. ಕೊರೊನಾ ಜೊತೆಗೆ ಇವರನ್ನು ಕಾಡುತ್ತಿರುವುದು ಕಠಿಣ ಆರ್ಥಿಕ ಪರಿಸ್ಥಿತಿ. ರಂಗಕಲಾವಿದರಷ್ಟೇ ಅಲ್ಲ, ಕಂಪನಿ ಕಲಾವಿದರು, ಜನಪದ ಕಲಾವಿದರು, ಸಂಗೀತ, ನೃತ್ಯ, ಚಿತ್ರಕಲಾವಿದರು ಬಹಳಷ್ಟು ತೊಂದರೆಗೆ ಸಿಲುಕಿದ್ದಾರೆ. ಹಲವರು ಜೀವ ಕಳೆದುಕೊಂಡು ಕುಟುಂಬಗಳು ಅನಾಥವಾಗಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದ ಕಾರಣ, ಅದಕ್ಕಾಗಿ ಇದ್ದ ಹಣವನ್ನು ಇಲಾಖೆಯ ಆಸ್ತಿಯನ್ನು ಹೆಚ್ಚಿಸಲು ಬಳಕೆ ಮಾಡುವಂತೆ ಸೂಚಿಸಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗಿದ್ದರೆ ಕಲಾವಿದರು ಸಂಸ್ಕೃತಿ ಇಲಾಖೆಯ ಆಸ್ತಿಯಲ್ಲವೇ?

ಕೋವಿಡ್‌ನಿಂದ ಆರ್ಥಿಕ ತೊಂದರೆಗೆ ಸಿಲುಕಿರುವ ಕಲಾವಿದರ ಕುಟುಂಬಗಳನ್ನು ಜಿಲ್ಲಾ ಹಂತದಲ್ಲಿ ಗುರುತಿಸಿ, ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಅರ್ಹ ಕುಟುಂಬಗಳಿಗೆ ವೈದ್ಯಕೀಯ ವೆಚ್ಚವನ್ನು ಭರಿಸಲು ಮುಂದಾಗಬೇಕು. ಹಾಗೆಯೇ ಈ ಸೋಂಕಿನಿಂದ ಸಾವನ್ನಪ್ಪಿರುವ ಕಲಾವಿದರ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಘೋಷಿಸಬೇಕು. ಹೀಗಾದಾಗ ಕಲಾವಿದ, ಕಲೆ ಎರಡೂ ಉಳಿದು, ಸಾಂಸ್ಕೃತಿಕ ಲೋಕದ ಆಸ್ತಿ ವೃದ್ಧಿಯಾಗುತ್ತದೆ. ಮೂರಾಬಟ್ಟೆಯಾಗುತ್ತಿರುವ ಕಲಾವಿದರ ಬದುಕಿಗೆ ಆಸರೆಯಾದಂತೆ ಆಗುತ್ತದೆ.

- ಶಶಿಧರ ಭಾರಿಘಾಟ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT