ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಾಂಗ್ಲಾ ವಿಮೋಚನೆಯಲ್ಲಿ ‘ರಾ’ ಮಹತ್ವದ ಪಾತ್ರ

ಅಕ್ಷರ ಗಾತ್ರ

‘ಇಂದಿರಾ ಬೆನ್ನಿಗಿದ್ದ ಚಾಣಕ್ಯ’ ಎಂಬ ಸುಧೀಂದ್ರ ಬುಧ್ಯ ಅವರ ಲೇಖನದಲ್ಲಿ (ಪ್ರ.ವಾ., ಡಿ. 1), ಬಾಂಗ್ಲಾ ದೇಶದ ಉದಯದಲ್ಲಿ ‘ರಾ’ದ ಕೊಡುಗೆಯನ್ನೂ ಸೇರಿಸಬೇಕಿತ್ತು. ಪ್ರಧಾನಿ ಇಂದಿರಾ ಗಾಂಧಿಯವರು ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ನಿರ್ಧಾರ ಮಾಡಿದ್ದಕ್ಕೆ ಕಾರಣ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಯಾದ ಐಎಸ್‍ಐ ಭಾರತದ ಸಾರ್ವಭೌಮತೆಯ ವಿರುದ್ಧ ಪೂರ್ವೋತ್ತರ ಭಾಗದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆ. ಇಂದಿರಾ ಗಾಂಧಿ ಅವರ ನಡೆಯ ಸೂಚನೆ ಪಾಕಿಸ್ತಾನ, ಚೀನಾ ಮತ್ತು ಅಮೆರಿಕಗೆ ಮನದಟ್ಟಾಯಿತು. ಈ ಮೂರು ರಾಷ್ಟ್ರಗಳೂ ಭಾರತದ ವಿರುದ್ಧ ಸಂಚು ನಡೆಸುತ್ತಿದ್ದವು. ಭಾರತಕ್ಕೆ ರಷ್ಯಾದ ಸ್ನೇಹ ಮಾತ್ರ ನೆರವಾಗಿತ್ತು. ಅಮೆರಿಕವು ಚೀನಾದೊಡನೆ ಸೇರಿ ನಾಗಾಲ್ಯಾಂಡ್ ಮತ್ತು ಮಿಜೊರಾಂನಲ್ಲಿ, ಪಾಕಿಸ್ತಾನ ಮತ್ತು ಚೀನಾ ಸೇರಿ ಪಂಜಾಬ್‌ನಲ್ಲಿ ಖಲಿಸ್ತಾನ್ ಸಿಖ್ಖರೊಡನೆ ಸೇರಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿ, ಇಂದಿರಾ ಗಾಂಧಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ನಿರ್ಧಾರಕ್ಕೆ ಅಡ್ಡಿ ತರುತ್ತಿದ್ದವು. ಆದರೆ, ಇಂದಿರಾ ಅವರು ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಬಂಗಾಲಿಗಳ ನರಮೇಧಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಚಾರ ಕೊಟ್ಟು, ಪಾಕಿಸ್ತಾನದ ಷಡ್ಯಂತ್ರದ ವಿರುದ್ಧ ಮನವರಿಕೆ ಮಾಡಿಸಿ, ಪೂರ್ವ ಪಾಕಿಸ್ತಾನದಲ್ಲಿ ನರಮೇಧ ತಪ್ಪಿಸಲು ಅದನ್ನು ಪಾಕಿಸ್ತಾನದಿಂದ ಬೇರ್ಪಡಿಸುವುದೇ ಉತ್ತಮ ಎಂಬ ಭಾವನೆಯನ್ನು ಮೂಡಿಸಲಾಯಿತು. ಇದನ್ನು ಕಾರ್ಯರೂಪಕ್ಕೆ ತಂದಿದ್ದು ರಾ ಸಂಸ್ಥೆ.

ಈ ಬೇಹುಗಾರಿಕೆ ಸಂಸ್ಥೆಯು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ, ವಿದೇಶಗಳಲ್ಲಿ ನೆಲೆಸಿದ್ದ ಬಂಗಾಲಿ ಪ್ರಜ್ಞಾವಂತರು, ಸರ್ಕಾರಿ ಅಧಿಕಾರಿಗಳು ಮತ್ತು ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನದ ವಿರುದ್ಧವಿದ್ದ ಸಮೂಹದೊಡನೆ ಕೈ ಜೋಡಿಸಿ ಭಾರತದ ಕಡೆಯಿಂದ ಆಗಬಹುದಾದ ಕಾರ್ಯಾಚರಣೆಗೆ ಮಾನಸಿಕವಾಗಿ ಬೆಂಬಲ ಸಿಗುವಂತೆ ನೋಡಿಕೊಂಡಿತು. ಇದರ ಜೊತೆ, ಪಾಕಿಸ್ತಾನದ ವಿಮಾನಗಳು ಭಾರತದ ಮೇಲೆ ಹಾರಾಡುವುದನ್ನು ನಿಷೇಧಿಸಿದ್ದುದು ಮತ್ತು ಶ್ರೀಲಂಕಾವು ಪಾಕಿಸ್ತಾನದ ವಿಮಾನಗಳಿಗೆ ತೈಲ ತುಂಬಿಸುವುದಕ್ಕೆ ಅವಕಾಶ ಕೊಡಬಾರದೆಂಬ ಇಂದಿರಾ ಅವರ ಕೋರಿಕೆಯನ್ನು ಕಾರ್ಯಗತ ಮಾಡಿದ್ದುದು, ಇವುಗಳನ್ನು ‘ದಿ ಕಾವ್‌ಬಾಯ್ಸ್ ಆಫ್ ರಾ’ ಪುಸ್ತಕದಲ್ಲಿ ‘ರಾ’ದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಬಿ.ರಾಮನ್ ವಿವರಿಸಿದ್ದಾರೆ. ರಾ ಸಂಸ್ಥೆಯ ಕೊಡುಗೆಯೂ ಐತಿಹಾಸಿಕ.

– ಪಿ.ಸಿ.ಕೇಶವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT