ನಾಯಿ ಟಾರ್ಚರ್‌; ಗಾಲಿ ಪಂಕ್ಚರ್‌ !

7

ನಾಯಿ ಟಾರ್ಚರ್‌; ಗಾಲಿ ಪಂಕ್ಚರ್‌ !

Published:
Updated:
Deccan Herald

ಸವಿ ನಿದ್ದೆಯಲ್ಲಿ ಕನಸೊಂದು ಕಾಣುತ್ತಿದ್ದೆ. ಗಲಾಟೆ ಮಾಡುವುದೇ ಜೀವನದ ಪರಮೋದ್ದೇಶ ಎಂದುಕೊಂಡಂತಿದ್ದ ನಾಯಿಯೊಂದು ‘ಶಿರ’ಸೀದಾ ಮಾಡಿಕೊಂಡು ಒಂದೇ ಸಮನೆ ಬೊಗಳುತ್ತಿತ್ತು. ಗೊಣಗುತ್ತಲೇ ಎದ್ದೆ. ‘ಈ ನಾಯಿ ಹೀಗೇಕೆ ಬೊಗಳುತ್ತಿರಬಹುದು? ಇದು ಹಿಂದಿನ ಜನ್ಮದಲ್ಲಿ ಯಾವ ರಾಜ್ಯದ ಸುಲ್ತಾನನಾಗಿರಬಹುದು? ಅದರ ಜಾತಕ ಹೇಗಿರಬಹುದು’ ಎಂದು ಯೋಚಿಸತೊಡಗಿದೆ. ಇಂತಹ ಅಂತೆ–ಕಂತೆಗಳಲ್ಲಿಯೇ ‘ಸಂ’ಶೋಧನೆ ಮಾಡಿರುವ ‘ಅಂತಾಕುಮಾರ್‌’ ಅವರಿಗೇ ಕೇಳೋಣ ಎಂದುಕೊಂಡು ಫೋನ್‌ ಮಾಡಿದೆ. ‘ಸಾಹೇಬರು ಕುಂಡಲಿ ಬರೆಯುವ ‘ಕೌಶಲ’ದಲ್ಲಿ ನಿರತರಾಗಿದ್ದಾರೆ’ ಎಂದ ಅವರ ಸಹಾಯಕ, ನಿರ್ದಾಕ್ಷಿಣ್ಯವಾಗಿ ಕರೆಯನ್ನು ಕಟ್‌ ಮಾಡಿದ.

ಅಮೂಲ್ಯ ಮಾಹಿತಿ ಪಡೆಯುವ ಸುವರ್ಣಾವಕಾಶ ಮಿಸ್‌ ಆಯ್ತಲ್ಲ ಎಂದುಕೊಂಡು ಹಾಸಿಗೆಯಲ್ಲೇ ಕುಳಿತು, ಬೆಳಿಗ್ಗೆ ಬಿದ್ದಿದ್ದ ಕನಸನ್ನು ನೆನೆಯತೊಡಗಿದೆ. ‘ಟಿಪ್ಪು ಸುಲ್ತಾನ್‌ ಭಾಗ–2’ ಪ್ರೀಮಿಯರ್‌ ಷೋಗೆ ಆಹ್ವಾನ ಬಂದಿತ್ತು. ಬೈಕ್‌ನಲ್ಲಿ ಹೊರಟೂ ನಿಂತಿದ್ದೆ. ಆ ಬೈಕ್‌ ಆದರೂ ಎಂಥದ್ದು ಗೊತ್ತಾ !? ಚಿನ್ನವನ್ನೇ ಕರಗಿಸಿ ಮಾಡಿದ್ದ ‘ಗಾಲಿ’ಯನ್ನು ಅದು ಹೊಂದಿತ್ತು. ಗಣಿ ದೂಳಿನ ನಡುವೆಯೂ ಅದು ಮಿರಮಿರಮಿರ ಮಿಂಚುತ್ತಿತ್ತು. ಗಣ್ಯಾತಿಗಣ್ಯರ ಜೊತೆ ಸಿನಿಮಾ ನೋಡುವ ಪುಳಕವನ್ನು ನೆನೆದು ಹೊರಟೆ. ಛೇ, ಬೇಸರವಾಯಿತು. ಇದೇ ಸಿನಿಮಾದ ‘ಭಾಗ–1’ನ್ನು ನಿರ್ಮಿಸಿ, ನಿರ್ದೇಶಿಸಿದ್ದವರನ್ನು ಹೊರತುಪಡಿಸಿ ಉಳಿದವರು ಇರಲೇ ಇಲ್ಲ. ‘ಭಾಗ–2’ರ ವಿತರಣೆ ಹಕ್ಕನ್ನು ಪಡೆದವರೂ ‘ಅನಾರೋಗ್ಯ’ದ ಕಾರಣದಿಂದ ಆಬ್ಸೆಂಟ್‌ ಆಗಿದ್ದರು. ಮನೆ ಕಡೆಗೆ ಬೈಕ್‌ ತಿರುಗಿಸಿದೆ. ಕರ್ಮ. ‘ಗಾಲಿ’ ಪಂಕ್ಚರ್‌ ! ಚಿನ್ನದ ಗಾಲಿಯೇ ಗಾಳಿ ಕಳೆದುಕೊಳ್ಳೋದೇ !? ಹ್ಯಾಪ್‌ ಮೋರೆಯಲ್ಲಿ ಬೈಕ್‌ ತಳ್ಳಿಕೊಂಡು ಹೋಗುವಾಗ ಸೋದರ ಸಂತತಿಯೇ ಹಾಡತೊಡಗಿತು, ‘ಅಣ್ಣಾ ನಿನ್ನ ಊರು, ಅಣ್ಣಾ ನಿನ್ನ ಹೆಸರು...!’

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !