ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಅಭಿವೃದ್ಧಿ ಪಡಿಸುವಲ್ಲಿ ತಿಪ್ಪಾರೆಡ್ಡಿ ವಿಫಲ

Last Updated 30 ಜನವರಿ 2018, 9:43 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಾಲ್ಕೈದು ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿರುವ ತಿಪ್ಪಾರೆಡ್ಡಿ ಅವರು ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಜೆಡಿಎಸ್ ಕ್ರೈಸ್ತ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ವಿಲ್ಸನ್ ರೆಡ್ಡಿ ದೂರಿದರು.

ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜೆಡಿಎಸ್ ಕ್ರೈಸ್ತ ಅಲ್ಪಸಂಖ್ಯಾತರ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸ್ಥಳೀಯ ಶಾಸಕರಿಗೆ ಕ್ಷೇತ್ರ ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ ಇಲ್ಲ. ಚಿತ್ರದುರ್ಗ ಎಂಟತ್ತು ವರ್ಷಗಳ ಹಿಂದೆ ಹೇಗಿತ್ತೊ ಈಗಲೂ ಅದೇ ರೀತಿಯೇ ಇದೆ. ಯಾವುದೇ ಬದಲಾವಣೆ ಆಗಿಲ್ಲ. ಮತದಾರ ಪ್ರಭುಗಳನ್ನು ವಂಚಿಸುವ ಕೆಲಸ ಇಲ್ಲಿ ವ್ಯಾಪಕವಾಗಿ ಮುಂದು ವರಿಯುತ್ತಿದೆ ಎಂದು ಆರೋಪಿಸಿದರು.

‘ರಾಜ್ಯ ಅಭಿವೃದ್ಧಿ ಆಗಲು ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು. ಕ್ಷೇತ್ರ ಪ್ರಗತಿ ಕಾಣಲು ಇಲ್ಲಿನ ಜೆಡಿಎಸ್ ಅಭ್ಯರ್ಥಿ ವೀರೇಂದ್ರ (ಪಪ್ಪಿ) ಶಾಸಕರಾಗಬೇಕು. ಅದೇ ರೀತಿ ಪಕ್ಷಕ್ಕೆ ಬಲ ತುಂಬಲು ಕ್ರೈಸ್ತ ಸಮುದಾಯದವರು ಬೆಂಬಲಿಸುವ ಮೂಲಕ ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳೇ ಗೆಲ್ಲುವಂತೆ ಮಾಡಬೇಕು' ಎಂದು ಮನವಿ ಮಾಡಿದರು.

ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡೇವಿಡ್ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯಾವುದೇ ವ್ಯತ್ಯಾಸಗಳಿಲ್ಲ. ಕ್ರೈಸ್ತ ಧರ್ಮೀಯರನ್ನು ಗುರುತಿಸುವ ಕೆಲಸ ಕೂಡ ಮಾಡಿಲ್ಲ. ಆದರೆ, ರಾಜ್ಯದಲ್ಲಿ ಸಮುದಾಯದವರನ್ನು ಗುರುತಿಸಿ ಪ್ರತ್ಯೇಕ ಘಟಕ ಸ್ಥಾಪಿಸಿರುವ ಏಕೈಕ ಪಕ್ಷ ಜೆಡಿಎಸ್. ಇದಕ್ಕೆ ಕಾರಣರಾದ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡ ಪಿ.ಜಿ.ಆರ್.ಸಿಂಧ್ಯ, ಪಕ್ಷದ ಇತರೆ ಮುಖಂಡರಿಗೆ ಋಣಿಯಾಗಿರಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸುಮಾರು 50 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸಾವಿರ, 2 ಸಾವಿರ, 4 ಸಾವಿರ ಮತಗಳ ಹಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇದಕ್ಕೆ ಕ್ರೈಸ್ತ ಸಮುದಾಯದವರಾದ ನಾವುಗಳು ಒಂದು ರೀತಿಯಲ್ಲಿ ಕಾರಣರಾಗಿದ್ದೇವೆ ಎಂದು ವಿಷಾದಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಾಗ ಮಾತ್ರ ಕ್ರೈಸ್ತ ಸಮುದಾಯದವರಿಗೂ ವಿವಿಧ ಸೌಲಭ್ಯ ದೊರೆಯಲಿದೆ. ಅಲ್ಲದೆ, ನಮ್ಮವರನ್ನು ಗುರುತಿಸಿ ಪಕ್ಷದಲ್ಲಿ ಉನ್ನತ ಸ್ಥಾನಮಾನಗಳು ಸಿಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮುದಾಯದವರೆಲ್ಲೂ ಜೆಡಿಎಸ್ ಬೆಂಬಲಿಸುವ ಮೂಲಕ ಈ ಬಾರಿ ಸ್ಪಷ್ಟ ಬಹುಮತ ದೊರೆಯುವಂತೆ ಮಾಡಬೇಕು ಎಂದು ಕೋರಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ), ಮುಖಂಡರಾದ ಚಾರ್ಲ್ಸ್‍, ಸುರೇಶ್, ತಿಮ್ಮಣ್ಣ, ಜಾರ್ಜ್, ಪಾಲ್ ಪ್ರವೀಣ್, ವಕ್ತಾರ ಗೋಪಾಲಸ್ವಾಮಿ ನಾಯಕ, ರಾಜಣ್ಣ, ನಿಶಾನಿ ಶಂಕರ್, ತಿಪ್ಪೇರುದ್ರಮ್ಮ ಅವರೂ ಉಪಸ್ಥಿತರಿದ್ದರು. ಬಿಜೆಪಿಯ ಐವರು ಮಹಿಳೆಯರು, ಪುರುಷರು ಜೆಡಿಎಸ್ ಸೇರ್ಪಡೆಯಾದರು. ನಂತರ ಕ್ರೈಸ್ತ ಅಲ್ಪಸಂಖ್ಯಾತರ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಕುರುಕ್ಷೇತ್ರವಲ್ಲ; ಶಾಂತ ಕ್ಷೇತ್ರ ಮಾಡುತ್ತೇವೆ: ಚಿತ್ರದುರ್ಗ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ಕೆಲವರು ಕುರುಕ್ಷೇತ್ರ ಎಂದು ಭಾವಿಸಿದ್ದಾರೆ. ಚುನಾವಣೆ ಎಂಬುದು ರಣರಂಗವಲ್ಲ. ಹಿಂಸಾತ್ಮಕ ಹೋರಾಟವೂ ಅಲ್ಲ. ಅಹಿಂಸಾ ತತ್ವದಡಿ ಶಾಂತ ರೀತಿಯಿಂದ ಚುನಾವಣೆ ಎದುರಿಸುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಜೆಡಿಎಸ್‍ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಜಿಲ್ಲೆಯ ಸರ್ವಧರ್ಮೀಯರು ಶಾಂತಿಯುತವಾಗಿ ನೆಮ್ಮದಿಯ ಜೀವನ ಮಾಡಬೇಕು. ಈ ದಿಸೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ.   ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ  ಕಂಕಣಬದ್ಧರಾಗಿದ್ದೇವೆ ಎಂದು ಹೇಳಿದರು.

* * 

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ರಾಜ್ಯದ ರೈತರ ಸಾಲ ಮನ್ನಾ ಘೋಷಣೆ ಆಗಲಿದೆ
- ಬಿ.ಕಾಂತರಾಜ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT