ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ನಮ್ಮವರ ‘ಶಕೆ’ಯೇ ನಮಗಿರಲಿ

Last Updated 21 ಜುಲೈ 2021, 19:19 IST
ಅಕ್ಷರ ಗಾತ್ರ

ಆರ್‌ಎಸ್ಎಸ್ ಮುಖಂಡ ಮೋಹನ ಭಾಗವತ್‌ ಅವರು ‘ದೇಶದ ನಾಗರಿಕರು ಒಂದೇ ಡಿಎನ್ಎ ಹಂಚಿಕೊಂಡಿದ್ದಾರೆ ಮತ್ತು ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂದು ಮುಸ್ಲಿಮರು ಭಯಪಡಬಾರದು’ ಎಂದು ಹೇಳಿದ (ಪ್ರ.ವಾ., ಜುಲೈ 7) ಸೌಹಾರ್ದದ್ಯೋತಕ, ಸರಳ ಮಾತನ್ನು ಈಗ ಯದ್ವಾತದ್ವಾ ತಿರುಚಲಾಗು ತ್ತಿದೆ. ಜೆಡಿಎಸ್‌ ಮುಖಂಡ ವೈ.ಎಸ್.ವಿ. ದತ್ತ ಅವರು, ಬ್ರಿಟಿಷರು ಹುಟ್ಟುಹಾಕಿದ್ದ ಆರ್ಯ-ದ್ರಾವಿಡ ಚರ್ವಿತಚರ್ವಣ ವಾದವನ್ನು ಪ್ರತಿಪಾದಿಸುತ್ತಾ (ಚರ್ಚೆ, ಜುಲೈ14), ದಾಳಿಕೋರರಾದ ಶಕ ಮತ್ತು ಕುಶಾನರಲ್ಲಿ ಶಕರಿಂದಲೇ ‘ಶಕ ಸಂವತ್ಸರ’ ಆರಂಭವಾಯಿತು, ಜೊತೆಗೆ ದಾಳಿಕೋರರಿಂದಲೇ ನಮ್ಮ ಸಂಸ್ಕೃತಿ ಉದಿಸಿತು ಎಂದು ಬರೆದಿದ್ದಾರೆ. ಇದು ತಪ್ಪು ವ್ಯಾಖ್ಯಾನವಲ್ಲದೆ ಇನ್ನೇನೂ ಅಲ್ಲ. ಇದರಿಂದ ಅವರು ಒಂದೇ ಏಟಿಗೆ ಭಾರತೀಯರಿಗೆ ಇದ್ದ ಸ್ವಂತಿಕೆ ಯನ್ನೂ ಅಸ್ತಿತ್ವವನ್ನೂ ಅಲ್ಲಗಳೆದಿದ್ದಾರೆ.

ಕೆ.ಎಸ್.ನಾರಾಯಣಾಚಾರ್ಯರು ಬರೆದ ‘ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು’ (ಹತ್ತು ಸಂಪುಟಗಳಲ್ಲಿ), ಶತಾವಧಾನಿ ಡಾ. ಆರ್.ಗಣೇಶ್ ಅವರ ‘ಭಾರತೀಯ ಕ್ಷಾತ್ರಪರಂಪರೆ’, ಡಾ. ಎಸ್.ಆರ್. ಲೀಲಾ ಅವರು ಕನ್ನಡಕ್ಕೆ ಅನುವಾದಿಸಿದ ‘ಸಿಕ್ಸ್‌ ಗ್ಲೋರಿಯಸ್‌ ಎಪಾಕ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ’ ಮೊದಲಾದ ಕೃತಿಗಳು ನಮ್ಮವರ ವೀರ್ಯ, ಶೌರ್ಯ, ಸಾಹಸ, ದಿಟ್ಟತನಗಳ ಬಗ್ಗೆ, ನಮ್ಮ ಅಸ್ಮಿತೆ ಬಗ್ಗೆ ಬಹಳಷ್ಟು ಬೆಳಕು ಚೆಲ್ಲುತ್ತವೆ.

ದತ್ತ ಅವರು ಹೇಳಿದಂತೆಯೇ ಗ್ರೀಕರ ನಂತರ ಶಕ-ಕುಶಾನರು ಭಾರತದ ಮೇಲೆ ದಾಳಿ ಮಾಡಿದ್ದು ಹೌದು. ಅವರು ಬರ್ಬರರೂ, ಕ್ರೂರಿಗಳೂ ಆಗಿದ್ದರು. ಆದರೆ ಅವರನ್ನು ನಮ್ಮವರೇ ಆದ, ವೈದಿಕ ಮತಾವಲಂಬಿ ಗಳಾದ ಕಳಿಂಗರು ಮತ್ತು ಆಂಧ್ರರು ಮೆಟ್ಟಿ ತುಳಿದಿದ್ದರು. ಅದೇ ಸಮಯದಲ್ಲಿ ಮಾಲವರೂ, ಯೌಧೇಯರೂ ಸೇರಿ ಅವರು ಉಸಿರೆತ್ತದಂತೆ ಮಾಡಿದ್ದರು. ಮಾಲವರು ಅವರ ವಿರುದ್ಧ ಜಯ ಸಾಧಿಸಿದ್ದುದರ ಮಧುರಸ್ಮರಣೆಗಾಗಿ ‘ಕೃತ್’ ಎಂಬ ಸಂವತ್ಸರವನ್ನು ಆರಂಭಿಸಿದರು. ಆಗಿನ ಕಾಲದ ನಾಣ್ಯಗಳ ಮೇಲೆ ಸಂಸ್ಕೃತ ಲಿಪಿಯಲ್ಲಿ ‘ಮಾಲವ ಜಯ’, ‘ಮಾಲವಾನಾಂ ಜಯಃ’, ‘ಮಾಲವ ಗಣಸ್ಯ’ ಮುಂತಾದ ವಿಜಯದ ಬರಹಗಳು ಕಾಣಬರುತ್ತವೆ. ಗೆದ್ದ
ಭಾರತೀಯರೆಲ್ಲರೂ ತಮ್ಮ ವಿಜಯದ ಸಂಕೇತವಾಗಿ ಒಂದೊಂದು ಶಕೆಯನ್ನೇ ಆರಂಭಿಸಿಬಿಟ್ಟರು.‘ಶಕ’ ಎಂದರೆ ಒಬ್ಬ ದೊರೆಯ ಹೆಸರು. ಒಂದು ನಿರ್ದಿಷ್ಟವಾದ ಕಾಲದಿಂದ ಪ್ರಾರಂಭವಾಗುವ ಕಾಲದ ಮಾನ ಅದು. ಶಾಲಿವಾಹನ ಶಕ, ಕ್ರಿಸ್ತಶಕ ಇತ್ಯಾದಿ. ‘ಶಕ’ ಅನ್ನುವುದಕ್ಕೆ ಒಂದು ದೇಶ, ಒಂದು ಜಾತಿಯ ಜನರು, ಜನಾಂಗ ಎಂಬ ಅರ್ಥಗಳಿವೆ ಎಂದು ಮನುಸ್ಮೃತಿ ಸಾರುತ್ತದೆ.

ಇಲ್ಲಿ ನಾವು ಗಮನಿಸಬೇಕಾದುದೆಂದರೆ- ದಾಳಿಕೋರರಾದ ‘ಶಕ-ಕುಶಾನ’ ಮೊದಲಾದವರ ನೆನಪನ್ನು ಹೊತ್ತು ಕಳಂಕಿತರಾಗುವುದಕ್ಕಿಂತ, ಆ ಮಹಾದುಷ್ಟರ ಕಪಿಮುಷ್ಟಿಯಿಂದ ಬಿಡುಗಡೆಗೊಂಡು, ನಾವು ವಿಜಯಿಗಳಾದುದರ ಸಂಕೇತವಾಗಿ, ಅದರ ಸವಿನೆನಪಿಗಾಗಿ ವಿಕ್ರಮಶಕೆಯನ್ನೋ ಶಾಲಿವಾಹನಶಕೆಯನ್ನೋ ಇಟ್ಟುಕೊಳ್ಳುವುದು ಸಾವಿರ ಪಾಲು ಮೇಲು.

- ಗ.ನಾ.ಭಟ್ಟ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT