ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚರಣೆಯಲ್ಲಿ ಇರಲಿ ಶ್ರದ್ಧೆ

Last Updated 18 ಮಾರ್ಚ್ 2019, 20:28 IST
ಅಕ್ಷರ ಗಾತ್ರ

ಇತ್ತೀಚೆಗೆ, ನನ್ನ ಆತ್ಮೀಯ ಬಂಧುವೊಬ್ಬರ ವೈಕುಂಠ ಸಮಾರಾಧನೆಗೆ ಹೋಗಿದ್ದೆ. ವೈದಿಕ ಕರ್ಮಗಳಲ್ಲಿ ಬಹಳ ಶ್ರದ್ಧೆ ಇದ್ದ ಅವರಿಗೆ 93 ವರ್ಷವಾಗಿತ್ತು. ಭಗವನ್ನಾಮ ಸ್ಮರಣೆಯಲ್ಲಿ ಅವರಿಗೆ ನಿಷ್ಠೆ.ವೇದಾಭ್ಯಾಸಿಗಳು, ತಮ್ಮ ಶಿಷ್ಯ ವರ್ಗದೊಡನೆ ವೈಕುಂಠ ಸಮಾರಾಧನೆ ವೇಳೆ ಸಾಕಷ್ಟು ವೇದ ಪಠಣವನ್ನು ಏಕಕಂಠದಿಂದ ಪಠಿಸಿದರು. ನಂತರ ಅವರಲ್ಲಿ ಪ್ರಮುಖರು ಎದ್ದು ನಿಂತು ‘ಈಗ ಅತಿ ಮುಖ್ಯವಾದ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತೇವೆ, ಎಲ್ಲರೂ ಶ್ರದ್ಧೆಯಿಂದ ಆಲಿಸಿ’ ಎಂದು ಹೇಳಿ ಪ್ರಾರಂಭ ಮಾಡಿದರು. ಸಭಿಕರೆಲ್ಲರೂ ಉತ್ಸಾಹದಿಂದ, ತಾವೂ ಪಠಿಸುತ್ತಾ ಆನಂದಿಸುತ್ತಿದ್ದರು. ಆದರೆ, ಪುರೋಹಿತರು ಕೆಲವೇ ನಿಮಿಷದಲ್ಲಿ ಎದ್ದು ಓಡಾಡಲು ಪ್ರಾರಂಭಿಸಿದರು. ಅಲ್ಲಿದ್ದ ಹಿರಿಯ ಘನ ವಿದ್ವಾಂಸರೊಬ್ಬರು ತುಟಿ ಬಿಚ್ಚದೆ, ಅತ್ತಿತ್ತ ನೋಡುತ್ತಿದ್ದರು. ಹೇಗೋ ಸಭಿಕರಲ್ಲಿ ಬಹಳ ಜನ ಪಠಿಸಿ ಪೂರೈಸಿದರು.

ತಾತ್ಪರ್ಯ ಏನೆಂದರೆ, ಈ ವೇದ ಮೂರ್ತಿಗಳಿಗೆ ನಾಮ ಪಠಣದಲ್ಲಿ ಶ್ರದ್ಧೆ ಇಲ್ಲ. ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿಲ್ಲ, ತಾವೂ ಮಾಡಿಲ್ಲ. ನಾಮಸ್ಮರಣೆಯ ಮಹತ್ವ ಅರಿತಿಲ್ಲ. ಭಗವನ್ನಾಮ ಸ್ಮರಣೆ ಮಾಡುವುದು ಭಗವದ್‌ ಭಕ್ತಿ ಮತ್ತು ಚಿತ್ತ ಶುದ್ಧಿ ಮಾಡಿಕೊಳ್ಳುವ ಉದ್ದೇಶದಿಂದ. 19ನೇ ಶತಮಾನದ ಸಂತ ಗೊಂದಾವಲೇಕರ್ ಮಹಾರಾಜರು ಹೇಳುವಂತೆ, ಈ ಕರ್ಮಗಳು ಹಣ್ಣು, ಹೂವಿನ ತೋಟದ ಬೇಲಿ ಇದ್ದಂತೆ. ಅವರು ತಮಾಷೆಯಾಗಿ ಬಹಳ ಕಕ್ಕುಲಾತಿಯಿಂದ ಹೇಳುತ್ತಾರೆ ‘ನೀವು ಬರೀ ಬೇಲಿಗೆ ನೀರು, ಗೊಬ್ಬರ ಹಾಕಿ ಹಣ್ಣಿನ ಗಿಡಗಳನ್ನು ಮರೆಯುತ್ತೀರಲ್ಲ’ ಎಂದು.

ವೇದ ಮಂತ್ರಗಳನ್ನು ನಮಗಿತ್ತ ಋಷಿಗಳು, ಹೇಗಾದರೂ ನಾಮಸ್ಮರಣೆ ಮಾಡಲಿ ಎಂಬ ದೃಷ್ಟಿಯಿಂದ ಸಂಧ್ಯಾವಂದನೆ ಮೊದಲ್ಗೊಂಡು ಯಾವುದೇ ಕರ್ಮ ಮಾಡುವಾಗ ಹಲವಾರು ಸಲ, ‘ಆಚಮ್ಯ’ ಎಂದು ಹೇಳಿ 24 ಕೇಶವ ನಾಮ ಹೇಳಬೇಕೆಂದು ಆದೇಶಿಸಿದ್ದಾರೆ (ಆದರೆ ಪುರೋಹಿತರಲ್ಲಿ ಕೆಲವರು ಅದನ್ನು ಶ್ರದ್ಧಾಪೂರ್ವಕವಾಗಿ ಮಾಡದೆ, ಒಂದೆರಡನ್ನು ಮಾತ್ರ ಹೇಳಿ ಮುನ್ನಡೆಯುತ್ತಾರೆ).

ಎಲ್ಲರಿಗೂ ಗೊತ್ತಿರುವಂತೆ, ಯಾವುದೇ ಕರ್ಮಸಿದ್ಧಿಗಾಗಿ ಕಡೆಯಲ್ಲಿ ‘ಆಚರಿತ ಕರ್ಮ ಸಿದ್ಧ್ಯರ್ಥಮ್, ನಾಮ ತ್ರಯ ಜಪಂ ಕರಿಷ್ಯೆ’ ಎಂದು ಹೇಳಿ, ಅಚ್ಯುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ ಎಂದು ಹೇಳಿ ಪೂರ್ಣ ಮಾಡುತ್ತಾರೆ. ಆದ್ದರಿಂದ, ವೇದಾಧ್ಯಯನ ಮಾಡಿದ ಮಹನೀಯರಲ್ಲಿ ನನ್ನ ಮನವಿ ಏನೆಂದರೆ, ಸಹಸ್ರಾರು ವರ್ಷಗಳ ಕೆಳಗೆ ವೇದಋಷಿಗಳು ನಮಗೆ ಕೊಟ್ಟ ಈ ಕರ್ಮ ಮಾರ್ಗವನ್ನು ನೀವು ಜೀವಂತವಾಗಿ ಇಟ್ಟಿದ್ದು, ಜಗತ್ತಿಗೆ ಬಹಳ ಉಪಕಾರ ಮಾಡಿದ್ದೀರಿ. ಆದರೆ, ಇದರ ಮೂಲ ಗುರಿಯಾದ ಭಗವದ್ ಭಕ್ತಿ ಮತ್ತು ಭಗವನ್ನಾಮ ಸ್ಮರಣೆಯಲ್ಲಿ ಶ್ರದ್ಧಾ ಭಕ್ತಿಯನ್ನು ಆಚರಿಸಿ ತಿಳಿಸದಿದ್ದರೆ, ಜನರು ಬರೀ ಕರ್ಮಠರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT