ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಜನರನ್ನು ಗುತ್ತಿಗೆ ಪಡೆದಂತೆ ವರ್ತಿಸದಿರಿ

Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಜನರನ್ನು ಗುತ್ತಿಗೆ ಪಡೆದಂತೆ ವರ್ತಿಸದಿರಿ

ವಿಶ್ವಾಸಾರ್ಹ ಪ್ರಾದೇಶಿಕ ಪಕ್ಷವೊಂದರ ಅವಶ್ಯಕತೆಯನ್ನು ಪ್ರಸ್ತಾಪಿಸಿರುವ ತಿಪ್ಪೂರು ಪುಟ್ಟೇಗೌಡ ಅವರು (ವಾ.ವಾ., ಜ. 31), ‘ಕಳಂಕ ತೊಡೆದರಷ್ಟೇ ಜನರ ವಿಶ್ವಾಸ ಗಳಿಕೆ ಸಾಧ್ಯ’ ಎಂದು ಹೇಳಿದ್ದಾರೆ. ಹೌದು, ಇದು ಸಮಯೋಚಿತ ಹಾಗೂ ನಾಡಿನ ಜನರ ಆಶಯ ಕೂಡ. ರಾಷ್ಟ್ರೀಯ ಪಕ್ಷಗಳ ರಾಜ್ಯ ನೇತಾರರ ದೈನಂದಿನ ಹಗರಣಗಳು, ಸಿ.ಡಿ.ಗಳು, ಪರಸ್ಪರ ಅಸಹ್ಯವೆನಿಸುವಂತಹ ಮಾತುಗಳು ಜನರಿಗೆ ವಾಕರಿಕೆ ಉಂಟಾಗುವಂತೆ ಮಾಡುತ್ತಿವೆ. ಇನ್ನು ಚುನಾವಣೆ ಮುಗಿಯುವುದರೊಳಗಾಗಿ ಏನೇನು ಅವಾಂತರಗಳು ಸೃಷ್ಟಿಯಾಗಲಿವೆಯೋ ಎಂದು ಆತಂಕವಾಗುತ್ತಿದೆ. ಚುನಾವಣೆ ಕಾಲದ ಘೋಷಣೆಗಳು, ಪ್ರಲೋಭನೆಗಳು, ಶಂಕುಸ್ಥಾಪನೆಗಳು, ಪ್ರಚಾರ, ಪ್ರವಾಸಗಳು, ಯಾತ್ರೆಗಳು, ಮತೀಯ ಪ್ರಚೋದನೆಗಳು ಮತ್ತೊಂದು ರೀತಿಯ ಹೇವರಿಕೆಯನ್ನು ಹುಟ್ಟಿಸುತ್ತಿವೆ. ಭ್ರಷ್ಟಾಚಾರವಂತೂ ಸರ್ವರನ್ನೂ ಆವರಿಸಿಕೊಂಡಿದೆ. ನಾಡಿನ ಜನರಿಗೆ ಯಾರು ಹೇಗೆ ಎನ್ನುವುದು ಗೊತ್ತು. ಚುನಾವಣೆಗೆ ಮೊದಲೇ ಜನರನ್ನು ಗುತ್ತಿಗೆ ಪಡೆದವರಂತೆ ಯಾರೂ ವರ್ತಿಸುವುದು ಅಥವಾ ಮಾತನಾಡುವುದು ಬೇಡ.

ಪ್ರಾದೇಶಿಕ ಜೆಡಿಎಸ್ ಪಕ್ಷವು ಕೌಟುಂಬಿಕ, ಜಾತಿಯ ತೆವಲುಗಳಿಂದ ಮುಕ್ತವಾಗುತ್ತಿಲ್ಲ. ಉತ್ತರ ಕರ್ನಾಟಕದ ಕೆಲವು ನಿಜ ಜಾತ್ಯತೀತರನ್ನು ಅದು ಪೋಷಿಸಿ, ಪ್ರೋತ್ಸಾಹಿಸಿ ತಾನೂ ಜಾತ್ಯತೀತವಾಗಿ ಬೆಳೆಯುತ್ತಾ ಬಂದಿದ್ದರೆ ಹಾಗೂ ನಾಡು ನುಡಿ ಕುರಿತು ನೈಜ ಬದ್ಧತೆ, ಕಾಳಜಿಯನ್ನು ತೋರಿಸುತ್ತಾ ಬಂದಿದ್ದರೆ ನಾಡಿನ ತುಂಬ ಜನ ಅದನ್ನು ಬೆಂಬಲಿಸದೇ ಇರುತ್ತಿರಲಿಲ್ಲ. ಆಗ ನೆರೆ ರಾಜ್ಯಗಳಂತೆ ಕರ್ನಾಟಕಕ್ಕೂ ಒಂದು ಸ್ವಾಭಿಮಾನಿ ಪ್ರಾದೇಶಿಕ ರಾಜಕೀಯ ಪಕ್ಷ ಸಿಕ್ಕಂತೆ ಆಗುತ್ತಿತ್ತು. ಈಗ ಕೇವಲ ಅಡ್ಡಗೋಡೆ ಮೇಲೆ ಕುಳಿತು ಆಟವಾಡುವ ನಿರೀಕ್ಷೆಯನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷವಾಗಿ ಅದು ಮಾರ್ಪಟ್ಟಿದೆ. ಅದರ ಆಚೆ ಅದು ಬೆಳೆಯುವಂತೆ ಕಾಣುವುದಿಲ್ಲ.

ವೆಂಕಟೇಶ ಮಾಚಕನೂರ, ಧಾರವಾಡ

***

ಎಲ್ಲ ವಾಹನಗಳಿಗೂ ಇರಲಿ ವೇಗಮಿತಿ

ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ದುರಂತದಲ್ಲಿ ತಾಯಿ, ಮಗಳು ತಮ್ಮ ಕಾರಿನೊಳಗೇ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. ರಾಜಧಾನಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಂಭವಿಸುತ್ತಿರುವ ಇಂಥ ಎರಡನೇ ದುರಂತ ಇದು. ಮೆಟ್ರೊ ಕಾಮಗಾರಿಯ ಪಿಲ್ಲರ್ ಕೆಳಗೆ ಸಿಲುಕಿ ದಾವಣಗೆರೆ ಮೂಲದ ತಾಯಿ, ಮಗು ಮರಣ ಹೊಂದಿದ್ದರು. ಇಷ್ಟೆಲ್ಲಾ ಆದರೂ ಟ್ರಾಫಿಕ್ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳೇನೂ ಕಂಡುಬಂದಿಲ್ಲ. ನೂರಾರು ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಹಾಕುತ್ತಾರೆಯೇ ವಿನಾ ನಗರವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ವೇಗಮಿತಿಯನ್ನು ಕಡಿಮೆ ಮಾಡಲು ಯಾರೂ ಕ್ರಮ ಕೈಗೊಂಡಿಲ್ಲ. ಯಾವುದೇ ರಸ್ತೆ ಇರಲಿ, ಯಾವುದೇ ವಾಹನವಿರಲಿ ವೇಗಮಿತಿ ಗಂಟೆಗೆ ಇಂತಿಷ್ಟು ಕಿ.ಮೀ. ಮೀರಕೂಡದೆಂಬ ಕಾನೂನನ್ನು ಜಾರಿಗೊಳಿಸಬೇಕಾಗಿದೆ.

ಒಂದು ಕೋಟಿಗೂ ಅಧಿಕ ಜನಸಂಖ್ಯೆಯಿರುವ ಬೆಂಗಳೂರಿನಂಥ ನಗರದಲ್ಲಿ, ಒಂದೊಮ್ಮೆ ಖಾಲಿಯಿರುವ ರಸ್ತೆಯಲ್ಲಿ ಸಹ ವೇಗದಿಂದ ಚಲಿಸುವ ವಾಹನಗಳಿಂದ ಕಾಕತಾಳೀಯವಾಗಿ ಅಪಘಾತ ಸಂಭವಿಸುವ ಸಾಧ್ಯತೆ
ಇರುತ್ತದೆ. ಬೃಹದಾಕಾರದ ಜೆ.ಸಿ.ಬಿ. ಯಂತ್ರಗಳು, ಸಿಮೆಂಟ್ ಮಿಕ್ಸರ್‌ಗಳು, ಟ್ರ್ಯಾಕ್ಟರ್‌ಗಳು, ಕಸದ ಲಾರಿಗಳು, ಕಸದ ರಿಕ್ಷಾಗಳು ಎಗ್ಗಿಲ್ಲದೆ ಅತ್ಯಂತ ವೇಗವಾಗಿ ನಗರಮಿತಿಯಲ್ಲಿ ಚಲಿಸುವುದನ್ನು ನೋಡುತ್ತಿರುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.

ಎ.ವಿ.ಮುರಳೀಧರ ಆಚಾರ್ಯ, ಬೆಂಗಳೂರು

***

ಬಸ್‌ ಕಾರ್ಯಾಚರಣೆಯ ಮಾಹಿತಿ ಇರಲಿ

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳು ಮತ್ತು ಖಾಸಗಿ ವಲಯದ ಬಸ್ಸುಗಳಲ್ಲಿ ಬಸ್ಸಿನ ಸಂಖ್ಯೆ ನಮೂದಿಸ
ಲಾಗಿರುತ್ತದೆ. ಸಾರಿಗೆ ನಿಗಮಗಳ ಕೆಲವು ಬಸ್ಸುಗಳಲ್ಲಿ ಯಾವ ಡಿಪೊಗೆ ಸಂಬಂಧಿಸಿದ್ದು ಎಂಬ ಮಾಹಿತಿಯೂ ಇರುತ್ತದೆ. ಆದರೆ, ಈ ಬಸ್ಸುಗಳು ಯಾವ ವರ್ಷ ಪ್ರಯಾಣಕ್ಕಾಗಿ ರಸ್ತೆಗೆ ಇಳಿದಿವೆ ಎಂಬುದು ಮಾತ್ರ ನಮೂದಾಗಿರುವು
ದಿಲ್ಲ. ಈಗ ದಿನಂಪ್ರತಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ, ಈ ಬಸ್ಸುಗಳು ಹಳೆಯ
ವಾಗಿರುವುದೂ ಸೇರಿದೆ. ಹೀಗಾಗಿ, ಜನರಿಗೆ ಇಂತಹದ್ದೊಂದು ಮಾಹಿತಿಯ ಅಗತ್ಯ ಇರುತ್ತದೆ.

ಎಲ್ಲ ಬಸ್ಸುಗಳಲ್ಲೂ ಅವು ಕಾರ್ಯಾಚರಣೆಗೆ ಇಳಿದ ದಿನಾಂಕ, ಎಲ್ಲಿಯವರೆಗೆ ಬಸ್ಸು ಸಂಚಾರಕ್ಕೆ ಯೋಗ್ಯವಾಗಿದೆ ಎಂಬುದನ್ನು ಕಡ್ಡಾಯವಾಗಿ ಹಿಂಬದಿಯಲ್ಲಿ ನಮೂದಿಸುವಂತೆ ನೋಡಿಕೊಳ್ಳಬೇಕು. ಆಗ ಆ ಬಸ್ಸಿನಲ್ಲಿ ತಾವು ಪ್ರಯಾಣಿಸಬಹುದೇ ಬೇಡವೇ ಎಂಬುದನ್ನು ನಿರ್ಧರಿಸಲು ಪ್ರಯಾಣಿಕರಿಗೆ ಸಾಧ್ಯವಾಗುತ್ತದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಇಂತಹದ್ದೊಂದು ಉಪಕ್ರಮ ಅಗತ್ಯ.

ಮಾನ್ವಿ, ಬಳ್ಳಾರಿ

***

ಅದೃಶ್ಯ ಮತದಾರರ ನಿರ್ಲಕ್ಷ್ಯ ಸಲ್ಲದು

ಚುನಾವಣೆಗೆ ಮೊದಲು ಎಲ್ಲ ಪಕ್ಷಗಳು ‘ಉಚಿತ’ ಕೊಡುಗೆಗಳನ್ನು ನೀಡುವ ಭರವಸೆ ನೀಡಿ ಮತ ಸೆಳೆಯಲು ಮುಂದಾಗುತ್ತವೆ. ಆಡಳಿತ ಪಕ್ಷವೂ ತನ್ನ ಇತಿಮಿತಿಯಲ್ಲಿ ಜಾತಿವಾರು ಮಠವಾರು ನಿಗಮಗಳಿಗೆ ನಿಂತಲ್ಲಿಯೇ ಕೋಟಿ ಕೋಟಿ ಅನುದಾನ ಪ್ರಕಟಿಸುತ್ತದೆ. ಆದರೆ ಕನ್ನಡ ನಾಡಿನ ಸಂಸ್ಕೃತಿಗೆ ಮತ್ತು ಜ್ಞಾನಕ್ಕೆ ದೇಗುಲವಾದ ಗ್ರಂಥಾಲಯ ಇಲಾಖೆಯನ್ನು, ಲೇಖಕರು, ಪ್ರಕಾಶಕರು ಮತ್ತು ಲಕ್ಷ ಲಕ್ಷ ಪುಸ್ತಕಪ್ರೇಮಿಗಳನ್ನು ಕಡೆಗಣಿಸುವುದು ದಿಗ್ಭ್ರಮೆ ಮೂಡಿಸುತ್ತದೆ. ಕಳೆದ ವರ್ಷ ಪರಿಶಿಷ್ಟ ಜಾತಿ ಯೋಜನೆಯಲ್ಲಿ ಪುಸ್ತಕ ಕೊಳ್ಳಲು ನೀಡಿದ ಅನುದಾನ ಕೇವಲ ಒಂದು ಕೋಟಿ! ಏಕಗವಾಕ್ಷಿ ಅಡಿ ಬಿಡುಗಡೆ ಮಾಡುವ ಹಣ ಕೇವಲ ಕೆಲವು ಕೋಟಿ. ಇಲ್ಲಿ ಇರುವುದು ಹಣದ ಅಭಾವಕ್ಕಿಂತ ಹೆಚ್ಚಾಗಿ ಮುಂದಾಲೋಚನೆಯ ಅಭಾವ. ಇದು ಒಂದು ಮತವನ್ನೂ ಗಳಿಸಲಾರದು ಎನ್ನುವ ಭ್ರಮೆ ಇರಬಹುದೇ?

ಇದೇ ತಪ್ಪು ಲೆಕ್ಕಾಚಾರ. ಇಲ್ಲಿಯ ಫಲಾನುಭವಿಗಳು ಅದೃಶ್ಯ ಮತದಾರರು. ಜಾತಿ ಧರ್ಮ ಮೀರಿದ ಓದಿನ ಸಂಸ್ಕೃತಿಯ ಹರಿಕಾರರು. ಇವರು ಚಲಾಯಿಸುವ ಮತಗಳೇ ಸೋಲು, ಗೆಲುವಿನ ತಕ್ಕಡಿ. ಇವರೇ ಹೊಸ ಪುಸ್ತಕ ಗಳನ್ನು ಓದಿ ಒಲಿದು, ನೀಡಿದ ಪಕ್ಷವನ್ನು ಮೆಚ್ಚುವವರು. ಇಲ್ಲಿ ಕೇವಲ ಸ್ವಲ್ಪ ನೀಡಿ ಬಹಳಷ್ಟನ್ನು ಪಡೆಯುವುದು ಸಾಧ್ಯ

.⇒ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT