ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಮಾಧ್ಯಮ: ದ್ವಂದ್ವ ನೀತಿ ಸರಿಯೇ?

Last Updated 19 ಮೇ 2019, 17:17 IST
ಅಕ್ಷರ ಗಾತ್ರ

‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ: ಕೊನೆಗೂ ಹೊರಬಿದ್ದ ಆದೇಶ’ (ಪ್ರ.ವಾ., ಮೇ 19) ಸುದ್ದಿ ಅನಿರೀಕ್ಷಿತವೇನಲ್ಲ. ಸರ್ಕಾರದ ಈ ಅವೈಜ್ಞಾನಿಕ ಕ್ರಮಕ್ಕೆ ಪ್ರತಿಭಟಿಸುತ್ತಿರುವ ಅನೇಕ ಪ್ರಜ್ಞಾವಂತರು ತಮ್ಮ ಪ್ರತಿಭಟನೆಯನ್ನು ಈಗಲೂ ಮುಂದುವರಿಸುವರೆಂಬುದು ನಮ್ಮ ನಂಬಿಕೆ. ಆದೇಶ ಹೊರಬಂದಾಕ್ಷಣ ಚರ್ಚೆ ಇತ್ಯರ್ಥವಾಗಿದೆ ಎಂದಾಗುವುದಿಲ್ಲ.

ಹೊಸ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಸಾರ್ವಜನಿಕರ ಹಣವನ್ನು ವ್ಯಯ ಮಾಡುತ್ತಿರುವುದರಿಂದ ನಾವು ಸರ್ಕಾರದಿಂದ ಕೆಲವು ಸ್ಪಷ್ಟನೆಗಳನ್ನು ನಿರೀಕ್ಷಿಸುತ್ತೇವೆ. 2009ರಲ್ಲಿ ಪಾಕಿಸ್ತಾನದ ಪಂಜಾಬ್ ಸರ್ಕಾರವು ಒಂದರಿಂದ ಹನ್ನೆರಡನೇ ತರಗತಿಗಳವರೆಗೆ ಮಾತೃಭಾಷೆಗೆ ಬದಲಾಗಿ ಇಂಗ್ಲಿಷ್‍ ಅನ್ನು ಕಲಿಕಾ ಮಾಧ್ಯಮವಾಗಿ ಅಳವಡಿಸಿಕೊಂಡಿತು. 2014ರಲ್ಲಿ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯು ಇದರ ಪರಿಣಾಮವನ್ನು ಅಧ್ಯಯನ ಮಾಡಿ, ಹೀಗೆ ಪಲ್ಲಟಗೊಂಡಿದ್ದರಿಂದ ಉಂಟಾದ ಶೈಕ್ಷಣಿಕ ದುಷ್ಪರಿಣಾಮಗಳನ್ನು ಅಂಕಿಅಂಶಗಳೊಂದಿಗೆ ವರದಿ ಮಾಡಿ, ಇದೊಂದು ನಿರರ್ಥಕ ಪ್ರಯೋಗ ಎಂದು ತಿಳಿಸಿದೆ.

ಕರ್ನಾಟಕದ ಪರಿಸ್ಥಿತಿಯೂ ಬೇರೆಯೇನಲ್ಲ. ಎಂದ ಮೇಲೆ ಸರ್ಕಾರದ ಈ ಪ್ರಯೋಗದ ಔಚಿತ್ಯವೇನು? ಪೂರ್ವಭಾವಿಯಾಗಿ ಯಾವ ಕ್ಷೇತ್ರಾಧ್ಯಯನವನ್ನೂ ಮಾಡದೆ, ಕೆಲವು ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡಿರುವುದಾಗಿ ಹೇಳುತ್ತ ಸಾರ್ವಜನಿಕರ ಹಣವನ್ನು ವ್ಯಯ ಮಾಡುವುದು ಅನುಚಿತವಲ್ಲವೇ? ‘ದಕ್ಷಿಣ ಭಾರತೀಯ ಇಂಗ್ಲಿಷ್ ಪ್ರಾದೇಶಿಕ ಸಂಸ್ಥೆ’ ಮಾತೃಭಾಷಾ ಮಾಧ್ಯಮವನ್ನೇ ಶಿಫಾರಸು ಮಾಡಿರುವುದನ್ನು ಏಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ? ನಮ್ಮ ಅಕಾಡೆಮಿಗಳೂ ಪ್ರಾದೇಶಿಕ ಭಾಷೆಗಳಲ್ಲೇ ಶಿಕ್ಷಣ ನೀಡಬೇಕೆಂದು ಹೇಳುತ್ತಿವೆ. ಇದೂ ಸಾಲದಾದರೆ ಬ್ರಿಟಿಷ್ ಕೌನ್ಸಿಲ್‍ನಂತಹ ಸಂಸ್ಥೆಯಿಂದ ಅಧ್ಯಯನ ಮಾಡಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಹಲವು ವರ್ಷಗಳಿಂದ ಸರ್ಕಾರವು ಖಾಸಗಿ ಶಾಲೆಗಳ ಮಾಧ್ಯಮ ನೀತಿಯ ವಿರುದ್ಧ ನ್ಯಾಯಾಲಯಗಳಲ್ಲಿ ವಾದ ಮಂಡಿಸುತ್ತಾ ಬಂದಿದೆ. ಈವರೆಗೆ ವಿರೋಧಿಸಿದ ನೀತಿಯನ್ನೇ ಈಗ ತಾನೂ ಅಳವಡಿಸಿಕೊಳ್ಳುವುದಾದರೆ ಈ ಪಲ್ಲಟವನ್ನು ಏನೆಂದು ಗ್ರಹಿಸಬೇಕು?

ಜಿ.ಎಸ್.ಜಯದೇವ, ಎಚ್.ಎನ್.ಮುರಳೀಧರ,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT