ಮಂಗಳವಾರ, ಜನವರಿ 18, 2022
27 °C

ವಾಚಕರವಾಣಿ: ಕುಲಾಂತರಿ ಪ್ರವೇಶಕ್ಕೆ ಅನುಮತಿ ಕುರಿತೂ ಚರ್ಚೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ವಿಸ್ತೃತ ಚರ್ಚೆ ನಡೆಯಲಿ’ ಎಂದು ಆಗ್ರಹಿಸುವ ಸಂಪಾದಕೀಯ ಹಾಗೂ ‘ರಾಷ್ಟ್ರೀಯ ಭದ್ರತೆ ಮತ್ತು ಪರಿಸರ ಸಂರಕ್ಷಣೆ’ ಎಂಬ ಮುಖ್ಯ ಲೇಖನ (ಪ್ರ.ವಾ., ಜ. 11) ಎರಡೂ ಒಂದೇ ಧಾಟಿಯಲ್ಲಿವೆ. ಪಶ್ಚಿಮ ಘಟ್ಟದಲ್ಲಿ ಆಧುನಿಕತೆ, ಕೃಷಿ, ಹಳ್ಳಿಗಾಡುಗಳ ಅಭಿವೃದ್ಧಿಯೆಲ್ಲಕ್ಕೂ ಎಲ್ಲಿ ಮಿತಿ ಹಾಕಬೇಕೆಂಬುದರ ಬಗ್ಗೆ ಬರೆದ ಮಾಧವ ಗಾಡ್ಗೀಳರ ವರದಿಯಾಗಲೀ ಕಸ್ತೂರಿರಂಗನ್ ವರದಿಯಾಗಲೀ ವರದಿಯ ಹೆಸರುಗಳಷ್ಟೇ ಪರಿಚಯವಿದ್ದು, ಒಳಗೇನಿದೆ ಎಂಬುದು ಜನಸಾಮಾನ್ಯರಿಗ್ಯಾರಿಗೂ ಗೊತ್ತಿಲ್ಲ. ರಾಜಕಾರಣಿಗಳು, ಅಧಿಕಾರಿಗಳು ಖಂಡಿತ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಜನರೊಂದಿಗೆ ಚರ್ಚೆ ಮಾಡದೇ ವರದಿ ಜಾರಿ ಬೇಡ ಎಂದು ಒಂದೊಂದು ಪಕ್ಷ ಅಧಿಕಾರಕ್ಕೆ ಬಂದಾಗಲೂ ತೀರ್ಮಾನ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡುವ ವಂಚನೆ. ಸರ್ಕಾರವು ಮೊದಲು ಆ ವರದಿಯನ್ನು ಕನ್ನಡೀಕರಣಗೊಳಿಸಿ, ಜನಸಾಮಾನ್ಯರಿಗೆ ಅರ್ಥವಾಗುವಂತೆ ಪ್ರಕಟಿಸಿ ಪ್ರತಿಯೊಂದು ಪಂಚಾಯಿತಿಗೆ, ಹಳ್ಳಿ ಹಳ್ಳಿಗೆ ತಲುಪಿಸಲಿ. ಜನಾಭಿಪ್ರಾಯ ಕೇಳಲಿ.

ಇಲ್ಲಿ ಪಶ್ಚಿಮ ಘಟ್ಟ, ಅಲ್ಲಿ ಹಿಮಾಲಯ ಪರ್ವತ ಶ್ರೇಣಿ. ಇಲ್ಲಿ ಅಭಿವೃದ್ಧಿ ಹೇಗೆ ಆಗಬೇಕು, ಆಗಬಾರದು ಎಂದು ಹೇಳುವ ವರದಿಯಾದರೆ, ಅಲ್ಲಿ ರಸ್ತೆ ಅಗಲೀಕರಣದ ಕುರಿತು ಸುಪ್ರೀಂ ಕೋರ್ಟಿನ ಆದೇಶ. ಒಂದೇ ವ್ಯತ್ಯಾಸವೆಂದರೆ, ಪಕ್ಕದ ಚೀನಾ ದೇಶದ ಆಕ್ರಮಣವನ್ನು ತಡೆಯಲು ಯುದ್ಧಾಸ್ತ್ರಗಳನ್ನು ಸಾಗಿಸಲು ರಸ್ತೆ ಅಗಲೀಕರಣ ಬೇಕೇಬೇಕು ಎಂಬ ಸರ್ಕಾರದ ಒತ್ತಡದಿಂದ ಸುಪ್ರೀಂ ಕೋರ್ಟು ತನ್ನ ಆದೇಶವನ್ನೇ ಬದಲು ಮಾಡುವ ಪ್ರಮೇಯ ಬಂತು. ಇವೆರಡು ವಿಚಾರಗಳಲ್ಲದೇ ಆಹಾರ ವಸ್ತುಗಳಲ್ಲಿ ಕುಲಾಂತರಿಗಳ ಪ್ರವೇಶಕ್ಕೆ ಅನುಮತಿ ನೀಡುವ ವಿಚಾರವೂ ಜನರ ಮಧ್ಯೆ ವಿಸ್ತೃತವಾಗಿ ಚರ್ಚೆಯಾಗಲೇಬೇಕು. ಮೊದಲು ಉದ್ದಿಮೆಪತಿಗಳ ಅಭಿಪ್ರಾಯ ಕೇಳಿ, ಸಲಹೆ ಪಡೆದು ಈಗ ಜನಾಭಿಪ್ರಾಯವನ್ನೂ ಕೇಳಿ ಸರ್ಕಾರವು ಅಭಿಪ್ರಾಯ ತಿಳಿಸಲು ನಾಡಿದ್ದು 15ರವರೆಗೆ ಮಾತ್ರ ಗಡುವು ನೀಡಿದೆ. ಜನಸಾಮಾನ್ಯರಿಗೆ ಇದರ ಮಾಹಿತಿಯನ್ನೂ ನೀಡಿಲ್ಲ. ಜನರಿಗೆ ಸರಿಯಾದ ಮಾಹಿತಿ ನೀಡುವುದು, ಜನಾಭಿಪ್ರಾಯ ಆಲಿಸುವುದು, ಅದಕ್ಕೆ ಮನ್ನಣೆ ಕೊಡುವುದು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಕೆಲಸ. ಹಾಗೆಯೇ ದೇಶದ ನದಿ, ಪರ್ವತಗಳ ರಕ್ಷಣೆಯ ಬಗ್ಗೆ ಧ್ವನಿ ಎತ್ತುವುದು ದೇಶ ರಕ್ಷಣೆಯಷ್ಟೇ ಮಹತ್ವದ ಕಾರ್ಯ. ಆಹಾರದಲ್ಲಿ ಕುಲಾಂತರಿಗಳ ಪ್ರವೇಶವಾಗದಂತೆ ತಡೆಯಲು ಜನಾಭಿಪ್ರಾಯ ಕೂಡ ದೇಶದ ಜನರ ರಕ್ಷಣೆಯ ಮಹತ್ವದ ಕಾರ್ಯ. ದೇಶವೆಂದರೆ ದೇಶದೊಳಗಿನ ಜನರೂ ತಾನೇ?

- ಶಾರದಾ ಗೋಪಾಲ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.