ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವು– ಬೆಲ್ಲದಂತಾದ ಬಜೆಟ್‌ ಅಧಿವೇಶನ!

ಅಕ್ಷರ ಗಾತ್ರ

ಇತ್ತೀಚೆಗೆ ಜರುಗಿದ ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನದಲ್ಲಿ ಅನೇಕ ವಿಷಯಗಳು ಚರ್ಚೆಗೆ ಬಂದವು. ಅವುಗಳಲ್ಲಿ ಕೆಲವು ಅರ್ಥಪೂರ್ಣವಾಗಿದ್ದವು. ಆದರೆ ವಿಧಾನಪರಿಷತ್‌ನಲ್ಲಿಪ್ರಮುಖವಾಗಿ ಬೆಂಗಳೂರಿಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ಚರ್ಚೆ ಆಗುತ್ತಿರುವ ವಿಷಯಗಳೇ ಮತ್ತೆ ಚರ್ಚೆ ಆದದ್ದು ಸೋಜಿಗದಂತೆ ಕಾಣಿಸಿತು. ಅದೇ ಬೆಂಗಳೂರು ರಸ್ತೆ, ಮೇಲುಸೇತುವೆಗಳು, ಅನಧಿಕೃತ ಬಡಾವಣೆಗಳು... ಹೀಗೆ ಪಟ್ಟಿ ಮುಂದುವರಿಯುತ್ತದೆ. ಇನ್ನು ಶಿಕ್ಷಕರ ಮತಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇರುವ ಸದಸ್ಯರು, ಶಿಕ್ಷಕರ ಸಾರ್ವಕಾಲಿಕ ಮತ್ತು ಎಂದೆಂದಿಗೂ ಬಗೆಹರಿಯದ ಅದೇ ಸಮಸ್ಯೆಗಳಲ್ಲಿ ತಲ್ಲೀನರಾದರು. ಮಸೂದೆಗಳ ಬಗೆಗಿನ ಚರ್ಚೆಯೂ ಇದಕ್ಕೆ ಹೊರತಾಗಿರಲಿಲ್ಲ! ಅಲ್ಲಿಗೆ ಸದನದ ಕಲಾಪ ಮುಕ್ತಾಯ. ಪೂರ್ವ ತಯಾರಿಯೊಂದಿಗೆ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ ಎಂಬ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ಇನ್ನು ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಹೊಸದಾಗಿ ಆಯ್ಕೆಯಾಗಿರುವ ಕೆಲ ಸದಸ್ಯರು ಅಪ್ಪಿತಪ್ಪಿಯೂ ತುಟಿಪಿಟಿಕ್ ಎನ್ನಲಿಲ್ಲ. ಸಭಾಪತಿ ಚರ್ಚೆಗೆ ಆಹ್ವಾನಿಸಿದರೂ ತಮ್ಮ ಆಸನ ಬಿಟ್ಟು ಏಳಲಿಲ್ಲ.

ಕೆಲವರು ತಾವು ಪ್ರತಿನಿಧಿಸುವ ಕ್ಷೇತ್ರಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು, ಸದನಕ್ಕೆ ಮುಖ್ಯಮಂತ್ರಿ ಆಗಮಿಸಿದಾಗ ಖಾಸಗಿ ಬೇಡಿಕೆಗಳ ಪಟ್ಟಿಯೊಂದಿಗೆ ಅವರ ಕುರ್ಚಿಯ ಬಳಿ ಸಾಲಾಗಿ ನಿಲ್ಲುವುದು, ಶೂನ್ಯ ವೇಳೆಯಲ್ಲಿ ಇರುವ ಅವಕಾಶ ಬಳಸಿಕೊಳ್ಳದೆ ಪಕ್ಕದ ಆಸನದ ಸದಸ್ಯರೊಂದಿಗೆ ಹರಟೆ ಹೊಡೆಯುವುದು, ಸದನ ಸಮಾವೇಶಗೊಂಡಾಗ ಇರಬೇಕಾದ ಶಿಸ್ತು ಪಾಲಿಸದಿರುವುದು, ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕೆಲ ಸದಸ್ಯರು ಪೂರ್ವ ತಯಾರಿ ಮಾಡಿಕೊಂಡು ಸದನದಲ್ಲಿ ಚರ್ಚೆಗೆ ಸಿದ್ಧರಾಗಿ ಬಂದಾಗ, ಅವರಿಗೆ ಚರ್ಚೆಗೆ ಅವಕಾಶವೇ ಸಿಗದೆ ನಿರಾಸೆ ಹೊಂದುವುದು ಸಹಜ ಎನ್ನುವಂತಾಗಿದೆ. ಇಂತಹ ಪರಿಸ್ಥಿತಿಗೆ ಹೊರತಾಗದ ಈ ಬಾರಿಯ ಅಧಿವೇಶನವೂ ಅತ್ತ ಪೂರ್ಣ ಸಿಹಿಯೂ ಅಲ್ಲದ ಇತ್ತ ಪೂರ್ಣ ಕಹಿಯೂ ಅಲ್ಲದ ಯುಗಾದಿ ಹಬ್ಬದ ಬೇವು ಬೆಲ್ಲದಂತೆ ಮುಕ್ತಾಯಗೊಂಡಿತು!

– ಸಿರಿಗೇರಿ ಯರಿಸ್ವಾಮಿ,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT