ಭಾನುವಾರ, ಆಗಸ್ಟ್ 25, 2019
20 °C

ಹೆಬ್ಬೆಟ್ಟು ಮತ್ತು ಪಡಿತರ ಪಡೆಯುವ ಪಾಡು

Published:
Updated:

ಇತ್ತೀಚೆಗೆ ಹೊಲದಲ್ಲಿ ಕೆಲಸ ಮಾಡುವಾಗ ನಮ್ಮ ತಂದೆ ಹೆಬ್ಬೆರಳಿಗೆ ಬಟ್ಟೆ ಸುತ್ತಿಕೊಂಡಿದ್ದರು. ಏನಾದರೂ ಗಾಯವಿದ್ದಿರಬಹುದು ಎಂದು ವಿಚಾರಿಸಿದೆ. ‘ಗಾಯವೇನಿಲ್ಲ, ಹೊಲದಲ್ಲಿ ಕೆಲಸ ಮಾಡುವಾಗ ಬೆರಳಿಗೆ ಏನಾದರೂ ಸಣ್ಣ ಪುಟ್ಟ ಗಾಯವಾದರೆ ಅಥವಾ ವಿಪರೀತ ಮಣ್ಣಿನ ಕೆಲಸದಿಂದ ಬೆರಳ ರೇಖೆಗಳು ಸ್ವಲ್ಪ ಮಸುಕಾದರೂ ಆ ‘ಹೆಬ್ಬೆಟ್ಟು ಮಿಷಿನ್ನು’ ಬೆರಳನ್ನು ಗುರುತು ಹಿಡಿಯುವುದೇ ಇಲ್ಲ.

ಆಗ ರೇಷನ್ನು ಸಿಗುವುದಿಲ್ಲ. ವಯಸ್ಸಾದವರಿಗಂತೂ ಇದರಿಂದ ವಿಪರೀತ ಸಮಸ್ಯೆಯಾಗಿದೆ. ಕೆಲವು ಮನೆಗಳಲ್ಲಿ ಮನೆಯವರೆಲ್ಲಾ ಬಂದು ಬೆರಳು ಇಟ್ಟರೂ ಅದು ಒಮ್ಮೊಮ್ಮೆ ದೃಢೀಕರಿಸದು. ಹಾಗಾಗಿ ಯಾವಾ
ಗಲೂ ಒಂದು ಬೆರಳಿಗೆ ಹೀಗೆ ಬಟ್ಟೆ ಸುತ್ತಿಕೊಂಡೇ ಕೆಲಸ ಮಾಡುತ್ತೇನೆ. ಹೊರಗೆ ಕೆಲಸ ಮಾಡು
ವಾಗ ಎಲ್ಲರೂ ಹಾಗೆಯೇ ಮಾಡುತ್ತಿದ್ದಾರೆ’ ಎಂದರು.

ಆಹಾರ ಪದಾರ್ಥ ವಿತರಣೆಯಲ್ಲಿ ಉಂಟಾಗಬಹುದಾದ ದುರುಪಯೋಗ ತಡೆಗಟ್ಟಲು ತಂದಿರುವ ಈ ಆಧುನಿಕ ವ್ಯವಸ್ಥೆ ನಿಜವಾಗಿಯೂ ಇವುಗಳನ್ನು ಪಡೆಯಲು ಅರ್ಹವಾದ ಕುಟುಂಬಗಳನ್ನು ಅಭದ್ರತೆಯತ್ತ ದೂಡುತ್ತಿದೆ. ರೇಷನ್‌ ಪಡೆಯುವ ಅನಿವಾರ್ಯದಿಂದ, ದುಡಿಯುವ ವರ್ಗ ಯಾವಾಗಲೂ ತಮ್ಮ ಕೈ ಬೆರಳುಗಳ ಸಂರಕ್ಷಣೆಯಲ್ಲಿಯೇ ತೊಡಗಿರುವುದು ಸಾಧ್ಯವಿಲ್ಲ. ಬೆರಳಚ್ಚಿನ ಜೊತೆಗೆ ಪರ್ಯಾಯ ವ್ಯವಸ್ಥೆಯೊಂದರ ಅವಶ್ಯಕತೆ ಖಂಡಿತ ಇದೆ. ಸರ್ಕಾರ ಕೊಡುತ್ತಿರುವ ಅನ್ನವು ಅರ್ಹ ಶ್ರಮಿಕ ವರ್ಗಕ್ಕೆ ಸಲೀಸಾಗಿ ತಲುಪುತ್ತಿಲ್ಲ ಎಂದರೆ, ಆ ಯೋಜನೆ ಹೇಗೆ ಸಾರ್ಥಕತೆ ಪಡೆದೀತು?

ಸಿದ್ಧರಾಮು ಕೆ.ಎಸ್., ಗುಬ್ಬಿ

Post Comments (+)