ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನತದೃಷ್ಟ ಮಹಿಳೆಯರಿಗೆ ಆಸರೆಯಾಗಿ ನಿಲ್ಲಲಿ

Last Updated 19 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

‘ದಂಧೆ ವರದಿ’ಗೆ (ಪ್ರ.ವಾ., ಡಿ. 18) ಪ್ರತಿಕ್ರಿಯೆ. ಮದುವೆಯಾದ ಗಂಡನು ಮಗುವೊಂದನ್ನು ಕೊಟ್ಟು ಓಡಿಹೋದ. ಮಲತಾಯಿಯು ತುತ್ತು ಅನ್ನ ಹಾಕಲು ಸಿದ್ಧಳಿಲ್ಲ. ಮಗು ಹಸಿವಿನಿಂದ ಚೀತ್ಕಾರ ಮಾಡುತ್ತಿದೆ. ಆಗ ಬರೀ 20 ರೂಪಾಯಿಗಾಗಿ ಶರೀರ ಮಾರಿಕೊಂಡವಳು, ನಂತರದ ದಿನಗಳಲ್ಲಿ ಬದುಕುವ ಪರ್ಯಾಯ ಮಾರ್ಗ ಕಾಣದೆ ಶಾಶ್ವತವಾಗಿ ‘ದಂಧೆ’ವಾಲಿಯಾಗುತ್ತಾಳೆ.

ಇದು, ಸಿನಿಮಾದ ಕಥೆಯಲ್ಲ. ಕಪೋಲಕಲ್ಪಿತವೂ ಅಲ್ಲ. ಕರ್ನಾಟಕ ರಾಜ್ಯ ಲೈಂಗಿಕ ವೃತ್ತಿನಿರತರ ಸ್ಥಿತಿಗತಿಯ ಅಧ್ಯಯನ ಮಾಡುವಾಗ ಬೆಳಕಿಗೆ ಬಂದ ಮನ ಕಲಕುವ ವಾಸ್ತವ. ಇಂಥ ಸಾವಿರಾರು ಹೃದಯವಿದ್ರಾವಕ ಸುಡು ಸತ್ಯಗಳನ್ನು ಆ ಮಹಿಳೆಯರು ಸಮೀಕ್ಷೆಯ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದಿಟ್ಟುಕೊಂಡು ಹೇಳಿದ್ದಾರೆ. ಕಾರಣ, ತಮ್ಮನ್ನು ಈ ಸ್ಥಿತಿಗೆ ತಂದ ಬಡತನವೆಂಬ ಪೆಡಂಭೂತದಿಂದ ಕೊಂಚವಾದರೂ ಬಿಡುಗಡೆ ಸಿಕ್ಕೀತು ಎಂಬ ಆಶಾಕಿರಣವೊಂದನ್ನು ಅವರಲ್ಲಿ ಮೂಡಿಸಲಾಗಿತ್ತು. ಅವರ ಈ ಸ್ಥಿತಿಗೆ ಬಡತನವು ಏಕೈಕ ಕಾರಣವಲ್ಲವಾದರೂ ಬಡತನವೇ ಪ್ರಧಾನ ಅಡ್ಡಿ ಎಂಬುದರಲ್ಲಿ ಎರಡು ಮಾತಿಲ್ಲ.

ತಮ್ಮ ಅಸದಳ ನೋವುಗಳಿಗೆ, ಆರ್ಥಿಕ ಸಂಕಟಗಳಿಗೆ ಸರ್ಕಾರವೆಂಬ ತಾಯಿ ಒಂದಷ್ಟು ಆಸರೆಯಾಗಿ ನಿಂತಾಳು ಎಂಬ ಕಾರಣಕ್ಕಾಗಿ ಅವರು ಅಂಜುತ್ತಲೇ ತಮ್ಮದೆಲ್ಲವನ್ನೂ ಬಸಿದುಕೊಂಡಿದ್ದರು. ಅಧ್ಯಯನ ಸಮಿತಿಯ ಸದಸ್ಯರಾದ ನಾವು ಹನಿಗಣ್ಣಾಗುತ್ತಲೇ ಅವುಗಳನ್ನು ಕೇಳಿಸಿಕೊಳ್ಳುವ ಧೈರ್ಯ ಮಾಡಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಬದುಕಿನಲ್ಲಿ ಒಂದು ಪುಟ್ಟ ಪರಿಹಾರವನ್ನಾದರೂ ದೊರಕಿಸಲು ಸಾಧ್ಯವಾದೀತು ಎಂಬ ಉಮೇದಿನಿಂದ ಮತ್ತು ಅವರಿಗಾಗಿ ಏನಾದರೂ ಮಾಡಲೇಬೇಕು ಎಂಬ ಜಿದ್ದಿನಿಂದ ಪಾಲ್ಗೊಂಡಿದ್ದೆವು. ನಿಗದಿತ ಸಮಯದಲ್ಲಿಯೇ ಕ್ಲುಪ್ತವಾದ, ವೈಜ್ಞಾನಿಕವಾದ ವರದಿಯೊಂದನ್ನು ‘ದಮನದಿಂದ ವಿಕಾಸದೆಡೆಗೆ’ ಎಂಬ ಶೀರ್ಷಿಕೆ ನೀಡಿ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾಗಿದ್ದ ಜಯಮಾಲಾ ಅವರು ಮುತುವರ್ಜಿ ವಹಿಸಿ ಶ್ರಮಿಸಿದ್ದರು.

ಹಲವು ಅವಘಡಗಳನ್ನು ಎದುರಿಸಿಯೂ ಕೆಲಸ ಮಾಡಿದ್ದರು. ಈ ವರದಿಯಲ್ಲಿ ತಕ್ಷಣದ ಮತ್ತು ದೂರಗಾಮಿ ಪರಿಹಾರೋಪಾಯಗಳನ್ನು ಸೂಚಿಸಲಾಗಿದೆ. ವರದಿ ಸಲ್ಲಿಸುವಷ್ಟಕ್ಕೆ ನಮ್ಮ ಕೆಲಸ ಮುಗಿಯಬಾರದು. ಅದರ ಶಿಫಾರಸುಗಳ ಅನುಷ್ಠಾನಕ್ಕಾಗಿಯೂ ನಮ್ಮ ಒತ್ತಾಯ ಇರಬೇಕೆಂದು ಆಶಿಸಲಾಗಿತ್ತು. ಅಷ್ಟರಲ್ಲಿ ಚುನಾವಣೆ ಬಂತು. ಹೊಸ ಸರ್ಕಾರ ರಚನೆಯಾಗಿ ಅದರಲ್ಲಿ ಜಯಮಾಲಾ ಅವರೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದಾಗ ಭರವಸೆ ಮೂಡಿತ್ತು. ಈ ಹೊತ್ತಿನಲ್ಲಿ ಮೀನಮೇಷ ಎಣಿಸದೆ ತಮ್ಮ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಅವರು ಆ ನತದೃಷ್ಟ ಮಹಿಳೆಯರಿಗೆ ಆಸರೆಯಾಗಿ ನಿಲ್ಲಬೇಕು.

ಅದರಲ್ಲಿರುವ ತಕ್ಷಣದ ಪರಿಹಾರಗಳನ್ನಾದರೂ ಕೊಡಬೇಕು. ಶಿಫಾರಸು ಮಾಡಿದ ಹಣಕಾಸನ್ನು ಒದಗಿಸಲು ಸಾಧ್ಯವಾಗಬೇಕು. ಈ ದಿಸೆಯಲ್ಲಿ ಸರ್ಕಾರ ಮಹಿಳೆಯರ ಬಗೆಗೆ ಮೊಸಳೆ ಕಣ್ಣೀರು ಸುರಿಸದೇ ನಿಜವಾದ ಕಾಳಜಿ ತೋರಿಸಬೇಕು. ಇಲ್ಲವಾದರೆ ಸರ್ಕಾರ ಆತ್ಮದ್ರೋಹ ಮಾಡಿಕೊಂಡಂತೆಯೇ ಸರಿ. ಈ ಆತ್ಮದ್ರೋಹದಲ್ಲಿ ನಮಗೂ ಪಾಲಿದೆ ಎಂಬ ಸಂಕಟವು ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದವರಲ್ಲಿಯೂ ಮೂಡದೇ ಇರದು. ಅಂಥವರ ಕಣ್ಣೀರು ಗೌರವಿಸಲು ಸಾಧ್ಯವಾಗದಿದ್ದರೆ ಅಧಿಕಾರ, ಅಂತಸ್ತುಗಳ ಅರ್ಥವಾದರೂ ಏನು?

ಡಾ. ಮೀನಾಕ್ಷಿ ಬಾಳಿ,ಕಲಬುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT