ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಪ್ರಕೃತಿ ಭಾಷೆ ನಮಗೆ ಅರ್ಥವಾಗದೇಕೆ?

Last Updated 1 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ನಮ್ಮ ಮನೆ ಎದುರಿಗೆ ಚುರುಮುರಿ ಮೂಟೆ ಹೊತ್ತು, ಮಾರುತ್ತಾ ಒಬ್ಬ ಬರುತ್ತಾನೆ. ಮತ್ತೊಬ್ಬ ಸೈಕಲ್ ಮೇಲೆ ಸೊಪ್ಪು ಹೊತ್ತು ತರುತ್ತಾನೆ. ಇಬ್ಬರ ಹತ್ತಿರವೂ ಇತ್ತೀಚೆಗೆ ನಾನು ಖರೀದಿ ಮಾಡುವಾಗ ಅವರ ಹೆಸರುಗಳನ್ನು ಕೇಳಿದ್ದೆ. ಆಗ ಇಬ್ಬರ ಮುಖಭಾವ, ಪ್ರತಿಕ್ರಿಯೆಗಳು ಒಂದೇ ರೀತಿ ಇದ್ದವು. ಹೆಸರು ಅರ್ಧಂಬರ್ಧ ಕೇಳುವಂತೆ, ಅಸ್ಪಷ್ಟವಾಗಿ ಗೊಣಗಿದ್ದರು. ನಂತರ ಅವರ ಮುಖಗಳಲ್ಲಿ ಪೆಚ್ಚುನಗೆ ಕಂಡಿತ್ತು. ಆ ಹೆಸರುಗಳ ಹಿಂದೆ ಅವರಿಬ್ಬರ ಜಾತಿ, ಮತ, ಹುಟ್ಟು, ಬದುಕು ಎಲ್ಲವೂ ಅಡಗಿವೆ. ಇಬ್ಬರೂ ಮುಸಲ್ಮಾನರು. ಹೆಸರು ಹೇಳಿಕೊಂಡ ನಂತರ, ನನ್ನ ಮುಖವನ್ನು ಬಿಡದ ಹಾಗೆ ನೋಡಿದ್ದರು. ಆ ಕ್ಷಣದಲ್ಲಿ, ನನ್ನ ಮನದಲ್ಲಿ ಏನು ಭಾವನೆ ಬಂದಿರಬಹುದು ಎಂಬುದನ್ನು ಅವರು ತಿಳಿಯಬೇಕಿತ್ತು.

ಎ.ನಾರಾಯಣ ಅವರ ‘ಹಳೆಯ ಕರ್ನಾಟಕವನ್ನೇ ಉಳಿಯಗೊಡಿ, ಸಾಕು’ (ಪ್ರ.ವಾ., ಏ. 1) ಎಂಬ ಲೇಖನವು ನನ್ನ ಕಣ್ಣಲ್ಲಿ ನೀರು ತಂದಿತು. ನಾವು ಎತ್ತ ಹೊರಟಿದ್ದೇವೆ? ಅಕಸ್ಮಾತ್, ಕೆಲವರ ಬಯಕೆಯಂತೆ ರಾಜ್ಯ ಹಾಗೂ ದೇಶವನ್ನು ಸಾರಿಸಿ, ಗುಡಿಸಿ ‘ಸ್ವಚ್ಛ ಭಾರತ’ ನಿರ್ಮಾಣವಾಯಿತು ಅಂತಲೇ ಭಾವಿಸೋಣ. ಆಗ ಈ ದ್ವೇಷದ ಕಿಡಿ ಆರುತ್ತದೆಯೇ? ನಾವೆಲ್ಲರೂ ನಿಜಕ್ಕೂ ಆನಂದಮಯವಾದ ನಾಡಲ್ಲಿ ಬದುಕುತ್ತೇವಾ? ಅಭಿವೃದ್ಧಿ ಕಾಣುತ್ತೇವಾ? ದ್ವೇಷ ಎಂಬುದು ಒಳಗೆ ಉರಿಯುವ ಒಂದು ಜ್ವಾಲಾಮುಖಿಯಂತೆ. ಈ ಭಾವನೆಯನ್ನು ದೇಹ, ಮನಸ್ಸಿನಿಂದ ಕಿತ್ತು ಹಾಕುವುದು ಸುಲಭವಲ್ಲ. ಈಗ ಮುಸ್ಲಿಂ ದ್ವೇಷವಿದ್ದರೆ ಆಗ ಮತ್ತೊಂದು ದ್ವೇಷ ಹುಟ್ಟುಹಾಕಬಲ್ಲೆವು. ಪ್ರಜಾಪ್ರಭುತ್ವ, ಸಮಾನತೆ, ನಮ್ಮ ರಾಷ್ಟ್ರಬದುಕಿನ ರೀತಿ, ಇವು ಈಗ ನಿಜಕ್ಕೂ ಅರ್ಥವಾಗುವ ಭಾಷೆಗಳಾಗಿ ಉಳಿದಿಲ್ಲ.

ನೀವೂ ಉಸಿರಾಡಿ ನಮಗೂ ಉಸಿರಾಡಲು ಬಿಡಿ, ನೀವೂ ಬದುಕಿ, ನಮಗೂ ಬದುಕಲು ಬಿಡಿ ಎಂಬುದು ಪ್ರಾಣಿ, ಪಶು, ಪಕ್ಷಿಗಳ ಬದುಕಿನ ಮೂಲ ಸೂತ್ರ. ಇಂಥ ಸರಳವಾದ ಪ್ರಕೃತಿ ಭಾಷೆಯನ್ನು ಅರ್ಥ
ಮಾಡಿಕೊಳ್ಳಲಾಗದ ಕ್ರೂರತೆಯನ್ನು ಈಗ ಕಾಣುತ್ತಿದ್ದೇವೆ.

- ಶ್ಯಾಮಲ ಗುರುಪ್ರಸಾದ್,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT