ಬುಧವಾರ, ಜೂನ್ 23, 2021
28 °C

ವಾಚಕರ ವಾಣಿ: ಜನ ಸುಮ್ಮನೆ ಯಾಕೆ ಗುಳೆ ಹೋಗುತ್ತಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾನ್ಯ ಜನ ಸುಮ್ಮ ಸುಮ್ಮನೆ ಯಾಕೆ ಗುಳೆ ಹೋಗುತ್ತಾರೆ?– ಪ್ರತೀ ಸರ್ಕಾರವೂ ಈ ಪ್ರಶ್ನೆಯನ್ನು ತುರ್ತಾಗಿ, ಪ್ರಾಮಾಣಿಕವಾಗಿ ಆಂತರ್ಯದಲ್ಲಿ ಕೇಳಿಕೊಳ್ಳಬೇಕಾಗಿದೆ. ಕಳೆದ ವರ್ಷವೂ ಕೊರೊನಾ ಧುತ್ತೆಂದು ಎರಗಿದಾಗ ಇಂಥದ್ದೇ ಪ್ರಶ್ನೆ ಉದ್ಭವಿಸಿತ್ತು. ಗ್ರಾಮಾಂತರ ಪ್ರದೇಶಗಳಿಂದ ಕೆಲಸ ಹುಡುಕಿಕೊಂಡು ಬಂದ ಜನ ತಮ್ಮ ಹೊಟ್ಟೆಪಾಡಿಗಾಗಿ ನಗರಾಂತರ್ಗತ ಜೀವನದ ಕ್ಲಿಷ್ಟಕರ ವಿಷಮ ಸನ್ನಿವೇಶಗಳಿಗೆ ಹೊಂದಿಕೊಂಡು ಬದುಕಿನ ನಿರ್ವಹಣೆ ಮಾಡುತ್ತಾ ಹೇಗೆ ಹೇಗೋ ಮುಂದು ಸಾಗಿದ್ದರು. ಇಂಥ ಪ್ರಶಾಂತವಾದ ಮಾಮೂಲಿನ ಪರಿಸರಕ್ಕೆ ಕಂಡರಿಯದ ಕೇಳರಿಯದ ಸೋಂಕೊಂದು ಧುತ್ತೆಂದು ಬಂದು ಈಗ ತಲ್ಲಣ. ಉಗುಳುವ ಹಾಗಿಲ್ಲ; ನುಂಗುವ ಹಾಗೂ ಇಲ್ಲ.

ಹಳ್ಳಿಗಾಡಿನ ಕಡೆಯಿಂದ ಅಲ್ಪಸ್ವಲ್ಪ ವಿದ್ಯಾವಂತ, ಅವಿದ್ಯಾವಂತ ಜನ ಪಟ್ಟಣಕ್ಕೆ ಬಂದದ್ದೇ ಜಾಸ್ತಿ. ಈ ಬೃಹತ್ ಶಹರಗಳು ತಮ್ಮ ಕಬಂಧ ಬಾಹುಗಳಿಂದ ಬಂಧಿಸಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯಗಳನ್ನೇ ತಕ್ಕಮಟ್ಟಿಗೆ ಸಹಸ್ರ ಸಹಸ್ರ ಜನಕ್ಕೆ ನೀಡಿದ್ದು ಸುಳ್ಳಲ್ಲ. ಅವರವರ ಆಶೋತ್ತರಗಳಿಗೆ ಅನುಗುಣವಾಗಿ ಅಲ್ಲದಿದ್ದರೂ ಅವರವರ ಯೋಗ್ಯತಾನುಸಾರ ಅವರೆಲ್ಲರೂ ತಮ್ಮನ್ನು ತಾವು ಇಲ್ಲಿ ತೊಡಗಿಸಿಕೊಂಡಿದ್ದರು. ಇಲ್ಲಿ ಕೊಂಚಮಟ್ಟಿಗೆ ‘ಆನಂದದ ಜಿಂದಗಿ’ಯನ್ನೇ ದಕ್ಕಿಸಿಕೊಂಡಿದ್ದರು. ಇಂಥ ಸನ್ನಿವೇಶಕ್ಕೆ ಧುತ್ತೆಂದು ಎರಗಿದ್ದು ಕೊರೊನಾ ಸೋಂಕು. ಆ ಆಕ್ರಮಣಕ್ಕೆ ತನ್ಮೂಲಕ ಸಂಭವಿಸುತ್ತಿರುವ ಸಾವುಗಳಿಗೆ ತತ್ತರಿಸಿದರು ನಮ್ಮ ಜನ.

ಈ ವಿಪತ್ಕಾಲಕ್ಕೆ ಸರ್ಕಾರ ಅನಿವಾರ್ಯವಾಗಿ ಕಳೆದ ವರ್ಷ ಲಾಕ್‌ಡೌನ್‌ ಮಾಡಬೇಕಾಯಿತು. ಈಗಲೂ ಲಾಕ್‌ಡೌನ್ ಪದ ಬಳಸದೇ ಹೋದರೂ ವಿಧಿಸಿರುವ ನಿರ್ಬಂಧಗಳು ಲಾಕ್‌ಡೌನ್‌ನಷ್ಟೇ ಬಿಗಿಯಾಗಿವೆ. ಇದರಿಂದ ಶ್ರೀಸಾಮಾನ್ಯರ ಬದುಕಿನ ದುಡಿಮೆಗೆ ಪೆಟ್ಟು ಬಿತ್ತು. ಕೂಲಿನಾಲಿ ಮಾಡಿ ಬದುಕಲು ಜನರ ವ್ಯಾವಹಾರಿಕ ಬದುಕಿಗೇ ಬೀಗ ಬಿದ್ದಿದೆ.

ಇಂಥ ಅಸಾಮಾನ್ಯ ಸನ್ನಿವೇಶದ ವಿಕಟ ಸಂದರ್ಭದಲ್ಲಿ ಮಾಡುವುದೇನಿದೆ? ಹೊಟ್ಟೆ ಕೇಳಬೇಕಲ್ಲ. ನವ್ಯಕವಿ ಪ್ರೊ. ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ’. ಬಡವರಿಗೆ ದುಡಿಮೆಗೆ ಅವಕಾಶಗಳಿಲ್ಲ. ಎಲ್ಲಿಗೆ ಹೋಗಬೇಕು?

ಪ್ರೊ. ದೊಡ್ಡರಂಗೇಗೌಡ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು