ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ರಥ, ಹಿಮ್ಮೊಗ ಪಥ

Last Updated 1 ಮೇ 2019, 18:30 IST
ಅಕ್ಷರ ಗಾತ್ರ

ಮಾನ್ಯ ಮುಖ್ಯಮಂತ್ರಿಯವರೆ,

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 240 ಕಿಲೊ ಚಿನ್ನದ ರಥವನ್ನು ಮಾಡಿಸುವ ಹಳೇ ಪ್ರಸ್ತಾವವನ್ನು ನೀವು ಮತ್ತೆ ಎತ್ತಿಕೊಂಡಿದ್ದೀರಿ. ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬುದನ್ನು ನೀವು ಹಿಂದುಮುಂದಾಗಿ ಅರ್ಥ ಮಾಡಿಕೊಂಡಿರುವಂತೆ ಕಾಣುತ್ತದೆ. ಅದಿರಲಿ, ಒಂದು ಗ್ರಾಮ್ ಚಿನ್ನವನ್ನು ಗಣಿಯಿಂದ ತೆಗೆಯಬೇಕೆಂದರೆ ಸುಮಾರು ಎರಡು ಟನ್ ಅದುರನ್ನು ಪುಡಿ ಮಾಡಿ, ಘಾಟು ಕೆಮಿಕಲ್ ಮೂಲಕ ಸ್ವಚ್ಛ ಮಾಡಿ, ನೀರಿಗೆ, ನೆಲಕ್ಕೆ, ಗಾಳಿಗೆ ವಿಷ ಹಬ್ಬಿಸಿ ಜೀವಜಾಲದ ಮಾರಣಹೋಮ ಮಾಡಬೇಕಾಗುತ್ತದೆ. 240 ಕಿಲೊ ಚಿನ್ನ ಅಂದರೆ ಭೂಮಿಯ ಎಲ್ಲೋ 50 ಲಕ್ಷ ಟನ್ ಬಂಡೆಯನ್ನು ಸ್ಫೋಟಿಸಿ ಅದೆಷ್ಟೊ ಸಾವಿರ ಟನ್ ಕೆಮಿಕಲ್ ತ್ಯಾಜ್ಯಗಳನ್ನು ಸೃಷ್ಟಿ ಮಾಡಬೇಕಾಗುತ್ತದೆ. ಅಷ್ಟೊಂದು ವಿಧ್ವಂಸಕ ದ್ರವ್ಯಗಳನ್ನು ಸೃಷ್ಟಿಸುವ ನಿಸರ್ಗವಿರೋಧಿ ಕೆಲಸವನ್ನು ಯಾವ ದೇವರು ಮೆಚ್ಚುತ್ತಾನೆ?

ರಾಜ್ಯದ ಎಷ್ಟೊಂದು ಕಡೆ ಕೆರೆಗಳು ಒಣಗಿವೆ, ನದಿಕೊಳ್ಳಗಳು ಮಾಲಿನ್ಯದ ಮಡುಗಳಾಗಿವೆ, ಜೀವಲೋಕ ಹೈರಾಣಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಬಳಿಯೇ ಕುಮಾರಧಾರಾದಲ್ಲಿ ಮೀನುಗಳು ವಿಷಪ್ರಾಶನದಿಂದ ಸತ್ತು ತೇಲುತ್ತಿವೆ. ಯಾಕೆ ಚಿನ್ನದ ರಥದ ಹುಚ್ಚು? ಅದೇನೋ ‘2005ರಲ್ಲೇ ಟೆಂಡರ್ ಕರೆದಿದ್ದು, ಈಗಿನದಲ್ಲ’ ಎಂದೆಲ್ಲ ನಿಮ್ಮ ಸಚಿವಾಲಯ ಹೇಳಿದೆ. ನೀವು ಹಿಂದಿನ ಬಾರಿ ಮುಖ್ಯಮಂತ್ರಿ
ಯಾಗಿದ್ದಾಗ ಕೈಗೊಂಡ ಇತರ ಎಷ್ಟೊಂದು ನಿರ್ಧಾರಗಳು ಜಾರಿಗೆ ಬಾರದೆ ನನೆಗುದಿಗೆ ಬಿದ್ದಿವೆ ಗಮನಿಸಿದ್ದೀರಾ? ನಿಮ್ಮದೇ ಸಹಿ ಇರುವ ‘ಮಾನವ ಅಭಿವೃದ್ಧಿ ಯೋಜನಾ ವರದಿ’ಯನ್ನು (2006) ಮತ್ತೊಮ್ಮೆ ತೆಗೆಸಿ ನೋಡಿ. ದುರ್ಬಲ ವರ್ಗಕ್ಕೆ ನೀರು, ಪೌಷ್ಟಿಕ ಆಹಾರ, ಶೌಚ ವ್ಯವಸ್ಥೆ, ಶಿಕ್ಷಣ, ಆಸ್ಪತ್ರೆ, ಉದ್ಯೋಗ ಎಲ್ಲವುಗಳ ಭರವಸೆ ನೀಡಿದ್ದಿರಿ. ಜನತಾ ಜನಾರ್ದನನಿಗೆ ಹೇಳಿಕೊಂಡ ಆ ಎಲ್ಲ ಹರಕೆಗಳನ್ನೂ ಒಪ್ಪಿಸಿದ್ದೀರಾ?

ನಾಗೇಶ ಹೆಗಡೆ, ವೈ. ಲಿಂಗರಾಜು,ಡಾ. ಎಂ. ವೆಂಕಟಸ್ವಾಮಿ(ಭೂವಿಜ್ಞಾನಿಗಳು), ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT