ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮೆಯಲ್ಲಿ ಬದುಕುವವರು

Last Updated 27 ಜನವರಿ 2021, 15:49 IST
ಅಕ್ಷರ ಗಾತ್ರ

‘ಕಲಿಯುಗ ಕಳೆದು ಸತ್ಯಯುಗ ಆರಂಭವಾಗುತ್ತದೆ, ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮರುಜೀವ ಪಡೆಯುತ್ತಾರೆ’ ಎಂಬ ಮೂಢನಂಬಿಕೆಯಿಂದ, ತಾವು ಹೆತ್ತ ಇಬ್ಬರು ಮಕ್ಕಳನ್ನೇ ಪೋಷಕರು ಡಂಬಲ್ಸ್‌ನಿಂದ ಹೊಡೆದು ಕೊಂದಿರುವ ಘಟನೆ (ಪ್ರ.ವಾ., ಜ. 27) ಆಘಾತಕಾರಿ. ಇವರಲ್ಲಿ ತಂದೆ ಎಂ.ಎಸ್ಸಿ, ಪಿಎಚ್.ಡಿ ಪದವೀಧರ, ಸರ್ಕಾರಿ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ತಾಯಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದವರು. ಇದನ್ನು ನೋಡಿದರೆ, ನಮ್ಮದು ಸುಶಿಕ್ಷಿತ ಸಮಾಜ ಎಂದು ಕರೆಯಲು ನಾಚಿಕೆಯಾಗುತ್ತದೆ. ದೇಶದಲ್ಲಿ ಹೆಮ್ಮರವಾಗಿ ಬೇರೂರಿರುವ ಮೌಢ್ಯ ಆಚರಣೆ, ಮೂಢನಂಬಿಕೆಗಳನ್ನು ಬಹುಶಃ ವಿಶ್ವದ ಬೇರೆ ಯಾವ ದೇಶದಲ್ಲಿಯೂ ನಾವು ಈ ಪ್ರಮಾಣದಲ್ಲಿ ಕಾಣಲು ಸಾಧ್ಯವಿಲ್ಲ. ಉನ್ನತ ಶಿಕ್ಷಣ ಪಡೆದು ಪ್ರಜ್ಞಾವಂತರು ಎನಿಸಿಕೊಂಡವರಲ್ಲೇ ಇಂತಹ ಮೂಢನಂಬಿಕೆಗಳು ಕಂಡುಬರುತ್ತಿರುವುದು ವಿಷಾದನೀಯ. ಆಧುನಿಕತೆಗೆ ತಕ್ಕಂತೆ ಮೌಢ್ಯಗಳೂ ರೂಪಾಂತರಗೊಂಡು, ಇದನ್ನು ಅನುಸರಿಸುವವರು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸಮಾಜವನ್ನೂ ಹಾಳು ಮಾಡುತ್ತಿದ್ದಾರೆ. ಅತಿಯಾದ ಮೌಢ್ಯ ಮತ್ತು ಭ್ರಮೆ ಯಾರಲ್ಲಿ ಯಾವ ರೂಪದಲ್ಲೇ ಇರಲಿ ಅದು ಅವರ ಸ್ವತಂತ್ರ ಆಲೋಚನೆ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ.

ತಲೆತಲಾಂತರದಿಂದ ಆಚರಣೆಯಲ್ಲಿರುವ ಭೇದ, ಶೋಷಣೆ, ಗುಲಾಮಗಿರಿ ಮತ್ತು ವಿನಾಶಕಾರಿ ನಂಬಿಕೆಗಳನ್ನು ಪ್ರಶ್ನಿಸದೆ ಮತ್ತು ಸತ್ಯಾಸತ್ಯತೆಯನ್ನು ವಿಮರ್ಶಿಸದೆ ಇರುವುದೇ ನಾಗರಿಕ ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆ. ದೇವರು, ಧರ್ಮ, ಶಾಸ್ತ್ರದಂತಹವುಗಳ ನೆರವಿಲ್ಲದೇ ಮನುಷ್ಯ ತನ್ನ ಬಿಡುಗಡೆಯ ದಾರಿ ಕಂಡುಕೊಳ್ಳಬಲ್ಲ ಎಂದು ಜಗತ್ತಿಗೆ ಮೊದಲು ಹೇಳಿದವನು ಬುದ್ಧ. ಇಂತಹ ದಾರಿ ಕಂಡುಕೊಳ್ಳುವ ಮಾರ್ಗವನ್ನು ನಾವು ಅರಿತರೆ ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ಘಟಿಸಲಾರವು.

ಆರ್.ಕುಮಾರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT