ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಶನಿವಾರ, ಮಾರ್ಚ್ 11, 2023

Last Updated 10 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಶಾಸಕರಿನ್ನೂ ಡಿಜಿಟಲ್‌ ಯುಗಕ್ಕೆ ಬಂದಿಲ್ಲವೇ?
ಅಧಿಕಾರಿಗಳು ತಮ್ಮ ಮನೆಯಲ್ಲಿ ವಶಪಡಿಸಿಕೊಂಡ ₹ 6 ಕೋಟಿ ನಗದು ಅಡಿಕೆ ಮಾರಿ ಬಂದ ದುಡ್ಡು ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದ್ದಾರೆ. ಅಷ್ಟೊಂದು ದೊಡ್ಡ ಮೊತ್ತ ಅವರಿಗೆ ವ್ಯವಸಾಯದಿಂದ ದೊರಕಬೇಕಾದರೆ ಅವರ ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ಅದೆಷ್ಟು ಸಹಸ್ರ ಎಕರೆ ಕೃಷಿ ಭೂಮಿ ಇರಬಹುದು? ಅಂದಹಾಗೆ ಕೋಟಿಗಟ್ಟಲೆ ರೂಪಾಯಿಯನ್ನು ಅಡಿಕೆ ವ್ಯಾಪಾರಿಗಳು ನಗದಲ್ಲೇ ವ್ಯವಹರಿಸುತ್ತಾರೆ ಎಂದಾದರೆ, ಅದರ ಎಲ್ಲ ಲೆಕ್ಕವೂ ಮಾರಾಟ ತೆರಿಗೆ, ಆದಾಯ ತೆರಿಗೆ ವ್ಯಾಪ್ತಿಗೆ ಬಂದಿರುವುದನ್ನು ಖಾತರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಅಂತಹ ವ್ಯಾಪಾರಿಗಳ ಲೆಕ್ಕಪರಿಶೋಧನೆಯನ್ನು ಈಗಾಗಲೇ ಪ್ರಾರಂಭಿಸಿರಬಹುದೆಂದು ಬಗೆಯೋಣವೇ? ಪಾಪ, ಡಿಜಿಟಲ್ ವಹಿವಾಟು ಎಂದು ಪ್ರಧಾನಮಂತ್ರಿ ಅಷ್ಟೆಲ್ಲ ‘ಮನ್‌ ಕೀ ಬಾತ್‌’ ಹೇಳುತ್ತಿದ್ದರೂ ಶಾಸಕ ಕಮ್‌ ರೈತ ಇನ್ನೂ ಡಿಜಿಟಲ್ ಯುಗಕ್ಕೆ ಬಂದಿಲ್ಲವಲ್ಲ!
–ಬಿ.ಎನ್.ಭರತ್, ಬೆಂಗಳೂರು

*
ಪುರುಷರಿಗೂ ಸಿಗಲಿ ಉಚಿತ ಸಂಚಾರಭಾಗ್ಯ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದು, ಸರ್ಕಾರ ಮಹಿಳೆಯರ ಪರ ಇದೆ ಎಂಬುದಕ್ಕೆ ಉದಾಹರಣೆ. ಇಂತಹ ಬೆಂಬಲ ಅತ್ಯಗತ್ಯ.

ಅಂತೆಯೇ, ನ. 19ರಂದು ಪುರುಷರ ದಿನಾಚರಣೆ ಅಂಗವಾಗಿ ಪುರುಷರಿಗೆ ಉಚಿತ ಪ್ರಯಾಣ ಕಲ್ಪಿಸಲಿ. ಪುರುಷರ ಬೆನ್ನಿಗೂ ಸರ್ಕಾರ ನಿಲ್ಲಲಿ. ತಮ್ಮ ಖಾಸಗಿ ವಾಹನಗಳನ್ನು ಮನೆಯಲ್ಲೇ ಬಿಟ್ಟು ಬಸ್ಸಿನಲ್ಲಿ ಸಂಚರಿಸಿದರೆ ವಾಯುಮಾಲಿನ್ಯ ಕಡಿಮೆ ಆಗುವುದರ ಜೊತೆಗೆ ಸಂಚಾರ ದಟ್ಟಣೆಯೂ ಇರದು. ಇದರೊಟ್ಟಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದ ಆ. 15ರಂದು ಜಾತಿ ಮತಗಳ ಭೇದವಿಲ್ಲದೆ ದೇಶಕ್ಕೇ ಹಬ್ಬ. ಆ ಪುಣ್ಯದಿನದಂದು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಉಚಿತ ಪ್ರಯಾಣದ ಸೌಲಭ್ಯ ಒದಗಿಸಲಿ.
–ಪತ್ತಂಗಿ ಎಸ್. ಮುರಳಿ, ಬೆಂಗಳೂರು

**

ಸೀರೆ ಸುಡಿ, ಕುಕ್ಕರ್‌ ಬಿಸಾಡಿ...
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷವೊಂದು ಮತದಾರರಿಗೆ ಸೀರೆ ಹಂಚಿಕೆ ಮಾಡಿದಾಗ, ಆ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಮತದಾರರೊಬ್ಬರ ಧೈರ್ಯವನ್ನು ಮೆಚ್ಚಲೇಬೇಕು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಮತದಾರರಿಗೆ ಇಂತಹ ಆಮಿಷ ತೋರಿಸುವುದು ಸರ್ವೇ ಸಾಮಾನ್ಯ.

ಮಾನ್ಯ ಮತದಾರರೇ, ಅವರು ಕೊಡುವ ಸೀರೆಯನ್ನು ಅವರ ಎದುರಿಗೇ ಸುಡಬೇಕು, ಕುಕ್ಕರ್ ಕೊಟ್ಟರೆ ಬೀದಿಗೆ ಬಿಸಾಕಬೇಕು, ದುಡ್ಡು ಕೊಟ್ಟರೆ ಮುಖಕ್ಕೆ ಎಸೆಯಬೇಕು. ಇಂತಹ ಧೈರ್ಯ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿದೆ. ರಾಜಕಾರಣಿಗಳು ಸಹ ಇಂತಹ ಪ್ರಕರಣಗಳಿಂದ ಬುದ್ಧಿ ಕಲಿಯಬೇಕು, ಎಲ್ಲಕ್ಕಿಂತ ಹೆಚ್ಚಾಗಿ, ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
–ಬೂಕನಕೆರೆ ವಿಜೇಂದ್ರ, ಮೈಸೂರು

**
ಅಳಿಯನಾಗಿ, ಗಂಡನಾಗಿ ಬೇಡವಾದ ರೈತ!
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ರೈತ ಯುವಕನನ್ನು ಮದುವೆಯಾಗುವ ಯುವತಿಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಬೆಳೆ ಪರಿಹಾರ, ಬೆಳೆಗಳಿಗೆ ಪ್ರೋತ್ಸಾಹಧನ ನೀಡುವ ಸರ್ಕಾರ, ರೈತನ ವರಿಸುವ ಹೆಣ್ಣಿಗೆ ಪ್ರೋತ್ಸಾಹಧನ ನೀಡಿ ಮದುವೆ ಮಾಡಿಸಲೂ ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ!

ದೇಶಕ್ಕೆ ಅನ್ನ ನೀಡುವ ರೈತನನ್ನು ಸ್ಮರಿಸುವ, ಕಾರ್ಯಕ್ರಮಗಳಲ್ಲಿ ರೈತಗೀತೆ ಕೇಳುವ ಜನರಿಗೆ, ದವಸ ಧಾನ್ಯ ಉತ್ಪಾದನೆ ಮಾಡಲು ಮಾತ್ರ ರೈತ ಬೇಕು. ಆದರೆ, ಯುವತಿಗೆ ಗಂಡನಾಗಿ, ಯುವತಿಯ ಪೋಷಕರಿಗೆ ಅಳಿಯನಾಗಿ ಮಾತ್ರ ರೈತ ಬೇಡವಾಗಿರುವುದೇ ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ.
–ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

*

ಸಂಕಷ್ಟದಿಂದ ಪಾರಾಗಲಿ ಹೈನೋದ್ಯಮ
ಹಾಲು ಉತ್ಪಾದನೆ ಕುಸಿತದ ಬಿಸಿ ಹೋಟೆಲ್ ಉದ್ಯಮಕ್ಕೂ ತಟ್ಟಿದೆಯೆಂದೂ, ಇದರ ನಿವಾರಣೆಗಾಗಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಿಸಬೇಕೆಂದೂ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಸರ್ಕಾರವನ್ನು ಕೋರಿದ್ದಾರೆ. ಈ ಬಗ್ಗೆ ದನಿ ಎತ್ತಬೇಕಾಗಿದ್ದ ರೈತಪರ ಸಂಘಟನೆಗಳು, ಜನಪ್ರತಿನಿಧಿಗಳು ಮೌನ ವಹಿಸಿರುವಾಗ, ವಾಣಿಜ್ಯೋದ್ಯಮಿಯಾದ ಹೋಟೆಲ್ ಸಂಘದ ಅಧ್ಯಕ್ಷರು ಹೈನುಗಾರರ ಪರವಾಗಿ ಮಾತನಾಡಿರುವುದು ಪ್ರಶಂಸನೀಯ.

ಸಾಕುನಾಯಿಗಳ ಚಿಕಿತ್ಸೆಗೆ ನಗರ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾಲಯಗಳ ಸೌಕರ್ಯವಿದೆ. ಆದರೆ ರೈತರ ಜೀವನಾಧಾರವಾದ ಹಸು, ಎಮ್ಮೆ, ಕುರಿ, ಮೇಕೆಯಂತಹ ಜಾನುವಾರುಗಳ ಚಿಕಿತ್ಸೆಯ ಸ್ವರೂಪದಲ್ಲಿ ಅಂತಹ ಗಣನೀಯ ಪ್ರಗತಿ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಾಗಿರುವ ಜಾನುವಾರುಗಳ ಚರ್ಮಗಂಟು ರೋಗಕ್ಕೆ ಇನ್ನೂ ನಮ್ಮಲ್ಲಿ ಲಸಿಕೆ ಲಭ್ಯವಿಲ್ಲ. ಮೇಕೆ ಸಿಡುಬು ಲಸಿಕೆಯನ್ನು ಈ ಕಾಯಿಲೆ ನಿಯಂತ್ರಣಕ್ಕೆ ನೀಡಲಾಗುತ್ತಿದೆ. ಮೇಕೆ ಸಿಡುಬು ಲಸಿಕೆ ಜಾನುವಾರುಗಳ ಚರ್ಮಗಂಟು ರೋಗಕ್ಕೆ ಪೂರ್ಣ ಪ್ರಮಾಣದ ರಕ್ಷಣೆ ನೀಡಬಲ್ಲದು ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದು, ರೈತರ ಆತಂಕ ನಿವಾರಿಸಬೇಕಿದೆ. ಹೆಚ್ಚುತ್ತಿರುವ ಪಶು ಆಹಾರ, ಹಿಂಡಿ, ಬೂಸ, ಔಷಧಿಗಳ ಬೆಲೆಯ ಜೊತೆಗೆ ಬೇಸಿಗೆಯಲ್ಲಿ ಮೇವಿನ ಅಭಾವದಿಂದ ಹಾಲು ಉತ್ಪಾದನೆ ಮತ್ತಷ್ಟು ತ್ರಾಸದಾಯಕವಾಗಲಿದೆ. ಹಾಲಿನ ಸಂಗ್ರಹ ದರವನ್ನು ಹಾಗೂ ಹಾಲು ಉತ್ಪಾದಕರಿಗೆ ನೀಡುವ
ಪ್ರೋತ್ಸಾಹಧನವನ್ನು ಹೆಚ್ಚಿಸಲು ತುರ್ತು ಕ್ರಮ ಕೈಗೊಂಡು ಹೈನೋದ್ಯಮವನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ.
–ಡಾ. ಟಿ.ಜಯರಾಂ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT