ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬುಧವಾರ, ಮಾರ್ಚ್ 08, 2023

Last Updated 7 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಶೌಚಾಲಯ: ಮುಜುಗರ ತಪ್ಪಿಸಿ
ರಾಜ್ಯದ ಬಹುತೇಕ ಬಸ್ ನಿಲ್ದಾಣಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಹೆಚ್ಚಿನವು ಬಸ್ ನಿಲ್ದಾಣದಿಂದ ದೂರದಲ್ಲಿ ಇರುತ್ತವೆ. ರಾತ್ರಿ ಹೊತ್ತು ಪ್ರಯಾಣಿಸುವಾಗ ಮೂತ್ರ ವಿಸರ್ಜನೆ ಮಾಡಲು ತುಂಬಾ ಕಷ್ಟವಾಗುತ್ತದೆ. ಅಲ್ಲದೆ ರಾತ್ರಿ ಸಮಯ ಶೌಚಾಲಯದ ಬಳಿ ಇರುವ ಪೌರ ಕಾರ್ಮಿಕರಲ್ಲಿ ಹೆಚ್ಚಾಗಿ ಪುರುಷರೇ ಕಂಡುಬರುತ್ತಾರೆ. ಮಹಿಳಾ ಶೌಚಾಲಯದ ಬಳಿಯೂ ಪುರುಷರು ಇರುವುದರಿಂದ ಮಹಿಳೆಯರಿಗೆ ಮುಜುಗರವಾಗುತ್ತದೆ. ಕೆಲವು ಶೌಚಾಲಯಗಳಲ್ಲಿ ಸರಿಯಾಗಿ ಬಾಗಿಲುಗಳು ಇರುವುದಿಲ್ಲ ಮತ್ತು ಸ್ವಚ್ಛತೆ ಕೂಡ ಕಾಪಾಡುವುದಿಲ್ಲ. ಸಾರ್ವಜನಿಕ ಶೌಚಾಲಯಗಳ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಗಮನಹರಿಸಬೇಕಿದೆ.
–ಪ್ರಾರ್ಥನಾ ಕೆ.ಎಂ. ಕಲ್ವಮಂಜಲಿ, ಕೋಲಾರ

**

ಸಮಸ್ಯೆ ಇರುವುದು ಕನ್ನಡ ಮಾಧ್ಯಮದಲ್ಲಿ ಅಲ್ಲ...
ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 250 ಸೀಟುಗಳ ಭರ್ತಿಗೆ ನಡೆದ ಪ್ರವೇಶ ಪರೀಕ್ಷೆಗೆ 13,617 ವಿದ್ಯಾರ್ಥಿಗಳು ಹಾಜರಾದುದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 7). ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವಾಗ, ಈ ಶಾಲೆಯ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಮುಗಿಬಿದ್ದಿರುವುದನ್ನು ನೋಡಿದರೆ, ಮಕ್ಕಳು ಮತ್ತು ಪೋಷಕರಲ್ಲಿ ಭಾಷಾ ಮಾಧ್ಯಮಕ್ಕಿಂತ ಶಿಸ್ತುಬದ್ಧ ಶಿಕ್ಷಣ ಸಂಸ್ಥೆಯ ಆಯ್ಕೆ ಮುಖ್ಯವಾಗಿದೆ ಎನಿಸುತ್ತದೆ. ಪೋಷಕರಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇದ್ದಾಗ್ಯೂ, ಸರ್ಕಾರಿ ಕನ್ನಡ ಶಾಲೆಗಳ ಹೀನಾಯ ಶೈಕ್ಷಣಿಕ ವಾತಾವರಣ ಅವರನ್ನು ಖಾಸಗಿ ಇಂಗ್ಲಿಷ್ ಶಾಲೆಗಳತ್ತ ದೂಡುತ್ತದೆ.

ಉತ್ತಮ ಶೈಕ್ಷಣಿಕ ವಾತಾವರಣ ಅಂದರೆ, ಸುಸ್ಥಿತಿಯಲ್ಲಿರುವ ಶಾಲಾ ಕಟ್ಟಡ, ಕ್ರೀಡೆಗಳಿಗೆ ಪ್ರೋತ್ಸಾಹ, ಅದಕ್ಕೆ ಪೂರಕವಾಗಿ ಆಟದ ಮೈದಾನ, ನೀರು, ಶೌಚಾಲಯ ವ್ಯವಸ್ಥೆ, ಕಾಳಜಿಯಿಂದ ಪಾಠ ಮಾಡುವ ಶಿಕ್ಷಕ ವರ್ಗ, ನಿಶ್ಶಬ್ದದ ವಾತಾವರಣ... ಇವು ಮಕ್ಕಳನ್ನು ಶಾಲೆಗೆ ಸೆಳೆಯುವ ಪ್ರಮುಖ ಅಂಶಗಳು. ಇದನ್ನು ಮನಗಂಡು ಸರ್ಕಾರ ಉತ್ತಮ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸಬೇಕು.
–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

**

ಸಾರಿಗೆ ನೌಕರರ ಬೇಡಿಕೆ ಪರಿಗಣಿಸಿ
ಸಾರಿಗೆ ನಿಗಮಗಳ ನೌಕರರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ 24ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ. ಎರಡು ವರ್ಷದ ಕೆಳಗೆ ಸಾರಿಗೆ ನಿಗಮಗಳ ನೌಕರರು ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದಾಗ, ಆಗಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈ ವರ್ಷದ ಬಜೆಟ್‌ನಲ್ಲೂ ಅದರ ಪ್ರಸ್ತಾಪ ಇಲ್ಲದೇ ಇರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿದಿನ 12 ಗಂಟೆ ಕೆಲಸ ನಿರ್ವಹಿಸುತ್ತಿರುವ ಸಾರಿಗೆ ನೌಕರರನ್ನು ಕೂಡ ಸರ್ಕಾರಿ ನೌಕರರಂತೆ ಪರಿಗಣಿಸುವುದು ಮಾನವೀಯ ದೃಷ್ಟಿಯಿಂದ ನ್ಯಾಯಪರವಾದುದು. ಪಕ್ಕದ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದೇ ಪರಿಗಣಿಸಲಾಗಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಕನಿಷ್ಠ ಅವರ ಮೂಲಭೂತ ಬೇಡಿಕೆಗಳನ್ನಾದರೂ ಈಡೇರಿಸದಿದ್ದರೆ ಹೇಗೆ?
–ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ

**

ಹೋಳಿ ಹಬ್ಬ: ಬಣ್ಣಗಳ ಬಗ್ಗೆ ಇರಲಿ ಎಚ್ಚರ
ಹೋಳಿ ಹಬ್ಬಕ್ಕೆ ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚರ್ಮ, ಕಣ್ಣಿನ ತೊಂದರೆಯ ಜೊತೆಗೆ ಚರ್ಮದ ಕ್ಯಾನ್ಸರ್, ಅಲರ್ಜಿಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಬಣ್ಣವು ರಾಸಾಯನಿಕ ರಹಿತವಾಗಿದ್ದರೆ ಅದರಿಂದ ಯಾವುದೇ ಸಮಸ್ಯೆಯಾಗದು. ಹೀಗಾಗಿ ರಾಸಾಯನಿಕಯುಕ್ತ ಬಣ್ಣಗಳಿಂದ ದೂರವಿರುವುದು ಒಳ್ಳೆಯದು.
–ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

**

ಕಾನೂನು ಶಿಕ್ಷಣ: ‌ಇರಲಿ ಎಚ್ಚರ
ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿರ್ವಸಿಟಿ ಆಡಳಿತ ಮಂಡಳಿಯು ಕೋರ್ಸ್‌ಗಳ ಪ್ರವೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟು ಮೀಸಲಾತಿ ನೀಡಬೇಕೆಂಬ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸಲು ಮತ್ತೆ ಹಿಂದೇಟು ಹಾಕುತ್ತಿರುವುದು (ಪ್ರ.ವಾ., ಮಾರ್ಚ್‌ 6) ಭಾರತದ ಒಕ್ಕೂಟ ತತ್ವದ ಮೇಲಿನ ಗದಾಘಾತವೇ ಆಗಿದೆ ಎಂದೆನಿಸುತ್ತದೆ. ಕರ್ನಾಟಕದ ಮಟ್ಟದಲ್ಲಿ ನಡೆಯುತ್ತಿದ್ದ ಸಿಇಟಿ ಪರೀಕ್ಷೆಯನ್ನು ತೆಗೆದು ‘ನೀಟ್’ ಎಂದು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದದ್ದು ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದಿದ ನಮ್ಮ ರಾಜ್ಯದ ಮಕ್ಕಳಿಗೆ ಹೇಗೆ ಬಹುಪಾಲು ಎಟುಕದಂತೆ ಆಗಿದೆಯೊ ಹಾಗೆಯೇ ಕಾನೂನು ಶಿಕ್ಷಣದಲ್ಲೂ ಘಟಿಸುತ್ತಿದೆ. ಇದರ ದುಷ್ಪರಿಣಾಮವು ಎಲ್ಲ ರಾಜ್ಯಗಳ ಗ್ರಾಮೀಣ ವಿದ್ಯಾರ್ಥಿಗಳ ಮೇಲೂ ಆಗಲಿದೆ. ಇದರ ವಿರುದ್ಧ ಎಲ್ಲ ರಾಜ್ಯಗಳೂ ದನಿ ಎತ್ತಬೇಕು.
–ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

**
ಬೆಳೆಗಾರರಿಗೆ ಪರಿಹಾರ ನೀಡಿ
ಈರುಳ್ಳಿ ಬೆಲೆ ಕುಸಿತವು ರಾಜ್ಯದ ರೈತರಿಗೆ ತೀವ್ರ ಆಘಾತ ತಂದಿದೆ. ವಿದೇಶಗಳಿಗೆ ಈರುಳ್ಳಿ ರಫ್ತು ನಿರ್ಬಂಧಿಸಿರುವುದು ದರ ಕುಸಿತಕ್ಕೆ ಒಂದು ಪ್ರಮುಖ ಕಾರಣ ಎಂದು ತೋಟಗಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿರುವುದರಲ್ಲಿ ಸತ್ಯಾಂಶ ಇದೆ. ಈ ನಿರ್ಬಂಧವನ್ನು ಕೂಡಲೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರದ ಮೇಲೆ ನಮ್ಮ ಜನಪ್ರತಿನಿಧಿಗಳು ಒತ್ತಡ ಹೇರಬೇಕು. ಅಲ್ಲದೆ, ತೀವ್ರ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರವು ಸೂಕ್ತ ಪರಿಹಾರ ನೀಡಲು ತಡಮಾಡದೆ ಕ್ರಮ ಜರುಗಿಸಬೇಕು.
–ಶಶಿಧರ ಟಿ.ಎಚ್‌., ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT