ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 20 ಫೆಬ್ರುವರಿ 2024, 19:19 IST
Last Updated 20 ಫೆಬ್ರುವರಿ 2024, 19:19 IST
ಅಕ್ಷರ ಗಾತ್ರ

ಕಾಲದ ಅಗತ್ಯಕ್ಕೆ ತಕ್ಕ ಬದಲಾವಣೆ

‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂದು ಕುವೆಂಪು ಅವರು ನೇರವಾಗಿ ಹೇಳಿಲ್ಲ. ‘ಪಕ್ಷಿಕಾಶಿ’ ಕವನ ಸಂಕಲನದಲ್ಲಿನ ‘ಪಕ್ಷಿಕಾಶಿ’ ಕವಿತೆಯಲ್ಲಿ ಅವರು ಹೇಳಿದ ಮಾತು ಹೀಗಿದೆ: ‘ಪ್ರಾಣಪಕ್ಷಿಕುಲಮಿಹುದು ರಕ್ಷೆಯಲಿ... ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ...’ ಹೀಗೆ ಪಕ್ಷಿಕಾಶಿಯನ್ನು ಕುರಿತು ಅವರು ಎಚ್ಚರಿಕೆಯ ಮಾತು ಹೇಳಿದ್ದಾರೆ. ಇದು ಕಾವ್ಯದ ಓದುಗನಿಗೂ ಕುರಿತ ಮಾತು ಎಂಬುದು ಧ್ವನಿಗೆ ಸಂಬಂಧಿಸಿದ ವಿಚಾರ.

ಹಾಗೆಯೇ ಸೋಮನಾಥ ದೇವಾಲಯವನ್ನು ಕುರಿತು ‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’ ಎಂದು ಹೇಳಿದ್ದಾರೆ. ಆದರೆ ಈ ಉಕ್ತಿಗಳನ್ನು ಅನುಕರಿಸಿ ಹಲವು ಛಾಯಾ ಉಕ್ತಿಗಳು ಕುವೆಂಪು ಅವರ ಹೆಸರಿನಲ್ಲಿ ಬಂದಿವೆ. ಅದೇನೇ ಇರಲಿ, ಈಗ ರಾಜ್ಯದ ಬಹುತೇಕ ವಸತಿ ಶಾಲೆಗಳಲ್ಲಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವ ಫಲಕವನ್ನು ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿದ್ದನ್ನು ಈ ಕಾಲದ ಅಗತ್ಯವೆಂದು ಭಾವಿಸುವುದು ಸರಿ ಇದೆ. ಇದು ವಿಜ್ಞಾನ, ತಂತ್ರಜ್ಞಾನದ ಯುಗ. ಪ್ರಶ್ನೋತ್ತರದ ಮುಖೇನ ಸತ್ಯವನ್ನು ತಿಳಿಯಬೇಕು. ಸುಳ್ಳುಗಳನ್ನು ಸತ್ಯವೆಂದು ನಂಬಿಸುತ್ತಿರುವವರ ನಡುವೆ ಈ ಬದಲಾದ ವಾಕ್ಯ ಸಂದೇಶ ಇಂದಿನ ತುರ್ತು.

ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು

ಮಂಗನ ಕಾಯಿಲೆಗೆ ಉಪದೇಶದ ಉರಿಮದ್ದು

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಗ್ರಾಮೀಣ ಶ್ರಮಿಕರಿಗೆ ಮಾತ್ರ ಬರುವ ಪೀಡೆ ಇದಾಗಿದೆ ಎಂತಲೋ ಏನೊ, ಇದಕ್ಕೊಂದು ಉತ್ತಮ ಲಸಿಕೆಯನ್ನು ಕೊಡಲು ಸರ್ಕಾರವಾಗಲೀ ಔಷಧ ಕಂಪನಿಗಳಾಗಲೀ ಆಸಕ್ತಿ ತೋರುತ್ತಿಲ್ಲ. ಗಾಯಕ್ಕೆ ಉಪ್ಪು ಸವರಿದಂತೆ ಅರಣ್ಯ ಇಲಾಖೆಯ ಪ್ರಭೃತಿಗಳು ‘ಕಾಡಿಗೆ ಹೋಗಬೇಡಿ’ ಎಂದು ಜನರಿಗೆ ಉಪದೇಶ ಮಾಡುತ್ತಿದ್ದಾರೆ. ಅಲ್ಲಾ ಸ್ವಾಮೀ, ಕಾಡಿನಲ್ಲೇ ನಾವು ವಾಸ ಇರೋದು! ಮನೆಯಲ್ಲೇ ಮುದುಡಿ ಕೂತರೂ ಅರಣ್ಯ ಇಲಾಖೆಯ ಕೃಪೆಯಿಂದಾಗಿ ಮಂಗ, ಹಂದಿ, ಕಾಡುಕೋಣಗಳು ತೋಟಕ್ಕೆ, ಹಿತ್ತಿಲಿಗೆ, ಮನೆಯೊಳಕ್ಕೇ ಬರುತ್ತಿವೆ. ರೋಸಿ ಹೋಗಿದ್ದಾರೆ ಜನ. ಇನ್ನೇನು, ಜ್ವರಪೀಡಿತ ಮಂಗಗಳಿಂದ ಬಚಾವಾಗಲೆಂದು ನಾವು ಮನೆ– ಮಾರು ಬಿಟ್ಟು (ಅಥವಾ ಮಾರಿಬಿಟ್ಟು) ಬೆಂಗಳೂರಿನ ಅರಣ್ಯ ಭವನಕ್ಕೆ ಬರಬೇಕೆ?

ವನ್ಯಜೀವಿಗಳಿಗೆ ಆಹಾರವೇ ಸಿಗದಂತೆ ಎಲ್ಲಿ ನೋಡಿದಲ್ಲಿ ನೀಲಗಿರಿ, ಅಕೇಶಿಯಾ ನೆಡುತೋಪು ಬೆಳೆಸಿ, ಮಲೆನಾಡಿನ ಮಕ್ಕಳಿಗೆ ಹಣ್ಣು, ತರಕಾರಿ ಕೂಡ ಸಿಗದಂತೆ ಮಾಡಿದ ಈ ಇಲಾಖೆ ಇಂಥ ನಿಷ್ಪ್ರಯೋಜಕ ಉಪದೇಶ ಕೊಡುವುದನ್ನು ಮೊದಲು ನಿಲ್ಲಿಸಲಿ.

ಶರತ್‌ ಕಲ್ಕೋಡ್‌, ಆಗುಂಬೆ, ನಾಗೇಶ ಹೆಗಡೆ, ಕೆಂಗೇರಿ

ಗಟ್ಟಿ ಸಮಗ್ರ ಸಾಹಿತ್ಯ ಪ್ರಕಟಗೊಳ್ಳಲಿ

ಸೋಮವಾರ ನಿಧನರಾದ ಕೆ.ಟಿ.ಗಟ್ಟಿ ಅವರು ಕರ್ನಾಟಕ ಕಂಡ ಅತ್ಯುತ್ತಮ ವೈಚಾರಿಕ ಸಾಹಿತಿ. ಅವರ
ಕಾದಂಬರಿಗಳಲ್ಲಿ ಬರುವ ಪಾತ್ರಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಕನ್ನಡ ಪುಸ್ತಕ ಪ್ರಾಧಿಕಾರವು ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿ ಕನ್ನಡಿಗರಿಗೆ ಸಿಗುವಂತೆ ಮಾಡಲಿ.

ಹ.ಪಾ.ರಮೇಶ್, ಬೆಂಗಳೂರು

ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದ ತೀರ್ಪು

ಚಂಡೀಗಢದಲ್ಲಿ ಇತ್ತೀಚೆಗೆ ನಡೆದಿದ್ದ ಮೇಯರ್ ಚುನಾವಣಾ ಪ್ರಹಸನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಚರಿತ್ರಾರ್ಹ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಜನರಿಗೆ ನ್ಯಾಯ ವ್ಯವಸ್ಥೆಯಲ್ಲಿ ಇರುವ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದಕ್ಕೆ ನ್ಯಾಯಾಲಯಕ್ಕೆ ಮನಃಪೂರ್ವಕ ಗೌರವಭರಿತ ನಮಸ್ಕಾರ.

ಶಾಂತಕುಮಾರ್, ಸರ್ಜಾಪುರ

ರೈತರಿಗೆ ವಿದ್ಯುತ್: ವ್ಯತ್ಯಯ ಸಲ್ಲ

ರೈತರಿಗೆ 3 ಫೇಸ್ ವಿದ್ಯುತ್ತನ್ನು ಏಳು ತಾಸು ಕೊಡುವ ಬದಲಾಗಿ ಆರು ತಾಸು ಸರಬರಾಜು ಮಾಡಲಾಗುತ್ತಿದೆ, ಅದೂ ಲೋ ವೋಲ್ಟೇಜ್‌ನಲ್ಲಿ! ಇದು ಹೀಗೇ ಮುಂದುವರಿದರೆ, ರೈತರ ಸಂಕಷ್ಟ ಮೇರೆ ಮೀರುವ ಕಾಲ ದೂರವಿಲ್ಲ. ಜನಜೀವನಕ್ಕೂ ನೀರಿಲ್ಲ, ನಾವು ಬೆಳೆದ ಪೈರಿಗೂ ನೀರಿಲ್ಲ. ಸರ್ಕಾರ ಈ ದಿಸೆಯಲ್ಲಿ ಜೀವ ಉಳಿಸುವ ಪ್ರಕ್ರಿಯೆಗೆ ಈ ಕ್ಷಣ ಮುಂದಾಗಬೇಕು. ನಮ್ಮದಷ್ಟೇ ಜೀವವಲ್ಲ, ನಾವು ನೆಟ್ಟ ಗಿಡ ಮರ ಬೆಳೆಯದ್ದೂ ಜೀವವೇ.

ರೈತನಿಗೆ ಒದಗಿಸುವ ವಿದ್ಯುತ್ ಸರಬರಾಜಿನಲ್ಲಿ ಎಂದೂ ವ್ಯತ್ಯಯ ಆಗಬಾರದು. ಈ ಕೂಡಲೇ ಸರ್ಕಾರ ರೈತರಿಗೆ ಅಗತ್ಯ ವಿದ್ಯುತ್‌ ಪೂರೈಸಲು ಕ್ರಮ ತೆಗೆದುಕೊಳ್ಳಬೇಕು. ಈ ಬೇಡಿಕೆ ಬಹುಜನರ ಪರವಾಗಿಯಷ್ಟೇ, ಯಾವ ಮತಧರ್ಮದ್ದೂ ಅಲ್ಲ. ಅದನ್ನು ಆಡಳಿತಾರೂಢರು ಬೇಗ ಮನಗಾಣಲಿ.

ವಿಜಯಕಾಂತ ಪಾಟೀಲ, ಹಾನಗಲ್

ಕನ್ನಡ ವಿಶ್ವವಿದ್ಯಾಲಯ: ಆರ್ಥಿಕ ಸಂಕಷ್ಟ ತಪ್ಪಲಿ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳ ನಿರ್ವಹಣೆಯು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಂಶೋಧನೆಯನ್ನೇ ಪ್ರಮುಖ ಗುರಿಯನ್ನಾಗಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ದುಃಸ್ಥಿತಿಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಈಗ್ಗೆ ಒಂದು ವರ್ಷದಿಂದ ವಿದ್ಯುತ್ ಬಿಲ್ ಪಾವತಿಗೆ ವಿಶ್ವವಿದ್ಯಾಲಯ ಪರಿತಪಿಸುತ್ತಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಇತರ ವಿಶ್ವವಿದ್ಯಾಲಯಗಳಂತೆ
ಯಾವುದೇ ಸಂಯೋಜಿತ ಕಾಲೇಜುಗಳು ಇಲ್ಲದಿರುವುದು ಕೂಡ ಆರ್ಥಿಕ ದುಃಸ್ಥಿತಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಕನ್ನಡ ವಿಶ್ವವಿದ್ಯಾಲಯದ ಈ ಬಗೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ, ವಿಶ್ವವಿದ್ಯಾಲಯದ ಅಸ್ಮಿತೆಯನ್ನು ಕಾಪಾಡಬೇಕಿದೆ.

⇒ತಿಮ್ಮೇಶ ಮುಸ್ಟೂರು, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT