ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 17 ಏಪ್ರಿಲ್ 2024, 20:26 IST
Last Updated 17 ಏಪ್ರಿಲ್ 2024, 20:26 IST
ಅಕ್ಷರ ಗಾತ್ರ

ನಾವು ನೀರು ಸೃಷ್ಟಿಸಬಲ್ಲೆವೇ?

ರಾಜ್ಯದಾದ್ಯಂತ ನೀರಿನ ಅಭಾವದಿಂದಾಗಿ ಹಾಹಾಕಾರದ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನ, ಜಾನುವಾರುಗಳು, ಪಕ್ಷಿ, ಪ್ರಾಣಿ ಸಂಕುಲಕ್ಕೆ ಕುಡಿಯಲು ಸಹ ಸರಿಯಾಗಿ ನೀರಿಲ್ಲದೆ ವ್ಯಥೆಪಡು ವಂತಾಗಿದೆ. ಕಾಡುಪ್ರಾಣಿಗಳು ಇತ್ತೀಚೆಗೆ ನೀರು, ಆಹಾರವನ್ನು ಅರಸಿ ನಾಡಿಗೆ ನುಗ್ಗುತ್ತಿವೆ. ಇಂತಹ ಸ್ಥಿತಿಯಲ್ಲಿ ಜಲಜಾಗೃತಿಯ ಆಂದೋಲನ ಆಗಬೇಕಾಗಿದೆ. ಇದರ ನಡುವೆಯೂ ಅಧಿಕಾರಿಗಳು ಮತ್ತು ಶ್ರೀಮಂತರು ದರ್ಪದಿಂದ ಈಜುಕೊಳ, ಬಾತ್‌ಟಬ್‌, ವಾಟರ್‌ಪಾರ್ಕ್‌ನಲ್ಲಿ ನೀರು ತುಂಬಿಸಿ ಅದರಲ್ಲಿ ಮೋಜು ಮಸ್ತಿ ಮಾಡುವಂತಹ ಕೆಟ್ಟ ಸಂಸ್ಕೃತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಇದು ಎಷ್ಟು ಸರಿ? ಇಂತಹವರು ಸಾಮಾಜಿಕ ಬದ್ಧತೆ ತೋರಿಸಬೇಕಾದ ಅಗತ್ಯವಿದೆ.

ಮೂರ್ನಾಲ್ಕು ವರ್ಷಗಳ ಹಿಂದೆ ಐಎಎಸ್‌ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಈಜುಕೊಳವನ್ನು ಕಟ್ಟಿಸಿಕೊಂಡಿದ್ದು ಸುದ್ದಿಯಾಗಿತ್ತು. ಶ್ರೀಮಂತರು ತಮ್ಮ ಹಣಬಲದಿಂದ ಮತ್ತು ಅಧಿಕಾರಿಗಳು ತಮ್ಮ ಅಧಿಕಾರದ ದರ್ಪದಿಂದ ಒಂದು ಹನಿಯಷ್ಟಾದರೂ ನೀರನ್ನು ಉತ್ಪಾದಿಸಲು ಸಾಧ್ಯವೇ? ಇಂತಹ ಸಂವೇದನಾರಹಿತ ವ್ಯಕ್ತಿಗಳಿಂದ ಬಡವರು ಮತ್ತು ಮಧ್ಯಮವರ್ಗದವರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ದಿಸೆಯಲ್ಲಿ ಅಧಿಕಾರಸ್ಥರು ಹಾಗೂ ಉಳ್ಳವರು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾದ, ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಕಾಳಜಿ ಮತ್ತು ಬದ್ಧತೆಯನ್ನು ತೋರಬೇಕಾದ ಅವಶ್ಯಕತೆ ಇದೆ. ಈ ಕುರಿತು ಸರ್ಕಾರ ಸಹ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ

→→→⇒ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್‌, ಬೆಂಗಳೂರು

ಮತದಾನದ ಗೋಪ್ಯತೆ ಕಾಯುತ್ತಿದ್ದ ಆ ದಿನಗಳು...

ತುರ್ತುಪರಿಸ್ಥಿತಿಯ ಕರಾಳ ದಿನಗಳು ಸರಿದು ದಶಕವೂ ಸಂದಿರಲಿಲ್ಲ. ಬಹುಶಃ ಇಂದಿರಾ ಗಾಂಧಿ ಅವರ ಹತ್ಯೆಯ ನಂತರದ ಲೋಕಸಭಾ ಚುನಾವಣೆಯಲ್ಲಿ ನನ್ನ ಅಪ್ಪ-ಅಮ್ಮ ಮತ ಹಾಕಿಬಂದಾಗ, ನಾವು ಕುತೂಹಲದಿಂದ ‘ಯಾವ ಪಕ್ಷಕ್ಕೆ ವೋಟ್ ಹಾಕಿದ್ರಿ’ ಎಂದು ಕೇಳಿದೆವು. ಆ ಪ್ರಶ್ನೆಗೆ ಅವರು ‘ಹಾಗೆಲ್ಲಾ ಕೇಳಬಾರ್ದು, ಅದು ಹೇಳುವಂಥದ್ದಲ್ಲ,
ನೀವು ಕೇಳುವಂಥದ್ದಲ್ಲ’ ಎಂದು ತಿಳಿಹೇಳಿದ್ದುದು ಇಂದಿಗೂ ಕಿವಿಯಲ್ಲಿ ಅನುರಣಿಸುತ್ತದೆ. ಆದರೆ, ಇಂದು...? ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೇ ವಿದ್ಯುನ್ಮಾನ ಮಾಧ್ಯಮಗಳ ಹಲವಾರು ವಾಹಿನಿಗಳ ಪ್ರತಿನಿಧಿಗಳು ಸಮೀಕ್ಷೆಯ ನೆಪದಲ್ಲಿ, ಅದೂ ವಿಚಿತ್ರ ದಿರಿಸಿನಲ್ಲಿ ಮತದಾರರನ್ನು ಸಂದರ್ಶಿಸುವ ರೀತಿ ಅಸಹ್ಯ ಹುಟ್ಟಿಸುವಂತೆ ಇರುತ್ತದೆ. ಈ ಪ್ರತಿನಿಧಿಗಳು ಮತದಾರರನ್ನು ನೇರವಾಗಿ, ‘ನೀವು ಯಾವ ಪಕ್ಷಕ್ಕೆ ವೋಟ್ ಹಾಕ್ತೀರಾ?’ ಎಂದು ಕೇಳುವ ಮೂಲಕ ಚುನಾವಣೆಯ ಪಾವಿತ್ರ್ಯವನ್ನು ಇನ್ನಿಲ್ಲದಂತೆ ಹಾಳುಗೆಡವುತ್ತಿದ್ದಾರೆ.

ಇಂತಹ ಅವಿವೇಕದ ನಡೆಯು ಪಾರದರ್ಶಕ, ನ್ಯಾಯಪರ ಚುನಾವಣೆ ಪ್ರಕ್ರಿಯೆಯ ದಾರಿ ತಪ್ಪಿಸುತ್ತಿದೆ. ಪ್ರಜ್ಞಾವಂತ, ಸುಶಿಕ್ಷಿತ ಮತದಾರರೂ ಇಂತಹ ಪ್ರಶ್ನೆಗಳಿಗೆ ಹಿಂದೆ ಮುಂದೆ ಯೋಚಿಸದೆ, ತಾವು ಇಂತಹ ಪಕ್ಷಕ್ಕೇ ವೋಟ್ ಹಾಕುವುದಾಗಿ ಉತ್ತರಿಸುತ್ತಿರುವುದು ಹೇಯವಾದುದು. ಈ ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ್ದನ್ನು ವಿಡಿಯೊ ಮಾಡಿ ಪ್ರದರ್ಶಿಸಿದ ಮತದಾರನ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದ ನಿದರ್ಶನ ಇದೆ. ಈಗ ಇಂತಹ ಪ್ರತಿನಿಧಿಗಳು ಮತ್ತು ಅದನ್ನು ಪ್ರಸಾರ ಮಾಡುವವರ ಮೇಲೆ ಆಯೋಗ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ವಾಹಿನಿಗಳು ಕೂಡ ತಮ್ಮ ಪ್ರತಿನಿಧಿಗಳು ಎಂಥ ಪ್ರಶ್ನೆಗಳನ್ನು ಮತದಾರರಲ್ಲಿ ಕೇಳಬೇಕು, ಸಮೀಕ್ಷಾ ಪ್ರಶ್ನೆಗಳ ಸ್ವರೂಪ ಹೇಗಿರಬೇಕು, ನಾಗರಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬಂತಹ ‘ಮಾಧ್ಯಮ ವಿವೇಕದ ಮಾರ್ಗ’ವನ್ನು ತೋರಿಸುವುದು ಔಚಿತ್ಯ

 →→→

ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ಈವರೆಗೆ ಸುಮ್ಮನಿದ್ದುದೇಕೆ?

ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಸ್ತಿಪಾಸ್ತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾಡುತ್ತಿರುವ ಆರೋಪಗಳನ್ನು ಪತ್ರಿಕೆಯಲ್ಲಿ ಓದಿ ಗಾಬರಿಯಾಯಿತು. ಅವರ ಬಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆಯಂತೆ. ಈ ರೀತಿಯ ಪ್ರಕರಣಗಳು ಅವರ ಗಮನಕ್ಕೆ ಬಂದಿದ್ದರೂ, ಸಂಬಂಧಿಸಿದ ದಾಖಲೆಗಳಿದ್ದರೂ ಇದುವರೆಗೂ ಕುಮಾರಸ್ವಾಮಿ ಅವರು ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಮುಂದಾಗದಿರುವುದಕ್ಕೆ ಕಾರಣವೇನು ಎಂಬುದು ತಿಳಿಯಲಿಲ್ಲ. ಈಗಿನ ನಾಯಕರು ಪರಸ್ಪರ ಮಾಡಿಕೊಳ್ಳುತ್ತಿರುವ ಆರೋಪ, ಪ್ರತ್ಯಾರೋಪಗಳನ್ನು ಗಮನಿಸಿದರೆ, ಪಕ್ಷಾತೀತವಾಗಿ ಇಂತಹ ಹಲವಾರು ಪ್ರಕರಣಗಳ ಬಗ್ಗೆ ಮಹತ್ವದ ಪುರಾವೆಗಳು ಹಲವಾರು ರಾಜಕೀಯ ವ್ಯಕ್ತಿಗಳ ಬಳಿ ಇರುವಂತೆ ಕಾಣುತ್ತಿದೆ! ಇಂತಹ ಮಹಾನುಭಾವರು ಈ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದರೆ ಮಾತ್ರ ಅವರ ಮಾತುಗಳಿಗೆ ಒಂದು ತೂಕ ಇರುತ್ತದೆ

⇒ಹರೀಶ್, ಬೆಂಗಳೂರು 

ಅವಹೇಳನ: ತುರ್ತು ಕ್ರಮ ಜರುಗಲಿ

ಬಿಜೆಪಿ ಸಂಸದೆ ಹೇಮಾಮಾಲಿನಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಪ್ರತಿಯಾಗಿ ಚುನಾವಣಾ ಆಯೋಗ ಅವರಿಗೆ 48 ಗಂಟೆಗಳ ಕಾಲ ‍ಪ್ರಚಾರ ಮಾಡದಂತೆ ನಿರ್ಬಂಧ ಹೇರಿರುವ ಸುದ್ದಿ ತಿಳಿದು ಸಮಾಧಾನವಾಯಿತು. ಆದರೆ, ಚುನಾವಣಾ ನಿಯಮ ಉಲ್ಲಂಘಿಸುವ ಪ್ರಕರಣಗಳನ್ನು ಮತ್ತಷ್ಟು ತ್ವರಿತವಾಗಿ ಇತ್ಯರ್ಥಪಡಿಸಿ, ನಿಯಮಗಳನ್ನು ಗಾಳಿಗೆ ತೂರುವವರ ವಿರುದ್ಧ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು. ಏಕೆಂದರೆ, ಸುರ್ಜೇವಾಲಾ ಅವರ ವಿರುದ್ಧ ಕ್ರಮ ಜರುಗಿಸಲು ಆಯೋಗ ಒಂದು ತಿಂಗಳಷ್ಟು ಸಮಯ ತೆಗೆದುಕೊಂಡಿದೆ. ಚುನಾವಣೆಗಳು ಸೀಮಿತ ಅವಧಿಯಲ್ಲಿ ಜರುಗುವುದರಿಂದ ವಿಳಂಬ ನೀತಿ ಅನುಸರಿಸುವುದು ಸಾಧುವಲ್ಲ. 

ತಮ್ಮ ಇಲ್ಲವೇ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕಾರಣಿಗಳು ಸುಳ್ಳು ಭರವಸೆ ನೀಡುವುದು, ಹಣ, ವಸ್ತುಗಳು, ಆಭರಣದಂತಹ ಆಮಿಷವೊಡ್ಡುವುದು, ಮತದಾರರನ್ನು ಬೆದರಿಸುವಂತಹ ಪ್ರಯತ್ನಗಳನ್ನು ಮಾಡಿಯೇ ತೀರುತ್ತಾರೆ. ನಿಯಮ ಉಲ್ಲಂಘಿಸುವಂತಹ ಮುಖಂಡರ ವಿರುದ್ಧ ಕನಿಷ್ಠ 24 ಗಂಟೆಗಳ ಒಳಗಾಗಿ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕಿದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. 

⇒ಎಂ.ಜಿ.ರಂಗಸ್ವಾಮಿ, ಹಿರಿಯೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT