ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 26 ಜೂನ್ 2024, 19:06 IST
Last Updated 26 ಜೂನ್ 2024, 19:06 IST
ಅಕ್ಷರ ಗಾತ್ರ

ಸಮ್ಮೇಳನಾಧ್ಯಕ್ಷರ ಆಯ್ಕೆ: ಸರ್ಕಾರದ ಪಾತ್ರವೇಕೆ?

ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು ಸರ್ಕಾರದ ಹಂಗಿನಲ್ಲಿರಬೇಕು ಎಂಬರ್ಥದ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯು ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಬಹಳಷ್ಟು ವಾದ ವಿವಾದಗಳನ್ನು ಹುಟ್ಟುಹಾಕಿರುವುದು ಸರಿಯಷ್ಟೇ. ಈ ಸಂದರ್ಭದಲ್ಲಿ, ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು (ಪ್ರ.ವಾ., ಜೂನ್‌ 26) ಶಿವಕುಮಾರ್‌ ಅವರ ಧೋರಣೆಯನ್ನೇ ಸಮರ್ಥಿಸು
ವಂತಿದೆ. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಬಾಕಿ ಇದ್ದು, ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತು ಸಾಹಿತಿಗಳ ಪಟ್ಟಿಯನ್ನು ಒದಗಿಸಿದ ನಂತರ ಚರ್ಚಿಸಿ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿರುವುದನ್ನು ನೋಡಿದರೆ, ಅಧ್ಯಕ್ಷರ ಆಯ್ಕೆಯಲ್ಲಿ ಪರೋಕ್ಷವಾಗಿ ಸರ್ಕಾರದ ಪಾತ್ರವಿದೆ ಎಂದಂತಾಯಿತು.

ಕಸಾಪ ನಿಯಮಾವಳಿ ಅನುಸಾರ, ಅಧ್ಯಕ್ಷರನ್ನು ಆಯ್ಕೆ ಮಾಡುವುದು ಅದರ ಕಾರ್ಯಕಾರಿ ಮಂಡಳಿ. ಇದರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಚುನಾಯಿತ ಅಧ್ಯಕ್ಷರು, ಹೊರನಾಡ ಕನ್ನಡಿಗರು, ವಿಶ್ವವಿದ್ಯಾಲಯ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಇರುತ್ತಾರೆ. ಬಹುತೇಕ ಸಂದರ್ಭ
ಗಳಲ್ಲಿ ಆಯ್ಕೆಯು ಸರ್ವಾನುಮತದಿಂದ ಕೂಡಿರುತ್ತದೆ. ಆದರೆ ಒಬ್ಬರಿಗಿಂತ ಹೆಚ್ಚು ಜನರ ಹೆಸರುಗಳು ಪ್ರಸ್ತಾಪವಾದರೆ ಗುಪ್ತ ಮತದಾನದ ಮೂಲಕವೂ ಆಯ್ಕೆ ನಡೆಯುತ್ತದೆ. ಒಟ್ಟಿನಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಕಸಾಪ ಕಾರ್ಯಕಾರಿ ಮಂಡಳಿಯೇ ವಿನಾ ಸರ್ಕಾರವಲ್ಲ. ಹೀಗಿರುವಾಗ, ಮುಖ್ಯಮಂತ್ರಿಯವರ ಹೇಳಿಕೆ ಅಚ್ಚರಿಯ ಸಂಗತಿ. ಇದು ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ತನ್ನ ಪಾರಮ್ಯವನ್ನು ಸಾಧಿಸಲು ಸರ್ಕಾರದ ಹುನ್ನಾರವೇ?

ಎಸ್‌.ಬಿ.ರಂಗನಾಥ್, ದಾವಣಗೆರೆ

ಮಾನವ ಹಕ್ಕು ಕಾರ್ಯಕರ್ತರಲ್ಲಿ ಸಂತಸ

ಹಲವು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಲಂಡನ್‌ನ ಜೈಲಿನಿಂದ ಬಿಡುಗಡೆಗೊಳಿಸಿರುವುದು ಜಗತ್ತಿನಾದ್ಯಂತ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ. ಅದೇ ರೀತಿ ಭಾರತದಲ್ಲಿಯೂ ಹಲವಾರು ಸಾಮಾಜಿಕ ಕಾರ್ಯಕರ್ತರು ಹಾಗೂ ಚಿಂತಕರು ಕೆಲವು ವರ್ಷಗಳಿಂದ ಜೈಲಿನಲ್ಲಿಯೇ ಕೊಳೆಯುತ್ತಿರುವುದು ವಿಷಾದದ ಸಂಗತಿ. ನ್ಯಾಯಾಲಯಗಳಲ್ಲಿ ವಿಚಾರಣೆ ತಡವಾಗುತ್ತಿರುವ ಪ್ರಕರಣಗಳಲ್ಲಿ, ವಿಚಾರಣೆ ಆದಷ್ಟು ಶೀಘ್ರವಾಗಿ ನಡೆದು, ಎಲ್ಲಾ ಹೋರಾಟಗಾರರು ಜೈಲಿನಿಂದ ಬಿಡುಗಡೆಯಾಗಿ ಬರಲಿ ಎಂಬುದು ಸ್ವಾತಂತ್ರ್ಯಪ್ರೇಮಿಗಳ ಬಯಕೆಯಾಗಿದೆ.

ಭೀಮನಗೌಡ ಕಾಶಿರೆಡ್ಡಿ, ಬೆಂಗಳೂರು

ಹೆಚ್ಚು ಹಾಲು, ಹೆಚ್ಚು ಹಣ: ಯಾಕಾಗಿ?

ರಾಜ್ಯದಲ್ಲಿ ಬುಧವಾರದಿಂದ ಗ್ರಾಹಕರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಕೊಳ್ಳಬೇಕಾದ
ಪ್ರಸಂಗ ಬಂದಿದೆ. ಹಾಲಿನ ದರವನ್ನು ಹೆಚ್ಚಿಸಿಲ್ಲವೆಂದು ಸರ್ಕಾರ ಹೇಳುತ್ತದೆ. ಇದುವರೆಗೂ ಅರ್ಧ ಲೀಟರ್ ಹೋಮೋಜಿನೈಸ್ಡ್ ಹಸುವಿನ ಹಾಲಿನ ಬೆಲೆ ₹ 24 ಇತ್ತು. ಈಗ, ಇದನ್ನು 550 ಎಂಎಲ್ ಹಾಲಿನ ಪ್ಯಾಕೆಟ್ ಮಾಡಿ ಇದಕ್ಕೆ ₹ 26 ನಿಗದಿಗೊಳಿಸಲಾಗಿದೆ. ಇನ್ನುಮುಂದೆ ಗ್ರಾಹಕರಿಗೆ 550 ಎಂಎಲ್‌ ಪ್ಯಾಕೆಟ್ ಮಾತ್ರ ಲಭ್ಯ. ಹಾಲಿನ ಪ್ರಮಾಣವನ್ನು 50 ಎಂಎಲ್‌ನಷ್ಟು ಹೆಚ್ಚು ಮಾಡಿದ್ದೇವೆಯೇ ವಿನಾ ದರವನ್ನು ಹೆಚ್ಚಿಸಿಲ್ಲ ಎಂದು ಸರ್ಕಾರ ಹೇಳಿರುವುದರಲ್ಲಿ ಸತ್ಯವಿದೆ. ಏಕೆಂದರೆ, ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ಗೆ ಕೊಡುತ್ತಿದ್ದ ₹ 24ರ ದರದಂತೆಯೇ ಲೆಕ್ಕ ಹಾಕಿದರೆ, 50 ಎಂಎಲ್‌ಗೆ ₹ 2.40 ಆಗುತ್ತದೆ. ಹೆಚ್ಚಿಸಿರುವುದು ₹ 2 ಮಾತ್ರ. ಆದರೆ, ವಸ್ತುಸ್ಥಿತಿ ಇದಲ್ಲ!

ಅರ್ಧ ಲೀಟರ್‌ ಹಾಲಿಗಿಂತ ಹೆಚ್ಚಿನ ಅಗತ್ಯ ಇಲ್ಲದವರೂ ಈಗ 550 ಎಂಎಲ್‌ ಪ್ಯಾಕೆಟ್ಟನ್ನು ಕಡ್ಡಾಯವಾಗಿ ಕೊಳ್ಳಬೇಕು. ಅಂದರೆ ಈಗ ಇವರು ತಿಂಗಳಿಗೆ ಹಾಲಿನ ಬಾಬ್ತಿಗೆ ಹೆಚ್ಚುವರಿ ಹಣವನ್ನು ಮೀಸಲಿಡಬೇಕು! ಹಾಲು ಉತ್ಪಾದನೆ ಹೆಚ್ಚಾಗಿ, ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಹಾಲನ್ನು ರೈತರಿಂದ ಅನಿವಾರ್ಯವಾಗಿ ಕೊಳ್ಳಬೇಕಾಗಿರುವುರಿಂದ ಕೆಎಂಎಫ್‌ಗೆ ಆಗುವ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ದಾಟಿಸುವ ಉಪಾಯ ಇದಾಗಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಸರ್ಕಾರ ದರ ಹೆಚ್ಚಿಸಿಲ್ಲ ಎಂಬುದೇನೋ ನಿಜ. ಆದರೆ ಗ್ರಾಹಕರು ಅನಗತ್ಯವಾಗಿ ಹೆಚ್ಚು ಹಾಲು ಕೊಳ್ಳುವಂತಾಗಿ ಹೆಚ್ಚು ಹಣ ತೆರುವಂತಾಗಿದೆ ಎನ್ನುವುದು ಸತ್ಯವಲ್ಲವೇ? 

–ಸಾಮಗ ದತ್ತಾತ್ರಿ, ಬೆಂಗಳೂರು

ಹೆಚ್ಚು’ವರಿ

ಕುಲುಕುತ್ತ ಬಳುಕುತ್ತ

ಮನೆಮನೆಗೆ ಬೆಳ್ಳಂಬೆಳಗ್ಗೆ

ಬಿರಬಿರನೆ ಬರುತ್ತಿದ್ದ

ಶ್ವೇತಸುಂದರಿ ನಂದಿನಿ

ಈಗ ಬರುತ್ತಿರುವೆ

ಮತ್ತಷ್ಟು ಮೈದುಂಬಿ...

50 ಮಿಲಿ ಹೆಚ್ಚು ಹೆಚ್ಚಾಗಿ!

ಜತೆಗೇ ಏರಿಸಿಕೊಂಡು ಹೆಚ್ಚು ದರ

ಅದಕ್ಕೇ ನಿನ್ನ ಹೊಸ ವರಸೆ ಕಂಡು

ಗ್ರಾಹಕರಿಗಾಗಿದೆಯಂತೆ ಬಲು ಬೇಸರ!

ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT