ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 21 ಫೆಬ್ರುವರಿ 2024, 19:10 IST
Last Updated 21 ಫೆಬ್ರುವರಿ 2024, 19:10 IST
ಅಕ್ಷರ ಗಾತ್ರ

ಮೇಯರ್ ಚುನಾವಣೆ: ಸಾಂವಿಧಾನಿಕ ಗೆಲುವು

ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಿಂದ ನಡೆದಿದ್ದ ಅಕ್ರಮವನ್ನು ಎತ್ತಿತೋರಿಸಿದ ಸುಪ್ರೀಂ ಕೋರ್ಟ್‌, ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಿರುವುದು ಪ್ರಜಾತಂತ್ರ ವ್ಯವಸ್ಥೆಯ ಸಾಂವಿಧಾನಿಕ ಗೆಲುವಾಗಿದೆ. ಪ್ರಜಾಸತ್ತಾತ್ಮಕ ತತ್ವಗಳನ್ನು ಸಂರಕ್ಷಿಸುವಲ್ಲಿ ವಿಫಲರಾಗಿರುವ ಚುನಾವಣಾ ಅಧಿಕಾರಿ ಅನಿಲ್ ಮಸೀಹ್‌, ಒಂದು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ. ಹೀಗಾಗಿ, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್‌ ಹೇಳಿರುವುದು ಸರಿಯಾಗಿದೆ. ಅನಿಲ್‌ ಅವರ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು. ಜೊತೆಗೆ ಇಂತಹ ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ದಡದಹಳ್ಳಿ ರಮೇಶ್, ಚಂದಕವಾಡಿ, ಚಾಮರಾಜನಗರ

ಅಲೆಮಾರಿ ಮಕ್ಕಳ ಪಾಲಿಗೆ ದಾರಿದೀಪ

ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿಯ ಪ್ರತಿ ವಸತಿಶಾಲೆ
ಯಲ್ಲಿಯೂ 20 ಸೀಟುಗಳನ್ನು ಮೀಸಲಿಡುವುದರ ಜೊತೆಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರ ಪ್ರವೇಶ ಕಲ್ಪಿಸಲಾಗುವುದು ಎಂಬ ಬಜೆಟ್‌ನ ಘೋಷಣೆಯು ಸಂವಿಧಾನದ ಪ್ರಸ್ತಾವನೆಗೆ ಪೂರಕವಾಗಿದೆ. ಇದು ಬರೀ ಘೋಷಣೆಯಾಗಿ ಉಳಿಯದೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಕ್ಕೆ ಬರುವಂತಾದರೆ ಎಷ್ಟೋ ಅಲೆಮಾರಿ ಮಕ್ಕಳ ಪಾಲಿಗೆ ದಾರಿದೀಪವಾಗುತ್ತದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂಬ ಮೂಲಭೂತ ಹಕ್ಕು ಅಲೆಮಾರಿಗಳ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ.

ಊರೂರಿನಲ್ಲೂ ಸರ್ಕಾರಿ ಶಾಲೆಗಳಿದ್ದರೂ ತಮ್ಮ ವಲಸೆಯ ಕಾರಣಕ್ಕೋ ಶಿಕ್ಷಣದ ಮಹತ್ವ ಅರಿಯದಿರುವು
ದಕ್ಕೋ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ಅಲೆಮಾರಿ ಪೋಷಕರು ಇದಕ್ಕೆ ಕಾರಣರಿರಬಹುದು. ಸರ್ಕಾರಿ ಶಾಲೆಗೆ ಸೇರಿರುವ ಮಕ್ಕಳಿಗೂ ಮನೆಯಲ್ಲಿ ಓದುವ ಉತ್ತಮ ವಾತಾವರಣ ಇರುವುದಿಲ್ಲ. ಇಂತಹವರಿಗೆ ವಸತಿಶಾಲೆ
ಗಳಿಗೆ ಸೇರಲು ಬರೆಯಬೇಕಾದ ಪ್ರವೇಶ ಪರೀಕ್ಷೆಯ ಬಗೆಗೆ ತಿಳಿವಳಿಕೆಯೇ ಇರುವುದಿಲ್ಲ. ಇದ್ದರೂ ಆ ವಿಷಯದಲ್ಲಿ ಅಸಡ್ಡೆ ತೋರುವ ಪೋಷಕರೂ ಇದ್ದಾರೆ. ಇಂತಹ ಮಕ್ಕಳು ವಸತಿಶಾಲೆಗಳನ್ನು ಸೇರುವಂತಾಗಿ ಶಿಕ್ಷಣ ಎಂಬ ಹಕ್ಕನ್ನು ಪಡೆಯುವಂತಾಗಲಿ ಎಂಬ ಸರ್ಕಾರದ ಆಶಯ ಖಂಡಿತವಾಗಿಯೂ ಅಲೆಮಾರಿ ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕೆ ಪೂರಕವಾಗಿದೆ.

ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಲ್ಲಿನ ಕೆಲವು ಹಿಂದುಳಿದ ಜಾತಿಗಳಿಗೆ ಅಲೆಮಾರಿ ಜನಾಂಗದ ಪ್ರಮಾಣಪತ್ರ ಸಿಕ್ಕಿಲ್ಲದೇ ಇರುವುದರಿಂದ, ಸರ್ಕಾರಿ ದಾಖಲೆಗಳನ್ನು ಸಕಾಲದಲ್ಲಿ ಒದಗಿಸಿಲ್ಲವೆಂಬ ಕಾರಣಕ್ಕಾಗಿ ಈ ಮಕ್ಕಳನ್ನು ಅನುಕೂಲವಂಚಿತರನ್ನಾಗಿ ಮಾಡದೆ ಅಂತಹವರಿಗೂ ಅವಕಾಶ ಮಾಡಿಕೊಡಬೇಕು.

ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ನ್ಯಾಯಾಂಗದ ಪರಿಧಿಯಲ್ಲಿ ಪರಿಹಾರ ಸೂಕ್ತ

ರಾಮನಗರದಲ್ಲಿ ವಕೀಲರ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣ ದಾಖಲಿಸಿದ ಸಂಬಂಧ ವಕೀಲರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಘೇರಾವ್ ಕೂಡ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ಪ್ರಕರಣ ದಿನೇದಿನೇ ರಾಜಕೀಯ ತಿರುವು
ಪಡೆದುಕೊಳ್ಳುತ್ತಿದೆ. ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿಯಬೇಕಾದ ವಕೀಲರ ಈ ಕ್ರಮ ನ್ಯಾಯಾಲಯದ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತದೆ. ಹೀಗಾಗಿ, ವಕೀಲರು ಈ ಸಮಸ್ಯೆಗೆ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಕೊಳ್ಳುವುದು ಸೂಕ್ತ.

ರುದ್ರೇಶ್ ಅದರಂಗಿ, ಬೆಂಗಳೂರು 

ಬೇಕಾಗಿದೆ ವನರಕ್ಷಕ ಸಮಿತಿ

ಮಂಗನ ಕಾಯಿಲೆ ತಡೆಗೆ ಸರ್ಕಾರವು ಉತ್ತಮ ಲಸಿಕೆ ಒದಗಿಸುವ ಬದಲು ಅರಣ್ಯ ಇಲಾಖೆಯು ಒಣ ಉಪದೇಶ ನೀಡುತ್ತಿದೆ ಎಂದು ಟೀಕಿಸಿ ಶರತ್ ಕಲ್ಕೋಡ್ ಮತ್ತು ನಾಗೇಶ ಹೆಗಡೆ ಅವರು ಬರೆದಿರುವ ಪತ್ರ (ವಾ.ವಾ., ಫೆ. 21) ಅತ್ಯಂತ ಸಮಂಜಸವಾಗಿದೆ. ಅವರು ಹೇಳಿರುವಂತೆ, ಮಲೆನಾಡಿನಲ್ಲಿ ನೀಲಗಿರಿ, ಅಕೇಶಿಯಾ ಹಾವಳಿ ಅತಿಯಾಗಿದೆ. ದಶಕಗಳ ಕೆಳಗೆ ಹರಿಹರ ಪಾಲಿಫೈಬರ್ಸ್ ಕಾರ್ಖಾನೆ ಆರಂಭವಾದಾಗ ಆ ಕಾರ್ಖಾನೆಗೆ ಬೇಕಾದ ಕಚ್ಚಾ ವಸ್ತುಗಳಾದ ನೀಲಗಿರಿ, ಅಕೇಶಿಯಾ ಬೆಳೆಗಾಗಿ ಅರಣ್ಯ ಇಲಾಖೆಯು ಮಲೆನಾಡಿನ ಸಮೃದ್ಧ, ವೈವಿಧ್ಯಪೂರ್ಣ, ಉಪಯುಕ್ತ, ಪರಿಸರರಕ್ಷಕ, ಜೀವಿಪೋಷಕ ಅರಣ್ಯಗಳನ್ನು ಕಡಿದು ಅಲ್ಲೆಲ್ಲ ನೀಲಗಿರಿ, ಅಕೇಶಿಯಾ ನೆಡುತೋಪು ಬೆಳೆಸಿತು. ಮಲೆನಾಡಿನಲ್ಲಿ ಅರಣ್ಯನಾಶ, ಹರಿಹರದ ಸುತ್ತಮುತ್ತ ಕಾರ್ಖಾನೆಯ ಹೊಗೆ ಮತ್ತು ತ್ಯಾಜ್ಯದಿಂದಾಗಿ ಉಂಟಾದ ಪರಿಸರ ಮಾಲಿನ್ಯ, ಬೆಳೆಹಾನಿ, ದುರ್ವಾಸನೆ, ಉಸಿರಾಟದ ಸಮಸ್ಯೆ ಇವೆಲ್ಲವುಗಳ ಕುರಿತು ಪತ್ರಿಕಾ ಬರಹಗಳ ಮೂಲಕ ಹಲವು ಪ್ರಜ್ಞಾವಂತರು ಸರ್ಕಾರದ ಕಿವಿ ಹಿಂಡುತ್ತಿದ್ದುದನ್ನು ಗಮನಿಸಿರುವ ಅನೇಕ ಹಿರಿಯರು ಇಂದು ನಮ್ಮೊಡನಿದ್ದಾರೆ.

ಮಲೆನಾಡಿನ ಹುಂಚ, ಕಡಸೂರು, ಹುಂಚದಕಟ್ಟೆ, ಕೆಸರೆ, ಗರ್ತಿಕೆರೆ, ಹಾಲಂದೂರು ಮೊದಲಾದ ಗ್ರಾಮಗಳಲ್ಲಿ ಕೃಷಿಕ ಜೀವನ ಸಾಗಿಸುತ್ತಿರುವವರ ಕಥೆ-ವ್ಯಥೆಯ ಅರಿವು ನನಗಿದೆ. ಮಾತ್ರವಲ್ಲ, ಮೇಲೆ ಹೇಳಿರುವ ಅರಣ್ಯನಾಶವನ್ನು ಕಣ್ಣಾರೆ ಕಂಡಿದ್ದೇನೆ. ಅಲ್ಲೆಲ್ಲ ಈಚೆಗೆ ಹೊರಗಿನವರು ಬಂದು ಉಪಯುಕ್ತ ಅರಣ್ಯವನ್ನು ಬೋಳಿಸಿ ರಬ್ಬರ್ ಪ್ಲ್ಯಾಂಟೇಶನ್ ಮಾಡುವ ಚೋದ್ಯವೂ ಜೋರಾಗಿದೆ! ಅರಣ್ಯನಾಶದ ಕುರಿತಾಗಲೀ ಪರಿಣಾಮ
ರೂಪಿಯಾಗಿ ಪಶುಗಳಿಂದಾಗುತ್ತಿರುವ ಬೆಳೆಹಾನಿ, ಮಂಗನ ಕಾಯಿಲೆಯಂತಹವುಗಳ ಬಗ್ಗೆಯಾಗಲೀ ನಿರ್ಲಕ್ಷ್ಯ ಸಲ್ಲದು. ಸರ್ಕಾರವು ಉತ್ತಮ ಲಸಿಕೆ ನೀಡಬೇಕು, ಸರಿಯೇ. ಜೊತೆಗೆ, ಆಯಾ ಗ್ರಾಮಗಳ ನಿವಾಸಿಗಳಿಂದಲೇ ಆಯ್ಕೆಯಾದ, ಸ್ಥಳೀಯರನ್ನು ಒಳಗೊಂಡ ವನರಕ್ಷಕ ಸಮಿತಿಗಳನ್ನು ರಚಿಸಿ, ಅವುಗಳಿಗೆ ಅವಶ್ಯ ಧನಸಹಾಯದ ಜೊತೆಗೆ ಅರೆ ನ್ಯಾಯಿಕ ಅಧಿಕಾರವನ್ನೂ ನೀಡಬೇಕು. ತನ್ಮೂಲಕ, ಸ್ಥಳೀಯರೇ ತಮ್ಮ ಮತ್ತು ಅರಣ್ಯದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಬೇಕು. 

ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT