ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದಂಡಕ್ಕೆ ರಿಯಾಯಿತಿ: ವಿಳಂಬಕ್ಕೆ ಮನ್ನಣೆ ನೀಡುವ ಹೊಸ ಆಯಾಮ?

Last Updated 5 ಫೆಬ್ರುವರಿ 2023, 18:49 IST
ಅಕ್ಷರ ಗಾತ್ರ

ದಂಡಕ್ಕೆ ರಿಯಾಯಿತಿ: ವಿಳಂಬಕ್ಕೆ ಮನ್ನಣೆ ನೀಡುವ ಹೊಸ ಆಯಾಮ?

ಸಂಚಾರ ನಿಯಮ ಉಲ್ಲಂಘಿಸಿ ದಂಡದ ಮೊತ್ತವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರ ರಿಗೆ ತೆಲಂಗಾಣ ಮಾದರಿಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಭರ್ಜರಿ ರಿಯಾಯಿತಿಗೆ ಉತ್ತಮ ಸ್ಪಂದನೆ ದೊರಕಿರುವುದೇನೋ ಸರಿ. ಇದರಿಂದ, ಸರ್ಕಾರಕ್ಕೆ ಕೋಟ್ಯಂತರ ಮೊತ್ತದ ದಂಡ ವಸೂಲಿಯ ತಲೆನೋವು
ಗಮನಾರ್ಹವಾಗಿ ಕಡಿಮೆಯಾಗಿದೆ. ರಿಯಾಯಿತಿ ನೀಡಿರುವುದನ್ನು ತಪ್ಪು ಎನ್ನಲಾಗದು. ಆದರೆ, ಈ ಕೊಡುಗೆಯು ಸಮಯದ ಪರಿಮಿತಿಯೊಳಗೆ ಪ್ರಾಮಾಣಿಕವಾಗಿ ದಂಡ ಕಟ್ಟುವವರು ಮುಂದಿನ ದಿನಗಳಲ್ಲಿ ಇಂತಹ ದಂಡಗಳನ್ನು ಪಾವತಿಸದಂತೆ ಅಥವಾ ವಿಳಂಬವಾಗಿ ಪಾವತಿಸುವಂತೆ ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ.

ನಾಲ್ಕು ಕಾಸು ರಿಯಾಯಿತಿ ದೊರಕಿದರೆ ಯಾರಿಗೆ ತಾನೇ ಬೇಡ? ಇದು ಒಂದು ರೀತಿಯಲ್ಲಿ, ಕೆಲವರು ಪ್ರಾಮಾಣಿಕವಾಗಿ ಬ್ಯಾಂಕ್‌ ಸಾಲ ಮರುಪಾವತಿಸುತ್ತಲೇ ಇರುವುದು ಮತ್ತು ಇನ್ನು ಕೆಲವರು ಸಾಲ ಮರುಪಾವತಿಸದೆ ಅದು ಸುಸ್ತಿಯಾಗುವಂತೆ ಮಾಡಿ, ಬ್ಯಾಂಕ್‌ನಿಂದ ಏಕಬಾರಿ ತೀರುವಳಿ ಅಥವಾ ಸಾಲ ಮನ್ನಾದಂತಹ ಕೊಡುಗೆ ಪಡೆದಂತೆ ಎನ್ನಬಹುದು. ಸರ್ಕಾರದ ಈ ಕ್ರಮದಲ್ಲಿ ಅರ್ಥ ಇರಬಹುದಾದರೂ ಇದು ಅಪ್ರಾಮಾಣಿಕತೆ ಮತ್ತು ವಿಳಂಬಕ್ಕೆ ಮನ್ನಣೆ ನೀಡುವ ಹೊಸ ಆಯಾಮದಂತೆ ಕಾಣುತ್ತದೆ.

⇒ರಮಾನಂದ ಶರ್ಮಾ, ಬೆಂಗಳೂರು

ಸರ್ಕಾರವನ್ನು ಬಯಲು ಮಾಡಬೇಕೆಂದರೆ...

ಅದಾನಿ ಸಮೂಹದ ಹಗರಣಗಳ ಕುರಿತ ತಕ್ಷಣದ ಚರ್ಚೆ ಹಾಗೂ ಜಂಟಿ ಸದನ ಸಮಿತಿ ಇಲ್ಲವೇ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯ ತನಿಖೆಗಾಗಿ ವಿರೋಧ ಪಕ್ಷಗಳು ಬಿಗಿ ಪಟ್ಟು ಹಿಡಿದಿರುವುದು ಮತ್ತು ಪ್ರತಿರೋಧ ತೋರುತ್ತಿರುವುದು ಸಂಸತ್ತಿನ ಎರಡು ದಿನಗಳ ಕಾರ್ಯಕಲಾಪವನ್ನು ಸಂಪೂರ್ಣವಾಗಿ ನುಂಗಿಹಾಕಿದೆ (ಪ್ರ.ವಾ., ಫೆ. 4). ಈ ಅವ್ಯವಹಾರದ ಆರೋಪ ಕುರಿತ ಪ್ರತಿಪಕ್ಷಗಳ ಏಕಕಂಠದ ವಿರೋಧ ಮೆಚ್ಚತಕ್ಕದ್ದೇ. ಆದರೆ ಇದು, ಸರ್ಕಾರದ ನುಣುಚಿಕೊಳ್ಳುವ ಪ್ರಯತ್ನಕ್ಕೆ ಹಾಸಿಗೆ ಹಾಸಿಕೊಟ್ಟಂತೆ ಆಗುವುದೆಂಬುದು ಗಮನಿಸತಕ್ಕ ಸಂಗತಿ. ಪೀಠಾಸೀನರು ವಿರೋಧ ಪಕ್ಷಗಳ ಬೇಡಿಕೆಯನ್ನು ಸ್ವೀಕರಿಸಿದರೆಂದೇ ಇಟ್ಟುಕೊಂಡರೂ, ವಿಷಯ ಎಷ್ಟೇ ಘನವಾದದ್ದಾದರೂ ಆಧಿಕಾರಾರೂಢ ಬಹುಸಂಖ್ಯಾತರ ‘ನ’ಕಾರದಲ್ಲಿ ಅದು ಕೊಚ್ಚಿ ಹೋಗುವುದಿಲ್ಲವೇ? ಅದರ ಬದಲು ವಿರೋಧ ಪಕ್ಷದ ಸದಸ್ಯರು ನಿಖರವಾದ ಮಾಹಿತಿ ಸಂಗ್ರಹಿಸಿ, ಜಾಣತನದ ವಾಗ್ಬಾಣ ಪ್ರಯೋಗದಿಂದ ಆಡಳಿತ ಪಕ್ಷವನ್ನು ಕಂಗೆಡಿಸಲು ಹೇರಳ ಅವಕಾಶ ಇರುತ್ತದೆ. ರಾಷ್ಟ್ರಪತಿಯವರ ವಂದನಾ ನಿರ್ಣಯದ ಮೇಲಿನ ಚರ್ಚೆಯೂ ಸೇರಿದಂತೆ ಯಾವುದೇ ಕಲಾಪವನ್ನಾದರೂ ಇದಕ್ಕೆ ಬಳಸಿಕೊಳ್ಳಬಹುದು.

ಮಾಹಿತಿ ಸತ್ಯವಾಗಿದ್ದರೆ, ಅದು ಆಳುವವರನ್ನು ಎಷ್ಟು ಉದ್ರೇಕಿಸಬಹುದೆಂದರೆ, ಅವರೇ ದೊಂಬಿಯೆಬ್ಬಿಸಿ ಕಲಾಪಕ್ಕೆ ಅಡ್ಡಿ ತರುವಂತೆ ಆಗಬಹುದು. ಆಗ ಸರ್ಕಾರ ಮಧ್ಯ ಪ್ರವೇಶಿಸಿ ತಿಪ್ಪೆ ಸಾರಿಸುವ ಮಾತಗಳನ್ನಾಡುವುದು ಅನಿವಾರ್ಯವಾಗುತ್ತದೆ. ಇಷ್ಟು ಸಾಕು ಸರ್ಕಾರವನ್ನು ಬಯಲು ಮಾಡಲು. ಕಲಾಪ ಭಂಗಕ್ಕಾಗಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕಳಂಕವೂ ಇದರಿಂದ ತಪ್ಪಿಹೋಗುತ್ತದೆ!

⇒ಆರ್.ಕೆ.ದಿವಾಕರ, ಬೆಂಗಳೂರು

ನೈತಿಕ ಮೌಲ್ಯ ಆಚರಣೆಯಲ್ಲಿರಲಿ

ನೈತಿಕ ಮೌಲ್ಯಗಳನ್ನು ಒಳಗೊಂಡ ಶಿಕ್ಷಣಕ್ಕೆ ಸಂಬಂಧಿಸಿದ ಅರವಿಂದ ಚೊಕ್ಕಾಡಿ ಅವರ ಲೇಖನ
(ಪ್ರ.ವಾ., ಫೆ. 3) ಬಹಳ ಪ್ರಸ್ತುತವಾಗಿದೆ. ನಾನು ಒಬ್ಬ ಶಿಕ್ಷಕನಾಗಿ, ಈ ವಿಚಾರವಾಗಿ ಹಲವಾರು ಬಾರಿ ಆತ್ಮವಿಮರ್ಶೆ ಮಾಡಿಕೊಂಡಿದ್ದೇನೆ. ಶಿಕ್ಷಕರಾಗಿ ನಾವು ಮಕ್ಕಳೊಂದಿಗೆ ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿ ಕೊಂಡಾಗ, ಅಂತಹ ವಿಷಯಗಳು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಆಚರಣೆಯಲ್ಲಿವೆ ಎಂದು ಮಕ್ಕಳು ವಿಚಾರ ಮಾಡುತ್ತಾರೆ. ಒಂದು ವೇಳೆ ಶಾಲೆಯಲ್ಲಿ ಬಿತ್ತಿದ ನೈತಿಕ ಮೌಲ್ಯಗಳು ತಾವು ವಾಸಿಸುವ ಪರಿಸರದಲ್ಲಿ ಇಲ್ಲವೆಂದಾದರೆ, ಶಾಲೆಯಲ್ಲಿನ ನೈತಿಕ ಮೌಲ್ಯಗಳ ಬೋಧನೆ ಅಪ್ರಸ್ತುತ ಎಂದು ಅವರಿಗೆ ಅನ್ನಿಸುತ್ತದೆ. ಆದರೂ ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿರಬೇಕು. ಇಂದಿನ ಪ್ರಯತ್ನ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ.

ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿಯು ಪಾಲಕರು, ಸಮುದಾಯ ಮತ್ತು ಶಾಲೆಗಳಿಂದ ಆಗಬೇಕಾದ ಅತಿ ಅವಶ್ಯಕವಾದ ಜವಾಬ್ದಾರಿಯಾಗಿದೆ.⇒

⇒ನಿಂಗಪ್ಪ ಮಾಳಶೆಟ್ಟಿ, ಕಾಜಿಬೀಳಗಿ, ಜಮಖಂಡಿ

‘ಕಾಶಿ ಯಾತ್ರೆ’ಯ ರಾಜಕಾರಣ ತರವೇ?

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷರೂ ಆದ ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ 3,000ಕ್ಕೂ ಹೆಚ್ಚು ಜನರನ್ನು ಕಾಶಿ ಯಾತ್ರೆಗೆ ಕಳುಹಿಸಿಕೊಟ್ಟಿರುವುದು ವರದಿಯಾಗಿದೆ (ಪ್ರ.ವಾ., ಫೆ. 5). ಕಾಶಿ ಯಾತ್ರೆ ಮಾಡಿಸುವುದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕೆಲಸವೇ ಅಥವಾ ಇದು ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮತಗಳ ಮೇಲೆ ಕಣ್ಣಿಟ್ಟ ದುರಾಲೋಚನೆಯೇ? ‌

ರಸ್ತೆ, ನೀರು, ವಸತಿ, ಶಾಲೆ ಕಾಲೇಜು, ಆಸ್ಪತ್ರೆ, ಸಮುದಾಯ ಭವನ, ಆಟದ ಮೈದಾನದಂತಹ ಜನೋಪಕಾರಿ ಕೆಲಸಗಳ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕಾಗಿದ್ದವರು ಇಂತಹ ರಾಜಕಾರಣ ಮಾಡುವುದು ಯಾವ ನ್ಯಾಯ? ಕಾಶಿ ಯಾತ್ರೆ ಮಾಡಿಸಿ ಮತ ಕೇಳುವುದಕ್ಕೂ ಲಂಚ ಕೊಟ್ಟು ವೋಟು ಕೊಡಿ ಅನ್ನುವುದಕ್ಕೂ ಏನು ವ್ಯತ್ಯಾಸ? ಯಾವುದೇ ಪಕ್ಷದ ರಾಜಕಾರಣಿಗಳಾದರೂ ಸರಿ ಇಂತಹ ದಾರಿ ಹಿಡಿಯುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ಸಂಗತಿಯಲ್ಲ.⇒

→ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT