ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 19 ಮೇ 2023, 18:35 IST
Last Updated 19 ಮೇ 2023, 18:35 IST
ಅಕ್ಷರ ಗಾತ್ರ

ಚಿತ್ರನಟರಿಗಿಲ್ಲ ಪ್ರತ್ಯೇಕ ಸಂಚಾರ ನಿಯಮ

ಮುಂಬೈನಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣಿಸಿದ ಚಿತ್ರನಟರಾದ ಅಮಿತಾಭ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರಿಗೆ ದಂಡ ವಿಧಿಸದೆ, ಅವರನ್ನು ಕರೆದೊಯ್ದ ಇಬ್ಬರು ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದು ಎಷ್ಟು ಸರಿ ಎಂದು ಪೂಜಾ ಎಸ್‌. ಅವರು ಕೇಳಿದ್ದಾರೆ (ವಾ.ವಾ., ಮೇ 19). ನನ್ನ ಪ್ರಕಾರ, ಪೊಲೀಸರ ಈ ಕ್ರಮ ಸಂಪೂರ್ಣ ಸರಿಯಿದೆ. ಅವರು ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ ಅಷ್ಟೆ. ಚಿತ್ರನಟರನ್ನು ವಾಹನದ ಹಿಂದೆ ಕೂರಿಸಿಕೊಂಡು ಹೋಗುವವರಿಗೆ ಪ್ರತ್ಯೇಕ ಸಂಚಾರ ನಿಯಮಗಳು ಇರುವುದಿಲ್ಲವೆಂಬುದು ಆ ಇಬ್ಬರು ವಾಹನ ಮಾಲೀಕರಿಗೆ ತಿಳಿದಿರಬೇಕಿತ್ತು.

ಪ್ರಖ್ಯಾತ ವ್ಯಕ್ತಿಗಳು ಹಿಂದೆ ಕೂತಿರಬೇಕಾದರೆ ನನ್ನನ್ಯಾರು ತಡೆದಾರು ಎಂಬ ಅವರ ಅಸಡ್ಡೆಯ ಧೋರಣೆಯೇ ಇದಕ್ಕೆಲ್ಲಾ ಕಾರಣ. ಅವರಿಬ್ಬರೂ ಈ ಇಬ್ಬರು ಗಣ್ಯರಿಗೆ ‘ನಾನು ನಿಮಗೆ ಸಹಾಯ ಮಾಡುತ್ತಿದ್ದೇನೆ. ಪೊಲೀಸರಿಂದ ಏನಾದರೂ ಹೆಚ್ಚುಕಮ್ಮಿಯಾದರೆ ನೀವೇ ನೋಡಿಕೊಳ್ಳಬೇಕು’ ಎಂದು ಮೊದಲೇ ಹೇಳಿ ನಂತರ ಕರೆದೊಯ್ಯಬಹುದಿತ್ತು. ಆ ದಂಡದ ಮೊತ್ತವನ್ನು, ಈಗ ಕಲಿತ ಪಾಠಕ್ಕೆ ತೆತ್ತ ಬೆಲೆಯೆಂದು ತಿಳಿದು, ಇನ್ನು ಮುಂದಾದರೂ ಎಚ್ಚರಿಕೆಯಿಂದ ಇರುವುದು ಲೇಸು. ಇಷ್ಟೊತ್ತಿಗಾಗಲೇ ಆ ಇಬ್ಬರೂ ಈ ತೀರ್ಮಾನ ತೆಗೆದುಕೊಂಡಿರಬಹುದು. ಉಳಿದಂತೆ ಈ ಪ್ರಕರಣವು ಬೇರೆಯವರಿಗೆಲ್ಲಾ ಒಂದು ರೀತಿಯ ಎಚ್ಚರಿಕೆಯ ಪಾಠದಂತೆಯೇ ಸರಿ.

ರವಿಕಿರಣ್ ಶೇಖರ್, ಬೆಂಗಳೂರು

ಸಚಿವರ ಆಯ್ಕೆಗೆ ಇರಲಿ ಮಾನದಂಡ

ರಾಜ್ಯದಲ್ಲಿ ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಆಯ್ಕೆ ಕಸರತ್ತು ನಡೆಯುತ್ತಿದೆ. ಸಚಿವರ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಕೆಲವು ಮಾನದಂಡಗಳನ್ನು ಇರಿಸಿಕೊಳ್ಳಬೇಕು. ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಸಹಜವಾಗಿಯೇ ನಡೆಯುತ್ತದೆ. ಆದರೆ ಅನುಭವವನ್ನೇ ಆದ್ಯತೆ ಮಾಡಿಕೊಂಡು, ಹಿರಿ ವಯಸ್ಸಿನ ಮತ್ತು ಈಗಾಗಲೇ ಸಚಿವ ಸ್ಥಾನ ನಿಭಾಯಿಸಿ ಯಶಸ್ವಿಯಾಗದವರನ್ನು ಪರಿಗಣಿಸಬಾರದು. ಪಕ್ಷನಿಷ್ಠೆ ಹೊಂದಿರುವವರು ಮತ್ತು ಜನಾನುರಾಗಿಗಳಿಗೆ ಆದ್ಯತೆ ನೀಡಬೇಕು.

ಸಚಿವರಾಗಿ ತಮ್ಮ ಆಡಳಿತಾವಧಿಯಲ್ಲಿ ಇಡೀ ರಾಜ್ಯವನ್ನು ಒಮ್ಮೆಯಾದರೂ ಪರ್ಯಟನೆ ಮಾಡುವಂತಹ ಸಾಮರ್ಥ್ಯ ಇರುವವರನ್ನು ಗುರುತಿಸಬೇಕು. ತಮ್ಮ ಜಿಲ್ಲೆ ಮತ್ತು ಬೆಂಗಳೂರಿಗೆ ಸೀಮಿತವಾಗುವವರನ್ನು ಮೊದಲೇ ನಿಯಂತ್ರಿಸಬೇಕು. ಸಚಿವರನ್ನು ವಿವಿಧ ಕಾರಣಗಳಿಗಾಗಿ ಇಡೀ ರಾಜ್ಯದ ಜನತೆ ಭೇಟಿ ಮಾಡುವ ಸಾಧ್ಯತೆಗಳಿರುತ್ತವೆ. ಆದರೆ ಅವರು ಜಿಲ್ಲಾ ಕೇಂದ್ರ ಮತ್ತು ತಮ್ಮ ನಿಗದಿತ ಕಚೇರಿಗಳಲ್ಲಿ ಸಿಗದೇ ಸಾರ್ವಜನಿಕರು ಪರಿತಪಿಸುವಂತೆ ಆಗಬಾರದು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎಂಬುದಕ್ಕೆ, ಹಿಂದಿನ ಸರ್ಕಾರದ ಬಹಳಷ್ಟು ಸಚಿವರು ಹೀನಾಯವಾಗಿ ಸೋಲನುಭವಿಸಿರುವುದೇ ಉತ್ತಮ ನಿದರ್ಶನ.

ತಿಮ್ಮೇಶ ಮುಸ್ಟೂರು, ಜಗಳೂರು

ಸೋತು ಸುಣ್ಣವಾದವರ ಹತಾಶ ನುಡಿ

‘ಇನ್ನು ಎರಡು ಮೂರು ತಿಂಗಳಲ್ಲಿ ರಾಜಕೀಯ ಬೆಳವಣಿಗೆ ನಡೆಯಲಿದೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಆದಂತೆ ಈ ಸರ್ಕಾರದಿಂದ ಲೂಟಿ ಆಗಲಿದೆ’ ಎಂದಿದ್ದಾರೆ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ (ಪ್ರ.ವಾ., ಮೇ 19). ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್ ಪಕ್ಷದ ಹತಾಶ ನುಡಿ ಇದು. ಜೆಡಿಎಸ್ ಅನ್ನು ಸ್ವತಃ ಕುಟುಂಬದ ಪಕ್ಷವೆಂಬಂತೆ ಕಾಪಾಡುತ್ತಿರುವ ಕುಮಾರಸ್ವಾಮಿ, ಮೊದಲು ಪಕ್ಷವನ್ನು ಸಾರ್ವಜನಿಕಗೊಳಿಸಲಿ, ನಂತರ ಸರ್ಕಾರದ ಲೂಟಿಯ ವಿರುದ್ಧ ಹೋರಾಡಲಿ. ಸ್ವಚ್ಛ ಆಡಳಿತ ಬಯಸುವ ಮತದಾರರು ಆಗ ಜೆಡಿಎಸ್‌ನ ಕೈ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದು ಬಿಟ್ಟು ಸರ್ಕಾರದ ಅಸ್ಥಿರತೆಯ ಬಗ್ಗೆ ಮಾತನಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಅಭಿವೃದ್ಧಿ ಕಾರ್ಯ: ಜನರ ಮೇಲಿದೆ ಜವಾಬ್ದಾರಿ

ಕಾಂಗ್ರೆಸ್‌ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಗ್ಯಾರಂಟಿ ಕೊಡುಗೆಗಳನ್ನಷ್ಟೇ ಪೂರೈಸಲು ಸರ್ಕಾರದ ಮೇಲೆ ಒತ್ತಡ ಹಾಕಿ, ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆಯುವಂತೆ ಮಾಡದಿರುವ ಜವಾಬ್ದಾರಿ ಜನರ ಮೇಲಿದೆ. ಗ್ಯಾರಂಟಿ ಕೊಡುಗೆಗಳ ಘೋಷಣೆಯ ಪ್ರಭಾವದಿಂದ ಮಾತ್ರವೇ ಕಾಂಗ್ರೆಸ್ ಪಕ್ಷವು ಅಧಿಕಾರ ಗಳಿಸಿಲ್ಲ ಅಲ್ಲವೇ? ಬದಲಾಗಿ, ಇತರ ಹತ್ತು ಹಲವಾರು ಆಶಯಗಳನ್ನು ನಿರೀಕ್ಷಿಸಿ ಜನರು ಮತ ಚಲಾಯಿಸಿದ್ದಾರೆ. ‌

ಭ್ರಷ್ಟಾಚಾರ ನಿರ್ಮೂಲನೆ, ಗ್ರಾಮೀಣ ರಸ್ತೆ, ಸಾರಿಗೆ, ವಸತಿಯಂಥ ಹತ್ತಾರು ಮೂಲ ಸೌಕರ್ಯಗಳ ಅಭಿವೃದ್ಧಿ, ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಹಾಗೂ ಮಾರಾಟ ಸೌಲಭ್ಯ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿಯ ಕಡೆ ಹೆಚ್ಚಿನ ಗಮನ, ಶಾಲಾಭಿವೃದ್ಧಿ, ಮಕ್ಕಳ ಆರೋಗ್ಯ, ಸುರಕ್ಷತೆ ಪ್ರಥಮ ಆದ್ಯತೆಯಾಗಲಿ. ಉನ್ನತ ಶಿಕ್ಷಣದ ಅಭಿವೃದ್ಧಿಯ ಕಡೆಗೂ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ. ಉದಾಹರಣೆಗೆ, ವಿಶ್ವವಿದ್ಯಾಲಯಗಳಲ್ಲಿ ಕಾಯಂ ಬೋಧಕರ ನೇಮಕ, ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟವನ್ನು ವಿಶ್ವದರ್ಜೆಗೆ ಏರಿಸುವ ಸಾಧ್ಯತೆಯಂಥ ಹತ್ತಾರು ಅಭಿವೃದ್ಧಿ ಚಿಂತನೆಗಳನ್ನು ಹೊತ್ತು ಮತ ಚಲಾಯಿಸಿದ ಮತದಾರರ ನಿರೀಕ್ಷೆಗಳನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಕರ್ನಾಟಕವು ದೇಶದಲ್ಲಿಯೇ ಮಾದರಿ ರಾಜ್ಯವಾಗಬಲ್ಲದು.

ಡಾ. ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ಆರೋಗ್ಯ ಕಾಯ್ದುಕೊಳ್ಳುವುದೇ ಪರಿಹಾರ

ಹೆಚ್ಚಿನ ಆಸ್ಪತ್ರೆಗಳು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಮಾಧಾನ ಕೊಡುವುದಕ್ಕಿಂತ ಆತಂಕವನ್ನೇ ಉಂಟುಮಾಡುತ್ತವೆ ಎಂಬುದು ಸತೀಶ್‌ ಜಿ.ಕೆ. ತೀರ್ಥಹಳ್ಳಿ ಅವರ ಲೇಖನವನ್ನು (ಸಂಗತ, ಮೇ 19) ಓದಿದಾಗ ಸ್ಪಷ್ಟವಾಗುತ್ತದೆ. ಸಣ್ಣ ತಲೆ ನೋವಿಗೂ ‘ಎಂಆರ್‌ಐ ವರದಿ ತನ್ನಿ, ನಂತರ ಚಿಕಿತ್ಸೆ ನೀಡುತ್ತೇನೆ’ ಎನ್ನುವ ವೈದ್ಯರೇ ಹೆಚ್ಚಾಗಿದ್ದಾರೆ. ಪಟ್ಟಣದ ವೈದ್ಯರು ಪರೀಕ್ಷೆ ಮಾಡುವ ಮೊದಲೇ ‘ಆರೋಗ್ಯ ವಿಮೆ ಇದೆಯೇ’ ಎಂದು ಕೇಳುವ ಪರಿಪಾಟವಿದೆ. ಆರೋಗ್ಯ ವಿಮೆ ಇದ್ದರೆ ಒಂದು ರೀತಿ, ಇಲ್ಲದಿದ್ದರೆ ಇನ್ನೊಂದು ರೀತಿಯ ಚಿಕಿತ್ಸೆ! ಇದನ್ನೆಲ್ಲಾ ನೋಡಿದರೆ, ಆರೋಗ್ಯ ಕಾಯ್ದುಕೊಳ್ಳಬೇಕಾದ ಮಹತ್ವದ ಅರಿವಾಗುತ್ತದೆ. ಯೋಗ, ಧ್ಯಾನ, ಪ್ರಾಣಾಯಾಮವನ್ನು ಕಲಿತು ಸಮಾಧಾನಚಿತ್ತದಿಂದ ಜೀವನ ನಡೆಸುವುದು ಕಾಯಿಲೆಗಳಿಂದ ದೂರ ಉಳಿಯುವುದಕ್ಕೆ ಪೂರಕ.
ತಿಮ್ಮರಾಜು ಎಸ್‌.ಆರ್‌., ದಾವಣಗೆರೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT