ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಕೇಂದ್ರದತ್ತ ವಾಲುವುದು’ ಎಂದರೆ...?

Last Updated 23 ಆಗಸ್ಟ್ 2020, 16:42 IST
ಅಕ್ಷರ ಗಾತ್ರ

‘ತುರ್ತು ಸಂದರ್ಭಗಳಲ್ಲಿ ರಾಜ್ಯಗಳು ‘ಕೇಂದ್ರದತ್ತ ವಾಲುವುದು’ ಎಂದರೆ... ಬಲಿಷ್ಠ ಕೇಂದ್ರದ ಅಗತ್ಯ’ ಎಂದು ಸೂರ್ಯ ಪ್ರಕಾಶ್ ತಮ್ಮ ಅಂಕಣ ಬರಹದಲ್ಲಿ ವಾದಿಸಿದ್ದಾರೆ. (ಪ್ರ.ವಾ., ಆ. 20). ಕೋವಿಡ್ ಸೋಂಕು ರೋಗದಂಥ ಅಪಾಯವನ್ನು ನಿಯಂತ್ರಿಸುವಲ್ಲಿ ಕೇಂದ್ರೀಕೃತ ವ್ಯವಸ್ಥೆ ಬೇಕಾಗುತ್ತದೆ ಎಂಬುದು ಅವರ ವಾದದ ಹೂರಣ. ಅಂಬೇಡ್ಕರ್ ಅವರ ವ್ಯಾಖ್ಯಾನ ಮತ್ತು ಸಂವಿಧಾನಾತ್ಮಕವಾದ ಆಡಳಿತ ಅವಕಾಶಗಳನ್ನು ಉಲ್ಲೇಖಿಸುತ್ತಾ ‘ಕೇಂದ್ರೀಕೃತ ಆಡಳಿತ’ ವ್ಯವಸ್ಥೆಯ ಪರವಾಗಿ ಅವರು ಬರೆದಿದ್ದಾರೆ. ಆದರೆ, ಇಂತಹ ವಾದವನ್ನು ಒಪ್ಪುವ ಅನೇಕರು, ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಮಾಡಿರುವ ಕಾರ್ಯವು ಕೇವಲ ಆದೇಶ ಕೊಡುವುದಕ್ಕೆ ಸೀಮಿತವಾಗಿದೆ ಎಂಬ ಮುಖ್ಯವಾದ ಅಂಶವನ್ನು ಮರೆತಿದ್ದಾರೆ. ಈ ಸವಾಲನ್ನು ಎದುರಿಸುವ ಪೂರ್ಣ ಜವಾಬ್ದಾರಿ ಹೊತ್ತಿರುವ ರಾಜ್ಯ ಸರ್ಕಾರಗಳು ಸೊರಗಿವೆ, ತಿಣುಕಾಡುತ್ತಿವೆ. ಬರ ಬರಲಿ, ನೆರೆ ಬರಲಿ ಕೇಂದ್ರ ಸರ್ಕಾರದ ಎದುರು ರಾಜ್ಯ ಸರ್ಕಾರ, ಜಿಎಸ್‌ಟಿ ರೂಪದಲ್ಲಿ ತಾನು ಕೊಟ್ಟ ಹಣವನ್ನು ವಾಪಸ್ ಪಡೆಯಲು ಅಂಗಲಾಚುವ ಪರಿಸ್ಥಿತಿ ಇದೆ. ಕೇಂದ್ರದತ್ತ ವಾಲುವುದು ಎಂದರೆ ಇದೇ ಏನು?

ಕರ್ನಾಟಕ ಸರ್ಕಾರಕ್ಕೆ ಹೆಚ್ಚಿನ ಆಡಳಿತ ಸ್ವಾತಂತ್ರ್ಯ ಇದ್ದಿದ್ದರೆ ದಕ್ಷಿಣ ಕೊರಿಯಾದಂತೆ ತಾನೂ ಕಟ್ಟುನಿಟ್ಟಾದ ಗಡಿ ಭದ್ರತೆ ಮತ್ತು ಕೋವಿಡ್ ಪರೀಕ್ಷೆಗಳನ್ನು ಅಳವಡಿಸಿಕೊಂಡು, ಕೋವಿಡ್ ಹಾಟ್‌ಸ್ಪಾಟ್ ಆದ ನೆರೆ ರಾಜ್ಯಗಳಿಂದ ಜನ ಇಲ್ಲಿಗೆ ಬರುವುದನ್ನು ತಡೆದು, ಕೋವಿಡ್ ಅನ್ನು ಇನ್ನೂ ವ್ಯವಸ್ಥಿತವಾಗಿ ನಿಯಂತ್ರಿಸುತ್ತಿತ್ತು. ರಾಜ್ಯ ಸರ್ಕಾರಗಳು ವಿಫಲವಾದರೆ ಅದಕ್ಕೆ ರಾಜ್ಯಗಳನ್ನು ಹೊಣೆ ಮಾಡಲಾಗುತ್ತಿದೆ. ಎಲ್ಲಿಯಾದರೂ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದರೆ ಅದರ ಶ್ರೇಯವನ್ನು ಕೇಂದ್ರ ಸರ್ಕಾರದ ಅಪ್ರತಿಮ ನಿರ್ವಹಣೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನೇ ಲೇಖಕರು ‘ಬಲಿಷ್ಠ ಕೇಂದ್ರದತ್ತ ವಾಲುವುದು’ ಎಂದು ಬಣ್ಣಿಸಿರಬಹುದೇ?

-ಡಾ. ಶ್ರೀಕಂಠ ದಾನಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT