‘ಪದ್ಮಶ್ರೀ’ ಭಾಜನರ ಸಂಕಷ್ಟದ ಬದುಕು

‘ಪದ್ಮ ಪ್ರಶಸ್ತಿ: ಆರ್ಥಿಕ ಭದ್ರತೆಯೂ ಬೇಕಲ್ಲವೇ?’ ಲೇಖನವು (ಲೇ: ಡಿ.ಸಿ. ನಂಜುಂಡ, ಪ್ರ.ವಾ., ಜ. 29) ಪದ್ಮ ಪುರಸ್ಕೃತರ ಸಂಕಟಗಳ ಮೇಲೆ ಬೆಳಕು ಚೆಲ್ಲಿದೆ. ಇದಕ್ಕೆ ಬಾಗಲಕೋಟೆ ಜಿಲ್ಲೆಯ ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ನಿದರ್ಶನವಾಗಿದ್ದಾರೆ. ಸುಗತೇಕರ್ ಅವರಿಗೆ 76ನೇ ಗಣರಾಜ್ಯೋತ್ಸವ
ದಲ್ಲಿ ‘ಪದ್ಮಶ್ರೀ’ ನೀಡಲಾಗಿದೆ. ನಾಡೋಜ ಪ್ರಶಸ್ತಿಯೂ ಸೇರಿ 2 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ಗೂ ಭಾಜನರಾಗಿದ್ದಾರೆ. ಅವರಿಗೀಗ 84 ವರ್ಷ. ಅನಾರೋಗ್ಯ ಕಾಡುತ್ತಿದೆ. ಎಲ್ಲ ನೋವು ಹೊತ್ತುಕೊಂಡೇ ಹಳ್ಳಿ ಹಳ್ಳಿಗೆ ಹೋಗಿ ಗೊಂದಲಿಗರ ಕಥೆ ಹೇಳಿ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಮಾಸಿಕ ಗೌರವಧನ ನೀಡಿದರೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಲಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.

– ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ಲಕ್ಕುಂಡಿಯು ಪಾರಂಪರಿಕ ತಾಣವಾಗಲಿ

ಗದಗ ಜಿಲ್ಲೆಯ ಲಕ್ಕುಂಡಿ ಕರ್ನಾಟಕದ ಐತಿಹಾಸಿಕ ಗರಿಮೆ ಹೊತ್ತುಕೊಂಡಿರುವ ಊರು. ದಕ್ಷಿಣ ಭಾರತದಲ್ಲಿ ಹೊಯ್ಸಳರು ಹಾಗೂ ಕಲ್ಯಾಣಿ ಚಾಲುಕ್ಯರ ಕಾಲಘಟ್ಟದಲ್ಲಿ ನಾಣ್ಯಗಳನ್ನು ಟಂಕಿಸುತ್ತಿದ್ದ ಪ್ರಮುಖ ಆರ್ಥಿಕ ಕೇಂದ್ರವಾಗಿತ್ತು. ಜೊತೆಗೆ ಪಂಪ, ಪೊನ್ನ, ರನ್ನರಂತಹ ಕವಿಶ್ರೇಷ್ಠರಿಗೆ ಆಶ್ರಯ ನೀಡಿದ್ದ ಅತ್ತಿಮಬ್ಬೆಯ ಕರ್ಮಭೂಮಿಯೂ ಆಗಿತ್ತು. ಹಿಂದೂ, ಜೈನ, ಬೌದ್ಧಧರ್ಮದ ಸಾಂಸ್ಕೃತಿಕ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿಯೇ ಲಕ್ಕುಂಡಿ ಎಂದರೆ ತಪ್ಪಾಗಲಾರದು. ತನ್ನ ಒಡಲಲ್ಲಿ ಐತಿಹ್ಯಗಳ ಆಗರವನ್ನೇ ಹೊಂದಿರುವ ಲಕ್ಕುಂಡಿಯಲ್ಲಿ ಇತ್ತೀಚೆಗೆ ಸಿಕ್ಕ ಚಿನ್ನಾಭರಣಗಳು ಬರೀ ಆಭರಣಗಳಲ್ಲ; ಅವು ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ ಪರಂಪರೆಯ ಅಮೂಲ್ಯ ಕುರುಹುಗಳಾಗಿವೆ. ಈ ಊರನ್ನು ಕರ್ನಾಟಕದ ಐತಿಹಾಸಿಕ ಪಾರಂಪರಿಕ ತಾಣವೆಂದು ಘೋಷಿಸಿ ಸಂರಕ್ಷಿಸಬೇಕಿದೆ.

– ತ್ರಿವೇಣಿ ವಿಜಯ್, ಬೆಂಗಳೂರು

ಜೀಪ್ ಚಾಲಕರಿಂದ ಸುಲಿಗೆಯನ್ನು ತಪ್ಪಿಸಿ

ಚಿಕ್ಕಮಗಳೂರಿನಲ್ಲಿ ಜರಿ ಫಾಲ್ಸ್ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ರಕ್ಷಣೆ ಹಾಗೂ ಸುರಕ್ಷತೆ ಇಲ್ಲದಂತಾಗಿದೆ. ಸಾರಿಗೆಯ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಜೀಪ್ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ಅಸಭ್ಯವಾಗಿ ವರ್ತಿಸುವುದು, ಬೆದರಿಕೆ ಹಾಕುವುದು ಹಾಗೂ ಅತಿವೇಗವಾಗಿ ವಾಹನ ಚಲಾಯಿಸಿ ಪ್ರವಾಸಿಗರಲ್ಲಿ ಪ್ರಾಣಭಯ ಹುಟ್ಟಿಸುತ್ತಿದ್ದಾರೆ. ಇಂತಹ ವರ್ತನೆಗಳು ಜಿಲ್ಲೆಯ ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಸ್ಕೃತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಎಚ್ಚತ್ತುಕೊಂಡು, ಅಶಿಸ್ತಿನ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಪ್ರವಾಸಿ ತಾಣಗಳಲ್ಲಿ ದರಪಟ್ಟಿ ಫಲಕ ಅಳವಡಿಸಿ, ಪ್ರವಾಸಿಗರ ರಕ್ಷಣೆಗಾಗಿ ವಿಶೇಷ ಸಹಾಯವಾಣಿ ತೆರೆಯಬೇಕಿದೆ.

– ನಾಗರಾಜ್ ಕೆ. ಕಲ್ಲಹಳ್ಳಿ, ತುಮಕೂರು

ಕುಟುಂಬ ಪ್ರೇಮವೇ ಜೆಡಿಎಸ್ಗೆ ಉರುಳು

‘ಜೆಡಿಎಸ್ಗೆ ‘ಎಸ್’ ಎಂದಾರೆ ಜನ?’ ಲೇಖನವು (ಲೇ: ರವೀಂದ್ರ ಭಟ್ಟ, ಪ್ರ.ವಾ., ಜ. 29) ಜೆಡಿಎಸ್ ಪಕ್ಷದಲ್ಲಿನ ನೈಜ ಚಿತ್ರಣವನ್ನು ತೆರೆದಿಟ್ಟಿದೆ. ಜೆಡಿಎಸ್ ಕುಟುಂಬ ರಾಜಕೀಯದಿಂದ ಹೊರಬಂದು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಮುನ್ನಡೆದರೆ ಖಂಡಿತವಾಗಿಯೂ ಮತದಾರರು ಒಲಿಯುತ್ತಾರೆ. ಜೊತೆಗೆ, ‘ಜಾತ್ಯತೀತ’ ಮೌಲ್ಯಕ್ಕೆ ಬದ್ಧವಾಗಿ ಕೋಮುವಾದಿ ಪಕ್ಷದ ಸಹವಾಸದಿಂದ ಹೊರಬರಬೇಕು. ಆಗ ಖಂಡಿತ
ವಾಗಿಯೂ ಒಂದು ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿ ರಾಷ್ಟ್ರ ರಾಜಕೀಯದಲ್ಲೂ ಮೆರೆಯಬಹುದು. ಅಂತಹ ಅವಕಾಶ ಈಗಲೂ ಜೆಡಿಎಸ್ಗೆ ಇದೆ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ನೇಮಕಾತಿ ತಡ: ಯುವಜನರಿಗೆ ಸಂಕಟ

ರಾಜ್ಯದಲ್ಲಿ ವೈಜ್ಞಾನಿಕ ಬೆಲೆಗಾಗಿ ನಿರೀಕ್ಷಿಸುವ ರೈತನ ಬಾಳು ಹಾಗೂ ಸರ್ಕಾರಿ ಹುದ್ದೆಗಾಗಿ ಹಂಬಲಿಸುತ್ತಿರುವ ಉದ್ಯೋಗಾಕಾಂಕ್ಷಿಗಳ ಗೋಳು ಹೇಳತೀರದು. ಆಧುನಿಕ ವಿಷವರ್ತುಲದಲ್ಲಿ ಸಿಲುಕಿ ರೈತರ ಬದುಕು ಹಳಿ ತಪ್ಪಿದೆ. ಉತ್ತಮ ಬೆಳೆಯಿಲ್ಲದೆ, ಸೂಕ್ತ ಬೆಲೆಯೂ ದೊರೆಯದೆ ಕೃಷಿಕರು ಕಂಗಾಲಾಗಿದ್ದಾರೆ. ಇತ್ತ, ಕಳೆದ ಐದು ವರ್ಷಗಳಿಂದ ಯುವಜನರು ನೇಮಕಾತಿ ಅಧಿಸೂಚನೆಗಾಗಿ ಶಬರಿಯಂತೆ ಕಾಯುತ್ತಿದ್ದಾರೆ. ಮೀಸಲಾತಿ ಸಮಸ್ಯೆ ಬಗೆಹರಿಸಿ ಹಂತ ಹಂತವಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಇನ್ನಷ್ಟು ವಿಳಂಬ ಮಾಡದೆ ಕಾರ್ಯಪ್ರವೃತ್ತ ಆಗಬೇಕಾಗಿದೆ,

– ಅಜಯ್ ಎನ್.ಎಸ್., ಹಾವೇರಿ

ಅಂಚೆ ಕಚೇರಿ: ಕನ್ನಡದಲ್ಲಿ ಸೇವೆಗೆ ಬದ್ಧ

ಅಂಚೆ ಇಲಾಖೆಯ ಸೇವೆಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಚಲನ್ಗಳು ಲಭ್ಯವಿಲ್ಲವೆಂಬ ಬಗ್ಗೆ ಕೆಲವು ಗ್ರಾಹಕರು ಅಳಲು ತೋಡಿಕೊಂಡಿರುವುದು ವರದಿಯಾಗಿದೆ. ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಒದಗಿಸುವ ಸೇವೆಗಳಿಗೆ ಅಗತ್ಯವಿರುವ ಅರ್ಜಿ ಪತ್ರಗಳು ಕನ್ನಡದಲ್ಲಿ ಲಭ್ಯವಿವೆ. ಕನ್ನಡವು ರಾಜ್ಯದ ಅಧಿಕೃತ ಭಾಷೆ. ಸಾರ್ವಜನಿಕರಿಗೆ ಕನ್ನಡದಲ್ಲಿಯೇ ಸೇವೆ ಒದಗಿಸಲು ಇಲಾಖೆಯು ಬದ್ಧವಾಗಿದೆ. ಯಾವುದೇ ಕಚೇರಿಯಲ್ಲಿ ಕನ್ನಡದ ಅರ್ಜಿಗಳ ಲಭ್ಯತೆಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾದರೆ ಸಂಬಂಧಿಸಿದ ಹಿರಿಯ ಅಂಚೆ ಅಧಿಕಾರಿಗಳ ಗಮನಕ್ಕೆ ತರಬಹುದು. ಗಂಭೀರ ಸಮಸ್ಯೆ ಇದ್ದರೆ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಉತ್ತರ ಕರ್ನಾಟಕ ವಲಯ, ಧಾರವಾಡ ಇವರನ್ನು ಸಂಪರ್ಕಿಸಬಹುದು (ಇ–ಮೇಲ್: sb.karnk@indiapost.gov.in, ಸಂಪರ್ಕ ಸಂಖ್ಯೆ: 08362796348).

– ಸಹಾಯಕ ನಿರ್ದೇಶಕರು, ಉತ್ತರ ಕರ್ನಾಟಕ ವಿಭಾಗ, ಧಾರವಾಡ