ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಸಂವಿಧಾನ ಅರಿವಿನಯಾನ ಸ್ತುತ್ಯರ್ಹ

Published 27 ನವೆಂಬರ್ 2023, 21:38 IST
Last Updated 27 ನವೆಂಬರ್ 2023, 21:38 IST
ಅಕ್ಷರ ಗಾತ್ರ

ನಮ್ಮ ಸುದ್ದಿ ಕಂಪನಿಯ ಮುಖ್ಯ ಬರಹಗಾರನಾಗಿರುವ ನೀವು, ನಿಮ್ಮ ಪ್ರಮುಖ ಕರ್ತವ್ಯ ಪತ್ರಿಕೆಗಳ ಮೂಲಕ ಜರ್ನಲಿಜಂ ಮಾನದಂಡಗಳನ್ನು ಪಾಲಿಸುವುದು. ನಂತರ ಅನುಸರಿಸುವಂತೆ ಸೂಚಿಸಿ.ಚೀಟಿ ಮತ್ತು ಅಸ್ಪಷ್ಟತೆ

ವೈದ್ಯರು ರೋಗಿಗಳಿಗೆ ಔಷಧ ಚೀಟಿಯನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ಸ್ಪಷ್ಟವಾಗಿ ಬರೆದು ಕೊಡಬೇಕಾದುದು ಅವರ ನೈತಿಕ ಜವಾಬ್ದಾರಿ. ಆದರೆ ಬಹುಪಾಲು ವೈದ್ಯರು ಇದನ್ನು ಪಾಲಿಸುತ್ತಿಲ್ಲ.
ಅಕ್ಷರಗಳನ್ನು ಒಂದಕ್ಕೊಂದು ಜೋಡಿಸಿ ಔಷಧ ವ್ಯಾಪಾರಿಗಳಿಗೆ ಅರ್ಧಂಬರ್ಧ ಅರ್ಥವಾಗುವ ರೀತಿಯಲ್ಲಿಯೇ ಬರೆದುಕೊಡುತ್ತಿದ್ದಾರೆ. ಸ್ಪಷ್ಟವಾಗಿ, ಎಲ್ಲರಿಗೂ ತಿಳಿಯುವಂತೆ ಬರೆಯುವುದಕ್ಕೆ ಏನು ತೊಂದರೆ? ಅಮೂಲ್ಯ ಜೀವದ ವಿಚಾರದಲ್ಲಿ ಸಣ್ಣ ಲೋಪ ಕೂಡ ಆಗದಂತೆ ಎಚ್ಚರ ವಹಿಸುವುದು ಅಗತ್ಯ. ಸ್ಪಷ್ಟವಾಗಿ ಬರೆದುಕೊಡುವಂತೆ ರೋಗಿಗಳಿಂದಲೂ ಆಗ್ರಹ ಬರಬೇಕಾಗಿದೆ.

–ಎಸ್.ನಾಗರಾಜ ನಾಗೂರ, ಬಾಗಲಕೋಟೆ

___________________

ಸಂವಿಧಾನ ಅರಿವಿನಯಾನ ಸ್ತುತ್ಯರ್ಹ

‘ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಅಂತ ಇದೆಯಲ್ಲ ಇದು ಕಾರ್ಯಗತವಾಗಿದೆಯೇ?’, ‘ಮೀಸಲಾತಿ ಬರೀ ಎಸ್‌ಸಿ, ಎಸ್‌ಟಿಗಳಿಗೇಕೆ? ಮಿಕ್ಕವರಿಗೆ ಏಕಿಲ್ಲ?’ ‘ಆತ್ಮಸಾಕ್ಷಿಗೆ ಹೆದರಬೇಕೋ? ಕಾನೂನಿಗೆ ಹೆದರಬೇಕೋ?’ ‘ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಬಹಳ ಮಂದಿ ಇದ್ದಾರೆ, ನೋಟಿನಲ್ಲಿ ಗಾಂಧೀಜಿ ಒಬ್ಬರ ಚಿತ್ರ ಏಕೆ?’ ‘ಶಾಲೆಗೆ ಸೇರುವಾಗ ಜಾತಿ ನಮೂದು ಬೇಕಾಗಿದೆಯೇ?’ ಇಂತಹ ಹತ್ತಾರು ಪ್ರಶ್ನೆಗಳು ಕೇಳಿಬಂದದ್ದು ದಾವಣಗೆರೆಯಲ್ಲಿ ಜರುಗಿದ ‘ಪ್ರೌಢಶಾಲಾ ಮಕ್ಕಳತ್ತ ಸಂವಿಧಾನ ಅರಿವಿನಯಾನ’ ಕಾರ್ಯಕ್ರಮದಲ್ಲಿ.

ಮಕ್ಕಳ ಪ್ರಶ್ನೆಗಳು ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಅವ್ಯಾಹತವಾಗಿ ಹರಿದುಬಂದ ಸಾಮಾಜಿಕ, ಧಾರ್ಮಿಕತೆಯ ಮೇಲು–ಕೀಳಿನ ಅಸಮಾನತೆಯ ಒಳಹರಿವಿನ ಬುಗ್ಗೆಗಳೆಂದೇ ಪರಿಭಾವಿಸಬೇಕಾಗಿದೆ. ಸಂವಿಧಾನ ರಚನೆಯಾಗಿ ಏಳು ದಶಕಗಳು ಗತಿಸಿದರೂ ಮಕ್ಕಳಲ್ಲಿ ಮೂಡಿಬಂದ ಈ ಪ್ರಶ್ನೆಗಳು ಮರುಹುಟ್ಟು ಪಡೆಯುತ್ತಲೇ ಇವೆ. ಇದಕ್ಕೆ ಕಾರಣ ಭಾರತದ ಪ್ರಜೆಗಳಾದ ನಾವು, ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿದ ಸಂವಿಧಾನದ ಆಶಯಗಳನ್ನು ಅಂತರ್ಗತ ಮಾಡಿಕೊಳ್ಳದೇ ಇರುವುದು, ಅರ್ಥಮಾಡಿಕೊಳ್ಳದೇ ಇರುವುದು. ಇಂತಹ ಹೊತ್ತಲ್ಲಿ ಎಳೆಯ ಮನಸ್ಸುಗಳಲ್ಲಿ, ಯುವ ಸಮುದಾಯದಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ನಿರಂತರವಾಗಿ ಜರುಗಬೇಕಾಗಿದೆ. 

–ಪ್ರೊ. ಮಲ್ಲಿಕಾರ್ಜುನ ಕಲಮರಹಳ್ಳಿ, ದಾವಣಗೆರೆ

___________________

‘ಕನ್ನಡ ಕಣ್ವ’ರ ಪ್ರಾರ್ಥನೆ

ರಘುನಾಥ ಚ.ಹ. ಅವರ ‘ಕನ್ನಡದ ಕಣ್ವರ ಮರೆಯಬಹುದೇ’ ಲೇಖನಕ್ಕೆ (ಪ್ರ.ವಾ., ನ. 11) ಪೂರಕವಾಗಿ ಕೆಲವು ಮಾತು. 1963ರ ಸಂದರ್ಭ. ಕೊಪ್ಪಳದಲ್ಲಿ ಡಾ.ಎಂ.ಸಿ. ಮೋದಿ ಅವರ ಉಚಿತ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದ ಕೊನೆಯ ದಿನ ಸಾಯಂಕಾಲ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಮೋದಿ ಅವರಿಗೆ ಸನ್ಮಾನ ಸಮಾರಂಭ ವ್ಯವಸ್ಥೆಗೊಳಿಸಲಾಗಿತ್ತು. ಸನ್ಮಾನಕ್ಕೆ ಉತ್ತರರೂಪವಾಗಿ ಮೋದಿಯವರ ಭಾಷಣದ ತರುವಾಯ ಸಭಿಕರೊಬ್ಬರು ಪ್ರಶ್ನೆ ಕೇಳಿದರು, ‘ಡಾ. ಮೋದಿಯವರೇ, ದೇವರಲ್ಲಿ ನಿಮ್ಮ ಪ್ರಾರ್ಥನೆ ಏನು?’

ಮೋದಿಯವರು ಥಟ್ಟನೆ ಉತ್ತರಿಸಿದರು: ‘ಮುಪ್ಪು ಯಾರಿಗೂ ತಪ್ಪಿದ್ದಲ್ಲ. ನಾನೂ ಅದಕ್ಕೆ ಹೊರತಲ್ಲ. ಆದರೆ ದೇವರಲ್ಲಿ ನನ್ನ ಪ್ರಾರ್ಥನೆ ಇಷ್ಟೇ– ದೇವರೇ, ನನ್ನ ಮುಪ್ಪಿನ ದಿನಗಳಲ್ಲಿ ನನ್ನ ಪಾಲಿನ ಆರಾಧ್ಯ ದೈವವಾದ ಅಂಧರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವಾಗ ಮಾತ್ರ ನನ್ನ ಕೈ ನಡುಗದ ವರ ಕರುಣಿಸಿದರೆ ಸಾಕು’. ಮೋದಿಯವರ ಈ ಪ್ರಾರ್ಥನೆ ಕೇಳಿದಾಗ ಸಭಿಕರಿಂದ ಭಾರಿ ಕರತಾಡನದ ಪ್ರತಿಕ್ರಿಯೆ ವ್ಯಕ್ತವಾಯಿತು.

ಅಂಧರನ್ನೇ ತಮ್ಮ ಪಾಲಿನ ದೇವರನ್ನಾಗಿಸಿಕೊಂಡು ಅಂಧತ್ವದ ವಿರುದ್ಧ ಬದುಕಿನುದ್ದಕ್ಕೂ ಅವಿರತ ಶ್ರಮಿಸಿದ ಎಂ.ಸಿ. ಮೋದಿಯವರು ವೈದ್ಯಲೋಕದ ಅಪರೂಪದ ವ್ಯಕ್ತಿ. 

–ಟಿ.ವಿ. ಮಾಗಳದ, ಗದಗ

___________________

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು

ಮಂಡ್ಯದ ಮೇಲುಕೋಟೆ ರಸ್ತೆಯಲ್ಲಿರುವ ಆಲೆಮನೆ ಒಂದರಲ್ಲಿ ಸ್ಕ್ಯಾನಿಂಗ್‌ಗೆ ಯಂತ್ರೋಪಕರಣ ಅಳವಡಿಸಿ, ಎರಡು ವರ್ಷಗಳಿಂದ ಭ್ರೂಣ ಲಿಂಗ ಪರೀಕ್ಷೆ ನಡೆಸಿ, ಹೆಣ್ಣುಭ್ರೂಣ ಹತ್ಯೆ ಮಾಡಿರುವುದು ಅಕ್ಷಮ್ಯ ಅಪರಾಧ. 900ಕ್ಕೂ ಹೆಚ್ಚು ಹೆಣ್ಣುಭ್ರೂಣ ಹತ್ಯೆ ನಡೆಸಿದ್ದಾರೆ ಎನ್ನಲಾದ ಆರೋಪಿಗಳಿಗೆ ಎಂತಹ ಶಿಕ್ಷೆ ನೀಡಬೇಕು?

ಕಾನೂನುಬಾಹಿರವಾದ ಈ ಕ್ರಿಯೆ ಎರಡು ವರ್ಷಗಳಿಂದ ನಡೆಯುತ್ತಿದ್ದರೂ ಅದನ್ನು ಪತ್ತೆಹಚ್ಚಿ, ತಡೆಯುವಲ್ಲಿ ವಿಫಲರಾದ ಅಧಿಕಾರಿಗಳು ಕೂಡ ಆರೋಪಿಗಳೇ ಎಂದರೆ ತಪ್ಪಾಗಲಾರದು. ಅವರಿಗೂ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು. ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ ಇದು. ಇದನ್ನು ಮೂಲೋತ್ಪಾಟನೆ ಮಾಡಲು ಇನ್ನಾದರೂ ಕಠಿಣ ಕ್ರಮ ಆಗಬೇಕು. 

–ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ 

___________________

ಶಿಥಿಲ ಕಟ್ಟಡಗಳು: ತಕ್ಷಣ ದುರಸ್ತಿ ಆಗಲಿ

ಬೆಂಗಳೂರಿನ ಶಿವಾಜಿನಗರದ ಸರ್ಕಾರಿ ನರ್ಸರಿ ಶಾಲಾ ಕಟ್ಟಡ ಸೋಮವಾರ ನಸುಕಿನ ಜಾವದಲ್ಲಿ ಕುಸಿದುಬಿದ್ದಿದೆ. ಅದೃಷ್ಟವಶಾತ್‌ ಬೆಳಿಗ್ಗೆ ಮಕ್ಕಳು ಬರುವ ಮೊದಲೇ ಕಟ್ಟಡವು ಕುಸಿದ ಕಾರಣ ಜೀವಹಾನಿ ಸಂಭವಿಸಿಲ್ಲ.

ರಾಜ್ಯದಾದ್ಯಂತ ತುಂಬಾ ಹಳೆಯದಾದ, ಶಿಥಿಲಗೊಂಡ ಶಾಲಾ ಕಟ್ಟಡಗಳು ಸಾವಿರಾರು ಇವೆ. ಅವುಗಳನ್ನು ಗುರುತಿಸುವ ಕೆಲಸವು ಕಾಲಮಿತಿಯಲ್ಲಿ ಆಗಬೇಕು. ಅದರೊಂದಿಗೆ ದುರಸ್ತಿ ಕಾರ್ಯವನ್ನೂ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು.

ದುರಸ್ತಿಗೆ ಯೋಗ್ಯವಲ್ಲದ ಕಟ್ಟಡಗಳನ್ನು ಉರುಳಿಸಿ ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು. ಅಲ್ಲಿಯವರೆಗೂ ಶಾಲೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಇದು ತುರ್ತಾಗಿ ಆಗಬೇಕಾದ ಕೆಲಸ. ಸರ್ಕಾರ ಈ ದಿಸೆಯಲ್ಲಿ ತಕ್ಷಣ ಸ್ಪಂದಿಸಬೇಕು. ಮಕ್ಕಳ ಜೀವ ಅಮೂಲ್ಯವಾದುದು.

–ಲಕ್ಷ್ಮಿಕಾಂತ್, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT