ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಜೂನ್‌ 01 ಶನಿವಾರ 2024

Published 3 ಜೂನ್ 2024, 14:30 IST
Last Updated 3 ಜೂನ್ 2024, 14:30 IST
ಅಕ್ಷರ ಗಾತ್ರ

ಸೆರಗಿನ ಕೆಂಡವಾಗಿ ಕಾಡುವವರು

ಈ ಬಾರಿಯ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವ ಅಭ್ಯರ್ಥಿಗಳ ಪೈಕಿ 180 ಮಂದಿಯ ವಿರುದ್ಧ ಲೈಂಗಿಕ ದೌರ್ಜನ್ಯ, ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪಗಳಿದ್ದು, 14 ಮಂದಿಯ ವಿರುದ್ಧ ಅತ್ಯಾಚಾರದ ಆರೋಪಗಳಿವೆ ಎಂಬ ಅಂಕಿ ಅಂಶ (ಆಳ– ಅಗಲ, ಮೇ 30) ಓದಿ ದಿಗ್ಭ್ರಮೆಯಾಯಿತು.
ಇಂತಹ ಆರೋಪ ಎದುರಿಸುತ್ತಿರುವವರಲ್ಲಿ ಮಹಿಳಾ ಅಭ್ಯರ್ಥಿಗಳೂ ಇದ್ದಾರೆ ಎಂಬುದು ಇನ್ನಷ್ಟು ಆತಂಕಕಾರಿ. ಇಂತಹವರೆಲ್ಲಾ ಚುನಾವಣೆಯಲ್ಲಿ ಗೆದ್ದರೆ ಸಮಾಜದಲ್ಲಿನ ಸ್ವಾಸ್ಥ್ಯವನ್ನು ಇನ್ನಷ್ಟು ಹಾಳುಗೆಡ
ಹುವುದಿಲ್ಲವೇ? ಹೀಗಾದರೆ ಶ್ರೀಸಾಮಾನ್ಯರು, ಮಹಿಳೆಯರು, ಮಕ್ಕಳಿಗೆ ರಕ್ಷಣೆ ಕೊಡುವವರು ಯಾರು? ಇಂತಹವರ ಸ್ಪರ್ಧೆಗೆ ಅವಕಾಶ ಇಲ್ಲದಂತೆ ಕಾನೂನನ್ನು ಇನ್ನಷ್ಟು ಬಿಗಿ ಮಾಡಬೇಕು. ಇಲ್ಲವಾದರೆ ಇಂತಹವರು ಯಾವಾಗಲೂ ಸೆರಗಿನ ಕೆಂಡವಾಗಿಯೇ ಉಳಿದಿರುತ್ತಾರೆ.

–ಶಿವಮೊಗ್ಗ ರಮೇಶ್, ಮೈಸೂರು

ಕಲಿಸಬೇಕಿದೆ ಮಾನವೀಯ ಮೌಲ್ಯ

‘ಶಾಲೆ ಶುರು: ಸಿದ್ಧರಾಗಿದ್ದೇವೆಯೇ?’ ಎಂಬ ಸದಾಶಿವ್‌ ಸೊರಟೂರು ಅವರ ಲೇಖನ (ಸಂಗತ, ಮೇ 29) ಉತ್ತಮವಾಗಿದೆ. ಹೆಚ್ಚು ಓದು, ಹೆಚ್ಚು ಅಂಕ ಪಡೆ, ಉದ್ಯೋಗ ಹಿಡಿ ಎಂಬುದೇ ಶಿಕ್ಷಣವಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡೂ ಬೇಕು. ಅದರ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಕಲಿಸಿದರೆ ಮನಸ್ಸಿಗೆ ನೆಮ್ಮದಿಯ ಜೊತೆಗೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಮೂಡುತ್ತದೆ, ಸಾಮರಸ್ಯ ಬೆಳೆಯುತ್ತದೆ. ಆಗ ಸ್ವಸ್ಥ ಸಮಾಜವನ್ನು ಕಾಣಲು ಸಾಧ್ಯ.

–ಕುಂದೂರು ಮಂಜಪ್ಪ, ಹೊಳೆ ಸಿರಿಗೆರೆ

ಪ್ರಧಾನಿ ಮೋದಿ ಮತ್ತು ಯಕ್ಷಿಣಿ ಕಥೆ!

‘ನನ್ನನ್ನು ದೇವರು ಕಳಿಸಿದ್ದಾನೆ...’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಕೇಳಿದಾಗ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮರಾಠಿ ಸಾಹಿತಿಯಾದ
ವಿ.ಸ.ಖಾಂಡೇಕರ್ ಅವರ ‘ಕುಬೇರ ನಗರ’ ಎಂಬ ಸೊಗಸಾದ ಕಥೆ ನೆನಪಾಗುತ್ತದೆ (ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ
ಅನುವಾದಿಸಿದ್ದಾರೆ). ಕಥೆಯ ಸಂಕ್ಷಿಪ್ತ ರೂಪ ಇಷ್ಟು:

ದೊಡ್ಡ ಗುಂಪೊಂದು ಅರಣ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಶರೀರವಾಣಿಯೊಂದು ಕೇಳಿಸುತ್ತದೆ: ‘ಮಹಾಜನಗಳೇ, ಕಣ್ಣಿಗೆ ಬಿಗಿಯಾಗಿ ಬಟ್ಟೆ ಕಟ್ಟಿಕೊಂಡು ನಡೆದುಹೋಗಿ. ಕಾಡು ಮುಗಿಯುತ್ತಲೇ ನಿಮಗೆ ‘ಕುಬೇರ ಲೋಕ’ ಸಿಗುತ್ತದೆ. ಯಕ್ಷಿಣಿಯರು ಬಂದು ಅಮೃತ ನೀಡುತ್ತಾರೆ. ಯಾರು ನನ್ನ ಮೇಲೆ ಶ್ರದ್ಧೆ ಇಡುವುದಿಲ್ಲವೋ ಅವರನ್ನು ನೋಡಿಕೊಳ್ಳುವೆ’ ಎಂದು ಹೇಳುತ್ತದೆ. ಐದು ಜನ ಬಿಟ್ಟು ಉಳಿದ ವರೆಲ್ಲರೂ ತಮ್ಮ ಅಂಗಿಯನ್ನು ಹರಿದು ಕಣ್ಣು ಕಟ್ಟಿಕೊಳ್ಳುತ್ತಾರೆ. ಸಂಜೆ ಎಲ್ಲರೂ ಅರಣ್ಯ ದಾಟಿ ಹೊರಗೆ ಬರುತ್ತಾರೆ. ಇನ್ನೇನು ಕುಬೇರ ನಗರ ದೊರೆಯುತ್ತದೆ ಎಂಬ ಆಸೆಯಿಂದ ಕಾಯ
ತೊಡಗುತ್ತಾರೆ. ಮತ್ತೆ ಅಶರೀರವಾಣಿ ಕೇಳುತ್ತದೆ: ‘ಯಾರು ಕಣ್ಣು ಕಟ್ಟಿಕೊಂಡಿಲ್ಲವೋ ಅವರು ಪ್ರತ್ಯೇಕವಾಗಿ ನಿಲ್ಲಿ’. ಯಾವ ಶಿಕ್ಷೆ ಕಾದಿದೆಯೋ ಎಂದು ಎಲ್ಲರೂ ಕಾತರದಿಂದ ನೋಡುತ್ತಾರೆ. ‘ನನ್ನ ಆಜ್ಞೆ ಮೀರಿದ್ದು ಯಾಕೆ?’ ಎಂದು ಪ್ರತ್ಯೇಕ ಸಾಲಿನಲ್ಲಿ ನಿಂತ ಆ ಐವರನ್ನು ಅಶರೀರವಾಣಿ ಪ್ರಶ್ನಿಸುತ್ತದೆ. ಅವರು ಒಂದೇ ಧ್ವನಿಯಲ್ಲಿ ಉತ್ತರಿಸುತ್ತಾರೆ: ‘ಓ ಮಹಾಶಕ್ತಿಯೇ, ಯಾವ ಶಕ್ತಿ ನಿನ್ನನ್ನು ನಿರ್ಮಿಸಿದೆಯೋ ಅದೇ ಶಕ್ತಿ ನಮ್ಮನ್ನೂ ನಿರ್ಮಿಸಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡೆಯುವುದು ಅಪಮಾನ. ನಾವು ಅರಣ್ಯ, ಗಿಡ ಮರ, ಹೂ, ಬಂಡೆಗಲ್ಲು, ಪ್ರಾಣಿ ಪಕ್ಷಿಗಳನ್ನು ನೋಡಿ ತುಂಬಾ ಸಂತೋಷಪಟ್ಟಿದ್ದೇವೆ. ನಮಗೆ ಕುಬೇರ ನಗರ ಬೇಡ’ ಎಂದು ಹೇಳುತ್ತಾರೆ. ‘ನಿಮ್ಮ ಈ ಉತ್ತರವನ್ನು ಮೆಚ್ಚಿಕೊಂಡಿದ್ದೇನೆ. ಆದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರೆಲ್ಲ ಇನ್ನೂ ನಡೆಯುತ್ತಲೇ ಇರಬೇಕಾಗುತ್ತದೆ’ ಎಂದು ಹೇಳಿ ಅಶರೀರವಾಣಿ ಮರೆಯಾಗುತ್ತದೆ.

–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ಭಕ್ತನೊಬ್ಬನ ಕಳಕಳಿ!

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನವಂತೆ

ವಿವೇಕಾನಂದರ ತತ್ವವನ್ನು ದೇಶಕ್ಕೆ

ಸಾರಬೇಕು ಎಂಬ ಉದ್ದೇಶದಿಂದ.

ಗಾಂಧಿ ಭಕ್ತನ ಒಂದು ಕಳಕಳಿ:

ಅಲ್ಲೇ ಇದೆ (ಕನ್ಯಾಕುಮಾರಿಯಲ್ಲಿ)

‘ಗಾಂಧಿ ಸ್ಮಾರಕ ಭವನ’

ಅಲ್ಲೂ ಕೆಲ ಹೊತ್ತು ಪ್ರಧಾನಿ

ಧ್ಯಾನ ಮಾಡಲಿ, ಅದರಿಂದ

ತಲುಪುವರು ಗಾಂಧಿ ಇನ್ನಷ್ಟು ಮಂದಿಗೆ!

–ನಗರ ಗುರುದೇವ್ ಭಂಡಾರ್ಕರ್
ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT