ಶಿಕ್ಷಕ, ಬೋಧನೆ ಮತ್ತು ಪ್ರಶಸ್ತಿ

7

ಶಿಕ್ಷಕ, ಬೋಧನೆ ಮತ್ತು ಪ್ರಶಸ್ತಿ

Published:
Updated:

ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ... ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪ್ರತೀ ವರ್ಷದ ಸೆಪ್ಟೆಂಬರ್ 5 ರಂದು ನೀಡಲಾಗುತ್ತದೆ. ಅವುಗಳನ್ನು ಪಡೆಯಲು ಹಲವು ಶಿಕ್ಷಕರು ಲಾಬಿಯನ್ನೂ ನಡೆಸುತ್ತಾರೆ. ಅವೆಲ್ಲಕ್ಕಿಂತ ಮಿಗಿಲಾದ ಪ್ರಶಸ್ತಿ ಯಾವುದೆಂದರೆ– ಮಕ್ಕಳ ನಾಲಿಗೆಯ ಮೇಲೆ ಶಿಕ್ಷಕ ನಲಿದಾಡಬೇಕು. ಮಕ್ಕಳೆಂಬ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬೇಕು. ಇದಕ್ಕಿಂತ ಉನ್ನತ ಪ್ರಶಸ್ತಿ ಬೇರೊಂದಿಲ್ಲ.

ಅದಕ್ಕಾಗಿ ಶಿಕ್ಷಕ ತನ್ನಲ್ಲಿರುವ ಜ್ಞಾನವನ್ನು ಶಿಷ್ಯರಿಗೆ ಧಾರೆ ಎರೆಯಬೇಕು. ಶಿಕ್ಷಕನು ತನ್ನ ದೈನಂದಿನ ಪಾಠ-ಬೋಧನೆಯೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಆಸಕ್ತಿ, ಕೌಶಲ, ಸುಪ್ತ ಪ್ರತಿಭೆಗಳನ್ನು ಅರಿಯಬೇಕು. ಮುಖ್ಯವಾಗಿ ವಿದ್ಯಾರ್ಥಿಯ ಶಾರೀರಿಕ ನ್ಯೂನತೆಗಳನ್ನು, ಆರ್ಥಿಕ ಹಾಗೂ ಭಾವನಾತ್ಮಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪೋಷಕರ ನೆರವಿನಿಂದ ನಿವಾರಿಸಲು ಪ್ರಯತ್ನಿಸಬೇಕು.

ನಮ್ಮ ದೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊರತೆ ಇಲ್ಲ. ಆದರೆ ಸಾವಿರಕ್ಕೊಬ್ಬರಂತೆ ಸಿಗುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸೂಕ್ಷ್ಮ ಶೈಕ್ಷಣಿಕ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಶಿಕ್ಷಕರ ಕೊರತೆ ನಮ್ಮಲ್ಲಿದೆ. ಇದು ವಿಷಾದನೀಯ! ಅಂತಹ ವಿದ್ಯಾರ್ಥಿಗಳನ್ನು ರಾಷ್ಟ್ರದ ಅಮೂಲ್ಯ ಸಂಪತ್ತನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮ ಶಿಕ್ಷಕರ ಮೇಲಿದೆ. ವಿಪರ್ಯಾಸವೆಂದರೆ ಇಂದು ನಮ್ಮ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ‘ಪಾಠ ಬೇಡ, ಆಟಕ್ಕೆ ಹೋಗು’ ಎಂದರೆ ಸಾಕು, ‘ನಾಳೆ ಶಾಲೆಗೆ ರಜೆ’ ಎಂದರೆ ಸಾಕು, ಕೇಕೆ ಹಾಕುತ್ತಾ ಹೊರಹೋಗುತ್ತಾರೆ.

ಇದಕ್ಕೆ ಕಾರಣ, ಪಾಠಕ್ರಮದಲ್ಲಿ ಮಕ್ಕಳ ಸಾಮರ್ಥ್ಯ, ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಕಲಿಯಲು ವಿಷಯಗಳ ಕೊರತೆ. ನೀರಸ ಏಕರೀತಿಯ ಪಾಠ-ಬೋಧನೆ, ಗೃಹಪಾಠದ ಹೊರೆ, ಪರೀಕ್ಷೆಯ ಒತ್ತಡ. ಒಟ್ಟಿನಲ್ಲಿ ಕಲಿಯಲು ಕಷ್ಟವಾದರೂ ಮರೆಯಲು ಅತ್ಯಂತ ಸುಲಭವಾಗಿರುವ ಹಲವಾರು ವಿಷಯಗಳ ಸಮೂಹ. ಇದು ನಮ್ಮ ಶಿಕ್ಷಣಕ್ರಮ. ಹೆಚ್ಚಾಗುತ್ತಿರುವ ಶಿಕ್ಷಕರ ಸಭೆ-ಸಮಾರಂಭಗಳು, ಶಾಲೆಗಳಲ್ಲಿ ನಿರ್ವಹಿಸಲೇಬೇಕಾದ ದಾಖಲೆಗಳು, ಆಗಾಗ್ಗೆ ಶಾಲೆಗಳಲ್ಲಿ ಪಾಠ-ಬೋಧನೆ ತಪ್ಪಿಸುವ ಕಾಟಾಚಾರದ ಕಾರ್ಯಾಗಾರಗಳು... ಇವೆಲ್ಲ ಸಂಬಳ, ಸಂಕಟ, ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶಗಳಾಗಿ ಬಳಕೆಯಾಗುತ್ತಲಿವೆ.

ವಿದ್ಯಾರ್ಥಿಗಳ ಕಲಿಕೆ, ಪ್ರಗತಿ, ಅವರ ಸಮಸ್ಯೆಗಳನ್ನು ಪರಿಹಾರ ಮಾಡುವ ಬಗ್ಗೆ ಚಿಂತನೆಯಲ್ಲಿ ನಿಜವಾದ ಆಸಕ್ತಿ ತೋರಿಸುವ ಶಿಕ್ಷಕರ ಸಂಖ್ಯೆ ಬೆರಳೆಣಿಕೆಯಷ್ಟು ಎಂಬುದು ಕಟು ಸತ್ಯ. ಪ್ರತೀ ತರಗತಿಯಲ್ಲಿನ ಅಧಿಕ ವಿದ್ಯಾರ್ಥಿಗಳ ಸಂಖ್ಯೆ, ಬೋಧನಾ ಉಪಕರಣಗಳ ಕೊರತೆ, ಶಿಕ್ಷಕರ ಕೊರತೆ, ಶಿಕ್ಷಕರಲ್ಲಿನ ಒಳಜಗಳ... ಇವೆಲ್ಲ ಕಲಿಕೆಗೆ ತೊಡರುಗಾಲಾಗಿವೆ. ಶಾಲೆಗಳಲ್ಲಿ ಗ್ರಂಥಾಲಯಗಳಿವೆ.

ಕೆಲವೆಡೆ ಸಾವಿರಗಟ್ಟಲೆ ಉತ್ತಮ ಪುಸ್ತಕಗಳೂ ಇರುತ್ತವೆ. ಆದರೆ ಅವನ್ನು ಬಳಸುವ ಮನಸ್ಸುಗಳಿಲ್ಲ. ಈ ಸ್ಥಿತಿ ಬದಲಾಗಬೇಕು. ಉತ್ತಮ ಪ್ರಜೆಗಳನ್ನು ರೂಪಿಸಿದ ಆತ್ಮತೃಪ್ತಿಗಿಂತ ಮಿಗಿಲಾದ ಪ್ರಶಸ್ತಿ ಶಿಕ್ಷಕರಿಗೆ ಯಾವುದಿದೆ? ‘ನಮ್ಮ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಾರೆ’ ಎಂದು ವಿದ್ಯಾರ್ಥಿಗಳಿಂದ ಗಳಿಸಿದ ಪ್ರಶಂಸೆಯೇ ಶಿಕ್ಷಕರಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ ಎಂಬುದು ಶಿಕ್ಷಕನಾದ ನನ್ನ ಅಭಿಪ್ರಾಯ.

-ಎಚ್.ಎಸ್.ಟಿ. ಸ್ವಾಮಿ, ಇಂಗಳದಾಳ್, ಚಿತ್ರದುರ್ಗ ತಾಲ್ಲೂಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !