ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬಾಗ: ಎಲ್ಲ ಪಕ್ಷದವರಿಗೂ ಮನ್ನಣೆ

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ; ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಮಣೆ
Last Updated 11 ಏಪ್ರಿಲ್ 2018, 8:50 IST
ಅಕ್ಷರ ಗಾತ್ರ

ಬೆಳಗಾವಿ: ಅತ್ಯಂತ ಹಿಂದುಳಿದ ತಾಲ್ಲೂಕಾದ ರಾಯಬಾಗ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಇಲ್ಲಿನ ಮತದಾರರು ಪಕ್ಷೇತರ ಅಭ್ಯರ್ಥಿ ಸೇರಿದಂತೆ ಎಲ್ಲ ಪ್ರಮುಖ ಪಕ್ಷದವರಿಗೂ ಅವಕಾಶ ನೀಡಿದ್ದಾರೆ. ಕಾಂಗ್ರೆಸ್‌ ಹೆಚ್ಚು ಬಾರಿ ಗೆದ್ದಿದೆ.

ಈವರೆಗೆ 13 ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ನಂತರ ಕಾಂಗ್ರೆಸ್‌ 6, ಜನತಾ ಪಕ್ಷ 3, ಜೆಡಿಯು 1 ಹಾಗೂ ಬಿಜೆಪಿ 2 ಬಾರಿ ಗೆದ್ದಿವೆ. ಈವರೆಗೆ ಮಹಿಳೆಯರಾರೂ ಪೈಪೋಟಿಯನ್ನೇ ನೀಡಿಲ್ಲ! ಶ್ಯಾಮ್‌ ಘಾಟಗೆ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದಾರೆ. ವಿ.ಎಲ್. ಪಾಟೀಲ ಮೂರು ಬಾರಿ ಗೆದ್ದಿದ್ದಾರೆ. ಹಾಲಿ ಶಾಸಕ ಬಿಜೆಪಿಯ ದುರ್ಯೋಧನ ಐಹೊಳೆ 3 ಬಾರಿ ಸ್ಪರ್ಧಿಸುತ್ತಿದ್ದಾರೆ.

1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದ ವಿ.ಎಲ್. ಪಾಟೀಲ (37,070 ಮತ) ಹಾಗೂ ಎಸ್‌ಸಿಎಫ್‌ (ಪರಿಶಿಷ್ಟ ಜಾತಿಗಳ ಒಕ್ಕೂಟ) ಅಭ್ಯರ್ಥಿ ಎಸ್‌.‍ಪಿ. ತಳವಳಕರ (32,553) ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಬಿ.ಪಿ. ಶಹಾ 23,152 ಮತ ಪಡೆದಿದ್ದರು. 1962ರಲ್ಲಿ ದ್ವಿಸದಸ್ಯ ಕ್ಷೇತ್ರ ರದ್ದಾಯಿತು. ಆಗ ಕಾಂಗ್ರೆಸ್‌ನ ಬಿ.ಎಸ್‌. ಸೌದಾಗಾರ (26,049) ಗೆದ್ದಿದ್ದರು. ಆರ್‌ಪಿಐನ ವಿ.ಜಿ. ಪಟ್ಟಣ 3,125 ಮತ ಗಳಿಸಿ ಸಮೀಪದ ಪ್ರತಿಸ್ಪರ್ಧಿಯಾಗಿದ್ದರು.

ಕಾಂಗ್ರೆಸ್‌ ವಶ:

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಸೇರಿದ ವಿ.ಎಲ್‌. ಪಾಟೀಲ 1967ರ ಚುನಾವಣೆಯಲ್ಲಿ 31,732 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಪಕ್ಷೇತರ ಬಿ.ಕೆ. ನಾಯ್ಕ 6,981 ಮತ ಗಳಿಸಿದ್ದರು. 1972ರಲ್ಲೂ ವಿ.ಎಲ್‌. ಪಾಟೀಲ (36,372) ಗೆದ್ದಿದ್ದರು. ಎನ್‌ಸಿಒನ ಎಸ್‌.ಆರ್‌. ಬಾನೆ (15,526) ಸಮೀಪದ ಪ್ರತಿಸ್ಪರ್ಧಿಯಾಗಿದ್ದರು.

1978ರಲ್ಲಿ ಕ್ಷೇತ್ರವನ್ನು ಜನತಾದಳ ವಶಪಡಿಸಿಕೊಂಡಿತು. ಆರ್‌.ಎಸ್‌. ನಡೋಣಿ 18,562 ಮತಗಳನ್ನು ಪಡೆದು ಜಯಿಸಿದ್ದರು. ಕಾಂಗ್ರೆಸ್‌ನ ಎಲ್‌.ವಿ. ಹೊಲೇರ 15,830, ಕಾಂಗ್ರೆಸ್‌–ಐನ ಆರ್‌.ಎ. ದೊಡ್ಡಮನಿ 14,875 ಮತ ಗಳಿಸಿದ್ದರು.

1983ರಲ್ಲಿ ಜನತಾಪ‍ಕ್ಷದ ಎಸ್‌.ಎಸ್. ಕಾಂಬಳೆ (31,365) ಶಾಸಕ ಕಾಂಗ್ರೆಸ್‌ನ ಆರ್‌.ಎಸ್. ನಡೋಣಿ ಅವರನ್ನು ಮಣಿಸಿದ್ದರು. ಬಿಜೆಪಿಯ ಬಿ.ಎನ್‌. ಕಾಂಬಳೆ ಸೇರಿ ಮೂವರು ಕಣದಲ್ಲಿದ್ದರು.

1985ರಲ್ಲಿ ಮತ್ತೊಮ್ಮೆ ಜನತಾಪಕ್ಷದ ವಶವಾಯಿತು. ಆಗ, ಮಾರುತಿ ಘೇವಾರಿ 41,597 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್‌ನ ಎಸ್‌.ಕೆ. ಬಸನಾಯಕ (38,706) ಸಮೀಪದ ಪ್ರತಿಸ್ಪರ್ಧಿಯಾಗಿದ್ದರು.

ಶ್ಯಾಮ್‌ ಯುಗಾರಂಭ:

1989ರಲ್ಲಿ ಕಾಂಗ್ರೆಸ್‌ನ ಶ್ಯಾಮ್‌ ಬಿ. ಘಾಟಗೆ 37,948 ವಿಜಯಿಯಾಗಿದ್ದರು. ಜನತಾದಳದ ಎಂ.ಜಿ. ಘೇವಾರಿ 30,300, ಕೆಆರ್‌ಆರ್‌ಎಸ್‌ನ ಎಂ.ಕೆ. ಸಣ್ಣಕ್ಕಿ 15,290 ಮತ ಪಡೆದಿದ್ದರು. ಇನ್ನೂ ಏಳು ಮಂದಿ ಸ್ಪರ್ಧಿಸಿದ್ದರು.

1994ರಲ್ಲಿ ಸತತ 2ನೇ ಬಾರಿಗೆ ಗೆದ್ದ ಶ್ಯಾಮ್‌ 32,297 ಮತಗಳನ್ನು ಪಡೆದಿದ್ದರು. ಜನತಾದಳದ ಡಿ.ಡಿ. ಮುರಗೋಡ 25,008, ಕೆಆರ್‌ಆರ್‌ಎಸ್‌ನ ಎಸ್‌.ಬಿ. ಬಾವಿಮನಿ ಅವರಿಗೆ 10,564 ಮತ ಸಿಕ್ಕಿದ್ದವು. ಇನ್ನೂ ಆರು ಮಂದಿ ಇದ್ದರು.

1999ರಲ್ಲೂ ಗೆದ್ದ ಶ್ಯಾಮ್‌ ಘಾಟಗೆ (52,728) ಹ್ಯಾಟ್ರಿಕ್‌ ಸಾಧಿಸಿದ್ದರು. ಜೆಡಿಯು ಪ್ರತಿನಿಧಿಸಿದ್ದ ಪರಶುರಾಮ ಯಲ್ಲಪ್ಪ ಜಾಗನೂರ 45,720 ಮತ ಗಳಿಸಿ ಸಮೀಪದ ಪ್ರತಿಸ್ಪರ್ಧಿ ಎನಿಸಿದ್ದರು. ಪಕ್ಷೇತರ ಬಾಬುರಾವ್‌ ಕಾಂಬಳೆ ಸೇರಿ 6 ಮಂದಿ ಕಣದಲ್ಲಿದ್ದರು.

2004ರಲ್ಲಿ ಜೆಡಿಯುನಿಂದ ಕಣಕ್ಕಿಳಿದಿದ್ದ ಭೀಮಪ್ಪ ಸರಿಕರ 54,049 ಮತಗಳಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಲಕ್ಷ್ಮಣ ಕಾಂಬಳೆ 43,855 ಮತ ಪಡೆದಿದ್ದರು. ಕೆಆರ್‌ಆರ್‌ಎಸ್‌ ಬಿ. ಕದಂ ಸೇರಿದಂತೆ ಮೂವರು ಸ್ಪರ್ಧೆಯೊಡ್ಡಿದ್ದರು.

ಬಿಜೆಪಿಗೆ ಅವಕಾಶ:

2008ರ ನಂತರ ಕ್ಷೇತ್ರ ಬಿಜೆಪಿ ಪಾಲಾಗಿದೆ. ಮಾಜಿ ಸಚಿವ ಓಂಪ್ರಕಾಶ ಕಣಗಲಿ (24,818) ವಿರುದ್ಧ ಗೆದ್ದಿದ್ದ ದುರ್ಯೋಧನ ಐಹೊಳೆ 39,378 ಮತ ಪಡೆದಿದ್ದರು. ಜೆಡಿಎಸ್‌ನ ಬಾಳಾಸಾಹೇಬ ವಡ್ಡರ (18,342) ಸೇರಿ 16 ಅಭ್ಯರ್ಥಿಗಳು ಕಣದಲ್ಲಿದ್ದರು!

2013ರಲ್ಲೂ ಜಯದ ಓಟ ಮುಂದುವರಿಸಿದ ದುರ್ಯೋಧನ 37,535 ಮತ ಪಡೆದಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಪ್ರದೀಪ ರಾಮು ಮಾಳಗಿ 36,706 ಹಾಗೂ ಕಾಂಗ್ರೆಸ್‌ನ ಸುಕುಮಾರ ಕಿರಣಗಿ ಅವರಿಗೆ 30,043 ಮತಗಳು ದೊರೆತಿದ್ದವು. ಇನ್ನೂ 11 ಮಂದಿ ಕಣದಲ್ಲಿದ್ದರು.

ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ

ಬಿಜೆಪಿಯಿಂದ ಧುರ್ಯೋದನ ಐಹೊಳೆ ಅವರಿಗೆ ಟಿಕೆಟ್‌ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ತೀವ್ರ ಪೈಪೋಟಿ ಇದೆ.ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಎಂಎಲ್‌ಸಿ ವಿವೇಕರಾವ್ ಪಾಟೀಲ ಬೆಂಬಲಿತ ಪ್ರದೀಪ ಮಾಳಗಿ, ಮಹಾವೀರ ಮೋಹಿತೆ, ಶಿವಕುಮಾರ ಕಿರಣಗಿ, ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಮಹಾವೀರ ಮೋಹಿತೆ ಕೂಡ ಪೈಪೋಟಿ ನೀಡುತ್ತಿದ್ದಾರೆ.ಮೈತ್ರಿ ಪ್ರಕಾರ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟುಕೊಡುವುದಾಗಿ ಜೆಡಿಎಸ್‌ ಹೇಳಿದೆ. ಬಿಎಸ್ಪಿ ಅಭ್ಯರ್ಥಿ ಯಾರೆನ್ನುವುದು ಅಂತಿಮವಾಗಿಲ್ಲ.ಇಲ್ಲಿ ಕುರುಬ ಹಾಗೂ ಮಾದಿಗ ಸಮಾಜದ ಮತದಾರರು ನಿರ್ಣಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT