ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ನೋಂದಣಿ ಫಲಕ: ಗಡುವು ವಿಸ್ತರಿಸಿ

Published 13 ಫೆಬ್ರುವರಿ 2024, 0:08 IST
Last Updated 13 ಫೆಬ್ರುವರಿ 2024, 0:08 IST
ಅಕ್ಷರ ಗಾತ್ರ

ಮಠಮಾನ್ಯಗಳು ಕಾನೂನಿಗೆ ಹೊರತೇ?

ಚಿತ್ರದುರ್ಗದ ಗೊಲ್ಲಗಿರಿಯ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ ಮುಖಂಡ ಎಚ್.ಆಂಜನೇಯ ಅವರು, ‘ಮಠದ ಸುತ್ತ ನಿಮ್ಮ ಸಾಮರ್ಥ್ಯ ಇರುವಷ್ಟು ಜಾಗಕ್ಕೆ ಬೇಲಿ ಹಾಕಿಕೊಳ್ಳಿ. ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿ ಯಾರೊಬ್ಬರೂ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬಹಿರಂಗ ಸಭೆಯಲ್ಲಿ ಹೇಳಿದ್ದೆ. ಸರ್ಕಾರ ಮತ್ತು ಮಠ ಬೇರೆಯಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಫೆ. 11). ಸಾರ್ವಜನಿಕವಾಗಿ ಹೀಗೆ ಮಾತನಾಡುವುದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ ಎಂಬ ಕನಿಷ್ಠ ಜ್ಞಾನವೂ ನಮ್ಮ ರಾಜಕಾರಣಿಗಳಿಗೆ ಬೇಡವೇ?! ಮಠಮಾನ್ಯಗಳಿಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನೇ? ಕಾನೂನು ಎಲ್ಲರಿಗೂ ಒಂದೇ ಅಲ್ಲವೆ? ಯಾರನ್ನೋ ಓಲೈಸುವ ಸಲುವಾಗಿ ಇಂತಹ ಮಾತುಗಳನ್ನಾಡುವುದು, ಸಚಿವ ಸ್ಥಾನವನ್ನು ನಿಭಾಯಿಸಿದ ಅನುಭವ ಇರುವ ಆಂಜನೇಯ ಅವರಂಥವರಿಗೆ ಶೋಭೆ ತರುವುದಿಲ್ಲ.

- ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ನೋಂದಣಿ ಫಲಕ: ಗಡುವು ವಿಸ್ತರಿಸಿ

ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ಎಸ್ಆರ್‌ಪಿ) ಅಳವಡಿಕೆಗೆ ಸಾರಿಗೆ ಇಲಾಖೆಯು ಇದೇ 17ಕ್ಕೆ ಕೊನೆಯ ದಿನವನ್ನು ನಿಗದಿಪಡಿಸಿದೆ. ತಪ್ಪಿದರೆ ಭಾರಿ ಮೊತ್ತದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಆದರೆ ಇದುವರೆಗೂ ಕೆಲವರಷ್ಟೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರಲ್ಲಿ ಇರಬಹುದಾದ ಮಾಹಿತಿ ಕೊರತೆ ಅಥವಾ ತಾಂತ್ರಿಕ ಸಮಸ್ಯೆ ಕಾರಣವಾಗಿರಬಹುದು. ಈಗ ಅಂತಿಮ ಗಡುವು ಹತ್ತಿರವಾದ್ದರಿಂದ ನೋಂದಣಿ ಮಾಡಿಸಲು ಸಾರ್ವಜನಿಕರು ಮುಗಿಬಿದ್ದಿದ್ದು, ದಿನಪೂರ್ತಿ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಆದಕಾರಣ, ನೋಂದಣಿಗೆ ವಿಧಿಸಿರುವ ಗಡುವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸಚಿವರು ಇನ್ನೊಂದು ಬಾರಿಗೆ ವಿಸ್ತರಿಸಬೇಕಾಗಿದೆ. 

-ಮುರುಗೇಶ ಡಿ., ದಾವಣಗೆರೆ

ಜನಸ್ಪಂದನ: ಆಗಬೇಕಾಗಿದೆ ವಿಕೇಂದ್ರೀಕರಣ

ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ ಮತ್ತು ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮಗಳಿಗೆ ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಿದ್ದುದು ಸರಿಯಷ್ಟೆ. ಆದರೆ ದೂರದ ಜಿಲ್ಲೆಗಳ ಜನರು ಅದಕ್ಕಾಗಿ ನೂರಾರು ಕಿ.ಮೀ. ಪ್ರಯಾಣ ಮಾಡಬೇಕಾಗಿ ಬಂದದ್ದು ದುರದೃಷ್ಟಕರ. ಅಲ್ಲದೆ ಮನವಿಗಳನ್ನು ಸಲ್ಲಿಸಲು ಬಹಳಷ್ಟು ಸಂಖ್ಯೆಯಲ್ಲಿ ಜನ ಒಂದೆಡೆ ಸೇರುವುದರಿಂದ ನೂಕುನುಗ್ಗಲು ಉಂಟಾಗುತ್ತದೆ. ಜನಸಂದಣಿಯಿಂದ ಕೆಲವರು ನಿಗದಿತ ಕೌಂಟರ್‌ನಲ್ಲಿ ಮನವಿ ಸಲ್ಲಿಸಲು ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಆಯಾ ಭಾಗದ ಸುಮಾರು ಆರು ಜಿಲ್ಲೆಗಳನ್ನು ಒಳಗೊಂಡು, ಅವುಗಳ ಪೈಕಿ ಪ್ರಮುಖವಾದ ಒಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಿದರೆ ಜನರಿಗೂ ಅನುಕೂಲ, ಸರ್ಕಾರವೂ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಬಹುದು.

- ಸಿ.ಪುಟ್ಟಯ್ಯ ಹಂದನಕೆರೆ, ತುಮಕೂರು

ಮಹಿಳಾ ಅರ್ಚಕರು: ಅಸಮಂಜಸ ನಿಲುವು

‘ನಮ್ಮ ಸಂಸ್ಕೃತಿ ಮತ್ತು ಜನರ ಸಂಸ್ಕಾರದ ಉಳಿವಿಗೆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಪುರುಷರಿಗೆ ಮಾತ್ರವೇ ಮೀಸಲಿಡಬೇಕು. ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರ ಸೂಕ್ತವಲ್ಲ’ ಎಂಬ ಹಿರೇಮಗಳೂರು ಕಣ್ಣನ್ ಅವರ ಹೇಳಿಕೆ (ಪ್ರ.ವಾ., ಫೆ. 12) ಒಪ್ಪತಕ್ಕದ್ದಲ್ಲ. ಕಾಲೋಚಿತವಾಗಿ ಮಾರ್ಪಾಟು ಹೊಂದುವುದು ಸಂಸ್ಕೃತಿಯ ಸಹಜ ಲಕ್ಷಣ. ವೈಚಾರಿಕತೆಯ ನಿಕಷಕ್ಕೆ ತನ್ನನ್ನು ಒಡ್ಡಿಕೊಳ್ಳುವುದು ಸಂಸ್ಕಾರದ ಅವಶ್ಯಗುಣ. ಈ ಎರಡು ಅಂಶಗಳನ್ನೂ ನಿರಾಕರಿಸುವವರು ಜನಕೋಟಿಯ ಸಂಸ್ಕೃತಿ, ಸಂಸ್ಕಾರಗಳ ನಿಯಾಮಕರಂತೆ ವರ್ತಿಸುವುದು ತರವಲ್ಲ.

- ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ನಿಜವಾದ ಧರ್ಮವು ಮೌಢ್ಯ ಬಿತ್ತದು

‘ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಜಾತಿ, ಧರ್ಮವು ದೇಶವನ್ನಾಳಿದರೆ ಮೌಢ್ಯ ಹೆಚ್ಚಾಗುತ್ತದೆ, ಗುಲಾಮಗಿರಿ ಬೆಳೆಯುತ್ತದೆ’ ಎಂದು ಮರಿಲಿಂಗಪ್ಪ ಕೋಳೂರ ಎಂಬುವರು ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿ
ದ್ದಾರೆ (ಪ್ರ.ವಾ., ಫೆ. 9). ಯಾವುದೇ ನಿಜವಾದ ಧರ್ಮವು ಮಾನವನ ಸರ್ವಾಂಗ ಉನ್ನತಿಯನ್ನು ಬಯಸುತ್ತದೆಯೇ ವಿನಾ ಮೌಢ್ಯ, ಗುಲಾಮಗಿರಿಯನ್ನಲ್ಲ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಾರ್ವಕಾಲಿಕ ನುಡಿಯನ್ನು ಜ್ಞಾನಿಗಳು ಸ್ವಾನುಭವದಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ. 12ನೇ ಶತಮಾನದ ಬಸವಾದಿ ಶರಣರು ಸ್ವಾನುಭವದ ವಚನ ಗಳಿಂದ ಮೌಢ್ಯವನ್ನು ತೊಳೆದುಹಾಕಿದರು. ಜಾತಿ, ಮತಗಳನ್ನು ಧಿಕ್ಕರಿಸಿ ಮಾನವ ಸಮಾಜವನ್ನು ಕಟ್ಟಿದರು. ಶರಣರು ಕಟ್ಟಿದ ಈ ಧರ್ಮವು ಮೌಢ್ಯವನ್ನು ಬಿತ್ತಿತೇ?

ಮಾನವನು ಮನುಷ್ಯತ್ವವನ್ನು ಬಿಟ್ಟು ಸ್ವಾರ್ಥಹಿತ ಸಾಧನೆಗಾಗಿ ಧರ್ಮ, ತತ್ವಗಳನ್ನು ತಿರುಚಲು ಮುಂದಾದಾಗ, ಈ ಮೂಲಕ ಧರ್ಮವು ಆತನ ಕೈಗೊಂಬೆಯಾದಾಗ ಅಂತಹ ಧರ್ಮ, ಜಾತಿಗಳು ಮೌಢ್ಯವನ್ನು ಬಿತ್ತುತ್ತವೆ ಹಾಗೂ ಗುಲಾಮಗಿರಿಗೆ ತಳ್ಳುತ್ತವೆ. 

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

‘ವಧುದಕ್ಷಿಣೆ’ ಬೇಡಿಕೆ ಸರಿಯಲ್ಲ

ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ₹ 5 ಲಕ್ಷ ಪ್ರೋತ್ಸಾಹಧನ ಘೋಷಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವುದು ಅಸಮಂಜಸ. ರೈತರಿಗೆ ಬೇಕಾಗಿರುವುದು ನೀರು, ತಾವು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ. ಅಷ್ಟನ್ನು ಒದಗಿಸಿದರೆ ಸಾಕು. ಹಸಿರುಕ್ರಾಂತಿಯ ಹರಿಕಾರ ದಿವಂಗತ ಸ್ವಾಮಿನಾಥನ್ ಅವರು ಮಾಡಿರುವ ಶಿಫಾರಸಿನ ಪ್ರಮುಖ ಅಂಶಗಳಲ್ಲಿ ಸಹ ಇವು ಸೇರಿವೆ. ಮಾಸಿಕ ವೇತನ ಬರುವ ಇತರ ಕೆಲಸಗಳಂತೆ ರೈತರಿಗೂ ಪ್ರತಿ ತಿಂಗಳು ಆದಾಯ ಬರುವ ಕೃಷಿ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡಿದರೆ, ಅವರಿಗೆ ಮದುವೆಯ ಯೋಗ ತಾನಾಗಿಯೇ ಕೂಡಿಬರುತ್ತದೆ. ನಷ್ಟವಾಗುತ್ತಿರುವ ಮಳೆ ನೀರನ್ನು ಕೃಷಿ ಹೊಂಡ, ಕೆರೆಗಳಲ್ಲಿ ಸಂಗ್ರಹಿಸಿ, ಸಂರಕ್ಷಿಸಿದರೆ ವರ್ಷದಲ್ಲಿ ಮೂರು ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಲು ಸಾಧ್ಯ. ಇದು ಸಹ ರೈತರ ಆರ್ಥಿಕ ಉನ್ನತಿಗೆ ಪೂರಕ. 

-ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT