ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 23 ಮೇ 2023, 0:01 IST
Last Updated 23 ಮೇ 2023, 0:01 IST
ಅಕ್ಷರ ಗಾತ್ರ

ಎಲ್ಲಿದೆ ಅಂತಹ ಉದಾರ ನಾಯಕತ್ವ?

ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇದಿಕೆಯು ವೀಕ್ಷಕರಲ್ಲಿ ಸಂತೋಷ, ಅಸಂತೋಷ ಎರಡಕ್ಕೂ ಕಾರಣವಾಯಿತು. ರಾಹುಲ್ ಗಾಂಧಿ ಇಂಗ್ಲಿಷ್ ಬಲ್ಲವರಾದರೂ ತಮ್ಮ ಮಾತೃಭಾಷೆ ಹಿಂದಿಯಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದುದು ಸಂತೋಷದ ಸಂಗತಿ. ಅಸಂತೋಷದ ಸಂಗತಿಯೆಂದರೆ, ಜಮೀರ್ ಅಹಮದ್ ಖಾನ್ ಸಂಪುಟ ದರ್ಜೆ ಸಚಿವರಾಗಿ ಇಂಗ್ಲಿಷ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದು ಸರ್ವಥಾ ಸರಿಯಲ್ಲ. ಕನ್ನಡವನ್ನು ಅವರು ಮಾತನಾಡುತ್ತಾರೆ ಎಂದಮೇಲೆ, ಕನ್ನಡವನ್ನು ಇಂಗ್ಲಿಷ್‍ನಲ್ಲಿ ಬರೆದುಕೊಂಡಾದರೂ ಅವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಬೇಕಿತ್ತು.

ಇನ್ನು ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಸೇರಿದಂತೆ, ಇತರ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸದೇ ಇದ್ದುದು ಬೇಸರ ಮೂಡಿಸಿತು. ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರ ಪತನವಾಗಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ಸ್ವಯಂ ಪಟೇಲರು ಭಾಗವಹಿಸಿ ಶುಭ ಕೋರಿದರು. ಈಗ ಅಂತಹ ನಾಯಕತ್ವ ಎಲ್ಲಿ?

ಆರ್.ವೆಂಕಟರಾಜು, ಬೆಂಗಳೂರು

ನಕಲಿ ದಾಖಲೆ: ಪರಿಣಾಮದ ಅರಿವಿರಲಿ

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಕಲಿ ದಾಖಲೆ ಸೃಷ್ಟಿಸುವವರನ್ನು ಕುರಿತ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಮೇ 22) ಓದಿದ ಮೇಲೆ ಇಂತಹ ಕೆಲವು ಮೋಸದ ಪ್ರಕರಣಗಳು ನನ್ನ ನೆನಪಿಗೆ ಬಂದವು. ಒಂದು ಪ್ರಕರಣದಲ್ಲಿ, ಗಂಡ– ಹೆಂಡತಿ ಇಬ್ಬರೂ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಒಳ್ಳೆಯ ಸಂಬಳ ಪಡೆಯುತ್ತಿದ್ದಾರೆ. ಆದರೆ ತಮ್ಮ ಮಗಳಿಗೆ ಪಿಯುಸಿ ನಂತರ ಆಯುರ್ವೇದ ವೈದ್ಯ ಪದವಿ ಸೀಟು ಪಡೆಯಲು ಸುಳ್ಳುಮಾಹಿತಿ ನೀಡಿ ಆದಾಯ ಪ್ರಮಾಣಪತ್ರ ಪಡೆದರು. ಆದರೆ ವಿಷಯ ಜಗಜ್ಜಾಹೀರಾಯಿತು. ಒತ್ತಡ ಜಾಸ್ತಿ ಆದಾಗ ವಿದ್ಯಾರ್ಥಿನಿಯ ತಂದೆಯನ್ನು ಅಮಾನತು ಮಾಡಲಾಯಿತು. ಇದರಿಂದ ವಿದ್ಯಾರ್ಥಿನಿಯ ಮನಸ್ಸಿಗೆ ಆಗಿರಬಹುದಾದ ಆಘಾತವನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಮತ್ತೊಂದು ಪ್ರಕರಣದಲ್ಲಿ, ಮನೆಯಲ್ಲಿ ಅಚ್ಚ ಕನ್ನಡ ಮಾತನಾಡುವ, ಸರ್ಕಾರದ ಉನ್ನತ ಹುದ್ದೆಯಲ್ಲಿ ಇರುವವರೊಬ್ಬರು ಸುಳ್ಳು ಮಾಹಿತಿ ನೀಡಿ ತಮ್ಮ ಮಗಳ ಹೆಸರಿನಲ್ಲಿ ತಮಿಳು ಮಾತೃಭಾಷಾ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಅದೇ ಆಧಾರದ ಮೇಲೆ ಮಗಳಿಗೆ ಭಾಷಾ ಅಲ್ಪಸಂಖ್ಯಾತ ಮೀಸಲಾತಿಯಡಿ ಎಂಬಿಬಿಎಸ್ ಸೀಟು ಸಿಕ್ಕಿದೆ. ಆದರೆ ಮಗಳಿಗೆ ಒಂದು ಪದವನ್ನೂ ತಮಿಳಿನಲ್ಲಿ ಮಾತನಾಡುವುದಕ್ಕೆ ಬರುವುದಿಲ್ಲ. ಈಗ ಈ ಬಗ್ಗೆ ದೂರು ದಾಖಲಾಗಿದೆ. ಈ ವಂಚನೆಯ ರೂವಾರಿಯಾಗಿರುವ ತಂದೆ ಏನೂ ಆಗಿಲ್ಲದಂತೆ ಇದ್ದಾರೆ. ಆದರೆ ಮಗಳ ಮನಸ್ಸಿಗೆ ಆಗುವ ಆಘಾತಕ್ಕೆ ಯಾರು ಹೊಣೆ? ನಕಲಿ ಪ್ರಮಾಣಪತ್ರಗಳನ್ನು ಪಡೆಯುವವರು ಸಿಕ್ಕಿಬಿದ್ದಾಗ, ಅದರಿಂದ ತಮ್ಮ ಕುಟುಂಬದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮೊದಲು ಯೋಚಿಸಬೇಕು. ಮಾನ ಮರ್ಯಾದೆಗೆ ಅಂಜುವ ಯಾರೂ ಈ ರೀತಿ ನಕಲಿ ದಾಖಲೆಗಳ ಮೂಲಕ ಸರ್ಕಾರಿ ಸವಲತ್ತುಗಳನ್ನು ಪಡೆಯುವ ಧೈರ್ಯವನ್ನು ಮಾಡುವುದಿಲ್ಲ.

ನಿರ್ಮಲ ಕುಮಾರ, ಶಿವಮೊಗ್ಗ

ಮಳೆ ದುರಂತ: ಹೊಣೆ ಮರೆತ ಬಿಬಿಎಂಪಿ

‘ಮಳೆ ಬಂದರೆ ಜನ ಸಾಯಬೇಕಾ?’ ಎಂದು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಕೇಳಿದ್ದಾರೆ (ಪ್ರ.ವಾ., ಮೇ 22). ಇದು ನಿಜವಾಗಿಯೂ ಯೋಚಿಸಬೇಕಾದ ಸಂಗತಿಯೇ ಆಗಿದೆ. ಪ್ರಕೃತಿದತ್ತವಾಗಿ ಬರುವ ಮಳೆಗೆ ನಾವು ಸ್ಪಂದಿಸಿ, ನೀರು ನಿಲ್ಲದಂತೆ ನಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ರಾಜಕಾಲುವೆಗಳ ಹೂಳು ತೆಗೆಸಿ, ಅಂಡರ್‌ಪಾಸ್ ಹಾಗೂ ಚರಂಡಿಗಳನ್ನು ಸ್ವಚ್ಛ ಮಾಡಿಸಿದ್ದರೆ, ಬೆಂಗಳೂರಿನಲ್ಲಿ ಭಾನುವಾರ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬಳು ಸಾವಿಗೀಡಾಗುವ ಪ್ರಮೇಯವೇ ಬರುತ್ತಿರಲಿಲ್ಲ.

ಈಗ ಆಕೆಯ ಕುಟುಂಬಕ್ಕೆ ಸರ್ಕಾರ ₹ 5 ಲಕ್ಷ ಪರಿಹಾರ ಘೋಷಿಸಿದೆ. ಆಕೆ ಜೀವಿಸಿದ್ದಿದ್ದರೆ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಳೇನೊ. ಮುಂದಾದರೂ ಇಂತಹ ಅಹಿತಕರ ಬೆಳವಣಿಗೆಗಳು ನಡೆಯದಂತೆ ಜಾಗ್ರತೆಯಿಂದ ಇರಬೇಕಾದದ್ದು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಕರ್ತವ್ಯ.

ಬಾಲಕೃಷ್ಣ ಎಂ.ಆರ್., ಬೆಂಗಳೂರು

ನೇಮಕಾತಿ ಆದೇಶ ಬರುವುದೆಂತು?

2019ರಲ್ಲಿ ಅಧಿಸೂಚನೆ ಹೊರಡಿಸಿದ ಎಸ್‌ಡಿಎ ಹುದ್ದೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಿಂಧುತ್ವ ಪ್ರಕ್ರಿಯೆ ಮತ್ತು ಪೊಲೀಸ್ ಪರಿಶೀಲನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ. ಹೀಗಿದ್ದರೂ ಅನೇಕ ಇಲಾಖೆಗಳು ನೇಮಕಾತಿ ಆದೇಶ ನೀಡಲು ವಿಳಂಬ ಮಾಡುತ್ತಿವೆ. ಈ ಹುದ್ದೆಗಳಿಗೆ ನೇಮಕಗೊಳ್ಳಲು ಐದು ವರ್ಷಗಳಿಂದಲೂ ಪರಿಶ್ರಮಪಟ್ಟು ಕಾದು ಕುಳಿತಿರುವ ಅಭ್ಯರ್ಥಿಗಳ ನೋವು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ತಿಳಿಯುತ್ತಿಲ್ಲವೇಕೆ?

‘ನಿಗದಿತ ಅರ್ಹತೆಯನ್ನು ಪೂರ್ಣಗೊಳಿಸಿರುವ ನಾವು, ಅಧಿಕಾರಿಗಳಾಗಿ ದುಡಿಯುವ ಬದಲು ಸೆಕ್ಯುರಿಟಿ ಏಜೆನ್ಸಿಗಳು, ಫುಡ್ ಡೆಲಿವರಿ ಕಂಪನಿಗಳಲ್ಲಿ ದಿನಗೂಲಿಗಳಾಗಿ ದುಡಿಯಬೇಕಾಗಿದೆ’ ಎಂಬುದು ಅನೇಕ ಅಭ್ಯರ್ಥಿಗಳ ಅಳಲು. ಈ ಅವಧಿಯಲ್ಲಿಯೇ ಆಯ್ಕೆಗೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಭ್ಯರ್ಥಿಗಳಿಗೆ ಮೂರು ತಿಂಗಳ ಹಿಂದೆಯೇ ನೇಮಕಾತಿ ಆದೇಶ ನೀಡಲಾಗಿದೆ. ಆದರೆ ಇತರ ಇಲಾಖೆಗಳಿಗೆ ಇದು ಸಾಧ್ಯವಾಗದಿರುವುದೇಕೆ? ಇದಕ್ಕೆಲ್ಲಾ ಯಾರು ಹೊಣೆ? 

ಸುಜ್ಜಲೂರು ವಿಜಿ, ಟಿ.ನರಸೀಪುರ

ಸರಳ ನಿಯಮ, ಮಾದರಿ ನಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೀರೊ ಟ್ರಾಫಿಕ್ ಸೌಲಭ್ಯವನ್ನು ತ್ಯಜಿಸಿರುವುದು, ಹಾಗೆಯೇ ಸಾರ್ವಜನಿಕರಿಂದ ಗೌರವ, ಸನ್ಮಾನದ ರೂಪದಲ್ಲಿ ಹಾರ ತುರಾಯಿ, ಶಾಲು ಶಲ್ಯ ಬೇಡ, ಪುಸ್ತಕಗಳನ್ನು ನೀಡಬಹುದೆಂದು ಹೇಳಿರುವುದು ಸ್ವಾಗತಾರ್ಹ. ಹಿಂದೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿಯ ಸರಳ, ಸಾಮಾನ್ಯ ನಿಯಮಗಳನ್ನು ಅನುಸರಿಸಿದ್ದರು. ಮುಖ್ಯಮಂತ್ರಿಯವರ ಬೆಂಗಾವಲು ಪಡೆಗೂ ಹೆಚ್ಚಿನ ವಾಹನಗಳನ್ನು ನಿರಾಕರಿಸಿದ್ದರು. ಪುಸ್ತಕ ಸಂಸ್ಕೃತಿ ಬೆಳೆಸುವ ದಿಸೆಯಲ್ಲಿ ಸಿದ್ದರಾಮಯ್ಯನವರ ಈ ನಡೆ ಮಾದರಿ ಎನ್ನಬಹುದು.

ಗಣಪತಿ ಶಿರಳಗಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT