ಸೋಮವಾರ, ಡಿಸೆಂಬರ್ 9, 2019
20 °C

ಸಾಹಿತ್ಯ ಸಮ್ಮೇಳನ: ಆಡಂಬರ ಅಗತ್ಯವೇ?

Published:
Updated:

ಕಲಬುರ್ಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 10 ಕೋಟಿಯಿಂದ ₹ 12 ಕೋಟಿ ವೆಚ್ಚವಾಗಲಿದೆ ಎಂಬ ಸುದ್ದಿ ಓದಿ (ಪ್ರ.ವಾ., ನ. 12) ಆಶ್ಚರ್ಯವಾಯಿತು. ಸಮ್ಮೇಳನ ನಡೆಸುವುದು ತಪ್ಪಲ್ಲ. ಆದರೆ ಇಷ್ಟೊಂದು ಖರ್ಚು ಮಾಡಿ ಆಡಂಬರದ ಸಮ್ಮೇಳನ ನಡೆಸುವುದು ಎಷ್ಟು ಸರಿ? ನಾಡಿನಲ್ಲಿ ಎಷ್ಟೋ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇರುವ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯ ಇಲ್ಲದೆ ಅಲ್ಲಿನವರು ಪರದಾಡುವಂತಾಗಿದೆ. ಮಳೆ ಬಂದಾಗ ಸೋರುವ, ಕಾಂಪೌಂಡ್ ಇಲ್ಲದ, ಅಗತ್ಯ ಶಿಕ್ಷಕರಿಲ್ಲದ ಶಾಲೆಗಳಿವೆ. ಅವುಗಳನ್ನಾದರೂ ನೋಡಿ, ಸಮ್ಮೇಳನವನ್ನು ಸರಳವಾಗಿ ನಡೆಸಬೇಕೆಂಬ ಆಲೋಚನೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಬರಬೇಕಿತ್ತು ಅಲ್ಲವೇ?

ಒಂದೆಡೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿ, ಕನ್ನಡದ ಶಾಲೆಗಳು ಮುಚ್ಚಲು ಸರ್ಕಾರವೇ ಕಾರಣವಾಗಿದೆ. ಇನ್ನೊಂದೆಡೆ, ಭಕ್ತಿಯಿಲ್ಲದೆ ದೇವರನ್ನು ಆಡಂಬರದ ರೀತಿಯಲ್ಲಿ ಮೆರೆಸುವಂತೆ ಸಮ್ಮೇಳನ ನಡೆಸಲು ಹೊರಟಿರುವುದು ತರವಲ್ಲ. ನೆರೆ ಬಂದು ಕನ್ನಡ ನಾಡು ನಲುಗಿದೆ, ಕೆಲವರು ಮನೆಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸಮ್ಮೇಳನವನ್ನು ಸರಳವಾಗಿ ಆಚರಿಸುವುದರಿಂದ ಉಳಿಯುವ ಹಣದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಶಾಲೆಗಳಿಗೆ ಕನಿಷ್ಠ ಸೌಲಭ್ಯ ಒದಗಿಸಲು ಮನಸ್ಸು ಮಾಡಬೇಕು.

ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಪ್ರತಿಕ್ರಿಯಿಸಿ (+)