ದೇಶದ್ರೋಹಕ್ಕೆ ಸಂಬಂಧಿಸಿದ ಶಿಕ್ಷೆಗೆ ಗುರಿಪಡಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 124 (ಎ) ಸೆಕ್ಷನ್ ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ ನಡೆ. ಬ್ರಿಟಿಷ್ ಸರ್ಕಾರ ಜಾರಿಗೆ ತಂದಿದ್ದ ಈ ಕಾನೂನಿನ ದುರ್ಬಳಕೆ ಆಳುವ ಸರ್ಕಾರದಿಂದ ಆಗುತ್ತಲೇ ಇದೆ. ಸರ್ಕಾರವನ್ನು ಟೀಕಿಸುವ ಮತ್ತು ವೈಫಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಈ ಸೆಕ್ಷನ್ ಬಳಸಿಕೊಂಡು
ಹತ್ತಿಕ್ಕಲಾಗುತ್ತಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ. ಹಲವು ರಾಷ್ಟ್ರಗಳು ಈಗಾಗಲೇ ಈ ಬಗೆಯ ಕಾನೂನನ್ನು ರದ್ದುಪಡಿಸಿವೆ.
ಕಳೆದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಈ ಕಾನೂನನ್ನು ರದ್ದು ಮಾಡುವುದಾಗಿ ಘೋಷಿಸಿತ್ತು. ಅದನ್ನು ಇನ್ನುಳಿದ ಪಕ್ಷಗಳು ದೇಶದಲ್ಲಿ ಅರಾಜಕತೆಗೆ ಅವಕಾಶ ಮತ್ತು ಭಯೋತ್ಪಾದಕರಿಗೆ ಆಹ್ವಾನ ಕೊಟ್ಟಂತೆ ಎಂದು ಬಿಂಬಿಸಿ ಲಾಭ ಪಡೆದವು. ಆಡಳಿತಾರೂಢ ಬಿಜೆಪಿಯು ಕೆಲವು ಹಳೆಯ ಕಾನೂನುಗಳನ್ನು ರದ್ದುಪಡಿಸುವುದಾಗಿ ಹೇಳಿದ್ದರೂ ಓಬೀರಾಯನ ಕಾಲದ ಈ ಸೆಕ್ಷನ್ ರದ್ದುಗೊಳಿಸುವ ಬಗ್ಗೆ ಜಾಣಮೌನ ವಹಿಸಿದೆ. ಈಗ ಯಾವ ಪಕ್ಷವೂ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಕಾರಣ ತಮ್ಮ ಪಕ್ಷದ ಧುರೀಣರ ಬಂಧನವಾದಾಗ ಮಾತ್ರ ಅಬ್ಬರಿಸುವ ರಾಜಕೀಯ ಪಕ್ಷಗಳು ಜನಸಾಮಾನ್ಯರ ಕಷ್ಟಕ್ಕೆ ಓಗೊಡುವುದು ಕಡಿಮೆ. ಇಂತಹ ಸಮಯದಲ್ಲಿ ನ್ಯಾಯಾಲಯವು ಪರಾಮರ್ಶಿಸಿ ಸ್ವಾಗತಾರ್ಹ ತೀರ್ಪು ನೀಡಲಿ ಎಂದು ಆಶಿಸೋಣ.
- ಗಣಪತಿ ನಾಯ್ಕ್,ಕಾನಗೋಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.