ತಾತ್ಕಾಲಿಕ, ಸಂಕುಚಿತ

7

ತಾತ್ಕಾಲಿಕ, ಸಂಕುಚಿತ

Published:
Updated:

‘ಬಯೊಮೆಟ್ರಿಕ್ ಬೇಕು’ ಎಂಬ ಮಧುವರ್ಷಿಣಿ ಅವರ ಪತ್ರಕ್ಕೆ (ವಾ.ವಾ., ಜೂನ್‌ 19) ಈ ಪ್ರತಿಕ್ರಿಯೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲ ಮಕ್ಕಳೂ ಗುಣಾತ್ಮಕ ಶಿಕ್ಷಣ ಪಡೆಯಬೇಕು ಮತ್ತು ಇಡೀ ಶಿಕ್ಷಣ ವ್ಯವಸ್ಥೆ
ಯಲ್ಲಿ ಅದನ್ನು ಸಾಧ್ಯವಾಗಿಸುವವರು ಶಿಕ್ಷಕರೇ ಆಗಿದ್ದಾರೆ ಎಂಬ ಆಶಯ ಪತ್ರದಲ್ಲಿದೆ. ಆದರೆ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯದಿರುವುದಕ್ಕೆ ಶಿಕ್ಷಕರ ಗೈರುಹಾಜರಿಯೇ ಮೂಲ ಕಾರಣವೆಂದು ಭಾವಿಸಿ, ಅದನ್ನು ನಿಯಂತ್ರಿಸಲು ಬಯೊಮೆಟ್ರಿಕ್ ವ್ಯವಸ್ಥೆಯಂಥ ತಾತ್ಕಾಲಿಕ, ಸಂಕುಚಿತ ಕ್ರಮಗಳಿಂದ ಸುಧಾರಣೆಯನ್ನು ಅಪೇಕ್ಷಿಸಿರುವುದು ದುರದೃಷ್ಟಕರ.

ಈ ವಾದ ವಾಸ್ತವ ಸ್ಥಿತಿಗೆ ವ್ಯತಿರಿಕ್ತವಾಗಿದೆ. 2017ರ ಮಾರ್ಚ್‌ನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಪ್ರಕಟಿಸಿದ ಅಧ್ಯಯನ ವರದಿಯಂತೆ ಶಿಕ್ಷಕರ ಗೈರುಹಾಜರಿಯ ಒಟ್ಟು ಪ್ರಮಾಣ ಶೇ 19.9ರಷ್ಟಿದ್ದು ಅದರಲ್ಲಿ ಕಾರಣರಹಿತ ಗೈರುಹಾಜರಿ ಪ್ರಮಾಣ ಕೇವಲ ಶೇ 2.5ರಷ್ಟಿದೆ. ಸಾವಿರಾರು ಶಿಕ್ಷಕರು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ಸುಧಾರಣೆಗೆ ಪರಿಹಾರೋಪಾಯಗಳು ಬೇರೆಯೇ ಇವೆ. ಕಡಿಮೆ ಶಿಕ್ಷಕರಿರುವ ಶಾಲೆಗಳಿಗೆ ಶಿಕ್ಷಕರ ನಿಯೋಜನೆ, ಶೈಕ್ಷಣಿಕವಲ್ಲದ ಹೊರೆ ಕಡಿಮೆಗೊಳಿಸುವುದು, ಶಿಕ್ಷಕರಿಗೆ ಉತ್ತಮ ಶೈಕ್ಷಣಿಕ ಬೆಂಬಲವೊದಗಿಸಿ ಅವರ ವೃತ್ತಿಗೌರವವನ್ನು ಹೆಚ್ಚಿಸುವುದು, ಇಂಗ್ಲಿಷನ್ನು ಒಂದು ಭಾಷೆಯಾಗಿ ಉತ್ತಮವಾಗಿ ಕಲಿಸುವುದು, ಪೂರ್ವ
ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದೂ ಸೇರಿದಂತೆ ಸರ್ಕಾರಿ ಶಾಲೆಗಳನ್ನು ಆಕರ್ಷಣೀಯಗೊಳಿಸಿ ಹೆಚ್ಚಿನ ಪೋಷಕರನ್ನು ಸೆಳೆಯುವುದು... ಇಂಥ ಕ್ರಮಗಳಿಗೆ ಮುಂದಾಗಬೇಕಾಗಿದೆ.

ಮಕ್ಕಳನ್ನು ಸ್ವಾಯತ್ತ, ಸಂವೇದನಾಶೀಲ ವ್ಯಕ್ತಿಗಳನ್ನಾಗಿ ರೂಪಿಸುವ ಗುರುತರ ಸಾಮಾಜಿಕ ಜವಾಬ್ದಾರಿ ಹೊತ್ತಿರುವ ಶಿಕ್ಷಕರನ್ನು ಬಯೊಮೆಟ್ರಿಕ್ ಹಾಜರಿಯಂಥ ನಿಯಂತ್ರಣಕ್ಕೊಳಪಡಿಸುವ ಆಲೋಚನೆಗಳು ಶಿಕ್ಷಕರ ಸ್ವಾಯತ್ತತೆ, ಅಸ್ಮಿತೆಗಳಿಗೇ ಮಾರಕವಾದೀತು.

-ಎಸ್.ವಿ.ಮಂಜುನಾಥ್, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !