ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಒಳ್ಳೆಯದಕ್ಕಾಗಿ ಕಾಯುತ್ತೇವೆ... 

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ರಾಜ್ಯದ ಹಲವೆಡೆ ಅಸ್ಪೃಶ್ಯತೆ ಜೀವಂತವಾಗಿರುವುದನ್ನು ತಿಳಿಸುವ ಸಚಿತ್ರ ವರದಿ (ಪ್ರ.ವಾ., ಮಾರ್ಚ್ 9) ನೋಡಿ, ಯಾಕೋ ಈ ಕಟು ಸತ್ಯವನ್ನು ಹಿಂದೂಗಳು ಎನ್ನಿಸಿಕೊಂಡವರು ಈಗಲೂ ಒಪ್ಪಿಕೊಳ್ಳುತ್ತಿಲ್ಲವಲ್ಲ ಅಂತ ನೋವಾಯಿತು. ‘ನಮ್ಮದು ಜಗತ್ತಿನ ಶ್ರೇಷ್ಠ ಧರ್ಮ, ನಮ್ಮಲ್ಲಿ ಕಳಂಕಗಳೇ ಇಲ್ಲ’ ಎಂದು ಹೇಳುತ್ತಾ ಕೆಲವರು ತಮ್ಮ ಗಂಟಲು–ನಾಲಿಗೆಯನ್ನು ನೋಯಿಸಿಕೊಳ್ಳುತ್ತಿದ್ದಾರೆ. ನನ್ನದೇ ಅನುಭವವನ್ನು ಆಧರಿಸಿ ಕವಿತಾ ಲಂಕೇಶ್ ಅವರು ‘ಕರಿಯ ಕಣ್ಣುಬಿಟ್ಟ’ ಎಂಬ ಸಾಮಾಜಿಕ ಕಳಕಳಿಯ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದನ್ನು ನೋಡಿದ ಅನೇಕರು, ವಿಶೇಷವಾಗಿ ತಲೆಕೂದಲು ಕತ್ತರಿಸುವ ದೃಶ್ಯವನ್ನು ನೋಡಿ ‘ಇದೆಲ್ಲ ಈಗ ಇಲ್ಲವೇ ಇಲ್ಲ’ ಎಂದು ವಾದಿಸಿದ್ದರಂತೆ.

1970ರ ದಶಕದಲ್ಲಿ ನಡೆದ ಆ ಘಟನೆ ಹೀಗಿದೆ: ಆಗ ‘ಅಮಿತಾಭ್ ಬಚ್ಚನ್‌ ಕಟಿಂಗ್’ ಎಂಬ ಕೇಶಶೈಲಿಯೊಂದು ಜನಪ್ರಿಯವಾಗಿತ್ತು (ಕಿವಿ ಮೇಲೆ ಕೂದಲು ಬಿಟ್ಟುಕೊಳ್ಳುವುದು). ನನಗೂ ಹಾಗೆ ಮಾಡಿಸಿಕೊಳ್ಳುವ ಆಸೆಯಾಯಿತು. ಆದರೆ, ನಮ್ಮೂರಲ್ಲಿ ಆಗ ನಮಗೆ ಕಟಿಂಗ್‌ ಮಾಡುತ್ತಿರಲಿಲ್ಲ. ಸರಿ, ಪಕ್ಕದ ಊರಿಗೆ ಹೋದೆ. ಅರ್ಧ ಕಟಿಂಗ್‌ ಆಗಿತ್ತು. ಆಗ ಅಲ್ಲಿಗೆ ಬಂದ ನಮ್ಮೂರಿನ ಇತರ ಸಮುದಾಯದವರು ನನ್ನನ್ನು ಗಮನಿಸಿ, ‘ನಮ್ಮೂರ ಹೊಲಗೇರಿಯ ಕುಲವಾಡಿ, ಕೋಮಾರಿ ಮಗನಲ್ಲವಾ’ ಅಂತ ಕೆಟ್ಟ ಶಬ್ದದಲ್ಲಿ ಬೈಯ್ಯುತ್ತಾ ಕಟಿಂಗ್‌ ಶಾಪ್‌ನಲ್ಲಿ ಕೋಲು ಹುಡುಕಿ ಹೊಡೆಯುವ ಹೊತ್ತಿಗೆ, ನಾನು ಅಲ್ಲಿಂದ ತಪ್ಪಿಸಿಕೊಂಡು ಸುಮಾರು ನಾಲ್ಕು–ಐದು ಕಿ.ಮೀ. ಓಡಿ ಮನೆಗೆ ಬಂದೆ. ಅಪ್ಪನಿಗೆ ಹೇಳಿ, ಉಳಿದ ಅರ್ಧ ಕಟಿಂಗ್‌ ಮಾಡಿಸಿಕೊಂಡೆ. ಈಗ 2020. ಈ ನಾಡಿನಲ್ಲಿ ಈಗಲೂ ಅದೇ ಪರಿಸ್ಥಿತಿ ಇದೆ. ನಾವು ಸಾಮಾಜಿಕವಾಗಿ ಎಷ್ಟು ಬದಲಾಗಿದ್ದೇವೆ ಎಂಬುದನ್ನು ‘ಪ್ರಜಾವಾಣಿ’ಯ ವರದಿ ಮತ್ತು ಚಿತ್ರವೇ ಹೇಳುತ್ತವೆ.

ನನ್ನದೊಂದು ನಮ್ರ ವಿನಂತಿ. ಅದು ‘ನನ್ನ ಹಾಗೆ ಇವರೂ’ ಎನ್ನುವ ಸಾಮಾನ್ಯ ಜ್ಞಾನದ ಇಬ್ಬನಿ ಗಾತ್ರದ ಬೆಳಕನ್ನು ಅಂತರಂಗಕ್ಕೆ ಇಳಿಸಿಕೊಂಡರೆ ಸಾಕು, ಶತ ಮಾನದ ಅಸ್ಪೃಶ್ಯತೆಯ ಘೋರ ಕ್ರೌರ್ಯ ಇಲ್ಲವಾಗುತ್ತದೆ. ಡಾ. ಅಂಬೇಡ್ಕರ್‌ ಅವರ ಸಹನೆಯ ಜೀವಕಾರುಣ್ಯವನ್ನು ಉಸಿರಾಗಿಸಿಕೊಂಡಿರುವ ಈ ಜನಾಂಗ, ಈ ಹೊತ್ತಿಗೂ ಸೌಹಾರ್ದವನ್ನು ಬಯಸುತ್ತದೆ.

ಬದಲಾವಣೆ ಜಗದ ನಿಯಮ ಎನ್ನುತ್ತಾರೆ ತಿಳಿದ ವರು. ಈ ನಿಯಮದ ವಿರುದ್ಧ ಇರುವವರನ್ನು ಏನೆನ್ನ ಬೇಕು, ನೀವೇ ನಿರ್ಧರಿಸಿಕೊಳ್ಳಿ. ನಾವು ಒಳ್ಳೆಯದಕ್ಕಾಗಿ ಕಾಯುತ್ತೇವೆ, ನಮ್ಮ ಪವಿತ್ರ ಸಂವಿಧಾನ ಬಯಸಿದಂತೆ.

-ಸುಬ್ಬು ಹೊಲೆಯಾರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT