ಬುಧವಾರ, ಡಿಸೆಂಬರ್ 1, 2021
20 °C

ವಾಲ್ಮೀಕಿ: ಹೆಸರು ಕುರಿತಂತೆ ಒಂದು ಊಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲ್ಮೀಕಿ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ಅರುಣ್‌ ಜೋಳದಕೂಡ್ಲಿಗಿ ಅವರು ಬರೆದಿದ್ದಾರೆ (ಸಂಗತ, ಅ. 18). ರಾಮಾಯಣದ ಕವಿಯ ವಿಚಾರ ಬಂದಾಗಲೆಲ್ಲ ಒಂದು ಸಂಗತಿಯ ಪ್ರಸ್ತಾಪ ಬಂದೇ ಬರುತ್ತದೆ. ಅದೆಂದರೆ ದರೋಡೆಕೋರನಾಗಿದ್ದವನು ವರ್ಷಗಟ್ಟಲೆ ಸುದೀರ್ಘ ತಪಸ್ಸನ್ನು ಆಚರಿಸಿ ಕೂತಲ್ಲಿಯೇ ತನ್ನ ದೇಹದ ಸುತ್ತ ಬೆಳೆದಿದ್ದ ಹುತ್ತವನ್ನು ಒಡೆದು ಹೊರಬಂದನಾದ ಕಾರಣ ವಾಲ್ಮೀಕಿ ಎಂದು ಹೆಸರಾದ ಎಂಬುದು. ಅವನು ದರೋಡೆ ಕೋರನಾಗಿದ್ದನೋ ಇಲ್ಲವೋ ಅದು ಬೇರೆ ವಿಷಯ. ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂಬ ಅರ್ಥವಿರುವುದು ಪ್ರಸಿದ್ಧವಾದ್ದು. ಆದರೆ ಜೀವಂತ ವ್ಯಕ್ತಿಯ ಮೈಮೇಲೆ ಹಾಗೆ ಹುತ್ತ ಬೆಳೆಯಲಾರದು. ‘ವಾಲ್ಮೀಕಿ’ ಎಂದು ಹೆಸರು ಬರಲು ಬೇರೇನೋ ಕಾರಣವಿರಬಹುದು. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪುರೇಖೆ’ ಎಂಬ ಕವಿ ಅಡಿಗರ ಕವನದ ಸಾಲು ಒಂದು ಅದ್ಭುತವಾದ ರೂಪಕವಾಗಿ, ಕವಿಯ ಮನಸ್ಸು ಹುತ್ತ ಗಟ್ಟಿದಾಗಲೇ ಒಂದು ಮಹಾ ಕಾವ್ಯ ಸೃಷ್ಟಿಯಾಗಲು ಸಾಧ್ಯ ಎಂಬುದರ ಸೂಚಕವಾಗಿ ಇದ್ದರೂ ಅದು ವಸ್ತುಸಂಗತಿಯ ಅಭಿವ್ಯಕ್ತಿ ಅಲ್ಲ.

ಇನ್ನೊಂದು ದಿಕ್ಕಿನಿಂದ ನೋಡಿದಾಗ, ವೇದವ್ಯಾಸರಿಗೆ ‘ಕೃಷ್ಣದ್ವೈಪಾಯನ’ ಎಂಬ ಹೆಸರುಂಟಷ್ಟೆ. ವಾಸ್ತವವಾದ ಮೂಲ ಹೆಸರು ಕೃಷ್ಣ. ಇನ್ನೊಬ್ಬ ಖ್ಯಾತ ದ್ವಾರಕೆಯ ಕೃಷ್ಣನಿದ್ದ. ವಸುದೇವನ ಮಗನಾದ್ದರಿಂದ ಅವನಿಗೆ ವಾಸುದೇವ ಕೃಷ್ಣನೆಂಬ ಹೆಸರುಂಟು. ಅವನಿಂದ ಇವರು ಬೇರೆ ಎಂದು ಹೇಳಲು ದ್ವೀಪ ಪ್ರದೇಶದಿಂದ ಬಂದವನು ಎಂಬ ಅರ್ಥದ ‘ದ್ವೈಪಾಯನ ಕೃಷ್ಣ’ ಅಥವಾ ‘ಕೃಷ್ಣ ದ್ವೈಪಾಯನ’ ರೂಢಿಗೆ ಬಂದಿತು. ಮೂಲದಲ್ಲಿ ಒಂದೇ ಆಗಿದ್ದ ವೇದವನ್ನು ನಾಲ್ಕು ವೇದಗಳಾಗಿ ವಿಂಗಡಿಸಿದವನು ಎಂಬ ಅರ್ಥದಲ್ಲಿ ವೇದವ್ಯಾಸ ಎಂಬ ಹೆಸರು ರೂಢಿಗೆ ಬಂದದ್ದು ಆನಂತರದಲ್ಲಿ. ಹಾಗೆಯೇ ವಲ್ಮೀಕಗಳು ವಿಪುಲವಾಗಿ ಇರುವ ಪ್ರದೇಶದಿಂದ ಬಂದವನೆಂಬ ಕಾರಣಕ್ಕಾಗಿ ರಾಮಾಯಣದ ಕವಿಗೆ ‘ವಾಲ್ಮೀಕಿ’ ಎಂದೇಕೆ ಬಂದಿರಬಾರದು? ಇದು ಒಂದು ಸಂಭಾವ್ಯ ಊಹೆ. ವಿದ್ವಾಂಸರು ಈ ದಿಕ್ಕಿನಲ್ಲಿ ಆಲೋಚಿಸಬಹುದೇನೋ.

ಡಾ. ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು